ನವದೆಹಲಿ: ದೇಶದ ಅತ್ಯುನ್ನತ ಸಂಸ್ಥೆಗಳಾದ ಐಐಟಿ ದೆಹಲಿ (IIT Delhi) ಮತ್ತು ಐಐಎಂ ಬೆಂಗಳೂರಿನಲ್ಲಿ (IIM Bangalore) ಪದವಿ ಪಡೆದು, ಪ್ರಸ್ತುತ ಐಎಎಸ್ ಅಧಿಕಾರಿಯಾಗಿ ಸೇವೆ ಸಲ್ಲಿಸುತ್ತಿರುವ ದಿವ್ಯಾ ಮಿತ್ತಲ್ ಅವರು ಭಾರತೀಯ ಶಿಕ್ಷಣ ವ್ಯವಸ್ಥೆಯ ಕುರಿತು ಸಾಮಾಜಿಕ ಜಾಲತಾಣ ‘X’ ನಲ್ಲಿ ಹಂಚಿಕೊಂಡಿರುವ ಪೋಸ್ಟ್ ಒಂದು ಭಾರಿ ಚರ್ಚೆಗೆ ಗ್ರಾಸವಾಗಿದೆ.
ದೇಶದ ಅತ್ಯುತ್ತಮ ಶಿಕ್ಷಣ ಸಂಸ್ಥೆಗಳು ಕಠಿಣ ಪರೀಕ್ಷೆಗಳನ್ನು ಎದುರಿಸುವುದನ್ನು ಕಲಿಸಿಕೊಟ್ಟಿವೆ, ಆದರೆ ಜೀವನದಲ್ಲಿ ಸಂತೋಷವಾಗಿರುವುದು ಹೇಗೆ ಅಥವಾ ಒಂಟಿತನವನ್ನು ಹೇಗೆ ನಿಭಾಯಿಸಬೇಕು ಎಂಬುದನ್ನು ಕಲಿಸಿಲ್ಲ ಎಂದು ಅವರು ಬೇಸರ ವ್ಯಕ್ತಪಡಿಸಿದ್ದಾರೆ.
ಶಾಲಾ ಶಿಕ್ಷಣದಲ್ಲಿ ಕೈಬಿಡಲಾದ ಪ್ರಮುಖ ಅಂಶಗಳು:
ದಿವ್ಯಾ ಮಿತ್ತಲ್ ಅವರು ತಮ್ಮ ಪೋಸ್ಟ್ನಲ್ಲಿ ಇಂದಿನ ಶಾಲಾ ಶಿಕ್ಷಣದಲ್ಲಿ ಕೊರತೆಯಿರುವ ಪ್ರಮುಖ ಜೀವನ ಕೌಶಲ್ಯಗಳನ್ನು ಪಟ್ಟಿ ಮಾಡಿದ್ದಾರೆ:
ಭಾವನಾತ್ಮಕ ನಿಯಂತ್ರಣ (Emotional Regulation): ನಾವು ಶಾಲೆಯಲ್ಲಿ ಆವರ್ತಕ ಕೋಷ್ಟಕವನ್ನು (Periodic Table) ನೆನಪಿಟ್ಟುಕೊಳ್ಳುತ್ತೇವೆ. ಆದರೆ ದುಃಖ, ಮಾನಸಿಕ ಒತ್ತಡ ಅಥವಾ ವೈಫಲ್ಯವನ್ನು ಹೇಗೆ ನಿಭಾಯಿಸಬೇಕು ಎಂಬುದನ್ನು ಯಾರೂ ಕಲಿಸುವುದಿಲ್ಲ. ಶಾಲೆಗಳು ನಿಶ್ಯಬ್ದವಾಗಿರುವುದನ್ನೇ ಶಿಸ್ತು ಎಂದು ತಪ್ಪಾಗಿ ಭಾವಿಸುತ್ತವೆ, ಇದರಿಂದಾಗಿ ಮಕ್ಕಳು ಭಾವನೆಗಳನ್ನು ಹತ್ತಿಕ್ಕಲು ಕಲಿಯುತ್ತಾರೆಯೇ ಹೊರತು ಅದನ್ನು ಎದುರಿಸಲು ಅಲ್ಲ.
ಸಂವಹನ ಕೌಶಲ್ಯ (Communication Skills): ಪರೀಕ್ಷೆಗಳಲ್ಲಿ ಅಂಕ ಗಳಿಸಲು ಪ್ರಬಂಧ ಬರೆಯುವುದನ್ನು ಕಲಿಸಲಾಗುತ್ತದೆ. ಆದರೆ ಕಷ್ಟದ ಸಂದರ್ಭಗಳಲ್ಲಿ ಹಠಾತ್ತನೆ ಎದುರಾಗುವ ಕಿರಕುಳಗಳಿಗೆ ‘ಇಲ್ಲ’ (No) ಎಂದು ಹೇಳುವುದನ್ನು ಅಥವಾ ನಮ್ಮ ಗಡಿಗಳನ್ನು ಗುರುತಿಸಿಕೊಳ್ಳುವುದನ್ನು ಕಲಿಸುವುದಿಲ್ಲ.
ವಿಮರ್ಶಾತ್ಮಕ ಚಿಂತನೆ (Critical Thinking): ಶಾಲೆಯಲ್ಲಿ ಅತಿ ಹೆಚ್ಚು ಉತ್ತರ ಹೇಳುವವನು ಗೆಲ್ಲುತ್ತಾನೆ, ಆದರೆ ನಿಜ ಜೀವನದಲ್ಲಿ ಅತಿ ಹೆಚ್ಚು ಪ್ರಶ್ನೆಗಳನ್ನು ಕೇಳುವವನು ಮಾತ್ರ ಬದುಕುಳಿಯುತ್ತಾನೆ.
ಹಣಕಾಸು ಸಾಕ್ಷರತೆ (Financial Literacy): ಗಣಿತದಲ್ಲಿ ಕಷ್ಟಕರವಾದ ಸಮೀಕರಣಗಳನ್ನು ಬಿಡಿಸುವುದನ್ನು ಕಲಿಯುವ ವಿದ್ಯಾರ್ಥಿಗಳಿಗೆ, ನಿಜ ಜೀವನದಲ್ಲಿ ಸಾಲದ ಸುಳಿಗೆ ಸಿಲುಕದಂತೆ ಹಣವನ್ನು ಹೇಗೆ ನಿರ್ವಹಿಸಬೇಕು ಮತ್ತು ಉಳಿತಾಯ ಮಾಡಬೇಕು ಎಂಬುದನ್ನು ಹೇಳಿಕೊಡುವುದಿಲ್ಲ.
ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆ:
ದಿವ್ಯಾ ಮಿತ್ತಲ್ ಅವರ ಈ ಪೋಸ್ಟ್ಗೆ ನೆಟ್ಟಿಗರಿಂದ ವ್ಯಾಪಕ ಬೆಂಬಲ ವ್ಯಕ್ತವಾಗಿದ್ದು, ಭಾರತದ ಪರೀಕ್ಷಾ ಕೇಂದ್ರಿತ (Exam-oriented) ಶಿಕ್ಷಣ ಪದ್ಧತಿಯು ಕೇವಲ ಅಂಕಗಳು ಮತ್ತು ರ್ಯಾಂಕಿಂಗ್ಗೆ ಮಹತ್ವ ನೀಡುತ್ತಿದೆಯೇ ಹೊರತು ಮಾನಸಿಕ ಆರೋಗ್ಯ ಹಾಗೂ ಜೀವನದ ಮೌಲ್ಯಗಳಿಗಲ್ಲ ಎಂದು ಅನೇಕರು ಒಪ್ಪಿಕೊಂಡಿದ್ದಾರೆ. ಶಿಕ್ಷಣವು ಕೇವಲ ವೃತ್ತಿಜೀವನಕ್ಕೆ ಸಿದ್ಧಪಡಿಸಬೇಕೇ ಅಥವಾ ಜೀವನದ ಏರಿಳಿತಗಳನ್ನು ಎದುರಿಸಲು ಕಲಿಸಬೇಕೇ ಎಂಬ ಮಹತ್ವದ ಪ್ರಶ್ನೆಯನ್ನು ಈ ಪೋಸ್ಟ್ ಹುಟ್ಟುಹಾಕಿದೆ.





Leave a comment