Home ಕ್ರೈಂ ನ್ಯೂಸ್ ಪಂಜಾಬಿ ಗಾಯಕಿ ಇಂದರ್ ಕೌರ್ ಅಪಹರಣ ಪ್ರಕರಣ: 6 ದಿನಗಳ ಬಳಿಕ ಕಾಲುವೆಯಲ್ಲಿ ಶವವಾಗಿ ಪತ್ತೆ!
ಕ್ರೈಂ ನ್ಯೂಸ್ದಾವಣಗೆರೆಬೆಂಗಳೂರುಸಿನಿಮಾ

ಪಂಜಾಬಿ ಗಾಯಕಿ ಇಂದರ್ ಕೌರ್ ಅಪಹರಣ ಪ್ರಕರಣ: 6 ದಿನಗಳ ಬಳಿಕ ಕಾಲುವೆಯಲ್ಲಿ ಶವವಾಗಿ ಪತ್ತೆ!

Share
ಗಾಯಕಿ
Share

ಲೂಧಿಯಾನ: ಆರು ದಿನಗಳ ಹಿಂದೆ ಗನ್ ಪಾಯಿಂಟ್‌ನಲ್ಲಿ ಅಪಹರಣಕ್ಕೊಳಗಾಗಿದ್ದ 29 ವರ್ಷದ ಪ್ರಖ್ಯಾತ ಪಂಜಾಬಿ ಗಾಯಕಿ ಇಂದರ್ ಕೌರ್ (ಯಶಿಂದರ್ ಕೌರ್) ಮುಂಜಾವಿನ ವೇಳೆಗೆ ಲೂಧಿಯಾನದ ನೀಲೋ ಕಾಲುವೆಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಈ ಘಟನೆ ಇಡೀ ಪಂಜಾಬ್‌ನಲ್ಲಿ ತೀವ್ರ ಸಂಚಲನ ಮೂಡಿಸಿದೆ.

ಪ್ರಕರಣದ ಹಿನ್ನೆಲೆ:

ಮೇ 13ರಂದು ರಾತ್ರಿ ಸುಮಾರು 8:30ರ ಸುಮಾರಿಗೆ ಇಂದರ್ ಕೌರ್ ಅವರು ತಮ್ಮ ಫೋರ್ಡ್ ಫಿಗೋ ಕಾರಿನಲ್ಲಿ ದಿನಸಿ ವಸ್ತುಗಳನ್ನು ಖರೀದಿಸಲು ಮನೆಯಿಂದ ಹೊರಟಿದ್ದರು. ಆದರೆ, ಅವರು ಮರಳಿ ಬಂದಿರಲಿಲ್ಲ. ಇಂದರ್ ಅವರ ಸಹೋದರ ಜೋತಿಂದರ್ ಸಿಂಗ್ ನೀಡಿದ ದೂರಿನ ಪ್ರಕಾರ, ಮೊಗಾ ಜಿಲ್ಲೆಯ ಭಾಲೂರ್ ಗ್ರಾಮದ ಸುಖ್ವಿಂದರ್ ಸಿಂಗ್ (ಸುಖಾ) ಎಂಬಾತ ಇಂದರ್ ಅವರನ್ನು ಮದುವೆಯಾಗುವಂತೆ ತೀವ್ರ ಒತ್ತಡ ಹೇರುತ್ತಿದ್ದನು. ಮೂರು ವರ್ಷಗಳ ಹಿಂದೆ ಇನ್‌ಸ್ಟಾಗ್ರಾಮ್ ಮೂಲಕ ಪರಿಚಯವಾಗಿದ್ದ ಇವರಿಬ್ಬರು ಸ್ನೇಹಿತರಾಗಿದ್ದರು.

ಆದರೆ ಸುಖ್ವಿಂದರ್‌ನಿಗೆ ಈಗಾಗಲೇ ಮದುವೆಯಾಗಿ ಮಕ್ಕಳಿರುವ ವಿಷಯ ತಿಳಿದ ನಂತರ ಇಂದರ್ ಆತನೊಂದಿಗೆ ಸಂಪರ್ಕ ಕಡಿದುಕೊಂಡಿದ್ದರು. ಇದೇ ದ್ವೇಷದಿಂದ ಆತ ಈ ಕೃತ್ಯ ಎಸಗಿದ್ದಾನೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.

ಮಸಲತ್ತು ಮತ್ತು ಕೊಲೆ:

ಆರೋಪಿ ಸುಖ್ವಿಂದರ್ ಸಿಂಗ್ ಈ ಕೊಲೆಗಾಗಿಯೇ ಕೆನಡಾದಿಂದ ನೇಪಾಳ ಮಾರ್ಗವಾಗಿ ಪಂಜಾಬ್‌ಗೆ ಬಂದಿದ್ದ ಎಂದು ಪೊಲೀಸರು ಶಂಕಿಸಿದ್ದಾರೆ. ಮೇ 13 ರಂದು ತನ್ನ ಸಹಚರರೊಂದಿಗೆ ಸೇರಿ ಇಂದರ್ ಕೌರ್ ಕಾರನ್ನು ಅಡ್ಡಗಟ್ಟಿ, ಗನ್ ಪಾಯಿಂಟ್‌ನಲ್ಲಿ ಅಪಹರಿಸಿ ಬಳಿಕ ಕೊಲೆ ಮಾಡಿ ಶವವನ್ನು ನೀಲೋ ಕಾಲುವೆಗೆ ಎಸೆದಿದ್ದಾನೆ. ಕೃತ್ಯ ಎಸಗಿದ ತಕ್ಷಣವೇ ಆತ ಮತ್ತೆ ನೇಪಾಳ ಮಾರ್ಗವಾಗಿಯೇ ಕೆನಡಾಕ್ಕೆ ಪರಾರಿಯಾಗಿದ್ದಾನೆ.

ಪೊಲೀಸರ ನಿರ್ಲಕ್ಷ್ಯದ ಆರೋಪ:

ಮೇ 15 ರಂದೇ ಜಮಾಲ್‌ಪುರ ಪೊಲೀಸ್ ಠಾಣೆಯಲ್ಲಿ ಸುಖ್ವಿಂದರ್ ಸಿಂಗ್ ಮತ್ತು ಆತನ ಸಹಚರ ಕರಮ್‌ಜಿತ್ ಸಿಂಗ್ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿತ್ತು. ಆದರೆ ಪೊಲೀಸರು ಸಕಾಲದಲ್ಲಿ ಕ್ರಮ ಕೈಗೊಂಡಿದ್ದರೆ ಇಂದರ್ ಕೌರ್ ಜೀವ ಉಳಿಯುತ್ತಿತ್ತು ಎಂದು ಕುಟುಂಬಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪ್ರಸ್ತುತ ಶವವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದ್ದು, ತಲೆಮರೆಸಿಕೊಂಡಿರುವ ಉಳಿದ ಆರೋಪಿಗಳ ಪತ್ತೆಗಾಗಿ ಪೊಲೀಸರು ಜಾಲ ಬೀಸಿದ್ದಾರೆ.

Share

Leave a comment

Leave a Reply

Your email address will not be published. Required fields are marked *