ಮೊರಾದಾಬಾದ್: ಉತ್ತರ ಪ್ರದೇಶದ ಸಂಭಾಲ್ ಜಿಲ್ಲೆಯ 31 ವರ್ಷದ ಮಹಿಳೆಯೊಬ್ಬರು ಸತತ ಐದು ದಿನಗಳ ಅಂತರದಲ್ಲಿ ನಾಲ್ಕು ಮಕ್ಕಳಿಗೆ ಜನ್ಮ ನೀಡುವ ಮೂಲಕ ವೈದ್ಯಕೀಯ ಲೋಕವನ್ನೇ ಬೆರಗುಗೊಳಿಸಿದ್ದಾರೆ.
ಮೊರಾದಾಬಾದ್‌ನ ತೀರ್ಥಂಕರ್ ಮಹಾವೀರ್ ವಿಶ್ವವಿದ್ಯಾಲಯದ ಆಸ್ಪತ್ರೆಯಲ್ಲಿ ಈ ಅಪರೂಪದ ಘಟನೆ ನಡೆದಿದೆ.
ಅಮೀನಾ ಎಂಬ ಮಹಿಳೆಗೆ ಮೇ 9 ರಂದು ಮೊದಲ ಗಂಡು ಮಗು ಜನಿಸಿತ್ತು. ಗರ್ಭಧಾರಣೆಯು ಕೇವಲ ಆರೂವರೆ ತಿಂಗಳಷ್ಟೇ ಆಗಿದ್ದರಿಂದ, ಉಳಿದ ಮೂರು ಮಕ್ಕಳನ್ನು ಗರ್ಭದಲ್ಲೇ ಸುರಕ್ಷಿತವಾಗಿಡಲು ವೈದ್ಯರು ಪ್ರಯತ್ನಿಸಿದ್ದರು.
ಆದರೆ ಐದು ದಿನಗಳ ನಂತರ ಅಂದರೆ ಮೇ 14 ರಂದು ಮತ್ತೆ ಹೆರಿಗೆ ನೋವು ಕಾಣಿಸಿಕೊಂಡಿದ್ದು, ಮಹಿಳೆ ಮತ್ತೆ ಮೂರು ಮಕ್ಕಳಿಗೆ (ಒಂದು ಗಂಡು ಮತ್ತು ಇಬ್ಬರು ಹೆಣ್ಣು) ಜನ್ಮ ನೀಡಿದ್ದಾರೆ.
ಸಾಮಾನ್ಯವಾಗಿ ಇಂತಹ ಸಂಕೀರ್ಣ ಗರ್ಭಧಾರಣೆಗಳಲ್ಲಿ ಸಿಸೇರಿಯನ್ ಶಸ್ತ್ರಚಿಕಿತ್ಸೆ ಮಾಡಲಾಗುತ್ತದೆ. ಆದರೆ ಈ ಪ್ರಕರಣದಲ್ಲಿ ನಾಲ್ಕೂ ಮಕ್ಕಳು ಸಹಜ ಹೆರಿಗೆ (Normal Delivery) ಮೂಲಕ ಜನಿಸಿರುವುದು ವಿಶೇಷ. ಸದ್ಯ ತಾಯಿ ಮತ್ತು ಮಕ್ಕಳು ವೈದ್ಯರ ಮೇಲ್ವಿಚಾರಣೆಯಲ್ಲಿದ್ದು, ಆರೋಗ್ಯ ಸುಧಾರಿಸುತ್ತಿದೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.





Leave a comment