Home ಕ್ರೈಂ ನ್ಯೂಸ್ “ಕೊಲೆಗಾರ ಜ್ಯೋತಿಷಿಯ ಪ್ರಮೋಟ್ ಮಾಡಿದ್ದೇ ಸುರೇಶ್ ಕುಮಾರ್,  ಆತನ ಕೃತ್ಯಗಳಲ್ಲೂ ಪಾಪದ ಪಾಲು”: ಬಿ. ಕೆ. ಹರಿಪ್ರಸಾದ್ ಹಿಗ್ಗಾಮುಗ್ಗಾ ವಾಗ್ದಾಳಿ
ಕ್ರೈಂ ನ್ಯೂಸ್ದಾವಣಗೆರೆನವದೆಹಲಿಬೆಂಗಳೂರು

“ಕೊಲೆಗಾರ ಜ್ಯೋತಿಷಿಯ ಪ್ರಮೋಟ್ ಮಾಡಿದ್ದೇ ಸುರೇಶ್ ಕುಮಾರ್,  ಆತನ ಕೃತ್ಯಗಳಲ್ಲೂ ಪಾಪದ ಪಾಲು”: ಬಿ. ಕೆ. ಹರಿಪ್ರಸಾದ್ ಹಿಗ್ಗಾಮುಗ್ಗಾ ವಾಗ್ದಾಳಿ

Share
ಬಿ. ಕೆ. ಹರಿಪ್ರಸಾದ್
Share

ಬೆಂಗಳೂರು: ನಾನು ಮತ್ತು ಸುರೇಶ್​ ಕುಮಾರ್ ಒಂದೇ ಕಾಲೇಜಲ್ಲಿ ಕಲಿತವರು ಎಂಬುದನ್ನು ಸುರೇಶ್ ಕುಮಾರ್ ಅವರೇ ನೆನಪಿಸಿದ್ದಾರೆ. ಎಂಇಎಸ್​ ಮತ್ತು ರೇಣುಕಾಚಾರ್ಯ ಕಾನೂನು ಕಾಲೇಜಲ್ಲಿ ಕಲಿತ ನಾನು ಗಾಂಧಿ-ಅಂಬೇಡ್ಕರ್-ನೆಹರೂ ಅವರ ಅನುಯಾಯಿ ಆದ್ರೆ, ಸುರೇಶ್​ ಕುಮಾರ್ ಅವರು ಗಾಂಧಿ ಕೊಲೆಗಾರರ ಅನುಯಾಯಿ ಆದ್ರು. ಈಗಲಾದರೂ ಬದಲಾಗಿದ್ದಾರಾ ಎಂದರೆ, ಇನ್ನೂ ಕೊಲೆಗಾರರ ಜೊತೆಯೇ ಗುರುತಿಸಿಕೊಳ್ಳಲು ಬಯಸುತ್ತಿದ್ದಾರೆ ಎಂದು ಕಾಂಗ್ರೆಸ್ ಮುಖಂಡ ಬಿ. ಕೆ. ಹರಿಪ್ರಸಾದ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನೈತಿಕ ಹೊಣೆಗಾರಿಕೆ:

‘ಜನಪ್ರತಿನಿಧಿಗಳ ಜೊತೆ ನಿತ್ಯ ನೂರಾರು ಜನ ಫೋಟೋ ತೆಗೆಸಿಕೊಳ್ಳುತ್ತಾರೆ. ಅವರೆಲ್ಲರೂ ನೈತಿಕ ಹೊಣೆ ಹೊತ್ತುಕೊಳ್ಳೋದಿಕ್ಕೆ ಆಗುತ್ತಾ?’ ಎಂದು ಮಾಜಿ ಕಾನೂನು ಸಚಿವ ಸುರೇಶ್​ಕುಮಾರ್ ತಮ್ಮನ್ನು ತಾವು ಸಮರ್ಥಿಸಿಕೊಂಡಿದ್ದಾರೆ. ಸುರೇಶ್​ಕುಮಾರ್ ಅವರು ಇಂತಹ ನುಣುಚಿಕೊಳ್ಳುವಿಕೆಯ ಜಾಣತನ ತೋರಬಾರದು. ಕೊಲೆಗಾರ ಜೋತಿಷಿ ಕಮಲಾಕರ ಭಟ್ಟನು ಸುರೇಶ್​ ಕುಮಾರ್ ಜೊತೆ ಫೋಟೋ ತೆಗೆಸಿಕೊಂಡಿಲ್ಲ. ಸುರೇಶ್​ ಕುಮಾರ್ ಅವರೇ ಕಾರಿನಿಂದ ಇಳಿದು ಕಮಲಾಕರ ಭಟ್ ಎಂಬ ಮಹಾನುಭಾವನ ಕಾರಿನ ಬಳಿ ಹೋಗಿ ತನ್ನ ಸಹಾಯಕನ ಮೂಲಕ ಫೋಟೋ ತೆಗೆಸಿಕೊಂಡಿದ್ದಾರೆ ಎಂದು ಕಿಡಿಕಾರಿದ್ದಾರೆ.

ಸುರೇಶ್​ ಕುಮಾರ್ ಅವರು ಫೋಟೋ ತೆಗೆಸಿಕೊಳ್ಳುವಾಗ ಸ್ವಯಂಘೋಷಿತ ಮಹಾನುಭಾವ ಜೋತಿಷಿ ಸೌಜನ್ಯಕ್ಕಾದರೂ ಕಾರಿನಿಂದ ಇಳಿಯುವುದಿಲ್ಲ. ಆದರೂ ಯಾವುದೇ ಮುಜುಗರ ಪಡದ ಸುರೇಶ್​ ಕುಮಾರ್ ಅವರು ತಮ್ಮ ಎಲ್ಲಾ ಆತ್ಮಗೌರವವನ್ನು ಬದಿಗಿಟ್ಟು ಕಮಲಾಕರ ಭಟ್​ ಎಂಬ ಜೋತಿಷಿಯೊಂದಿಗೆ ಫೋಟೋ ತೆಗೆದುಕೊಂಡು ಅವರ ಸಾಮಾಜಿಕ ಜಾಲತಾಣದಲ್ಲಿ ಜೋತಿಷಿಯನ್ನೂ, ಆತನ ಕೆಲಸವನ್ನೂ ಹೊಗಳಿ ಪೋಸ್ಟ್​ ಮಾಡಿದ್ದಾರೆ. ಮಾಜಿ ಸಚಿವರಾಗಿರುವ ಸುರೇಶ್​ ಕುಮಾರ್ ಅವರು ನೀಡಿದ ಪ್ರಚಾರವನ್ನೇ ಬಳಸಿಕೊಂಡು ಆ ಜೋತಿಷಿ ಎಷ್ಟು ಹೆಣ್ಣು ಮಕ್ಕಳನ್ನು ಲೈಂಗಿಕವಾಗಿ ದುರುಪಯೋಗ ಪಡಿಸಿರಬಹುದು? ಎಷ್ಟು ಮನೆಹಾಳು ಮಾಡಿರಬಹುದು ಎಂಬುದು ಚರ್ಚೆಯ ವಿಷಯವಲ್ಲವೇ? ಎಂದು ಪ್ರಶ್ನಿಸಿದ್ದಾರೆ.

ಸುರೇಶ್​ ಕುಮಾರ್ ಅವರ ಕೊಳೆತ ಮನಸ್ಥಿತಿ ಹೇಗಿದೆಯೆಂದರೆ, ವಿಧಾನಮಂಡಲದ ಜಂಟಿ ಅಧಿವೇಶನದಲ್ಲಿ ನನ್ನ ಅಂಗಿಯನ್ನು ಹರಿದಾಗ ನಿರಂತರ ಮೂರು ದಿನ ಪುಂಡು ಪೋಕರಿಗಳ ರೀತಿಯಲ್ಲಿ ಸುರೇಶ್​ ಕುಮಾರ್ ಅವರು ನನ್ನನ್ನು ಟ್ರೋಲ್ ಮಾಡಿದ್ದರು. ನನ್ನ ಹೆಸರಿನ ಮೇಲೆಯೇ ಅವರು ವ್ಯಂಗ್ಯಗಳನ್ನು ಮಾಡಿದ್ದರು. ನನ್ನ ವಿರುದ್ಧ ಮಾನಹಾನಿಕರವಾಗಿ ಬರೆದ ಟ್ರೋಲರ್​​ಗಳ ಎಲ್ಲಾ ಪೋಸ್ಟ್​ ಗಳನ್ನು ಶೇರ್ ಮಾಡಿ ಬೆಂಬಲಿಸಿದ್ದ ಕೊಳೆತ ಮನಸ್ಥಿತಿಯ ಸುರೇಶ್​ ಕುಮಾರ್ ಅವರಿಗೆ ಇದೀಗ ಕೊಲೆಗಾರನ ಸಖ್ಯದ ಬಗ್ಗೆ ಪ್ರಶ್ನೆ ಕೇಳಿದಾಗ ದಿಗ್ಭ್ರಾಂತರಾಗಿ ಮಾತನಾಡುತ್ತಿದ್ದಾರೆ ಎಂದಿದ್ದಾರೆ.

ಸಂವಿಧಾನದ ಉಲ್ಲಂಘನೆ:

ನೀವು ಜನಪ್ರತಿನಿದಿಯಾದ ಮೇಲೆ ನೀವು ಸಂವಿಧಾನವನ್ನು ಪಾಲಿಸಲೇಬೇಕು ಮಿಸ್ಟರ್ ಸುರೇಶ್​ ಕುಮಾರ್. ಜೋತಿಷಿ ನಿಮ್ಮ ಬಳಿ ಬಂದು ಫೋಟೋ ತೆಗೆದುಕೊಂಡರೆ ಅದು ನಿಮ್ಮ ತಪ್ಪಲ್ಲ. ನೀವೇ ಹೋಗಿ ಜೋತಿಷಿ ಬಳಿ ಫೋಟೋ ತೆಗೆದುಕೊಂಡರೂ ಅದು ನಿಮ್ಮ ವೈಯಕ್ತಿಕ. ಆದರೇ, ನೀವೇ ಹೋಗಿ ಜೋತಿಷಿ ಬಳಿ ಫೋಟೋ ತೆಗೆದುಕೊಂಡು ಆ ಜೋತಿಷಿಯನ್ನು ಅಮಾಯಕ ಜನರಿಗೆ ಜಾಹೀರಾತು/ಪ್ರಮೋಟ್​ ಮಾಡಿದರೆ ಅದು ಸಂವಿಧಾನದ ಆರ್ಟಿಕಲ್ 51A(h) ಉಲ್ಲಂಘನೆಯಾಗುತ್ತದೆ. ಹಾಗಾಗಿ ಆ ಜೋತಿಷಿ ಇನ್ನೆಷ್ಟು ಹುಡುಗಿಯರನ್ನು ಲೈಂಗಿಕವಾಗಿ ಬಳಸಿದ್ದಾನೆ ? ಇನ್ನೆಷ್ಟು ಕೊಲೆಗಳಿಗೆ ಕಾರಣವಾಗಿದ್ದಾನೆ ? ಇನ್ನೆಷ್ಟು ಮನೆ ಹಾಳು ಮಾಡಿದ್ದಾನೆ ಎಂದು ಪರಿಶೀಲಿಸಿದರೆ ಅದರಲ್ಲಿ ಸುರೇಶ್​ ಕುಮಾರ್ ಭಾಗಿಧಾರಿಕೆ ಅರಿವಾಗುತ್ತದೆ ಎಂದು ತಿಳಿಸಿದ್ದಾರೆ.

ವೈಯಕ್ತಿಕ ವಾಗ್ದಾಳಿ

ಸುರೇಶ್​ ಕುಮಾರ್ ಅವರು ‘ಅಪರಾಧವನ್ನು ಅಪರಾಧವಾಗಿ ನೋಡುವ ಸಂಸ್ಕಾರ ಬೆಳೆಸಿಕೊಳ್ಳಿ’ ಎಂದು ನನಗೆ ಉಪದೇಶ ಮಾಡಿದ್ದಾರೆ. ಇದು ಸುರೇಶ್​ ಕುಮಾರ್ ಅವರ ನೈತಿಕ ಅದಃಪತನವನ್ನು ಸೂಚಿಸುತ್ತದೆ. ಕರಾವಳಿ, ಉತ್ತರ ಕನ್ನಡ, ಮಲೆನಾಡಲ್ಲಿ ಹೆಣ ಬಿದ್ದ ತಕ್ಷಣ ಧರ್ಮದ ಆಧಾರದಲ್ಲಿ ರಾಜಕಾರಣ ಮಾಡುವ ನೀವುಗಳು ನಮಗೆ ಉಪದೇಶ ಮಾಡುವುದು ಬೇಕಾಗಿಲ್ಲ. ಕಮಲಾಕರ ಭಟ್​ ಬದಲು ಬೇರೆ ಧರ್ಮದ ವ್ಯಕ್ತಿ ಆರೋಪಿಯಾಗಿದ್ದರೆ ಸುರೇಶ್ ಕುಮಾರ್ ಮತ್ತವರ ಪಟಾಲಂ ‘ಅಪರಾಧವನ್ನು ಅಪರಾಧವನ್ನಾಗಿ ನೋಡಿ’ಕೊಳ್ಳುತ್ತಿತ್ತೇ ? ಕೋಮುಗಲಭೆ, ಕೋಮು ಹಿಂಸಾಚಾರದಲ್ಲಿ ಹೆಣ ಬಿದ್ದಾಕ್ಷಣ ರಣಹದ್ದುಗಳಂತಾಗುವ ಸುರೇಶ್ ಕುಮಾರ್ ಅಂತವರ ಉಪದೇಶ ನಮಗೆ ಬೇಕಾಗಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬಿಜೆಪಿ ಮತ್ತು ಕ್ರಿಮಿನಲ್‌ಗಳ ಸಂಬಂಧ:

ಬಿಜೆಪಿಯವರಿಗೆ ಕ್ರಿಮಿನಲ್​ ಗಳ ಜೊತೆ ಅವಿನಾಭಾವ ಸಂಬಂಧ ಇದೆ ಎಂದು ಸಾರಾಸಗಾಟಾಗಿ ಹೇಳಿದ್ದರ ಬಗ್ಗೆ ಸುರೇಶ್​ ಕುಮಾರ್ ಆಕ್ಷೇಪಿಸಿದ್ದಾರೆ. ಸಿದ್ದಾಪುರದ ಕೊಲೆಗಡುಕ ಕಮಲಾಕರ ಗುರೂಜಿಯಿಂದ ಹಿಡಿದು, ಅಂತರರಾಷ್ಟ್ರೀಯ ಮಕ್ಕಳ ಲೈಂಗಿಕ ಪೀಡಕ ಎಪ್‌ಸ್ಟೀನ್‌ ತನಕ ತಮ್ಮ ಪಕ್ಷದ ಕೈವಾಡ ಇಲ್ಲವೇ ? ಆಸಾರಾಂ ಬಾಪೂ, ಡೇರೇ ಸಚ್ಚಾ ಸೌದಾ ಗುರೂಜಿಯಿಂದ ಹಿಡಿದು ಬಿಲ್ಕಿಸ್ ಬಾನು ಪ್ರಕರಣದ ಆರೋಪಿಗಳವರೆಗೆ ಕ್ರಿಮಿನಲ್​ಗಳ ಜೊತೆ ಗುರುತಿಸಿಕೊಂಡಿರುವವರು ಯಾರು ? ರಾಜ್ಯದಲ್ಲೇ ಬಿಜೆಪಿಯ ಎಷ್ಟು ನಾಯಕರ ಮೇಲೆ ಲೈಂಗಿಕ ಹಗರಣ, ಪೋಕ್ಸೋ ಪ್ರಕರಣಗಳಿವೆ ಎಂಬ ಬಗ್ಗೆ ಸುರೇಶ್​ಕುಮಾರ್ ಅವರು ಬಹಿರಂಗ ಚರ್ಚೆಗೆ ಸಿದ್ದರಿದ್ದಾರೆಯೇ? ಎಂದು ಸವಾಲು ಹಾಕಿದ್ದಾರೆ.

ಸಲಹೆ:

ಸುರೇಶ್​ ಕುಮಾರ್ ಅವರು ಜೋತಿಷ್ಯವನ್ನು ನಂಬುವುದಿಲ್ಲ ಎಂದು ಘೋಷಿಸಿಕೊಂಡಿದ್ದಾರೆ. ಅವರು ನಂಬದೇ ಇರುವುದನ್ನು ಜನರಿಗೆ ನಂಬಿಸುವುದು ನೈತಿಕವಾಗಿ ಅಪರಾಧವಲ್ಲವೇ ? ನೀವು ಮತ್ತು ನಿಮ್ಮ ಕುಟುಂಬ ಎಲ್ಲಾ ರೀತಿಯಲ್ಲೂ ವಿಜ್ಞಾನದ ಲಾಭ ಪಡೆದು, ಅಮಾಯಕ ಬಡ ಜನರನ್ನು ಜೋತಿಷಿಗಳತ್ತಾ/ಸನಾತನವಾದದತ್ತಾ ಕಳುಹಿಸಿ ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳುವುದರ ಬಗ್ಗೆಯೇ ನನಗೆ ಮೂಲ ತಕರಾರು ಇರುವುದು. ಮಾಜಿ ಕಾನೂನು ಸಚಿವರಿಗೆ ಈ ಸಂದರ್ಭದಲ್ಲಿ ನಾನು Drugs & Magic Remedies (Objectionable Advertisements) Act, 1954 ಅನ್ನು ನೆನಪಿಸಲು ಬಯಸುತ್ತೇನೆ.
ಜೋತಿಷ್ಯವನ್ನು ಜಾಹೀರಾತು ಮಾಡುವುದು ಈ ಕಾನೂನಿನ ಪ್ರಕಾರವೂ ಅಪರಾಧವಾಗುತ್ತದೆ ಎಂದು ಹೇಳಿದ್ದಾರೆ.

ನೀವು ಎಂಇಎಸ್​ ನಂತಹ ಉತ್ತಮವಾದ ಕಾಲೇಜಿನಲ್ಲಿ ನನ್ನೊಂದಿಗೆ ಕಲಿತಿದ್ದರೂ ತಾವು ಸಂವಿಧಾನ ವಿರೋಧಿ, ಕೊಲೆಗಡುಕರ ಜೊತೆ ಸೇರಿದ್ದೀರಲ್ವಾ ಎಂಬ ಬೇಸರ ನನಗೂ ಇದೆ. ಕಾಲೇಜು ದಿನಗಳ ಕತೆಗಳನ್ನು ಹೇಳಿ ಸಾರ್ವಜನಿಕ ಬದುಕಿನಲ್ಲಿರುವ ತಮ್ಮನ್ನು ತಮ್ಮ ಈ ವಯಸ್ಸಿನಲ್ಲಿ ಇನ್ನಷ್ಟೂ ಮುಜಗರಕ್ಕೀಡು ಮಾಡುವ ಉದ್ದೇಶ ನನಗಿಲ್ಲ.ಸುರೇಶ್​ ಕುಮಾರ್ ಅವರೇ, ಇನ್ನಾದರೂ ಸಜ್ಜನ ಶಾಸಕ ಎಂಬ ಸ್ವಯಂ ಭ್ರಮೆಗಳಿಂದ ಹೊರ ಬಂದು ಸಂವಿಧಾನಬದ್ಧ, ವೈಚಾರಿಕವಾದ ಮಾನವೀಯ ಬದುಕು ಸಾಗಿಸಿ ಎಂದು ಸಲಹೆ ನೀಡಿದ್ದಾರೆ.

Share

Leave a comment

Leave a Reply

Your email address will not be published. Required fields are marked *