ದಾವಣಗೆರೆ: ಕಂದಾಯ ಇಲಾಖೆಯ ಎಲ್ಲಾ ಮೂಲ ಕಡತ, ದಾಖಲೆಗಳನ್ನು ಸ್ಕ್ಯಾನ್ ಮಾಡುವ ‘ಭೂ ಸುರಕ್ಷಾ’ ಯೋಜನೆ ಅಡಿ ಇದುವರೆಗೆ 63 ಕೋಟಿ ಪುಟಗಳನ್ನು ಸ್ಕ್ಯಾನಿಂಗ್ ಮಾಡಲಾಗಿದೆ. ಇದರಿಂದ ಸಾರ್ವಜನಿಕರು ಕಚೇರಿಗೆ ಅಲೆಯುವುದು ತಪ್ಪುತ್ತದೆ ಅಲ್ಲದೆ ಕಡತಗಳು ಕಾಣೆಯಾಗುವುದು, ತಿದ್ದುಪಡಿ ಮಾಡುವುದು ತಪ್ಪಿಹೋಗುತ್ತದೆ. ಇವುಗಳನ್ನು ಸಂರಕ್ಷಿಸಿದಂತೆ ಆಗುತ್ತದೆ, ಇನ್ನು ಮುಂದೆ ಆನ್‍ಲೈನ್‍ನಲ್ಲಿ ಪ್ರಮಾಣೀಕೃತ ನಕಲುಗಳನ್ನು ಪಡೆಯಬಹುದು ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ತಿಳಿಸಿದರು.
ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸರ್ವೆ ಇಲಾಖೆಯಲ್ಲಿ ‘ರೋವರ್ಸ್’ ನಂತಹ ಆಧುನಿಕ ಉಪಕರಣಗಳನ್ನು ಬಳಸಲಾಗುತ್ತಿದೆ. ಚೈನ್ ಹಿಡಿದು ಅಳೆಯುವುದಕ್ಕಿಂತ ಈ ತಂತ್ರಜ್ಞಾನದ ಬಳಕೆಯಿಂದ ಕೇವಲ 10% ಶ್ರಮದಲ್ಲಿ ಕೆಲಸ ಮುಗಿಸಬಹುದು. ಈಗಾಗಲೇ 600 ರೋವರ್ಸ್‍ಗಳನ್ನು ಖರೀದಿಸಲಾಗಿದ್ದು, ಇನ್ನೂ 1,000 ರೋವರ್ಸ್‍ಗಳನ್ನು ಖರೀದಿಸಲಾಗುತ್ತಿದೆ. ಇದು ಸರ್ವೇಯರ್‍ಗಳ ಒತ್ತಡವನ್ನು ಕಡಿಮೆ ಮಾಡಿ, ಅವರ ಕೆಲಸದ ವೇಗವನ್ನು ಹೆಚ್ಚಿಸುತ್ತದೆ ಎಂದರು.
ಉತ್ತಮ ಕೆಲಸ ಮಾಡಿದ್ರೆ ಪ್ರೋತ್ಸಾಹ ಧನ:
ಉತ್ತಮವಾಗಿ ಕೆಲಸ ಮಾಡುವ ಗ್ರಾಮ ಆಡಳಿತ ಅಧಿಕಾರಿಗಳು, ಗ್ರಾಮ ಸಹಾಯಕರುಗಳಿಗೆ ಸರ್ಕಾರದಿಂದಲೇ 7 ರಿಂದ 8 ಕೋಟಿ ರೂ. ಗಳಷ್ಟು ಪ್ರೋತ್ಸಾಹ ಧನ ನೀಡಲು ನಿರ್ಧರಿಸಲಾಗಿದೆ. ಆದರೆ, ನಿರ್ಲಕ್ಷ್ಯ ವಹಿಸುವ ಅಧಿಕಾರಿಗಳ ವಿರುದ್ಧ ಕಠಿಣ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವರು ಎಚ್ಚರಿಸಿದರು.
ಶೇ. 100ರಷ್ಟು ಇ-ಆಫೀಸ್ ಮೂಲಕವೇ ಕೆಲಸ ಆಗಬೇಕು:
ಮಾರ್ಚ್ ತಿಂಗಳ ವೇಳೆಗೆ ಗ್ರಾಮ ಲೆಕ್ಕಿಗರಿಂದ ಹಿಡಿದು ಮಂತ್ರಿಗಳವರೆಗೆ ಎಲ್ಲರೂ ಶೇ. 100 ರಷ್ಟು ಇ-ಆಫೀಸ್ ಮೂಲಕವೇ ಕೆಲಸ ಮಾಡಬೇಕು. ಈ ವ್ಯವಸ್ಥೆಯ ಮೂಲಕ ಯಾವ ಕಡತ ಯಾರ ಬಳಿ ಎಷ್ಟು ದಿನಗಳಿಂದ ಬಾಕಿ ಇದೆ ಎಂಬುದನ್ನು ಪತ್ತೆಹಚ್ಚಲು ಸಾಧ್ಯವಾಗುತ್ತದೆ. ಇ-ಆಫೀಸ್ ವ್ಯವಸ್ಥೆಯಿಂದ ಇ-ಆಫೀಸ್‍ನಲ್ಲಿ ಫೈಲ್‍ಗಳನ್ನು ಕಳೆದುಹಾಕಲು ಸಾಧ್ಯವಿಲ್ಲ. ಹಿಂದೆ ಒಂದು ಮೇಜಿನಿಂದ ಇನ್ನೊಂದು ಮೇಜಿಗೆ ಹೋಗಲು ತಿಂಗಳುಗಟ್ಟಲೆ ಸಮಯ ತೆಗೆದುಕೊಳ್ಳುತ್ತಿದ್ದ ಕಡತಗಳು ಈಗ ಒಂದು ಕ್ಷಣದಲ್ಲಿ ವರ್ಗಾವಣೆಯಾಗುತ್ತವೆ. ಈ ವ್ಯವಸ್ಥೆಯು ಕೆಲಸದಲ್ಲಿ ವೇಗವನ್ನು ತರುತ್ತದೆ, ಕಡತಗಳನ್ನು ಮುಚ್ಚಿಡಲು ಬರುವುದಿಲ್ಲ ಮತ್ತು ಪಾರದರ್ಶಕತೆಯಿಂದ ಕೆಲಸಗಳು ಆಗುತ್ತವೆ ಎಂದು ತಿಳಿಸಿದರು.
ಭೂ ಗ್ಯಾರಂಟಿ ನಮ್ಮ ಸಂಕಲ್ಪ:
ಭೂಮಿಯ ಮಾಲೀಕತ್ವವು ಆರ್ಥಿಕ ಶಕ್ತಿಯನ್ನು ನೀಡುವ ಬದಲು, ಇಂದು ಅನೇಕರಿಗೆ ಗೊಂದಲ ಮತ್ತು ವ್ಯಾಜ್ಯದ ಮೂಲವಾಗಿದೆ. ವ್ಯವಸ್ಥೆಯಲ್ಲಿನ ಗೊಂದಲಗಳಿಗೆ ಕಾರಣಗಳನ್ನು ಹುಡುಕಿ ಅವುಗಳನ್ನು ಸರಿಪಡಿಸುವ ಮೂಲಕ “ಭೂ ಗ್ಯಾರಂಟಿ” ನೀಡುವತ್ತ ಸರ್ಕಾರ ಸಂಕಲ್ಪ ಮಾಡಿದೆ ಎಂದು ತಿಳಿಸಿದರು.





Leave a comment