ದಾವಣಗೆರೆ: ಶಾಮನೂರು ಶಿವಶಂಕರಪ್ಪರ ನಿಧನದಿಂದ ತೆರವಾದ ದಾವಣಗೆರೆ ದಕ್ಷಿಣ ವಿಧಾನಸಭಾ ಉಪಚುನಾವಣೆಯಲ್ಲಿ ಕಾಂಗ್ರೆಸ್ ಬಂಡಾಯ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದ ಸಾದಿಕ್ ಪೈಲ್ವಾನ್ ಚುನಾವಣೆಯಿಂದ ಹಿಂದೆ ಸರಿಯುವುದಾಗಿ ಘೋಷಿಸಿದ್ದಾರೆ.
ಬೆಂಗಳೂರಿನಲ್ಲಿ ಸಿಎಂ ಸಿದ್ದರಾಮಯ್ಯರ ಜೊತೆಗಿನ ಸಂಧಾನ ಸಕ್ಸಸ್ ಬಳಿಕ ಕೆಪಿಸಿಸಿ ಕಚೇರಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯರು ನನಗೆ ತಂದೆ ಸಮಾನ. ಅವರು ಕರೆದು ಮಾತನಾಡಿದ್ದಾರೆ. ಬೇಡಿಕೆ ಆಲಿಸಿದ್ದಾರೆ. ಮುಂದಿನ ದಿನಗಳಲ್ಲಿ ಸೂಕ್ತ ಸ್ಥಾನಮಾನದ ಭರವಸೆ ಕೊಟ್ಟಿದ್ದಾರೆ. ಸಿದ್ದರಾಮಯ್ಯರ ಅಣತಿಯಂತೆ ನಡೆಯುತ್ತೇನೆ ಎಂದು ತಿಳಿಸಿದರು.
ಶಾಮನೂರು ಶಿವಶಂಕರಪ್ಪರ ಕುಟುಂಬದ ಜೊತೆಗೆ ನನಗೆ ವಿರೋಧ ಇಲ್ಲ.ಅವರೊಟ್ಟಿಗೆ ಉತ್ತಮ ಬಾಂಧವ್ಯ ಇದೆ. ಕಾಂಗ್ರೆಸ್ ಅಭ್ಯರ್ಥಿ ಗೆಲುವಿಗೆ ಶಕ್ತಿಮೀರಿ ದುಡಿಯುತ್ತೇನೆ. ಒಂದಿಬ್ಬರು ಮಾತು ಕೇಳಿ ನಾನು ಬಂಡಾಯ ಅಭ್ಯರ್ಥಿಯಾಗಿ ಕಣಕ್ಕಿಳಿದೆ. ಶಾಮನೂರು ಕುಟುಂಬದ ಮನೆತನದ ಗೆಲುವಿಗೆ ನಮ್ಮ ಮನೆತನದವರು, ಹಿಂಬಾಲಕರು, ಸ್ನೇಹಿತರು, ಬೆಂಬಲಿಗರು ಸೇರಿದಂತೆ ಎಲ್ಲರೂ ಕೆಲಸ ಮಾಡುತ್ತೇವೆ ಎಂದು ಸಾದಿಕ್ ಪೈಲ್ವಾನ್ ಹೇಳಿದರು.
ನಾನು ಉಪಚುನಾವಣಾ ಕಣದಿಂದ ಹಿಂದೆ ಸರಿದಿದ್ದೇನೆ. ಯಾವುದೇ ಆಮೀಷ ಒಡ್ಡಿಲ್ಲ. ಮನಃಸಾಕ್ಷಿಯಿಂದ ಹಿಂದೆ ಸರಿದಿದ್ದೇನೆ. ಸಿದ್ದರಾಮಯ್ಯರ ಬಳಿ ಯಾವುದೇ ಜವಾಬ್ದಾರಿ ಕೇಳಿಲ್ಲ. ನನಗೂ ವಿಧಾನಸೌಧದ ಕಟ್ಟೆ ಹತ್ತಬೇಕು ಎಂಬ ಮನಸಿತ್ತು. ಆಸೆಯಿತ್ತು. ಹಾಗಾಗಿ ಸ್ಪರ್ಧೆ ಮಾಡಿದ್ದೆ. ಮುಂದಿನ ಚುನಾವಣೆಯಲ್ಲಿ ಅವಕಾಶ ಮಾಡಿಕೊಡುತ್ತಾರೆ ಎಂಬ ವಿಶ್ವಾಸ ಇದ್ದೆ. ಶಾಮನೂರು ಶಿವಶಂಕರಪ್ಪರ ಕುಟುಂಬಕ್ಕೆ ಮನಸ್ಸು ಮುಡುಪಾಗಿಟ್ಟು ದುಡಿಯುತ್ತೇವೆ ಎಂದು ಸಾದಿಕ್ ಪೈಲ್ವಾನ್ ಘೋಷಿಸಿದರು.





Leave a comment