ಅನೀಮಿಯಾ ಅಥವಾ ರಕ್ತಹೀನತೆ ಇಂದು ವಿಶ್ವದಾದ್ಯಂತ ವ್ಯಾಪಕವಾಗಿ ಕಂಡುಬರುತ್ತಿರುವ ಪ್ರಮುಖ ಸಾರ್ವಜನಿಕ ಆರೋಗ್ಯ ಸಮಸ್ಯೆಯಾಗಿದೆ. ವಿಶ್ವ ಅನೀಮಿಯಾ ಜಾಗೃತಿ ದಿನದ ಅಂಗವಾಗಿ ಜನರಲ್ಲಿ ರಕ್ತಹೀನತೆಯ ಬಗ್ಗೆ ಅರಿವು ಮೂಡಿಸುವುದು, ಸರಿಯಾದ ಆಹಾರ ಪದ್ಧತಿ ಹಾಗೂ ನಿಯಮಿತ ಆರೋಗ್ಯ ತಪಾಸಣೆಗಳ ಮಹತ್ವವನ್ನು ತಿಳಿಸುವುದು ಅತ್ಯಂತ ಅಗತ್ಯವಾಗಿದೆ.
ಅನೀಮಿಯಾ / ರಕ್ತಹೀನತೆ ಎಂದರೇನು?
ರಕ್ತದಲ್ಲಿನ ಕೆಂಪು ರಕ್ತಕಣಗಳಲ್ಲಿ ಹಿಮೋಗ್ಲೋಬಿನ್ ಪ್ರಮಾಣ ಕಡಿಮೆಯಾಗುವುದನ್ನು ಅನೀಮಿಯಾ ಅಥವಾ ರಕ್ತಹೀನತೆ ಎಂದು ಕರೆಯಲಾಗುತ್ತದೆ. ಹಿಮೋಗ್ಲೋಬಿನ್ ಎನ್ನುವುದು ರಕ್ತಕಣಗಳಲ್ಲಿ ಇರುವ ಪ್ರಮುಖ ಪ್ರೋಟೀನ್ ಆಗಿದ್ದು, ಇದು ದೇಹದ ಜೀವಕೋಶಗಳಿಗೆ ಆಮ್ಲಜನಕವನ್ನು ಸಾಗಿಸುವ ಕಾರ್ಯ ಮಾಡುತ್ತದೆ. ಹಿಮೋಗ್ಲೋಬಿನ್ ಪ್ರಮಾಣ ಕಡಿಮೆಯಾದಾಗ ದೇಹದ ಅಂಗಾಂಗಗಳಿಗೆ ಆಮ್ಲಜನಕ ಸರಿಯಾಗಿ ತಲುಪುವುದಿಲ್ಲ. ಇದರಿಂದ ದೇಹದ ಸಾಮರ್ಥ್ಯ ಕುಂಠಿತಗೊಂಡು ವಿವಿಧ ಆರೋಗ್ಯ ಸಮಸ್ಯೆಗಳು ಉಂಟಾಗುತ್ತವೆ. ರಕ್ತಹೀನತೆ ಎಲ್ಲಾ ವಯಸ್ಸಿನವರಲ್ಲೂ ಕಂಡುಬರುವ ಸಾಮಾನ್ಯ ಸಮಸ್ಯೆಯಾಗಿದೆ.
ವಿಶ್ವ ಆರೋಗ್ಯ ಸಂಸ್ಥೆ (WHO) ಪ್ರಕಾರ ವಿಶ್ವದಾದ್ಯಂತ ಸುಮಾರು ಎರಡು ಶತಕೋಟಿ ಜನರು ರಕ್ತಹೀನತೆಯಿಂದ ಬಳಲುತ್ತಿದ್ದಾರೆ. NFHS-5 ಮಾಹಿತಿಯ ಪ್ರಕಾರ ಭಾರತದಲ್ಲಿ 67.1% ಮಕ್ಕಳು ಹಾಗೂ 59.1% ಕಿಶೋರಿಯರು ಅನೀಮಿಯಾಗಿದ್ದಾರೆ. 15–49 ವರ್ಷದ ಮಹಿಳೆಯರಲ್ಲಿ ಸುಮಾರು 50% ಮಂದಿ ಮತ್ತು ಐದು ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಲ್ಲಿ ಮೂರು ಜನರಲ್ಲಿ ಇಬ್ಬರು ರಕ್ತಹೀನರಾಗಿದ್ದಾರೆ. ಪುರುಷರಲ್ಲಿ ಸುಮಾರು 25% ಮಂದಿ ಈ ಸಮಸ್ಯೆಯಿಂದ ಬಳಲುತ್ತಿದ್ದಾರೆ.
ರಕ್ತಹೀನತೆಯ ವಿಧಗಳು
ಹಿಮೋಗ್ಲೋಬಿನ್ ಪ್ರಮಾಣದ ಆಧಾರದ ಮೇಲೆ ರಕ್ತಹೀನತೆಯನ್ನು ಲಘು, ಮಧ್ಯಮ ಮತ್ತು ತೀವ್ರ ಎಂದು ವಿಂಗಡಿಸಲಾಗುತ್ತದೆ. ಭಾರತದಲ್ಲಿ ಹೆಚ್ಚಿನ ಪ್ರಕರಣಗಳು ಲಘು ಮತ್ತು ಮಧ್ಯಮ ಮಟ್ಟದಲ್ಲಿವೆ. ಆದರೆ ಸಮಯಕ್ಕೆ ಚಿಕಿತ್ಸೆ ನೀಡದಿದ್ದರೆ ಗಂಭೀರ ಸಮಸ್ಯೆಯಾಗುವ ಸಾಧ್ಯತೆ ಇದೆ. ಮಕ್ಕಳಲ್ಲಿ, ಹದಿಹರೆಯದವರಲ್ಲಿ, ಗರ್ಭಿಣಿಯರಲ್ಲಿ ಹಾಗೂ ಹಾಲುಣಿಸುವ ತಾಯಂದಿರಲ್ಲಿ ಹೆಚ್ಚಾಗಿ ಕಂಡುಬರುತ್ತದೆ.
ರಕ್ತಹೀನತೆಯ ಲಕ್ಷಣಗಳು
ಸೌಮ್ಯ ರಕ್ತಹೀನತೆಯಲ್ಲಿ ಲಕ್ಷಣಗಳು ಸ್ಪಷ್ಟವಾಗಿರದಿರಬಹುದು. ಮಧ್ಯಮ ಮತ್ತು ತೀವ್ರ ರಕ್ತಹೀನತೆಯಲ್ಲಿ ಆಯಾಸ, ಸುಸ್ತು, ಚರ್ಮ ಬಿಳಿಯಾಗಿ ಕಾಣುವುದು, ತಲೆನೋವು, ತಲೆಸುತ್ತು, ಸ್ನಾಯು ನೋವು, ಎದೆ ಬಡಿತ, ಉಸಿರಾಟದ ತೊಂದರೆ, ಕಾಲು ಊತ ಇತ್ಯಾದಿ ಲಕ್ಷಣಗಳು ಕಾಣಿಸಬಹುದು. ಮಕ್ಕಳಲ್ಲಿ ಚಟುವಟಿಕೆ ಕಡಿಮೆಯಾಗುವುದು, ಓದಿನಲ್ಲಿ ಹಿಂದುಳಿಯುವುದು ಹಾಗೂ ಬೆಳವಣಿಗೆ ಕುಂಠಿತಗೊಳ್ಳುವುದು ಕಂಡುಬರುತ್ತದೆ.
ವೈದ್ಯರನ್ನು ಯಾವಾಗ ಸಂಪರ್ಕಿಸಬೇಕು?
ಅಪಾಯಕಾರಿ ಲಕ್ಷಣಗಳು ಕಂಡುಬಂದಲ್ಲಿ ತಕ್ಷಣ ವೈದ್ಯರನ್ನು ಸಂಪರ್ಕಿಸುವುದು ಉತ್ತಮ. ಕೆಲವು ರಕ್ತಹೀನತೆ ಸಮಸ್ಯೆಗಳು ಆನುವಂಶಿಕವಾಗಿಯೂ ಉಂಟಾಗಬಹುದು. ಉದಾಹರಣೆಗೆ ಥಲಸೇನಿಯಾ, ಸಿಕಲ್ ಸೆಲ್ ಅನೀಮಿಯಾ, ಏಪ್ಲಾಸ್ಟಿಕ್ ಅನೀಮಿಯಾ ಮುಂತಾದ ರಕ್ತ ಕಾಯಿಲೆಗಳು. ಇಂತಹ ಆನುವಂಶಿಕ ಸಮಸ್ಯೆಗಳಿರುವವರು, ವಿಶೇಷವಾಗಿ ಗರ್ಭಧಾರಣೆ ಯೋಜನೆ ಮಾಡುವ ಮಹಿಳೆಯರು, ಗರ್ಭಿಣಿಯಾಗುವ ಮೊದಲು ತಮ್ಮ ಸ್ತ್ರೀರೋಗ ತಜ್ಞರೊಂದಿಗೆ ಆನುವಂಶಿಕ ಅಂಶಗಳ ಕುರಿತು ಚರ್ಚಿಸುವುದು ಅಗತ್ಯವಾಗಿದೆ.
ರಕ್ತಹೀನತೆಯನ್ನು ತಡೆಗಟ್ಟುವ ಮಾರ್ಗಗಳು:
ಸರಿಯಾದ ಪೌಷ್ಟಿಕ ಆಹಾರ ಸೇವನೆಯ ಮೂಲಕ ಕಬ್ಬಿಣ, ವಿಟಮಿನ್-ಬಿ12 ಹಾಗೂ ಫೋಲಿಕ್ ಆಸಿಡ್ ಕೊರತೆಯಿಂದ ಉಂಟಾಗುವ ಅನೀಮಿಯಾವನ್ನು ತಡೆಗಟ್ಟಬಹುದು.
• ನುಗ್ಗೆ ಸೊಪ್ಪು, ಪಾಲಕ, ಮೆಂತ್ಯ ಮುಂತಾದ ಹಸಿರು ಸೊಪ್ಪುಗಳು
• ಬೀಟ್ ರೂಟ್, ದಾಳಿಂಬೆ ಹಣ್ಣು
• ಒಣದ್ರಾಕ್ಷಿ, ಖರ್ಜೂರ
• ರಾಗಿ, ಶೇಂಗಾ, ಎಳ್ಳು ಹಾಗೂ ಬೆಲ್ಲದ ಉಂಡೆಗಳು
• ಮೊಟ್ಟೆ, ಮೀನು, ಮಾಂಸ, ಹಾಲು, ಅಣಬೆ, ಬ್ರೊಕೊಲಿ
• ಸೊಪ್ಪು, ತರಕಾರಿಗಳು, ಕಡಲೆಕಾಯಿ, ಕಿಡ್ನಿ ಬೀನ್ ಹಾಗೂ ವಿವಿಧ ಧಾನ್ಯಗಳು
ಅನೀಮಿಯಾ ತಡೆಗಟ್ಟಲು ಪಾಲಿಸಬೇಕಾದ ಮುಖ್ಯ ಅಂಶಗಳು:
• ಸರಿಯಾದ ಆಹಾರ ಪದ್ಧತಿ ಪಾಲಿಸಬೇಕು
• ಹೆಚ್ಚು ಹಸಿರು ತರಕಾರಿಗಳನ್ನು ಸೇವಿಸಬೇಕು
• ಟೀ ಮತ್ತು ಕಾಫಿಯನ್ನು ಅತಿಯಾಗಿ ಸೇವಿಸಬಾರದು
• ಜಂತು ಹುಳುಗಳ ನಿವಾರಣೆಗೆ ನಿಯಮಿತವಾಗಿ ಔಷಧ ಸೇವಿಸಬೇಕು
• ವೈದ್ಯರ ಸಲಹೆಯ ಮೇರೆಗೆ ಕಬ್ಬಿಣ (Iron) ಮತ್ತು ಫೋಲಿಕ್ ಆಸಿಡ್ ಮಾತ್ರೆಗಳನ್ನು ನಿಯಮಿತವಾಗಿ ಸೇವಿಸಬೇಕು
ಅನೀಮಿಯಾ ಮುಕ್ತ ಭಾರತ ಕಾರ್ಯಕ್ರಮ
ಭಾರತ ಸರ್ಕಾರವು 2018ರಲ್ಲಿ “ಅನೀಮಿಯಾ ಮುಕ್ತ ಭಾರತ” ಕಾರ್ಯಕ್ರಮವನ್ನು ರಾಷ್ಟ್ರೀಯ ಆರೋಗ್ಯ ಮಿಷನ್ ಅಡಿಯಲ್ಲಿ ಆರಂಭಿಸಿದೆ. ಇದರ ಉದ್ದೇಶ ಪ್ರತಿವರ್ಷ ರಕ್ತಹೀನತೆಯನ್ನು 3% ರಷ್ಟು ಕಡಿಮೆ ಮಾಡುವುದು. ಮಕ್ಕಳು, ಕಿಶೋರರು, ಮಹಿಳೆಯರು, ಗರ್ಭಿಣಿಯರು ಹಾಗೂ ಹಾಲುಣಿಸುವ ತಾಯಂದಿರಲ್ಲಿ ರಕ್ತಹೀನತೆಯನ್ನು ಕಡಿಮೆ ಮಾಡಲು ಐರನ್-ಫೋಲಿಕ್ ಆಸಿಡ್ ಮಾತ್ರೆಗಳ ವಿತರಣೆ, ಜಂತುಹುಳು ನಾಶಕ ಔಷಧಿ, ರಕ್ತ ಪರೀಕ್ಷೆ ಮತ್ತು ಜನಜಾಗೃತಿ ಕಾರ್ಯಕ್ರಮಗಳನ್ನು ಜಾರಿಗೊಳಿಸಲಾಗಿದೆ.
ಕಾರ್ಯಕ್ರಮದ ಮಹತ್ವ
• ತಾಯಿ ಮತ್ತು ಮಗುವಿನ ಆರೋಗ್ಯ ಸುಧಾರಣೆ
• ಮಕ್ಕಳ ದೈಹಿಕ ಹಾಗೂ ಮಾನಸಿಕ ಬೆಳವಣಿಗೆಗೆ ಉತ್ತೇಜನ
• ಸಮಗ್ರ ಆರೋಗ್ಯದ ಅಭಿವೃದ್ಧಿ
ರಕ್ತಹೀನತೆ ತಡೆಗಟ್ಟುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ. ಪೌಷ್ಟಿಕ ಆಹಾರ, ನಿಯಮಿತ ಆರೋಗ್ಯ ತಪಾಸಣೆ ಮತ್ತು ಜನಜಾಗೃತಿಯ ಮೂಲಕ ಈ ಸಮಸ್ಯೆಯನ್ನು ನಿಯಂತ್ರಿಸಬಹುದು.
ವಿಶೇಷ ಲೇಖನ:





Leave a comment