
ಪಾಟ್ನಾ: ಮುಸ್ಲಿಂ ಮಹಿಳೆಯರು ಕಡ್ಡಾಯವಾಗಿ ಪರ್ದಾ (ಬುರ್ಖಾ) ವ್ಯವಸ್ಥೆಯನ್ನು ಪಾಲಿಸಬೇಕು ಹಾಗೂ ವಿವಾಹ ಸಮಾರಂಭಗಳಲ್ಲಿ ಸ್ತ್ರೀಯರು ಮತ್ತು ಪುರುಷರು ಮುಕ್ತವಾಗಿ ಬೆರೆಯುವುದನ್ನು ಬಿಡಬೇಕು ಎಂದು ಎಐಎಂಐಎಂ (AIMIM) ಪಕ್ಷದ ಬಿಹಾರ ಘಟಕದ ಮುಖ್ಯಸ್ಥ ಹಾಗೂ ಶಾಸಕ ಅಖ್ತರುಲ್ ಇಮಾನ್ ನೀಡಿರುವ ವಿವಾದಾತ್ಮಕ ಹೇಳಿಕೆಯು ರಾಜಕೀಯ ವಲಯದಲ್ಲಿ ತೀವ್ರ ಕೋಲಾಹಲ ಸೃಷ್ಟಿಸಿದೆ.
ಮದುವೆ ಸಮಾರಂಭಗಳಲ್ಲಿ ಮುಸ್ಲಿಂ ವಧುಗಳು ಮುಖಕ್ಕೆ ಪರದೆ ಹಾಕದೆ ಕುಳಿತುಕೊಳ್ಳುವುದನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿರುವ ಇಮಾನ್, ಮುಸ್ಲಿಂ ಮಹಿಳೆಯರ ಪರ್ದಾ ಆಚರಣೆಯು ಹಿಂದೂ ವಿವಾಹಿತ ಮಹಿಳೆಯರ ‘ಸಿಂಧೂರ’ ಧರಿಸುವುದಕ್ಕಿಂತ ಹೆಚ್ಚು ಪ್ರಾಮುಖ್ಯತೆ ಹೊಂದಿದೆ ಎಂದು ಸಮರ್ಥಿಸಿಕೊಂಡಿದ್ದಾರೆ.
ಇವರ ಈ ಹೇಳಿಕೆಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ಭಾರತೀಯ ಜನತಾ ಪಕ್ಷ (BJP), ಇಮಾನ್ ಒಬ್ಬ ಪ್ರತಿಗಾಮಿ ಮೌಲ್ವಿಯಂತೆ ಮಾತನಾಡುತ್ತಿದ್ದಾರೆ ಎಂದು ಕಿಡಿಕಾರಿದೆ.
ವಿವಾದಾತ್ಮಕ ಭಾಷಣ: ವಿವಾಹ ಸಮಾರಂಭಗಳಲ್ಲಿ ಪುರುಷರು ಮತ್ತು ಮಹಿಳೆಯರು ಮುಕ್ತವಾಗಿ ಬೆರೆಯುವುದನ್ನು ವಿರೋಧಿಸಿ ಅಖ್ತರುಲ್ ಇಮಾನ್ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ಭಾಷಣದಲ್ಲಿ ಕಟುವಾಗಿ ಟೀಕಿಸಿದ್ದರು.
ಸಿಂಧೂರದೊಂದಿಗೆ ಹೋಲಿಕೆ: ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡಿರುವ ಇಮಾನ್, ಮುಸ್ಲಿಂ ಮಹಿಳೆಯರಿಗೆ ಪರ್ದಾ ಎಷ್ಟು ಮುಖ್ಯವೋ, ಹಿಂದೂಗಳಿಗೆ ಸಿಂಧೂರ ಅಷ್ಟೇ ಮುಖ್ಯ ಎಂದು ಹೇಳುವ ಮೂಲಕ ಹೊಸ ಚರ್ಚೆಗೆ ನಾಂದಿ ಹಾಡಿದ್ದಾರೆ.
ಬಿಜೆಪಿ ತೀವ್ರ ಆಕ್ರೋಶ: ಶಾಸಕ ಅಖ್ತರುಲ್ ಇಮಾನ್ ಮಹಿಳಾ ಹಕ್ಕುಗಳನ್ನು ಹತ್ತಿಕ್ಕುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿರುವ ಬಿಜೆಪಿ, ಅವರಿಗೆ ಶರಿಯಾ ಕಾನೂನಿನ ಬಗ್ಗೆ ಅಷ್ಟೇ ಕಾಳಜಿಯಿದ್ದರೆ ಅಫ್ಘಾನಿಸ್ತಾನಕ್ಕೆ ಹೋಗಲಿ ಎಂದು ತಿರುಗೇಟು ನೀಡಿದೆ.
ಹಿಂದೇಟು ಹಾಕದ ಎಐಎಂಐಎಂ ಮುಖಂಡ: ತಾವು ಬಳಸಿದ ಪದಗಳು ಕಠಿಣವಾಗಿದ್ದರೂ, ದಾರಿತಪ್ಪಿದ ಮಕ್ಕಳಿಗೆ ಬುದ್ಧಿ ಹೇಳುವ ಹಿರಿಯರಂತೆ ಮಾತನಾಡಿದ್ದೇನೆ ಹೊರತು ಹೇಳಿಕೆಯನ್ನು ಹಿಂದಕ್ಕೆ ಪಡೆಯುವುದಿಲ್ಲ ಎಂದು ಇಮಾನ್ ಸ್ಪಷ್ಟಪಡಿಸಿದ್ದಾರೆ.




