Home ದಾವಣಗೆರೆ ಉದ್ಯೋಗ ಬೇಡವೆಂದು ಸಾವಯವ ಕೃಷಿಗೆ ಇಳಿದ ಐಟಿಐ ಪದವೀಧರ; ಕೇವಲ 23 ದಿನದಲ್ಲಿ 1.5 ಲಕ್ಷ ರೂ. ಸಂಪಾದನೆ!
ದಾವಣಗೆರೆನವದೆಹಲಿಬೆಂಗಳೂರು

ಉದ್ಯೋಗ ಬೇಡವೆಂದು ಸಾವಯವ ಕೃಷಿಗೆ ಇಳಿದ ಐಟಿಐ ಪದವೀಧರ; ಕೇವಲ 23 ದಿನದಲ್ಲಿ 1.5 ಲಕ್ಷ ರೂ. ಸಂಪಾದನೆ!

Share
ಕೃಷಿ
Share

ಉತ್ತರ ಪ್ರದೇಶ: ಇಂದಿನ ದಿನಗಳಲ್ಲಿ ಕೈತುಂಬಾ ಸಂಬಳ ಕೊಡುವ ಕಾರ್ಪೊರೇಟ್ ಉದ್ಯೋಗಗಳ ಬೆನ್ನತ್ತಿ ಹೋಗುವ ಯುವಕರೇ ಹೆಚ್ಚು. ಆದರೆ ಇಲ್ಲೊಬ್ಬ ಐಟಿಐ ಹಾಗೂ ಪದವಿ ಮುಗಿಸಿದ ಯುವಕ, ಉದ್ಯೋಗದ ಆಫರ್ ಬೇಡವೆಂದು ತನ್ನ ಹಳ್ಳಿಗೆ ಮರಳಿ ಸಾವಯವ ಕೃಷಿಯಲ್ಲಿ ಭರ್ಜರಿ ಯಶಸ್ಸು ಸಾಧಿಸಿ ಎಲ್ಲರ ಗಮನ ಸೆಳೆದಿದ್ದಾರೆ.

ಉತ್ತರ ಪ್ರದೇಶದ ಮೌ ನಿವಾಸಿಯಾದ ಅಖಿಲೇಶ್ ಮೌರ್ಯ ಎಂಬ ಯುವಕ ಕೇವಲ 23 ದಿನಗಳಲ್ಲಿ ಬರೋಬ್ಬರಿ 1.5 ಲಕ್ಷ ರೂಪಾಯಿ ಆದಾಯ ಗಳಿಸಿ ಕೃಷಿಯಲ್ಲೂ ಲಾಭವಿದೆ ಎಂಬುದನ್ನು ಸಾಬೀತುಪಡಿಸಿದ್ದಾರೆ.

ತಂದೆಯೇ ಪ್ರೇರಣೆ, ತೋಟಗಾರಿಕೆ ಇಲಾಖೆ ಸಾಥ್:

ತಮ್ಮ ತಂದೆಯ ಕೃಷಿ ಕಾಯಕವನ್ನು ಹತ್ತಿರದಿಂದ ನೋಡಿ ಬೆಳೆದ ಅಖಿಲೇಶ್‌ಗೆ ಮೊದಲಿನಿಂದಲೂ ಕೃಷಿಯಲ್ಲಿ ಆಸಕ್ತಿಯಿತ್ತು. ವಿದ್ಯಾಭ್ಯಾಸ ಮುಗಿದ ನಂತರ ಸಾಂಪ್ರದಾಯಿಕ ಕೆಲಸಕ್ಕೆ ಹೋಗುವ ಬದಲು ಹಳ್ಳಿಗೆ ಮರಳಿದ ಇವರಿಗೆ ಸ್ಥಳೀಯ ತೋಟಗಾರಿಕಾ ಅಧಿಕಾರಿಯೊಬ್ಬರು ಸಾಂಪ್ರದಾಯಿಕ ಬೆಳೆಗಳ ಬದಲಾಗಿ ಸಾವಯವ ತರಕಾರಿ ಬೆಳೆಯುವಂತೆ ಸಲಹೆ ನೀಡಿದರು. ಅವರ ಮಾರ್ಗದರ್ಶನದಂತೆ ಅಖಿಲೇಶ್ ತಮ್ಮ ಒಂದು ಎಕರೆ ಭೂಮಿಯಲ್ಲಿ ಸಾವಯವ ಸೌತೆಕಾಯಿ ಕೃಷಿ ಆರಂಭಿಸಿದರು.

ಆಧುನಿಕ ತಂತ್ರಜ್ಞಾನದ ಬಳಕೆ:

ಅಖಿಲೇಶ್ ತಮ್ಮ ಜಮೀನಿನಲ್ಲಿ ರೈಸ್ಡ್ ಬೆಡ್ (ಎತ್ತರಿಸಿದ ಮಡಿ) ಪದ್ಧತಿ ಹಾಗೂ ಹನಿ ನೀರಾವರಿ (Drip Irrigation) ವ್ಯವಸ್ಥೆಯನ್ನು ಅಳವಡಿಸಿಕೊಂಡು ಮಾರ್ಚ್ ತಿಂಗಳಿನಲ್ಲಿ ಸೌತೆಕಾಯಿ ಸಸಿಗಳನ್ನು ನೆಟ್ಟಿದ್ದರು. ಇವರು ತಮ್ಮ ತೋಟದಲ್ಲಿ ಸಿಂಜೆಂಟಾ (Syngenta), ಕ್ಲಾಸಸ್ ಆರ್ನೋ (Clause’s Arno) ಮತ್ತು ದೆಹಲಿಯ ಎಸ್‌ಐಆರ್ (SIR) ತಳಿಗಳ ಸೌತೆಕಾಯಿಯನ್ನು ಬೆಳೆದಿದ್ದಾರೆ. ಮೇ 1 ರಿಂದ ಕಟಾವು ಪ್ರಕ್ರಿಯೆ ಆರಂಭವಾಗಿದ್ದು, ದಿನಕ್ಕೆ ಸರಾಸರಿ 7 ರಿಂದ 8 ಕ್ವಿಂಟಾಲ್ ಸೌತೆಕಾಯಿ ಇಳುವರಿ ಸಿಗುತ್ತಿದೆ.

30 ಸಾವಿರ ಹೂಡಿಕೆ, 1.5 ಲಕ್ಷ ರಿಟರ್ನ್ಸ್!

ಹನಿ ನೀರಾವರಿ ಅಳವಡಿಕೆ ಹಾಗೂ ಮಡಿಗಳ ತಯಾರಿಕೆ ಸೇರಿದಂತೆ ಒಂದು ಎಕರೆಗೆ ಅಖಿಲೇಶ್ ಮಾಡಿದ್ದ ಒಟ್ಟು ಹೂಡಿಕೆ ಕೇವಲ 30,000 ರೂಪಾಯಿಗಳು. ಆರಂಭದಲ್ಲಿ ಮಾರುಕಟ್ಟೆಯಲ್ಲಿ ಸೌತೆಕಾಯಿ ಬೆಲೆ ಕೆಜಿಗೆ 14 ರಿಂದ 15 ರೂಪಾಯಿ ಇತ್ತು. ಆದರೆ ಪ್ರಸ್ತುತ ಮಾರುಕಟ್ಟೆಯಲ್ಲಿ ಬೇಡಿಕೆ ಹೆಚ್ಚಾಗಿ ದರ ಕೆಜಿಗೆ 20 ರೂಪಾಯಿ ಗಡಿ ದಾಟಿದೆ. ಪರಿಣಾಮವಾಗಿ, ಕಟಾವು ಆರಂಭವಾದ ಕೇವಲ 23 ದಿನಗಳಲ್ಲೇ ಅವರು 10 ಟನ್ ಸೌತೆಕಾಯಿ ಮಾರಾಟ ಮಾಡಿ 1.5 ಲಕ್ಷ ರೂಪಾಯಿ ಆದಾಯ ಗಳಿಸಿದ್ದಾರೆ.

ಪ್ರಸ್ತುತ ಇವರ ತೋಟದಲ್ಲಿ ದಿನನಿತ್ಯ 7 ರಿಂದ 8 ಜನ ಕಾರ್ಮಿಕರು ಕೆಲಸ ಮಾಡುತ್ತಿದ್ದಾರೆ. ಕಡಿಮೆ ಹೂಡಿಕೆಯಲ್ಲಿ ಸರಿಯಾದ ನೀರಾವರಿ ಯೋಜನೆ ಹಾಗೂ ತಳಿಗಳ ಆಯ್ಕೆ ಮಾಡಿಕೊಂಡರೆ ಕೃಷಿ ಕ್ಷೇತ್ರದಲ್ಲೂ ಅತ್ಯುತ್ತಮ ಆದಾಯ ಗಳಿಸಬಹುದು ಎಂದು ಅಖಿಲೇಶ್ ಮೌರ್ಯ ಯುವ ಪೀಳಿಗೆಗೆ ಮಾದರಿಯಾಗಿದ್ದಾರೆ.

Share

Leave a comment

Leave a Reply

Your email address will not be published. Required fields are marked *

Related Articles