Home ದಾವಣಗೆರೆ ಒಗ್ಗಟ್ಟಿನಿಂದ ದೇವಸ್ಥಾನ ನಿರ್ಮಿಸಿದಂತೆ ಮಕ್ಕಳು ಸಮಾಜದ ಆಸ್ತಿಯನ್ನಾಗಿಸಲು ಶ್ರಮಿಸಿ: ಜಿ. ಬಿ. ವಿನಯ್ ಕುಮಾರ್ ಕರೆ
ದಾವಣಗೆರೆಬೆಂಗಳೂರು

ಒಗ್ಗಟ್ಟಿನಿಂದ ದೇವಸ್ಥಾನ ನಿರ್ಮಿಸಿದಂತೆ ಮಕ್ಕಳು ಸಮಾಜದ ಆಸ್ತಿಯನ್ನಾಗಿಸಲು ಶ್ರಮಿಸಿ: ಜಿ. ಬಿ. ವಿನಯ್ ಕುಮಾರ್ ಕರೆ

Share
ಸಮಾಜ
Share

ದಾವಣಗೆರೆ: ದೇವಸ್ಥಾನ ನಿರ್ಮಾಣ ಮಾಡಲು ಒಗ್ಗಟ್ಟಿನಿಂದ ಶ್ರಮಿಸಿದಂತೆಯೇ ಮಕ್ಕಳನ್ನು ಐಎಎಸ್, ಐಪಿಎಸ್ ಅಧಿಕಾರಿಗಳನ್ನಾಗಿಸಿ ಸಮಾಜದ ಆಸ್ತಿಯನ್ನಾಗಿ ಮಾಡಲು ಶ್ರಮಿಸಬೇಕಿದೆ ಎಂದು ಇನ್ ಸೈಟ್ಸ್ ಸಂಸ್ಥೆ ಸಂಸ್ಥಾಪಕ ನಿರ್ದೇಶಕರೂ ಆದ ಸ್ವಾಭಿಮಾನಿ ಬಳಗದ ರಾಜ್ಯಾಧ್ಯಕ್ಷ ಜಿ. ಬಿ. ವಿನಯ್ ಕುಮಾರ್ ಕರೆ ನೀಡಿದರು.

ಜಿಲ್ಲೆಯ ಹೊನ್ನಾಳಿ ತಾಲ್ಲೂಕಿನ ಯಕ್ಕನಹಳ್ಳಿ ಗ್ರಾಮದಲ್ಲಿ ಜರುಗಿದ ಶ್ರೀ ಮಾಯಾಂಬಿಕ ದೇವಿಯ ದೇವಸ್ಥಾನದ ನೂತನ ಗೋಪುರದ ಕಳಸ ಪ್ರತಿಷ್ಠಾಪನೆ ಹಾಗೂ ದೇವಸ್ಥಾನದ ಮುಖಮಂಟಪದ ಮಹಾದ್ವಾರದ ಉದ್ಘಾಟನಾ ಸಮಾರಂಭದ ಧಾರ್ಮಿಕ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ದೇವಸ್ಥಾನ ಕಟ್ಟುವ ಜೊತೆಗೆ ಶಿಕ್ಷಣ ಸಂಸ್ಥೆಗಳನ್ನು ಬೆಳೆಸಬೇಕಾದ ಅಗತ್ಯತೆ ಇದೆ. ಎಲ್ಲಾ ಸಮಾಜದವರು ಉನ್ನತ ಸ್ಥಾನಕ್ಕೆ ಬರಬೇಕಾದರೆ ಅತ್ಯುನ್ನತ ಹುದ್ದೆ ಅಲಂಕರಿಸುವಂತಾಗಬೇಕು. ಬಡವರು, ಹಿಂದುಳಿದವರು, ಶೋಷಿತರು ಸೇರಿದಂತೆ ಸಮಾಜದ ಕಟ್ಟಕಡೆಯವರೂ ಸಹ ಐಎಎಸ್, ಐಪಿಎಸ್ ನಂಥ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಯಶ ಕಂಡು ಅಧಿಕಾರಿಗಳಾದರೆ ಸಮಾಜದಲ್ಲಿ ಖಂಡಿತ ಬದಲಾವಣೆ ಸಾಧ್ಯ ಎಂದು ಪ್ರತಿಪಾದಿಸಿದರು.

ಶಕ್ತಿಮೀರಿ ದೇವಸ್ಥಾನ ಕಟ್ಟಿದಂತೆ ಮಕ್ಕಳನ್ನು ಆಸ್ತಿಯನ್ನಾಗಿ ಮಾಡಲು ಗಮನ ನೀಡಬೇಕು. ಎಲ್ಲರಿಗೂ ಒಳ್ಳೆಯದಾಗಲಿ. ಶ್ರೀ ಮಾಯಾಂಬಿಕ ದೇವಿಯು ನಮ್ಮ ಮನೆ ದೇವರು. ದೇವಿಯ ಆಶೀರ್ವಾದದಿಂದ ನನಗೆ ಒಳ್ಳೆಯದಾಗಿದೆ. ಅದೇ ರೀತಿಯಲ್ಲಿ ಸರ್ವರಿಗೂ ಒಳಿತಾಗಲೆಂದು ಪ್ರಾರ್ಥಿಸಿದ್ದೇನೆ. ಪ್ರಾಮಾಣಿಕವಾಗಿದ್ದು ಒಳ್ಳೆಯ ಉದ್ದೇಶವಿಟ್ಟುಕೊಂಡು ಜ್ಞಾನ ಸಂಪಾದನೆ ಮಾಡಿ ಜ್ಞಾನದ ಮಾರ್ಗದಿಂದ ಮುನ್ನಡೆದರೆ ಸಮಾಜದ ಮತ್ತು ದೇವಿಯ ಅನುಗ್ರಹ ಸಿಗುತ್ತದೆ ಎಂಬುದು ನನ್ನ ನಂಬಿಕೆ ಎಂದು ತಿಳಿಸಿದರು.

ಶ್ರೀ ಮಾಯಾಂಬಿಕ ದೇವಿಯ ದೇವಸ್ಥಾನದ ಮುಖಮಂಟಪದ ಮಹಾದ್ವಾರದ ಉದ್ಘಾಟನೆ ಹಾಗೂ ನೂತನ ಗೋಪುರದ ಕಳಸ ಪ್ರತಿಷ್ಠಾಪನಾ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದು ಖುಷಿ ತಂದಿದೆ. ಯಾವುದೇ ಕ್ರೇನ್, ಯಂತ್ರಗಳ ಸಹಾಯವಿಲ್ಲದೇ ಕಳಸರೋಹಣ ನಡೆದಿದ್ದು ರೋಮಾಂಚನ ಉಂಟು ಮಾಡಿತು. ಸುತ್ತಮುತ್ತಲಿನ ಹಳ್ಳಿಗಳಿಂದ ಭಕ್ತರು ಬಂದಿದ್ದಾರೆ. ಇದು ಸಂತಸದ ವಿಚಾರ ಎಂದು ಜಿ. ಬಿ. ವಿನಯ್ ಕುಮಾರ್ ಅವರು ಹೇಳಿದರು.

ಹೊಸದುರ್ಗದ ಕೆಲ್ಲೋಡು ಕನಕಗುರುಪೀಠದ ಶ್ರೀ ಈಶ್ವರಾನಂದಪುರಿ ಮಹಾಸ್ವಾಮೀಜಿ, ಹದಡಿಯ ಚಂದ್ರಗಿರಿ ಮಠದ ಶ್ರೀ ಪರಮಹಂಸ ಮುರಳೀಧರ ಮಹಾಸ್ವಾಮೀಜಿ, ಹಾವೇರಿ ಜಿಲ್ಲೆಯ ರಾಣೇಬೆನ್ನೂರು ತಾಲೂಕಿನ ಕುಪ್ಪೆಲೂರು
ಸಿದ್ಧಾರೂಢಮಠದ ಶ್ರೀ ಪ್ರಿಯಾನಂದ ಸ್ವಾಮೀಜಿ ಅವರು ಸಾನಿಧ್ಯ ವಹಿಸಿದ್ದರು. ಯಕ್ಕನಹಳ್ಳಿಯ ಶ್ರೀ ಮಾಯಾಂಬಿಕಾ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಹೆಚ್. ಡಿ. ರುದ್ರಪ್ಪ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಸರ್ಕಾರಿ ವಿಶೇಷ ಅಭಿಯೋಜಕರಾದ ಎಂ. ಡಿ. ಸುಂದರ್ ರಾಜ್, ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷೆ ದೀಪಾ ಜಗದೀಶ್ ಸೇರಿದಂತೆ ಗ್ರಾಮದ ಮುಖಂಡರು, ಗ್ರಾಮಸ್ಥರು, ಭಕ್ತರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

Share

Leave a comment

Leave a Reply

Your email address will not be published. Required fields are marked *