Home ಕ್ರೈಂ ನ್ಯೂಸ್ ದಾವಣಗೆರೆಯಲ್ಲಿ ಆಲಿಕಲ್ಲು ಮಳೆ ಆರ್ಭಟ: ಭತ್ತ, ಅಡಿಕೆ ಬೆಳೆ ನಾಶ, ಮನೆಗಳು ಕುಸಿತ!
ಕ್ರೈಂ ನ್ಯೂಸ್ದಾವಣಗೆರೆಬೆಂಗಳೂರು

ದಾವಣಗೆರೆಯಲ್ಲಿ ಆಲಿಕಲ್ಲು ಮಳೆ ಆರ್ಭಟ: ಭತ್ತ, ಅಡಿಕೆ ಬೆಳೆ ನಾಶ, ಮನೆಗಳು ಕುಸಿತ!

Share
ಮಳೆ
Share

ದಾವಣಗೆರೆ: ಮಾಯಕೊಂಡ ವಿಧಾನಸಭಾ ಕ್ಷೇತ್ರದ ವಿವಿಧ ಗ್ರಾಮಗಳಲ್ಲಿ ಆಲಿಕಲ್ಲು ಮಳೆಗೆ ಬೆಳೆ ಕೊಚ್ಚಿ ಹೋಗಿದೆ. ಆಲಿಕಲ್ಲು ಸಹಿತ ಸುರಿದ ಭಾರೀ ಮಳೆಯಿಂದ ಬೆಳೆ ಹಾಗೂ ಮನೆ ಹಾನಿ ಆಗಿದೆ.

ಭಾರೀ ಮಳೆಯಿಂದ ತ್ಯಾವಣಿಗಿ ಗ್ರಾಮದಲ್ಲಿ ಸುಮಾರು 30ಕ್ಕೂ ಹೆಚ್ಚು ಎಕರೆ ಪ್ರದೇಶದಲ್ಲಿ ಬೆಳೆದಿದ್ದ ಫಲಕ್ಕೆ ಬಂದ ಭತ್ತದ ಬೆಳೆ ನೆಲಕ್ಕುರುಳಿದ್ದು, ರೈತರಿಗೆ ಲಕ್ಷಾಂತರ ರೂಪಾಯಿ ನಷ್ಟ ಉಂಟಾಗಿದೆ. ಶಿವರಾಜ್, ಚಂದ್ರಕಾಂತ್, ಹಾಲಪ್ಪ, ಶ್ರೀನಿವಾಸ್, ಹೊನ್ನಪ್ಪ ಹಾಗೂ ವನಜಾಕ್ಷಮ್ಮ ಸೇರಿದಂತೆ ಹಲವು ರೈತರು ತಮ್ಮ ಬೆಳೆ ಹಾನಿಯ ಬಗ್ಗೆ ಶಾಸಕ ಕೆ. ಎಸ್. ಬಸವಂತಪ್ಪರಿಗೆ ವಿವರ ನೀಡಿದರು.

ಇದೇ ವೇಳೆ ಗ್ರಾಮದ ಶೌಕತ್ ಅಲಿ, ಫರೀದ್ ಬಾನು ಮತ್ತು ಖಲೀಲ್ ಸಾಬ್ ಅವರ ಮನೆಗಳು ಮಳೆಯಿಂದ ಕುಸಿದು ಬಿದ್ದಿದ್ದು, ಮನೆಯಲ್ಲಿದ್ದವರು ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

3500ಕ್ಕೂ ಹೆಚ್ಚು ಅಡಿಕೆ ಮರಗಳು ಧರೆಗೆ:

ಬಸವಾಪಟ್ಟಣ ಗ್ರಾಮದಲ್ಲಿಯೂ ಬಿರುಗಾಳಿ ಮತ್ತು ಆಲಿಕಲ್ಲು ಮಳೆಗೆ ಭಾರೀ ಹಾನಿಯಾಗಿದೆ. ರೈತ ಚೆನ್ನಪ್ಪ ಅವರ ಆರು ಎಕರೆ ತೋಟದಲ್ಲಿ ಬೆಳೆದಿದ್ದ ಸುಮಾರು ಮೂರು ಸಾವಿರ ಅಡಿಕೆ ಮರಗಳು ಸಂಪೂರ್ಣ ನೆಲಕ್ಕುರುಳಿವೆ. ಮತ್ತೊಬ್ಬ ರೈತ ಬಸವರಾಜ ಅವರ 2 ಎಕರೆ ತೋಟದಲ್ಲಿದ್ದ 100 ಕ್ಕೂ ಹೆಚ್ಚು ಅಡಿಕೆ ಮರಗಳು ಹಾನಿಗೊಳಗಾಗಿ ಲಕ್ಷಾಂತರ ರೂಪಾಯಿ ನಷ್ಟ ಸಂಭವಿಸಿದೆ.

ಮನೆಗಳು ಕುಸಿದು ನಿವಾಸಿಗಳ ಆತಂಕ:

ಶೃಂಗಾರಬಾಗು ತಾಂಡದಲ್ಲಿಯೂ ಮಳೆಯ ಆರ್ಭಟಕ್ಕೆ ಹಲವು ಮನೆಗಳು ಕುಸಿದು ಬಿದ್ದಿವೆ. ಸೀತಾಬಾಯಿ ಶಂಕರ್ ನಾಯ್ಕ್, ಮಂಜಿಬಾಯಿ ರಾಜನಾಯ್ಕ್, ವಿನೋದಬಾಯಿ ರವಿನಾಯ್ಕ್, ಆಶಾಬಾಯಿ ವಸಂತನಾಯ್ಕ್, ಎಮ್ಲಿಬಾಯಿ ಹೇಮಾನಾಯ್ಕ್ ಹಾಗೂ ಕವಿತಾಬಾಯಿ ಕಾಂತಿನಾಯ್ಕ್ ಅವರ ಮನೆಗಳಿಗೆ ಹಾನಿಯಾಗಿದೆ. ನಿವಾಸಿಗಳು ಶಾಸಕರ ಬಳಿ ತೀವ್ರ ಆತಂಕ ವ್ಯಕ್ತಪಡಿಸಿದ್ದಾರೆ.

ಹಾನಿಗೊಳಗಾದ ರೈತರು ಮತ್ತು ನಿವಾಸಿಗಳ ಸಮಸ್ಯೆಗಳನ್ನು ಆಲಿಸಿದ ಶಾಸಕ ಕೆ.ಎಸ್.ಬಸವಂತಪ್ಪ, ಕೂಡಲೇ ಬೆಳೆಹಾನಿ ಪರಿಹಾರ ನೀಡುವಂತೆ ಹಾಗೂ ಮನೆ ಕಳೆದುಕೊಂಡವರಿಗೆ ಹೊಸ ಮನೆ ನಿರ್ಮಿಸಿಕೊಡುವಂತೆ
ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಈ ಸಂದರ್ಭದಲ್ಲಿ ಚನ್ನಗಿರಿ ತಹಸೀಲ್ದಾರ್ ನಾಗರಾಜ್, ಸಹಾಯಕ ಕೃಷಿ ನಿರ್ದೇಶಕ ಅರುಣ್‌ಕುಮಾರ್, ತ್ಯಾವಣಿಗಿ ಕಂದಾಯ ಅಧಿಕಾರಿ ಬಸಣ್ಣ, ಬಸವಾಪಟ್ಟಣ ಕಂದಾಯ ಅಧಿಕಾರಿ ಜಬಿವುಲ್ಲಾ, ಪಿಡಿಒ ಹನುಮಂತರಾಯ, ವಿಎ ರೇಷ್ಮಾ, ಹಾನಿಗೊಳಗಾದ ರೈತರಾದ ಶಿವರಾಜ್, ಚಂದ್ರಕಾಂತ್, ಹಾಲಪ್ಪ, ಶ್ರೀನಿವಾಸ್, ಹೊನ್ನಪ್ಪ, ವನಜಾಕ್ಷಮ್ಮ, ಗ್ರಾಮಸ್ಥರಾದ ಬಿ.ಎಚ್.ಹಾಲಪ್ಪ, ಸಂತೋಷ್, ಬಸವಾಪಟ್ಟಣ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ.ಜಿ.ನಾಗರಾಜ್ ಸೇರಿದಂತೆ ಗ್ರಾಮಸ್ಥರು ಹಾಜರಿದ್ದರು.

Share

Leave a comment

Leave a Reply

Your email address will not be published. Required fields are marked *

Recent Comments

No comments to show.
Related Articles