ಅಂಬಿಕಾಪುರ (ಛತ್ತೀಸ್ಗಢ್): ಸರ್ಕಾರಗಳು ಡಿಜಿಟಲ್ ಇಂಡಿಯಾ ಮತ್ತು ಮನೆಬಾಗಿಲಿಗೆ ಸೇವೆ ಎಂದು ಎಷ್ಟೇ ಹೇಳಿಕೊಂಡರೂ, ಗ್ರಾಮೀಣ ಭಾಗದ ವಾಸ್ತವ ಚಿತ್ರಣ ಮಾತ್ರ ಬದಲಾಗಿಲ್ಲ ಎಂಬುದಕ್ಕೆ ಸಾಕ್ಷಿಯೊಂದು ಭಾರಿ ಆಕ್ರೋಶಕ್ಕೆ ಕಾರಣವಾಗಿದೆ.
ವೃದ್ಧಾಪ್ಯ ವೇತನ (Pension) ಪಡೆಯಲು ಹೆಬ್ಬೆಟ್ಟಿನ ಗುರುತು (Fingerprint Verification) ಕಡ್ಡಾಯ ಎಂಬ ನಿಯಮದಿಂದಾಗಿ, ಮಹಿಳೆಯೊಬ್ಬರು ತನ್ನ 90 ವರ್ಷದ ಅತ್ತೆಯನ್ನು ಬೆನ್ನ ಮೇಲೆ ಹೊತ್ತುಕೊಂಡು ಬರೋಬ್ಬರಿ 9 ಕಿಲೋಮೀಟರ್ ಕಾಲ್ನಡಿಗೆಯಲ್ಲೇ ಬ್ಯಾಂಕಿಗೆ ಕರೆದೊಯ್ದ ಘಟನೆ ಛತ್ತೀಸ್ಗಢದ ಸುರ್ಗುಜಾ ಜಿಲ್ಲೆಯ ಮೈನ್ಪಾತ್ ಪ್ರದೇಶದಲ್ಲಿ ನಡೆದಿದೆ.
ಸುಖ್ಮೇನಿಯಾ ಬಾಯಿ ಎಂಬ ಮಹಿಳೆ ತನ್ನ ಅಶಕ್ತ ಅತ್ತೆಯನ್ನು ಬೆನ್ನ ಮೇಲೆ ಹೊತ್ತುಕೊಂಡು ದಟ್ಟ ಅರಣ್ಯದ ಹಾದಿ, ಕಲ್ಲು-ಮುಳ್ಳುಗಳ ರಸ್ತೆ ಹಾಗೂ ಹಳ್ಳಗಳನ್ನು ದಾಟುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಕಡು ಬಿಸಿಲಿನಲ್ಲಿ ಅತ್ತೆಯನ್ನು ಹೊತ್ತು ಸಾಗುತ್ತಿರುವ ದೃಶ್ಯ ಹಳೆಯ ವಿಕ್ರಮ್-ಬೇತಾಳ ಕಥೆಯನ್ನು ನೆನಪಿಸುವಂತಿದೆ.
ಮೂಲ ಸೌಕರ್ಯಗಳ ಕೊರತೆ:
ಸ್ಥಳೀಯರ ಪ್ರಕಾರ, ಈ ಕಾಡಿನ ಭಾಗದಲ್ಲಿ ಸರಿಯಾದ ರಸ್ತೆ ಮತ್ತು ಸಾರಿಗೆ ವ್ಯವಸ್ಥೆ ಇಲ್ಲ. ತಿಂಗಳಿಗೆ ಸಿಗುವ ಕೇವಲ 1,500 ರೂಪಾಯಿ ಪಿಂಚಣಿ ಹಣವನ್ನು ಪಡೆಯಲು ಫಲಾನುಭವಿಗಳು ಖುದ್ದಾಗಿ ಬ್ಯಾಂಕಿಗೆ ಬರಬೇಕೆಂದು ಬ್ಯಾಂಕ್ ಅಧಿಕಾರಿಗಳು ನಿಯಮ ಮಾಡಿದ್ದಾರೆ. ಈ ಹಿಂದೆ ಸ್ಥಳೀಯವಾಗಿಯೇ ಪಿಂಚಣಿ ವಿತರಣೆಯಾಗುತ್ತಿತ್ತು, ಆದರೆ ಈಗ ಆ ವ್ಯವಸ್ಥೆ ಸ್ಥಗಿತಗೊಂಡಿರುವುದರಿಂದ ಅನಿವಾರ್ಯವಾಗಿ ಸೊಸೆ ತನ್ನ ಅತ್ತೆಯನ್ನು ಹೊತ್ತುಕೊಂಡು ತಿಂಗಳುಗಳಿಂದ ಹೀಗೆಯೇ ಬ್ಯಾಂಕಿಗೆ ಅಲೆಯುತ್ತಿದ್ದಾರೆ.
ವ್ಯಾಪಕ ಆಕ್ರೋಶ:
ಈ ವಿಡಿಯೋ ಆನ್ಲೈನ್ನಲ್ಲಿ ಹರಿದಾಡುತ್ತಿದ್ದಂತೆ ನೆಟ್ಟಿಗರು ಸರ್ಕಾರದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ತಂತ್ರಜ್ಞಾನ ಇಷ್ಟೊಂದು ಮುಂದುವರಿದಿದ್ದರೂ, ಹಾಸಿಗೆ ಹಿಡಿದಿರುವ ವೃದ್ಧರು ಮತ್ತು ಹಿರಿಯ ನಾಗರಿಕರು ಕೇವಲ ವೆರಿಫಿಕೇಶನ್ಗಾಗಿ ಇಷ್ಟೊಂದು ಕಷ್ಟಪಡಬೇಕೇ? ಸರ್ಕಾರದ ಮನೆಬಾಗಿಲ ಸೇವೆಗಳ ಭರವಸೆಗಳು ಕೇವಲ ಪ್ರಚಾರಕ್ಕೆ ಸೀಮಿತವೇ? ಎಂದು ಸಾರ್ವಜನಿಕರು ಪ್ರಶ್ನಿಸುತ್ತಿದ್ದಾರೆ.





Leave a comment