ದಾವಣಗೆರೆ: ಶಿವಮೊಗ್ಗ ತಾಲೂಕಿನ ನ್ಯಾಮತಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬರುವ ಸಾಲಬಾಳು ಗ್ರಾಮದ ಕಲ್ಲಗಿರಿ ರಂಗನಾಥ ಸ್ವಾಮಿಬೆಟ್ಟದಲ್ಲಿ ದರೋಡೆ ಮಾಡಿದ್ದ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ. ಬಂಧಿತರಿಂದ ರೂ. 30,000 ಹಣ ಮತ್ತು ಕೃತ್ಯಕ್ಕೆ ಬಳಸಿದ್ದ ದ್ವಿಚಕ್ರ ವಾಹನ, ಮೊಬೈಲ್ ವಶಪಡಿಸಿಕೊಳ್ಳಲಾಗಿದೆ.
ಶಿವಮೊಗ್ಗ ತಾಲೂಕಿನ ಬಿಕೋನಹಳ್ಳಿ ಗ್ರಾಮದ ಅಣ್ಣಪ್ಪ ನಾಯ್ಕ (27), ಕೂಲಿ ಕೆಲಸ ಮಾಡುತ್ತಿದ್ದ ಚೇತನ್ (26) ಬಂಧಿತ ಆರೋಪಿಗಳು.
ಘಟನೆ ಹಿನ್ನೆಲೆ:
ಕಳೆದ ವರ್ಷದ ಡಿಸೆಂಬರ್ 20ರಂದು ಸಂಜೆ ಸಮಯದಲ್ಲಿ ಈ ಪ್ರಕರಣದ ಪಿರ್ಯಾದಿದಾರ ಜೀವನ್ ಅವರು ನ್ಯಾಮತಿ ಪೊಲೀಸ್ ಠಾಣಾ ವ್ಯಾಪ್ತಿಯ ಸಾಲಬಾಳು ಗ್ರಾಮದ ಕಲ್ಬಗಿರಿ ರಂಗನಾಥ ಸ್ವಾಮಿ ಬೆಟ್ಟದ ವಿಂಡ್ ಫ್ಯಾನ್ ಬಳಿ ನಿಂತಿದ್ದರು. ಆಗ ಸ್ಥಳಕ್ಕೆ ಬಂದ ಇಬ್ಬರು ದುಷ್ಕರ್ಮಿಗಳು ಜೀವನ್ ಅವರನ್ನು ಹೆದರಿಸಿ ಬಲವಂತವಾಗಿ ಅವರಿಂದ ಹಣ ಕಿತ್ತುಕೊಂಡು ಹೋಗಿದ್ದರು. ಈ ಸಂಬಂಧ ನ್ಯಾಮತಿ ಪೊಲೀಸ್ ಠಾಣೆಯಲ್ಲಿ ಠಾಣಾ ಗುನ್ನೆ ನಂ:- 347/2025 ಕಲಂ:- 309(4) ಬಿಎನ್ಎಸ್ ರೀತ್ಯಾ ದರೋಡೆ ಪ್ರಕರಣ ದಾಖಲಾಗಿತ್ತು.
ಪ್ರಕರಣದ ಆರೋಪಿತರ ಪತ್ತೆಗಾಗಿ ಜಿಲ್ಲಾ ಪೊಲೀಸ್ ಅಧೀಕ್ಷಕಿಉಮಾ ಪ್ರಶಾಂತ್, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಪರಮೇಶ್ವರ ಹೆಗಡೆ ಮಾರ್ಗದರ್ಶನದಲ್ಲಿ ಚನ್ನಗಿರಿ ಉಪವಿಭಾಗದ ಪೊಲೀಸ್ ಉಪಾಧೀಕ್ಷಕ ರುದ್ರಪ್ಪ ಎಸ್. ಉಜ್ಜನಕೊಪ್ಪ ಉಸ್ತುವಾರಿಯಲ್ಲಿ ನ್ಯಾಮತಿ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕ ರವಿ ಎನ್.ಎಸ್ ನೇತೃತ್ವದಲ್ಲಿ ಅಧಿಕಾರಿ ಸಿಬ್ಬಂದಿಗಳನ್ನು ಒಳಗೊಂಡ ತಂಡವನ್ನು ರಚನೆ ಮಾಡಲಾಗಿತ್ತು.
ತನಿಖೆ ಕೈಗೊಂಡು, ಆರೋಪಿತರ ಪತ್ತೆಗೆ ಸತತವಾಗಿ ಪ್ರಯತ್ನ ಮಾಡಿ, ಪ್ರಕರಣಕ್ಕೆ ಸಂಬಂಧಿಸಿದಂತೆ ಅಣ್ಣಪ್ಪ ನಾಯ್ಕ ಮತ್ತು ಚೇತನ್ ನನ್ನು ಬಂಧಿಸಲಾಗಿದೆ. ಆರೋಪಿಗಳನ್ನು ವಿಚಾರಣೆಗೆ ಒಳಪಡಿಸಿದಾಗ ಬಲವಂತವಾಗಿ ಹಣವನ್ನು ಕಿತ್ತುಕೊಂಡು ಹೋಗಿರುವ ಬಗ್ಗೆ ಒಪ್ಪಿಕೊಂಡಿದ್ದಾರೆ. ಆರೋಪಿತರಿಂದ 30,000 ರೂ. ಹಣ ಹಾಗೂ ಕೃತ್ಯಕ್ಕೆ ಬಳಸಿದ ದ್ವಿಚಕ್ರ ವಾಹನ ಮತ್ತು ಮೊಬೈಲ್ ಫೋನ್ ಅನ್ನು ವಶಕ್ಕೆ ಪಡೆಯಲಾಗಿದೆ.
ಆರೋಪಿತರ ಪತ್ತೆಕಾರ್ಯದಲ್ಲಿ ಯಶಸ್ವಿಯಾದ ನ್ಯಾಮತಿ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕ ಎನ್. ಎಸ್. ರವಿ, ಪಿಎಸ್ಐ ಹೊಳಬಸಪ್ಪ ಹೋಳಿ, ಸಿಬ್ಬಂದಿಯವರಾದ ಮಹೇಶನಾಯ್ಕ, ಶಿವರಾಜ್, ಆನಂದ, ಸುನೀಲ್ ಕುಮಾರ್, ಹೇಮರಾಜ್, ದೇವರಾಜ್ ಅವರನ್ನು ಪೊಲೀಸ್ ಅಧೀಕ್ಷಕ ಪೊಲೀಸ್ ಅಧೀಕ್ಷಕಿ ಉಮಾ ಪ್ರಶಾಂತ್ ಅವರು ಶ್ಲಾಘಿಸಿದ್ದಾರೆ.





Leave a comment