SUDDIKSHANA KANNADA NEWS/ DAVANAGERE/ DATE:18-09-2024
ದಾವಣಗೆರೆ: ಮರಳಿನ ವಿಚಾರಕ್ಕೆ ಎರಡು ಗ್ರಾಮಗಳ ನಡುವೆ ಘರ್ಷಣೆ ಸಂಭವಿಸಿದ್ದು, ಘಟನೆಯಲ್ಲಿ ಇಬ್ಬರಿಗೆ ಚಾಕು ಇರಿಯಲಾಗಿದೆ. ಇಬ್ಬರ ಪೈಕಿ ಓರ್ವ ಮೃತಪಟ್ಟ ಘಟನೆ ಹೊನ್ನಾಳಿ ತಾಲೂಕಿನಲ್ಲಿ ನಡೆದಿದೆ.
ಇಬ್ಬರ ಪೈಕಿ ಶಿವರಾಜ್ (33) ಎಂಬ ವ್ಯಕ್ತಿ ಸಾವು ಕಂಡಿದ್ದಾನೆ. ಭರತ್ ಗೆ ತೀವ್ರ ಗಾಯ, ಶಿವಮೊಗ್ಗ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಮರಿಗೊಂಡನಹಳ್ಳಿ ಹಾಗೂ ಕಡದಕಟ್ಟೆ ಗ್ರಾಮಸ್ಥರ ನಡುವೆ ಘರ್ಷಣೆ ನಡೆದಿದೆ. ದಾವಣಗೆರೆ ಜಿಲ್ಲೆಯ ನ್ಯಾಮತಿ ತಾಲೂಕಿನ ಮರಿಗೊಂಡನಹಳ್ಳಿ ಹಾಗೂ ಕಡಕಟ್ಟೆ ಗ್ರಾಮಗಳ ವ್ಯಾಪ್ತಿಯಲ್ಲಿನ ತುಂಗಭದ್ರ ನದಿಪಾತ್ರದ ಮರಳಿಗಾಗಿ ಘರ್ಷಣೆ ನಡೆದಿದೆ.
ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣ ಆಗಿದ್ದು, ಸ್ಥಳಕ್ಕೆ ಹೊನ್ನಾಳಿ ಮತ್ತು ನ್ಯಾಮತಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಎಸ್ಪಿ ಉಮಾ ಪ್ರಶಾಂತ್ ಭೇಟಿ:
ನ್ಯಾಮತಿ ಪೊಲೀಸ್ ಠಾಣೆ ವ್ಯಾಪ್ತಿಯ ಮರಿಗೊಂಡನಹಳ್ಳಿ ಗ್ರಾಮದಲ್ಲಿ ನಡೆದ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಘಟನಾ ಸ್ಥಳಕ್ಕೆ ಪೊಲೀಸ್ ಅಧೀಕ್ಷಕಿ ಉಮಾ ಪ್ರಶಾಂತ್ ಭೇಟಿ ನೀಡಿ ಪರಿಶೀಲಿಸಿದರು. ಪ್ರಕರಣ ತನಿಖೆ ಬಗ್ಗೆ ತನಿಖಾಧಿಕರಿಗಳಿಗೆ ಸೂಕ್ತ ಸೂಚನೆಗಳನ್ನು ನೀಡಿದರು. ಪೊಲೀಸ್ ನಿರೀಕ್ಷಕ ಎನ್ ಎಸ್ ರವಿ, ಸುನಿಲ್ ಕುಮಾರ್ ಅವರು ಉಪಸ್ಥಿತರಿದ್ದರು.
ಘಟನೆ ಬಗ್ಗೆ ಗ್ರಾಮಸ್ಥರೊಂದಿಗೆ ಚರ್ಚಿಸಿದ ಎಸ್ಪಿ ಅವರು ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಬೇಕು. ತಪ್ಪು ಮಾಡಿದವರು ಯಾರೇ ಆದರೂ ಸುಮ್ಮನೆ ಬಿಡಲ್ಲ. ಕಾನೂನು ಮತ್ತು ಸುವ್ಯವಸ್ಥೆ ಹದಗೆಡಿಸುವವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಜರುಗಿಸಲಾಗುವುದು. ಕೊಲೆ ಪ್ರಕರಣ ಸಂಬಂಧ ಆದಷ್ಟು ಬೇಗ ಆರೋಪಿಗಳನ್ನು ಬಂಧಿಸಲಾಗುವುದು. ಗ್ರಾಮದಲ್ಲಿ ಶಾಂತಿ ಕಾಪಾಡುವಂತೆ ಕಟ್ಟುನಿಟ್ಟಿನ ಎಚ್ಚರಿಕೆ ನೀಡಿದರು.