ನವದೆಹಲಿ: ಪ್ರಸಿದ್ಧ ಡೇಟಿಂಗ್ ಆಪ್‌ಗಳ ಮೂಲಕ ಯುವಕರನ್ನು ಟಾರ್ಗೆಟ್ ಮಾಡಿ, ಹನಿ ಟ್ರ್ಯಾಪ್ (Honey Trap) ಬಲೆಯಲ್ಲಿ ಸಿಲುಕಿಸಿ ಲಕ್ಷಾಂತರ ರೂಪಾಯಿ ಸುಲಿಗೆ ಮಾಡುತ್ತಿದ್ದ ನಾಲ್ಕು ಮಂದಿ ಖತರ್ನಾಕ್ ಕಿಲಾಡಿಗಳನ್ನು ದೆಹಲಿ ಪೊಲೀಸರ ಕ್ರೈಮ್ ಬ್ರಾಂಚ್ ವಿಭಾಗ ಯಶಸ್ವಿಯಾಗಿ ಬಂಧಿಸಿದೆ.
ಸುಶೀಲ್ ಕುಮಾರ್, ದೀಪಕ್, ವಿನೋದ್ ಪಂಡಿತ್ ಮತ್ತು ನೀರಜ್ ತ್ಯಾಗಿ ಬಂಧಿತ ಆರೋಪಿಗಳಾಗಿದ್ದು, ಗಗನ್ ಹಾಗೂ ಪೂಜಾ ಎಂಬ ಇಬ್ಬರು ತಲೆಮರೆಸಿಕೊಂಡಿದ್ದಾರೆ.
ಖೆಡ್ಡಾ ತೋಡುತ್ತಿದ್ದುದು ಹೇಗೆ?:
ಆರೋಪಿಗಳು ಟಿಂಡರ್ (Tinder) ಮತ್ತು ಕ್ವ್ಯಾಕ್‌ಕ್ವ್ಯಾಕ್ (QuackQuack) ನಂತಹ ಡೇಟಿಂಗ್ ಆಪ್‌ಗಳಲ್ಲಿ ‘ಕೀರ್ತಿ’ ಸೇರಿದಂತೆ ವಿವಿಧ ಯುವತಿಯರ ಹೆಸರಿನಲ್ಲಿ ನಕಲಿ ಪ್ರೊಫೈಲ್‌ಗಳನ್ನು ಸೃಷ್ಟಿಸುತ್ತಿದ್ದರು. ಈ ಖಾತೆಗಳ ಮೂಲಕ ಯುವಕರನ್ನು ಪರಿಚಯ ಮಾಡಿಕೊಂಡು, ಪ್ರೀತಿಯ ನಾಟಕವಾಡಿ ದೆಹಲಿಯ ಜನಕಪುರಿ ಪ್ರಾಂತ್ಯದ ನಿರ್ಜನ ಪ್ರದೇಶ ಅಥವಾ ಫ್ಲ್ಯಾಟ್‌ಗಳಿಗೆ ಭೇಟಿಯಾಗಲು ಕರೆಯುತ್ತಿದ್ದರು.
ಯುವಕರು ಅಲ್ಲಿಗೆ ಬರುತ್ತಿದ್ದಂತೆ ಗ್ಯಾಂಗ್‌ನ ಇತರೆ ಸದಸ್ಯರು ಒಟ್ಟಿಗೆ ದಾಳಿ ಮಾಡುತ್ತಿದ್ದರು. ಈ ವೇಳೆ ಆರೋಪಿ ಸುಶೀಲ್ ಕುಮಾರ್ ಎಂಬಾತ ಪೊಲೀಸ್ ಯೂನಿಫಾರ್ಮ್ ಧರಿಸಿ ತಾನು ಪೊಲೀಸ್ ಅಧಿಕಾರಿ ಎಂದು ನಂಬಿಸುತ್ತಿದ್ದ. “ನೀನು ಯುವತಿಯ ಮೇಲೆ ಅತ್ಯಾಚಾರ ಮಾಡಲು ಬಂದಿದ್ದೀಯಾ, ನಿನ್ನ ಮೇಲೆ ರೇಪ್ ಕೇಸ್ ದಾಖಲಿಸುತ್ತೇವೆ” ಎಂದು ಬೆದರಿಸಿ ದಬಾಯಿಸುತ್ತಿದ್ದರು.
ಕಾರಿನಲ್ಲಿ ಕೂಡಿಹಾಕಿ 15 ಲಕ್ಷ ಸುಲಿಗೆ:
ಇತ್ತೀಚೆಗೆ ಇವರ ಬಲೆಗೆ ಬಿದ್ದ ಸಂತ್ರಸ್ತನೊಬ್ಬನನ್ನು ಕಾರಿನಲ್ಲಿ ಕೂಡಿಹಾಕಿ, ಜೈಲಿಗೆ ಕಳುಹಿಸುವುದಾಗಿ ಹೆದರಿಸಿದ ಈ ಗ್ಯಾಂಗ್, ಬರೋಬ್ಬರಿ 15 ಲಕ್ಷ ರೂಪಾಯಿಗೆ ಬೇಡಿಕೆ ಇಟ್ಟಿತ್ತು. ಅಷ್ಟೇ ಅಲ್ಲದೆ ಆತನನ್ನು ಎಟಿಎಂ ಕೇಂದ್ರಗಳಿಗೆ ಕರೆದೊಯ್ದು ಬಲವಂತವಾಗಿ ಹಣ ಡ್ರಾ ಮಾಡಿಸಿಕೊಂಡಿದ್ದರು.
ಈ ಕುರಿತು ದಾಖಲಾದ ದೂರು ಮತ್ತು ತಾಂತ್ರಿಕ ಕಣ್ಗಾವಲು (Technical Surveillance) ಆಧಾರದ ಮೇಲೆ ಕಾರ್ಯಾಚರಣೆ ನಡೆಸಿದ ಇನ್ಸ್‌ಪೆಕ್ಟರ್ ಪವನ್ ಕುಮಾರ್ ನೇತೃತ್ವದ ಕ್ರೈಮ್ ಬ್ರಾಂಚ್ ತಂಡ, ರಾಜೌರಿ ಗಾರ್ಡನ್ ಬಳಿ ಗ್ಯಾಂಗ್ ಅನ್ನು ಕೋಳ ತೊಡಿಸಿದೆ. ಬಂಧನದ ವೇಳೆ ಪ್ರಮುಖ ಆರೋಪಿ ಸುಶೀಲ್ ಕುಮಾರ್ ನಕಲಿ ಪೊಲೀಸ್ ಯೂನಿಫಾರ್ಮ್‌ನಲ್ಲೇ ಸಿಕ್ಕಿಬಿದ್ದಿದ್ದಾನೆ. ಆರೋಪಿಗಳು ಈ ಹಿಂದೆಯೂ ಇಂತಹದೇ ಹಲವು ಪ್ರಕರಣಗಳಲ್ಲಿ ಭಾಗಿಯಾಗಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ದೆಹಲಿ ಪೊಲೀಸರ ಎಚ್ಚರಿಕೆ:
ಡೇಟಿಂಗ್ ಆಪ್‌ಗಳಲ್ಲಿ ಅಪರಿಚಿತರೊಂದಿಗೆ ಸಂವಹನ ನಡೆಸುವಾಗ ಸಾರ್ವಜನಿಕರು ತೀವ್ರ ಜಾಗ್ರತೆ ವಹಿಸಬೇಕು. ಯಾವುದೇ ಕಾರಣಕ್ಕೂ ಅಪರಿಚಿತರು ಕರೆದ ತಕ್ಷಣ ನಿರ್ಜನ ಪ್ರದೇಶಗಳಲ್ಲಿ ಭೇಟಿಯಾಗಲು ಹೋಗಬಾರದು ಎಂದು ದೆಹಲಿ ಪೊಲೀಸರು ಸಾರ್ವಜನಿಕ ಪ್ರಕಟಣೆ ಹೊರಡಿಸಿದ್ದಾರೆ. ಒಂದು ವೇಳೆ ಯಾರಾದರೂ ಇಂತಹ ಹನಿ ಟ್ರ್ಯಾಪ್‌ಗೆ ಒಳಗಾಗಿದ್ದರೆ ತಕ್ಷಣವೇ ಪೊಲೀಸರನ್ನು ಸಂಪರ್ಕಿಸಲು ಕೋರಿದ್ದಾರೆ.
- Delhi Crime News
- Delhi honey trap gang
- Delhi Police Crime Branch arrest
- fake cop extortion Janakpuri
- fake police raid extortion
- fake rape case threat
- online dating trap
- QuackQuack app fraud
- Tinder dating scam Delhi
- ಆನ್ಲೈನ್ ಡೇಟಿಂಗ್ ವಂಚನೆ
- ಜನಕಪುರಿ ಹನಿ ಟ್ರ್ಯಾಪ್
- ಟಿಂಡರ್ ವಂಚನೆ ಕತೆ
- ಟಿಂಡರ್ ಹನಿ ಟ್ರ್ಯಾಪ್
- ದೆಹಲಿ ಕ್ರೈಮ್ ಬ್ರಾಂಚ್ ಅರೆಸ್ಟ್
- ನಕಲಿ ಪೊಲೀಸ್ ರೈಡ್
- ನಕಲಿ ಪೊಲೀಸ್ ಸುಲಿಗೆ
- ಸುಲಿಗೆ ಗ್ಯಾಂಗ್ ಬಂಧನ
- ಹನಿ ಟ್ರ್ಯಾಪ್ ದೆಹಲಿ





Leave a comment