ದಾವಣಗೆರೆ: ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯ ಫಲಿತಾಂಶ ಹೊರ ಬಿದ್ದಿದ್ದು, ಕಾಂಗ್ರೆಸ್ ಅಭ್ಯರ್ಥಿ ಸಮರ್ಥ್ ಶಾಮನೂರು ರೋಚಕ ಗೆಲುವು ಸಾಧಿಸಿದ್ದಾರೆ. ಭಾರೀ ಪೈಪೋಟಿ ನೀಡಿದ್ದ ಬಿಜೆಪಿ ಅಭ್ಯರ್ಥಿ ಶ್ರೀನಿವಾಸ್ ದಾಸಕರಿಯಪ್ಪ ಅವರು ವಿರೋಚಿತ ಸೋಲು ಕಂಡಿದ್ದಾರೆ. ಈ ಮೂಲಕ ಕಾಂಗ್ರೆಸ್ ತನ್ನ ಭದ್ರಕೋಟೆ ದಾವಣಗೆರೆ ದಕ್ಷಿಣ ಎಂಬುದನ್ನು ತೋರಿಸಿದೆ.
ಆದರೆ ಎಸ್ ಡಿಪಿಐ ಅಭ್ಯರ್ಥಿ ಅಪ್ಸರ್ ಕೊಡ್ಲಿಬೆಟ್ಟು ಅವರು ಮೂರು ಬೂತ್ ಗಳ ಕೀ ಕಳೆದು ಹೋಗಿ ಆ ನಂತರ ಮತ ಎಣಿಕೆ ನಡೆದಿದ್ದು, ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಚುನಾವಣಾ ಆಯೋಗಕ್ಕೆ ಮನವಿ ಮಾಡಿರುವ ಕಾರಣ ಫಲಿತಾಂಶ ಘೋಷಣೆ ಮಾಡಿಲ್ಲ. ಸಂಜೆ ಅಧಿಕೃತವಾಗಿ ಘೋಷಿಸುವ ಸಾಧ್ಯತೆ ಇದೆ.
ಭಾರೀ ಹಣಾಹಣಿಯಿಂದ ಕೂಡಿದ್ದ ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯು ಕಾಂಗ್ರೆಸ್ ಮತ್ತು ಬಿಜೆಪಿಗೆ ಪ್ರತಿಷ್ಠೆಯ ಕಣವಾಗಿತ್ತು. ಆರಂಭದಲ್ಲಿ ಅಂಚೆ ಮತಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸಮರ್ಥ್ ಶಾಮನೂರು ಅಲ್ಪ ಮುನ್ನಡೆ ಸಾಧಿಸಿದ್ದರು. ಆ ನಂತರ ಶ್ರೀನಿವಾಸ್ ದಾಸಕರಿಯಪ್ಪ ಅವರು ಸತತ ಏಳು ಸುತ್ತಿನ ಮತ ಎಣಿಕೆಯಲ್ಲಿ ಮುನ್ನಡೆ ಸಾಧಿಸಿದ್ದರು. ಎಂಟನೇ ಸುತ್ತಿನ ಬಳಿಕ ಮುನ್ನಡೆ ನಾಗಾಲೋಟ ಮುಂದುವರಿಸಿದ ಸಮರ್ಥ್ ಶಾಮನೂರು ಕೊನೆಯವರೆಗೂ ಮುಂದುವರಿಸಿಕೊಂಡು ಬಂದರು.
ಪ್ರಮುಖ ಅಂಶಗಳು
ಅಭ್ಯರ್ಥಿ: ಸಮರ್ಥ್ ಶಾಮನೂರು (ಕಾಂಗ್ರೆಸ್).
ವಿಜಯದ ಹಾದಿ: 8ನೇ ಸುತ್ತಿನ ನಂತರ ಮುನ್ನಡೆ ಸಾಧಿಸಿ ಜಯಭೇರಿ.
ವಿಶೇಷತೆ: ಎಸ್‌ಡಿಪಿಐ ಅಭ್ಯರ್ಥಿ ಅಪ್ಸರ್ ಕೊಡ್ಲಿಬೆಟ್ಟು 18,000 ಮತಗಳನ್ನು ಪಡೆಯುವ ಮೂಲಕ ಕಾಂಗ್ರೆಸ್‌ಗೆ ಪ್ರಬಲ ಪೈಪೋಟಿ ನೀಡಿದ್ದಾರೆ.
ವಯಸ್ಸು: 27 ವರ್ಷದ ಯುವ ನಾಯಕನಿಗೆ ಮೊದಲ ಜಯ.
ಶ್ರೀನಿವಾಸ್ ದಾಸಕರಿಯಪ್ಪ ಅವರು ತೀವ್ರ ಪೈಪೋಟಿ ನೀಡಿದ್ದು, ಕಾಂಗ್ರೆಸ್ ಪಕ್ಷದ ಭದ್ರಕೋಟೆ ಛಿದ್ರಿಸಲು ರಣತಂತ್ರ ರೂಪಿಸಿದ್ದರು. ಬಹುತೇಕ ಇದು ಕೆಲಸ ಮಾಡಿತು ಎಂದುಕೊಂಡರೂ ಅಂತಿಮವಾಗಿ ಕಾಂಗ್ರೆಸ್ ಗೆಲ್ಲುವಲ್ಲಿ ಯಶಸ್ವಿಯಾಗಿದೆ.
ಶಾಮನೂರು ಶಿವಶಂಕರಪ್ಪರ ನಿಧನದಿಂದ ತೆರವಾಗಿದ್ದ ಈ ಸ್ಥಾನಕ್ಕೆ ಉಪಚುನಾವಣೆ ನಡೆದಿತ್ತು. ಕ್ಷೇತ್ರ ಪುನರ್ವಿಂಗಡಣೆ ಆದ ಬಳಿಕ ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿ ನಾಲ್ಕು ಬಾರಿ ಶಾಮನೂರು ಶಿವಶಂಕರಪ್ಪರು ಗೆದ್ದಿದ್ದರು. ಈ ಬಾರಿಯ ಉಪಚುನಾವಣೆಯಲ್ಲಿ ಮುಸ್ಲಿಂ ಸಮುದಾಯವು ತಮ್ಮ ಸಮಾಜಕ್ಕೆ ಟಿಕೆಟ್ ನೀಡಬೇಕೆಂಬ ಬಲವಾದ ಕೂಗು ಹಾಕಿತ್ತು. ಸಚಿವ ಜಮೀರ್ ಅಹ್ಮದ್ ಅವರು ದಾವಣಗೆರೆಯಲ್ಲಿ ಪ್ರಚಾರ
ನಡೆಸದೇ ಇದ್ದದ್ದು ಹಿನ್ನಡೆ ತಂದಿತ್ತು.
ಕೆಲ ಅಲ್ಪಸಂಖ್ಯಾತರು ಕಾಂಗ್ರೆಸ್ ಸೋಲಿಸುತ್ತೇವೆಂಬ ಹಠ ತೊಟ್ಟಿದ್ದರು. ಕೊನೆಗೂ ಕಾಂಗ್ರೆಸ್ ಹೈಕಮಾಂಡ್ ಶಾಮನೂರು ಶಿವಶಂಕರಪ್ಪರ ಮೊಮ್ಮಗ, ಸಚಿವ ಎಸ್. ಎಸ್. ಮಲ್ಲಿಕಾರ್ಜುನ್ ಮತ್ತು ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ್ ರ ಪುತ್ರ ಸಮರ್ಥ್ ಶಾಮನೂರು ಅವರಿಗೆ ಟಿಕೆಟ್ ನೀಡಿತ್ತು. ಆರಂಭದಿಂದಲೂ ಬಿಜೆಪಿಯ ಶ್ರೀನಿವಾಸ್ ದಾಸಕರಿಯಪ್ಪ ಮತ್ತು ಕಾಂಗ್ರೆಸ್ ನ ಸಮರ್ಥ್ ಶಾಮನೂರು ನಡುವೆ ಭಾರೀ ಹಣಾಹಣಿ ಏರ್ಪಟ್ಟಿತ್ತು. ಈ ನಡುವೆ ಎಸ್ ಡಿಪಿಐ ಅಭ್ಯರ್ಥಿ ಅಪ್ಸರ್ ಕೊಡ್ಲಿಬೆಟ್ಟು ಕಣಕ್ಕಿಳಿದು ಅಲ್ಪಸಂಖ್ಯಾತರ ಮನ ಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ. ಬರೋಬ್ಬರಿ 18 ಸಾವಿರಕ್ಕೆ ಸನಿಹದಷ್ಟು ಮತ ಪಡೆದು ಕಾಂಗ್ರೆಸ್ ಗೆ ಠಕ್ಕರ್ ಕೊಟ್ಟಿದ್ದಾರೆ.
ಅಲ್ಪಸಂಖ್ಯಾತರ ಸಿಟ್ಟಿನ ಫಲವಾಗಿ ಕಾಂಗ್ರೆಸ್ ಮುನ್ನಡೆ ಕಡಿಮೆಯಾಗಿದೆ. ಎಸ್ ಡಿಪಿಐ ದಾವಣಗೆರೆ ನೆಲದಲ್ಲಿ ಈ ಮೂಲಕ ಬಲವಾಗಿ ಬೇರೂರಿದೆ. ಇದು ಕಾಂಗ್ರೆಸ್ ಗೆ ಮುಂದಿನ ದಿನಗಳಲ್ಲಿ ಸ್ವಲ್ಪ ಮಟ್ಟಿಗೆ ಹಿನ್ನೆಡೆಗೆ ಕಾರಣವಾಗುವ ಸಾಧ್ಯತೆ ತಳ್ಳಿ ಹಾಕುವಂತಿಲ್ಲ.
27 ವರ್ಷದ ಸಮರ್ಥ್ ಶಾಮನೂರು ಗೆದ್ದು ಬೀಗುವ ಮೂಲಕ ದಾವಣಗೆರೆ ದಕ್ಷಿಣದಲ್ಲಿ ಮತ್ತೆ ತಮ್ಮದೇ ಆಡಳಿತ ಎಂಬುದನ್ನು ಸಾಧಿಸಿ ತೋರಿಸಿದ್ದಾರೆ. ಮುಸ್ಲಿಂ ಸಮುದಾಯದ ಮತಗಳು ಛಿದ್ರವಾದರೂ ಹೆಚ್ಚಿನ ಮತಗಳು ಕಾಂಗ್ರೆಸ್ ಗೆ ಬಂದಿರುವ ಕಾರಣ ಗೆಲುವು ಸುಲಭವಾಗಿದೆ. ಇನ್ನು ಮುಸ್ಲಿಂ ಬಾಹುಳ್ಯದ ಪ್ರದೇಶಗಳಲ್ಲಿ ಈ ಬಾರಿ ಕೆಲ ಬೂತ್ ಗಳಲ್ಲಿ ಬಿಜೆಪಿಗೆ ಮತ ಬಂದಿರುವುದು ವಿಶೇಷ.
ಚುನಾವಣಾ ಫಲಿತಾಂಶದ ಮುಖ್ಯಾಂಶಗಳು
ರೋಚಕ ಗೆಲುವು: ಆರಂಭಿಕ ಹಂತದಲ್ಲಿ ಬಿಜೆಪಿ ಅಭ್ಯರ್ಥಿ ಶ್ರೀನಿವಾಸ್ ದಾಸಕರಿಯಪ್ಪ ಅವರು ಸತತ ಏಳು ಸುತ್ತುಗಳ ಕಾಲ ಮುನ್ನಡೆ ಸಾಧಿಸಿ ಕಾಂಗ್ರೆಸ್‌ಗೆ ನಡುಕ ಹುಟ್ಟಿಸಿದ್ದರು. ಆದರೆ, 8ನೇ ಸುತ್ತಿನ ನಂತರ ಸಮರ್ಥ್ ಶಾಮನೂರು ಅವರು ಕಮ್‌ಬ್ಯಾಕ್ ಮಾಡಿ ಗೆಲುವಿನ ನಗೆ ಬೀರಿದ್ದಾರೆ.
ಎಸ್.ಡಿ.ಪಿ.ಐ (SDPI) ಪ್ರಭಾವ: ಅಪ್ಸರ್ ಕೊಡ್ಲಿಬೆಟ್ಟು ಅವರು ಸುಮಾರು 18,000 ಮತಗಳನ್ನು ಪಡೆಯುವ ಮೂಲಕ ದಾವಣಗೆರೆ ರಾಜಕಾರಣದಲ್ಲಿ ಹೊಸ ಸಮೀಕರಣ ಸೃಷ್ಟಿಸಿದ್ದಾರೆ. ಇದು ಕಾಂಗ್ರೆಸ್‌ನ ಸಾಂಪ್ರದಾಯಿಕ ಮತಬ್ಯಾಂಕ್ ಆಗಿದ್ದ ಅಲ್ಪಸಂಖ್ಯಾತ ಮತಗಳು ಛಿದ್ರವಾಗಿರುವುದನ್ನು ತೋರಿಸುತ್ತದೆ.
ವಂಶಪಾರಂಪರ್ಯದ ಹಿಡಿತ: ಶಾಮನೂರು ಶಿವಶಂಕರಪ್ಪ ಅವರ ನಿಧನದಿಂದ ತೆರವಾಗಿದ್ದ ಸ್ಥಾನವನ್ನು ಅವರ ಮೊಮ್ಮಗ ಸಮರ್ಥ್ ಉಳಿಸಿಕೊಳ್ಳುವ ಮೂಲಕ, ಈ ಕ್ಷೇತ್ರ ಇಂದಿಗೂ “ಶಾಮನೂರು ಕುಟುಂಬದ ಭದ್ರಕೋಟೆ” ಎಂಬುದು ಸಾಬೀತಾಗಿದೆ.
ಕಾಂಗ್ರೆಸ್‌ಗೆ ಎದುರಾದ ಸವಾಲುಗಳು
ಈ ಗೆಲುವು ಸುಲಭವಾಗಿರಲಿಲ್ಲ ಎಂಬುದಕ್ಕೆ ವರದಿಯಲ್ಲಿರುವ ಈ ಅಂಶಗಳು ಸಾಕ್ಷಿ:
ಟಿಕೆಟ್ ಹಂಚಿಕೆ ಅಸಮಾಧಾನ: ಮುಸ್ಲಿಂ ಸಮುದಾಯಕ್ಕೆ ಟಿಕೆಟ್ ನೀಡಬೇಕೆಂಬ ಬೇಡಿಕೆ ಇತ್ತು.
ಪ್ರಚಾರದ ಕೊರತೆ: ಸಚಿವ ಜಮೀರ್ ಅಹ್ಮದ್ ಅವರು ಪ್ರಚಾರದಿಂದ ದೂರ ಉಳಿದಿದ್ದು ಕಾಂಗ್ರೆಸ್‌ಗೆ ಹಿನ್ನಡೆಯಾಗಿ ಪರಿಣಮಿಸಿತ್ತು.
ಬಿಜೆಪಿ ರಣತಂತ್ರ: ಮುಸ್ಲಿಂ ಬಾಹುಳ್ಯದ ಬೂತ್‌ಗಳಲ್ಲೂ ಬಿಜೆಪಿ ಮತ ಸೆಳೆದಿರುವುದು ಈ ಬಾರಿಯ ಚುನಾವಣೆಯ ಅಚ್ಚರಿಯ ಬೆಳವಣಿಗೆ.
ಮುಂದಿನ ಹಾದಿ
27 ವರ್ಷದ ಯುವ ನಾಯಕ ಸಮರ್ಥ್ ಶಾಮನೂರು ಅವರಿಗೆ ಇದು ದೊಡ್ಡ ಜವಾಬ್ದಾರಿ. ಭದ್ರಕೋಟೆ ಉಳಿಸಿಕೊಂಡರೂ ಸಹ, ಎಸ್‌ಡಿಪಿಐನ ಬೆಳವಣಿಗೆ ಮತ್ತು ಅಲ್ಪಸಂಖ್ಯಾತ ಮತಗಳ ವಿಭಜನೆಯು ಮುಂಬರುವ ದಿನಗಳಲ್ಲಿ ಕಾಂಗ್ರೆಸ್‌ಗೆ ಎಚ್ಚರಿಕೆಯ ಗಂಟೆಯಾಗಿದೆ.
ಸರಳತೆಯ ಸಾಹುಕಾರ ಎಂದೇ ಗುರುತಿಸಿಕೊಂಡಿರುವ ಸಮರ್ಥ್, ತಮ್ಮ ತಾತ ಮತ್ತು ತಂದೆಯವರ ಅಭಿವೃದ್ಧಿ ಪಥವನ್ನು ಹೇಗೆ ಮುಂದುವರಿಸುತ್ತಾರೆ ಎಂಬುದು ಈಗ ಜನರ ಕುತೂಹಲ. ನಿಮ್ಮ ಪ್ರಕಾರ, ಎಸ್‌ಡಿಪಿಐ ಪಡೆದ ಈ 18 ಸಾವಿರ ಮತಗಳು ಮುಂದಿನ ಸಾರ್ವತ್ರಿಕ ಚುನಾವಣೆಯಲ್ಲಿ ಕಾಂಗ್ರೆಸ್ ಮೇಲೆ ಯಾವ ರೀತಿಯ ಪ್ರಭಾವ ಬೀರಬಹುದು ಎಂಬ ಲೆಕ್ಕಾಚಾರವೂ ಶುರುವಾಗಿದೆ.
- Afsar Kodlibettu
- Davanagere Congress
- Davanagere South Bypoll Result
- Davanagere South Election 2026
- Karnataka Politics
- Samarth Shamanur Victory
- SDPI Davanagere
- Shamanur Shivashankarappa
- Srinivas Dasakariyappa
- ಅಪ್ಸರ್ ಕೊಡ್ಲಿಬೆಟ್ಟು
- ಎಸ್‌ಡಿಪಿಐ ದಾವಣಗೆರೆ
- ಕರ್ನಾಟಕ ರಾಜಕೀಯ
- ದಾವಣಗೆರೆ ಕಾಂಗ್ರೆಸ್
- ದಾವಣಗೆರೆ ದಕ್ಷಿಣ ಉಪಚುನಾವಣೆ
- ಶಾಮನೂರು ಶಿವಶಂಕರಪ್ಪ
- ಶ್ರೀನಿವಾಸ್ ದಾಸಕರಿಯಪ್ಪ
- ಸಮರ್ಥ್ ಶಾಮನೂರು ಗೆಲುವು






Leave a comment