SUDDIKSHANA KANNADA NEWS/ DAVANAGERE/ DATE:30-08-2024
ದಾವಣಗೆರೆ:ಕೃಷಿ ಪಂಪ್ಸೆಟ್ಗಳಿಗೆ ಆಧಾರ್ ನಂಬರ್ ಜೋಡಣೆ ಮೂಲಕ ಖಾಸಗೀಕರಣಗೊಳಿಸಿ ವಿದ್ಯುತ್ ಶುಲ್ಕ ವಿಧಿಸುವ ಸರ್ಕಾರದ ಯೋಜನೆ ಖಂಡಿಸಿ ಸೆ.4 ರಂದು ರಾಜ್ಯಾದ್ಯಂತ ಜಿಲ್ಲಾ ವಿದ್ಯುಚ್ಛಕ್ತಿ ಕಚೇರಿಗಳ ಮುಂಭಾಗ ಪ್ರತಿಭಟನೆ ನಡೆಸಲು ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ನಿರ್ಧರಿಸಿದೆ.
ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಸಂಘದ ರಾಜ್ಯಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ದಾವಣಗೆರೆಯ ಬೆಸ್ಕಾಂ ಸೂಪರಿಂಟೆಂಡೆಂಟ್ ಇಂಜಿನಿಯರ್ ಕಚೇರಿ ಮುಂದೆ ಅಂದು ಬೆಳಿಗ್ಗೆ 11 ಗಂಟೆಗೆ ಸಂಘದ ಪದಾಧಿಕಾರಿಗಳು ಹಾಗೂ ರೈತರಿಂದ ಪ್ರತಿಭಟನೆ ನಡೆಯಲಿದೆ ಎಂದು ಹೇಳಿದರು.
ರಾಜ್ಯದಲ್ಲಿ ರೈತರು ಕೊಳವೆ ಬಾವಿಗಳ ಆಶ್ರಯದಲ್ಲಿ ಕೃಷಿ ಕಾರ್ಯಗಳನ್ನು ನಡೆಸುತ್ತಿದ್ದಾರೆ. ಹಿಂದೆ ಕೃಷಿ ಪಂಪ್ ಸೆಟ್ ಗಳಿಗೆ ವಿದ್ಯುತ್ ಶುಲ್ಕ ವಸೂಲಿ ಮಾಡುತ್ತಿದ್ದ ಸರ್ಕಾರದ ನೀತಿಗಳ ವಿರುದ್ಧ ಹೋರಾಟದ ಮೂಲಕ ಕೃಷಿ ಪಂಪ್ಸೆಟ್ಗಳಿಗೆ ಉಚಿತ ವಿದ್ಯುತ್ ಪಡೆಯಲಾಯಿತು. ರೈತರ ಬೆಳೆಗಳಿಗೆ ನ್ಯಾಯಯುತ ಬೆಲೆ ನಿಗದಿಗೊಳಿಸಿ ಕಾನೂನು ಬದ್ಧಗೊಳಿಸುವವರೆಗೂ ಕೃಷಿ ಕ್ಷೇತ್ರಕ್ಕೆ ಮೂಲಭೂತ ಸೌಕರ್ಯಗಳಾದ ಭೂಮಿ, ರಸ್ತೆ, ನೀರು, ವಿದ್ಯುತ್, ಬಿತ್ತನೆ ಬೀಜಗಳು, ರಸಗೊಬ್ಬರ, ಕೀಟನಾಶಕಗಳು, ಕೃಷಿ ಯಂತ್ರೋಪಕರಣಗಳಿಗೆ ಸಹಾಯಧನ ನೀಡಬೇಕಾಗಿರುವುದು ಸರ್ಕಾರದ ಜವಾಬ್ದಾರಿ ಎಂದರು.
ಕೃಷಿ ಪಂಪ್ ಸೆಟ್ ಗಳಿಗೆ ಆರ್.ಆರ್.ನಂಬರ್ಗೆ ಆಧಾರ್ ನಂಬರ್ ಜೋಡಣೆ ಮೂಲಕ ಮೀಟರ್ ಅಳವಡಿಸಿ ಶುಲ್ಕ ವಿಧಿಸುವ ಉದ್ದೇಶದಿಂದ ರಾಜ್ಯದಲ್ಲಿ ಸರ್ಕಾರ ತ್ವರಿತಗತಿಯಲ್ಲಿ ಕಾರ್ಯನಿ ನಿಹಿಸುತ್ತಿದೆ. ಕೃಷಿ ಕೊಳವೆ ಬಾವಿಗಳಿಗೆ 2023 ರಿಂದ ಟಿ.ಸಿ., ವಿದ್ಯುತ್ ಕಂಬಗಳು, ವೈರ್ಗಳು, ಇತರೆ ಸಾಮಗ್ರಿಗಳನ್ನು ರೈತರು ತಮ್ಮ ಸ್ವಂತ ಖರ್ಚಿನಲ್ಲಿ ಖರೀದಿಸಿ ವಿದ್ಯುತ್ ಸಂಪರ್ಕ ಪಡೆಯಬೇಕೆಂದು ಕಾನೂನು ಜಾರಿಗೊಳಿಸಿದೆ ಎಂದು ತಿಳಿಸಿದರು.
ಕೃಷಿ ಕ್ಷೇತ್ರಕ್ಕೆ ರೈತರಿಗೆ ನೀಡುತ್ತಿರುವ ವಿದ್ಯುತ್ ಸಂಪರ್ಕ ಕಡಿತ ಮಾಡುವುದಾಗಲೀ, ಕೇಸುಗಳನ್ನು ಹಾಕುವುದಾಗಲೀ ಮಾಡಬಾರದು, ಒಂದು ವೇಳೆ ಈ ರೀತಿ ವಿನಾಕಾರಣ ತೊಂದರೆ ಕೊಟ್ಟಲಿ ಉಗ್ರ ಹೋರಾಟ ಮಾಡಲಾಗುವುದು ಎಂಬುದು ಸೇರಿದಂತೆ ಅನೇಕ ಹಕ್ಕೋತ್ತಾಯಗಳನ್ನು ಮಾಡಲಾಗುವುದು ಎಂದು ತಿಳಿಸಿದರು.
ಸರ್ಕಾರದ ಈ ರೈತ ವಿರೋಧಿ ವಿದ್ಯುತ್ ನೀತಿಯನ್ನು ರದ್ದು ಮಾಡಲು ಒತ್ತಾಯಿಸಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ.ಕೃಷಿ ಪಂಪ್ಸೆಟ್ಗಳಿಗೆ ಆಧಾರ್ ನಂಬರ್ ಜೋಡಣಿ ಮೂಲಕ ಮೀಟರ್ ಅಳವಡಿಸಿ ವಿದ್ಯುತ್ ಶುಲ್ಕ ವಿಧಿಸುವ ಯೋಜನೆಯನನ್ನು ಜಾರಿ ಮಾಡಬಾರದು. ಕೊಳವೆ ಬಾವಿಗಳಿಗೆ 2023 ರಿಂದ ಜಾರಿಗೊಳಿಸಿರುವ ಕಾನೂನು ರದ್ದು ಮಾಡಿ ಹಿಂದಿನಂತೆ ಟಿ.ಸಿ., ಕಂಬ, ವೈರು ಇತರೆ ಉಪಕರಣಗಳನ್ನು ಇಲಾಖೆ ಸರಬರಾಜು ಮಾಡಿ ವಿದ್ಯುತ್ ಸಂಪರ್ಕ ನೀಡಬೇಕು.ಮನೆ ಬಳಕೆ 200 ಯೂನಿಟ್ ಉಚಿತ ವಿದ್ಯುತ್ ಜಾರಿ ಮಾಡಿರುವ ಸರ್ಕಾರ ಹೆಚ್ಚಿಸಿರುವ ಯೂನಿಟ್ ದರವನ್ನು ಕಡಿಮೆ ಮಾಡಬೇಕು. ವಿದ್ಯುತ್ ಅಪಘಾತಗಳಿಗೆ ಸಿಲುಕಿ ಮರಣ ಹೊಂದುವ ವ್ಯಕ್ತಿಯ ಕುಟುಂಬಕ್ಕೆ ಹತ್ತು ಲಕ್ಷ ರೂಪಾಯಿ ಪರಿಹಾರ ನೀಡಬೇಕು. ಸೋಲಾರ್ ಸಂಪರ್ಕ ಹೊಂದುವ ಪಂಪ್ ಸೆಟ್ ಗಳಿಗೆ ವಿದ್ಯುತ್ ಸಂಪರ್ಕವನ್ನು ಕಡಿತಗೊಳಿಸುವ ಆದೇಶವನ್ನು ಕೈಬಿಡಬೇಕು ಎಂದು ಒತ್ತಾಯಿಸಿದರು.
ಗೋಷ್ಠಿಯಲ್ಲಿ ಸಂಘದ ಪದಾಧಿಕಾರಿಗಳಾದ ಮಲ್ಲಶೆಟ್ಟಿಹಳ್ಳಿ ಚನ್ನಬಸಪ್ಪ, ಮಹದೇವಿ ಎಸ್.ಬೇವಿನಾಳ ಮಠ, ಶತಕೋಟಿ ಬಸಪ್ಪ, ವೀರನಗೌಡ ಪಾಟೀಲ್, ಬೈರೇಗೌಡ, ವಿಶ್ವನಾಥ, ಖಲೀಂವುಲ್ಲ, ಕಾಳೇಶ್ ಮತ್ತಿತರರು ಹಾಜರಿದ್ದರು.