ಬಲ್ಲಿಯಾ (ಉತ್ತರ ಪ್ರದೇಶ): ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ವ್ಯಕ್ತಿಯೊಬ್ಬ ತನ್ನ ಪತ್ನಿ ಹಾಗೂ ಅತ್ತೆಯನ್ನು ಚಾಕುವಿನಿಂದ ಇರಿದು ಭೀಕರವಾಗಿ ಹತ್ಯೆ ಮಾಡಿರುವ ಘಟನೆ ಉತ್ತರ ಪ್ರದೇಶದ ಬಲ್ಲಿಯಾದಲ್ಲಿ ಶನಿವಾರ ಮುಂಜಾನೆ ನಡೆದಿದೆ. ಮಗುವನ್ನು ತನ್ನೊಂದಿಗೆ ಕಳುಹಿಸಲು ನಿರಾಕರಿಸಿದ್ದೇ ಈ ಘೋರ ಕೃತ್ಯಕ್ಕೆ ಕಾರಣ ಎನ್ನಲಾಗಿದೆ.
ಘಟನೆಯ ವಿವರ:
ಆರೋಪಿ ಅಮಿತ್ ಗುಪ್ತಾ ಹಾಗೂ ಪ್ರೀತಿ 2022ರಲ್ಲಿ ಪ್ರೀತಿಸಿ ವಿವಾಹವಾಗಿದ್ದರು. ಕಳೆದ ಕೆಲವು ದಿನಗಳಿಂದ ದಂಪತಿಗಳ ನಡುವೆ ಮಗುವಿನ ವಿಚಾರವಾಗಿ ಗಲಾಟೆ ನಡೆಯುತ್ತಿತ್ತು. ಇದರಿಂದ ಬೇಸತ್ತ ಪ್ರೀತಿ ಕಳೆದ 10 ದಿನಗಳಿಂದ ತನ್ನ ತವರು ಮನೆಯಲ್ಲಿದ್ದರು.
ಶನಿವಾರ ಬೆಳಗಿನ ಜಾವ ಅಮಿತ್ ಪತ್ನಿಯ ಮನೆಗೆ ನುಗ್ಗಿ, ಮಗುವನ್ನು ತನ್ನೊಂದಿಗೆ ಕಳುಹಿಸುವಂತೆ ಪೀಡಿಸಿದ್ದಾನೆ. ಇದಕ್ಕೆ ಪತ್ನಿ ನಿರಾಕರಿಸಿದಾಗ ಆಕ್ರೋಶಗೊಂಡ ಅಮಿತ್, ತನ್ನ ಬಳಿಯಿದ್ದ ಚಾಕುವಿನಿಂದ ಪ್ರೀತಿಯನ್ನು ಇರಿಯಲಾರಂಭಿಸಿದನು.
ಈ ವೇಳೆ ಅಡ್ಡ ಬಂದ ಅತ್ತೆ ಸುಶೀಲಾ ದೇವಿ ಅವರನ್ನೂ ಅಮಿತ್ ಚಾಕುವಿನಿಂದ ಇರಿದು ಕೊಂದಿದ್ದಾನೆ. ದಾಳಿಯನ್ನು ತಡೆಯಲು ಬಂದ ಮಾವ ಅಂತು ಗುಪ್ತಾ ಅವರಿಗೂ ಗಂಭೀರ ಗಾಯಗಳಾಗಿದ್ದು, ಪ್ರಸ್ತುತ ವಾರಣಾಸಿಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕೃತ್ಯದ ನಂತರ ಆರೋಪಿ ತಲೆಮರೆಸಿಕೊಂಡಿದ್ದು, ಪೊಲೀಸರು ಶೋಧ ಕಾರ್ಯ ಚುರುಕುಗೊಳಿಸಿದ್ದಾರೆ.






Leave a comment