ಬೆಂಗಳೂರು: ದೇಶದ ಆರ್ಥಿಕ ರಾಜಧಾನಿ ಮುಂಬೈಯಲ್ಲಿ ನಡೆದ ಬೃಹನ್ ಮುಂಬೈ ಮುನ್ಸಿಪಲ್ ಕಾರ್ಪೋರೇಷನ್ (BMC) ಸೇರಿದಂತೆ ಪುಣೆ, ನಾಗಪುರ ಮತ್ತು ಇತರ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಬಿಜೆಪಿ ಹಾಗೂ ಶಿವಸೇನೆ (ಏಕನಾಥ್ ಶಿಂದೆ ಬಣ) ಸಾಧಿಸಿರುವ ಭರ್ಜರಿ ಗೆಲುವು, ದೇಶದ ಜನತೆಯ ಒಲವನ್ನು ಮತ್ತೊಮ್ಮೆ ಸ್ಪಷ್ಟವಾಗಿ ತೋರಿಸಿದೆ. ಕಾಂಗ್ರೆಸ್ ಧೂಳೀಪಟವಾಗಿದೆ ಎಂದು ಸಂಸದ ಡಿ. ಸುಧಾಕರ್ ವಿಶ್ಲೇಷಿಸಿದ್ದಾರೆ.
ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯಲ್ಲಿಯೇ ಆರಂಭವಾದ ಬಿಜೆಪಿ ಅಲೆ, ಇದೀಗ ಸ್ಥಳೀಯ ಸಂಸ್ಥೆಗಳಲ್ಲೂ ಮುಂದುವರಿದಿದೆ. ಕೇಂದ್ರ ಹಾಗೂ ಮಹಾರಾಷ್ಟ್ರದಲ್ಲಿ ಬಿಜೆಪಿ ನೇತೃತ್ವದಲ್ಲಿ ನಡೆದ ಮೂಲಸೌಕರ್ಯ, ನಗರಾಭಿವೃದ್ಧಿ ಮತ್ತು ಆಡಳಿತ ಸುಧಾರಣೆಗಳನ್ನು ಮೆಚ್ಚಿರುವ ಮುಂಬೈ ಜನತೆ, ಮತ್ತೊಮ್ಮೆ ಬಿಜೆಪಿಗೆ ಆಡಳಿತದ ಹೊಣೆಗಾರಿಕೆಯನ್ನು ಒಪ್ಪಿಸಿದ್ದಾರೆ ಎಂದು ಹೇಳಿದ್ದಾರೆ.
ಈ ಐತಿಹಾಸಿಕ ಜಯಕ್ಕೆ ಕಾರಣೀಭೂತರಾದ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಸಚಿವ ಅಮಿತ್ ಶಾ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ. ಪಿ. ನಡ್ಡಾ, ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್, ಉಪಮುಖ್ಯಮಂತ್ರಿ, ಪಕ್ಷದ ಕಾರ್ಯಕರ್ತರಿಗೆ ಹೃತ್ಪೂರ್ವಕ ಅಭಿನಂದನೆಗಳು ಎಂದು ಹೇಳಿದ್ದಾರೆ.
ಈ ಫಲಿತಾಂಶ ಕೇವಲ ಬಿಜೆಪಿಯ ಅಥವಾ ಎನ್ ಡಿಎ ಮೈತ್ರಿಕೂಟದ ಗೆಲುವಲ್ಲ. ಈ ಗೆಲುವು ದೇಶಾದ್ಯಂತ ಅಭಿವೃದ್ಧಿ ರಾಜಕಾರಣದ ಮೇಲಿರುವ ವಿಶ್ವಾಸದ ಪ್ರತಿಬಿಂಬ. ಇದೇ ವಿಶ್ವಾಸ, ಶೀಘ್ರದಲ್ಲೇ ನಡೆಯಲಿರುವ ಕರ್ನಾಟಕದ ಸ್ಥಳೀಯ ಸಂಸ್ಥೆ ಚುನಾವಣೆಗಳಲ್ಲಿ ಮತ್ತೆ ಬೆಂಗಳೂರಿನ ಜಿಬಿಎ ಚುನಾವಣೆಯಲ್ಲಿ ಬಿಜೆಪಿಗೆ ಜನಾಶೀರ್ವಾದವಾಗಿ ಮತ್ತು ಕನ್ನಡಿಗರ ಸೇವೆಗೆ ಅವಕಾಶವಾಗಿ ರೂಪುಗೊಳ್ಳಲಿದೆ ಎಂಬುದರಲ್ಲಿ ಯಾವುದೇ ಸಂಶಯವಿಲ್ಲ ಎಂದು ಭವಿಷ್ಯ ನುಡಿದಿದ್ದಾರೆ.





Leave a comment