ಬೆಂಗಳೂರು: ಸಾಮಾಜಿಕ ನ್ಯಾಯದ ಬಂಡಿಯನ್ನು ಮುಂದಕ್ಕೆ ಎಳೆದುಕೊಂಡು ಹೋಗುವುದು ಸುಲಭದ ಕೆಲಸ ಅಲ್ಲ ಎನ್ನುವುದನ್ನು ನಾನು ಅನುಭವದ ಮೂಲಕ ಅರಿತುಕೊಂಡಿದ್ದೇನೆ. ಈ ಪ್ರಯತ್ನ ನಡೆಸಿದವರೆಲ್ಲರನ್ನು ವರ್ತಮಾನ ಬಹಳ ಕ್ರೂರವಾಗಿ ನಡೆಸಿಕೊಂಡಿದೆ. ನಾನು ಸಾಮಾಜಿಕ ನ್ಯಾಯದ ಪರವಾಗಿ ದನಿ ಎತ್ತುವ ಮತ್ತು ಕಾರ್ಯಕ್ರಮಗಳನ್ನು ಅನುಷ್ಠಾನಕ್ಕೆ ತರುವ ಪ್ರಯತ್ನವನ್ನು ಮಾಡಿದಾಗೆಲ್ಲ ನನ್ನ ವಿರುದ್ಧ ದಾಳಿಗಳು ನಡೆದಿವೆ, ಇದು ಈಗಲೂ ಮುಂದುವರಿಯುತ್ತಿದೆ ಎಂದು ಸಿಎಂ ಸಿದ್ದರಾಮಯ್ಯ ಗುಡುಗಿದ್ದಾರೆ.
ವಿರೋಧಿಗಳ ಷಡ್ಯಂತ್ರದ ಆರೋಪ
ನನ್ನ ವಿರುದ್ಧ ಯಾಕೆ ಷಡ್ಯಂತ್ರ ಮಾಡುತ್ತಿದ್ದಾರೆ ಎನ್ನುವುದೂ ನನಗೆ ಗೊತ್ತಿದೆ. ನಾನು ಈ ರಾಜ್ಯದ ಬಡವರು, ಶೋಷಿತರು, ಅವಕಾಶ ವಂಚಿತರ ಪರವಾಗಿದ್ದೇನೆ, ಸಾಮಾಜಿಕ ನ್ಯಾಯದ ಪರವಾಗಿದ್ದೇನೆ, ಸಂವಿಧಾನದ ಪರವಾಗಿದ್ದೇನೆ, ಶೋಷಿತರ ಅಭಿವೃದ್ದಿಗಾಗಿ ಕಾರ್ಯಕ್ರಮಗಳನ್ನು ರೂಪಿಸಿ ಜಾರಿಗೆ ತಂದಿದ್ದೇನೆ, ದುರ್ಬಲರಿಗೆ ಅನ್ಯಾಯವಾದಾಗ ದನಿ ಎತ್ತಿದ್ದೇನೆ. ಇದಕ್ಕಾಗಿ ರಾಜ್ಯದ ಜನತೆ 136 ಸ್ಥಾನಗಳಲ್ಲಿ ಕಾಂಗ್ರೆಸ್ ಪಕ್ಷವನ್ನು ಗೆಲ್ಲಿಸಿ ಅಧಿಕಾರಕ್ಕೆ ತಂದಿದ್ದಾರೆ. ಇದು ನಮ್ಮ ರಾಜಕೀಯ ವಿರೋಧಿಗಳಿಗೆ ಸಹಿಸಲಾಗುತ್ತಿಲ್ಲ ಎಂದು ಕುಟುಕಿದ್ದಾರೆ.
‘ಕರ್ನಾಟಕ ಮಾದರಿ’ಯ ಪ್ರತಿಪಾದನೆ
“ಬಸವಣ್ಣ, ಗಾಂಧೀಜಿ, ಬಾಬಾ ಸಾಹೇಬರೇ ನಮ್ಮ ಸರ್ಕಾರದ ಮಾರ್ಗದರ್ಶಕರು” ಎಂದು ಸಿದ್ದರಾಮಯ್ಯ ಹೇಳಿದ್ದಾರೆ.
ಸ್ವತಂತ್ರ ಭಾರತದಲ್ಲಿ ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಸಾಮಾಜಿಕ ನ್ಯಾಯದ ಸಿದ್ಧಾಂತಕ್ಕೆ ಸಾಂವಿಧಾನಿಕ ರಕ್ಷಣೆಯನ್ನು ನೀಡಿದರು. ಶತಮಾನಗಳಿಂದ ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಅಸಮಾನತೆಗಳಿಗೆ ಈಡಾಗಿರುವ ದುರ್ಬಲ ಹಾಗೂ ತಳಸಮುದಾಯಗಳ ರಕ್ಷಣೆಗಾಗಿ ಸಾಮಾಜಿಕ ನ್ಯಾಯವನ್ನು ಸಂವಿಧಾನದ ಪರಿಚ್ಛೇದ 38 ಮತ್ತು 39ರಲ್ಲಿ ಸೇರಿಸಲಾಗಿದೆ ಎಂದು ತಿಳಿಸಿದ್ದಾರೆ.
ಸವಾಲುಗಳ ವಿಶ್ಲೇಷಣೆ
ಈ ಸಂವಿಧಾನದ ಮಾರ್ಗದರ್ಶನದಲ್ಲಿಯೇ ರಾಜ್ಯಕ್ಕೆ ಒಂದು ಅಭಿವೃದ್ಧಿ ಮಾದರಿಯನ್ನು ರೂಪಿಸಿ ಜಾರಿಗೆ ತರಲು ಪ್ರಯತ್ನಿಸುತ್ತಾ ಬಂದಿದ್ದೇನೆ. ಸಾಮಾಜಿಕ ನ್ಯಾಯದ ಮೂಲಕ ಸಮಸಮಾಜದ ನಿರ್ಮಾಣಕ್ಕೆ ಪ್ರಯತ್ನಿಸಿದ್ದ ಅಣ್ಣ ಬಸವಣ್ಣ, ಗ್ರಾಮ ಸ್ವರಾಜ್ಯದ ಕನಸು ಬಿತ್ತಿದ್ದ ಮಹಾತ್ಮ ಗಾಂಧೀಜಿ ಮತ್ತು ರಾಜಕೀಯ ಪ್ರಭುತ್ವದ ಜೊತೆ ಸಾಮಾಜಿಕ ಪ್ರಜಾಪ್ರಭುತ್ವ ಸ್ಥಾಪನೆಯಾಗಬೇಕೆಂದು ಪ್ರತಿಪಾದಿಸಿದ್ದ ಬಾಬಾಸಾಹೇಬ್ ಅಂಬೇಡ್ಕರ್ ಮತ್ತಿತರ ಮಾರ್ಗದರ್ಶಕರ ಚಿಂತನೆಗಳ ಸಾರದೊಂದಿಗೆ ಈ ಅಭಿವೃದ್ಧಿ ಮಾದರಿಯನ್ನು ರೂಪಿಸಿದ್ದೇನೆ. ಇದನ್ನು ನಾನು ಹೆಮ್ಮೆಯಿಂದ ‘ಕರ್ನಾಟಕ ಮಾದರಿ’ ಎಂದು ಹೇಳುತ್ತಾ ಬಂದಿದ್ದೇನೆ ಎಂದು ಪೋಸ್ಟ್ ಮಾಡಿ ಹೇಳಿದ್ದಾರೆ.





Leave a comment