Home ದಾವಣಗೆರೆ ಬುದ್ದಿಶಕ್ತಿ, ವಿವೇಕದ ಜೊತೆಗೆ ಜ್ಞಾನ ಬಳಸಿಕೊಂಡರೆ ಸಿಗಬೇಕಾದ ಸೌಲಭ್ಯಗಳು ಸಿಗುತ್ತವೆ: ಜಿ. ಬಿ. ವಿನಯ್ ಕುಮಾರ್
ದಾವಣಗೆರೆನವದೆಹಲಿಬೆಂಗಳೂರು

ಬುದ್ದಿಶಕ್ತಿ, ವಿವೇಕದ ಜೊತೆಗೆ ಜ್ಞಾನ ಬಳಸಿಕೊಂಡರೆ ಸಿಗಬೇಕಾದ ಸೌಲಭ್ಯಗಳು ಸಿಗುತ್ತವೆ: ಜಿ. ಬಿ. ವಿನಯ್ ಕುಮಾರ್

Share
Share

SUDDIKSHANA KANNADA NEWS/DAVANAGERE/DATE:22_12_2025

ದಾವಣಗೆರೆ: ಬುದ್ದಿಶಕ್ತಿ, ವಿವೇಕ ಮತ್ತು ಜ್ಞಾನ ಬೆಳೆಸಿಕೊಂಡಾಗ ಮಾತ್ರ ನಮಗೆ ಸಿಗಬೇಕಾದ ಸೌಲಭ್ಯಗಳು ಸಿಗುತ್ತವೆ. ಜೊತೆಗೆ ಧೈರ್ಯವೂ ಇರಬೇಕು ಎಂದು ಇನ್ ಸೈಟ್ಸ್ ಸಂಸ್ಥೆ ಸಂಸ್ಥಾಪಕ ನಿರ್ದೇಶಕ ಜಿ. ಬಿ. ವಿನಯ್ ಕುಮಾರ್ ಹೇಳಿದರು.

ದಾವಣಗೆರೆ ಜಿಲ್ಲೆಯ ಹರಿಹರ ಪಟ್ಟಣದ ಕೆಎಸ್ ಆರ್ ಟಿಸಿ ಬಸ್ ನಿಲ್ದಾಣದ ಸಮೀಪದ ಗುರುಭವನದಲ್ಲಿ ಪ್ರೊ. ಬಿ. ಕೃಷ್ಣಪ್ಪ ಸ್ಥಾಪಿತ ಕರ್ನಾಟಕ ದಲಿತ ಸಂಘರ್ಷ ಸಮಿತಿ ಹರಿಹರ ತಾಲ್ಲೂಕು ಘಟಕದ ವತಿಯಿಂದ ಹಮ್ಮಿಕೊಂಡಿದ್ದ ಸಂವಿಧಾನ ಶಿಲ್ಪಿ ಡಾ. ಬಿ. ಆರ್. ಅಂಬೇಡ್ಕರ್ ರವರ 69ನೇ ಮಹಾಪರಿನಿರ್ವಾ ದಿನ ಮತ್ತು ಡಾ. ಅಂಬೇಡ್ಕರ್ ಸದ್ಭಾವನ ಪ್ರಶಸ್ತಿ ಪ್ರದಾನ ಸಮಾರಂಭ, ವಿಚಾರ ಸಂಕಿರಣದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಅವರು ಮಾತನಾಡಿದರು.

ಡಾ. ಬಿ. ಆರ್. ಅಂಬೇಡ್ಕರ್ ಅವರು ಸ್ವಂತ ಪರಿಶ್ರಮ, ಪುಸ್ತಕಗಳ ಜ್ಞಾನ, ಸಾಧಿಸುವ ಛಲದಿಂದ ವಿದೇಶಗಳಲ್ಲಿ ಉನ್ನತ ವಿದ್ಯಾಭ್ಯಾಸ ಪಡೆದರು. ಸಮಾಜದಲ್ಲಿನ ಶೋಷಣೆ ಮೆಟ್ಟಿ ನಿಂತು ಸಂವಿಧಾನ ಶಿಲ್ಪಿಯಾಗಿ ಬೆಳೆದರು. ಅವರ ಬದುಕು ನಮಗೆಲ್ಲರಿಗೂ ಆದರ್ಶ. ನಮಗೆ ಸಿಕ್ಕ ಮಹಾನ್ ಶಕ್ತಿ ಮತ್ತು ಮಹಾನ್ ಚೇತನ. ಅವರು ಕೊಟ್ಟ ಸಂವಿಧಾನದಿಂದ ಲಕ್ಷಾಂತರ ಮಂದಿಗೆ ರಾಜಕೀಯ, ಆರ್ಥಿಕ, ಸಾಮಾಜಿಕ, ಶೈಕ್ಷಣಿಕವಾಗಿ ಅನುಕೂಲವಾಗಿದೆ ಎಂದು ತಿಳಿಸಿದರು.

ಎಸ್ಸಿ, ಎಸ್ಟಿ, ಅಲ್ಪಸಂಖ್ಯಾತರು, ಬಡವರ ಮಕ್ಕಳು ಐಎಎಸ್, ಐಪಿಎಸ್ ಅಧಿಕಾರಿಗಳಾಗುತ್ತಿಲ್ಲ. ವ್ಯವಸ್ಥೆಯಲ್ಲಿ ಅಧಿಕಾರ ಕಪಿಮುಷ್ಠಿಯಲ್ಲಿರುವವರ ಮತ್ತು ಶ್ರೀಮಂತರ ಮಕ್ಕಳು ಮಾತ್ರ ಉನ್ನತ ಹುದ್ದೆಗೆ ಹೋಗುತ್ತಿದ್ದಾರೆ. ಶೋಷಿತರು ಮತ್ತು ಬಡವರ ಮಕ್ಕಳು ಐಎಎಸ್, ಐಪಿಎಸ್ ಅಧಿಕಾರಿಗಳಾಗಬೇಕೆಂಬ ನಿಟ್ಟಿನಲ್ಲಿ ಇನ್ ಸೈಟ್ಸ್ ಐಎಎಸ್ ಸಂಸ್ಥೆ ವತಿಯಿಂದ ಉಚಿತವಾಗಿ ಕೋಚಿಂಗ್ ನೀಡಲಾಗುತ್ತಿದೆ. ಗ್ರಾಮೀಣ ಪ್ರದೇಶದ ಮಕ್ಕಳಲ್ಲಿ ದೇಶದ ಅತ್ಯುನ್ನತ ಹುದ್ದೆಗಳಿಗೆ ಹೋಗುವ ಕನಸು ಬಿತ್ತುವ ಜೊತೆಗೆ ಪ್ರೋತ್ಸಾಹಿಸಬೇಕಾದ ಅಗತ್ಯತೆ ಇದೆ ಎಂದು ಪ್ರತಿಪಾದಿಸಿದರು.

ಇಂದು ರಾಜಕಾರಣ ಹೇಗಿದೆ ಎಂದರೆ ನಮ್ಮನ್ನು ಆಳುವವರು ನಮ್ಮ ನೋವು ಅರ್ಥ ಮಾಡಿಕೊಳ್ಳುತ್ತಿಲ್ಲ. ನಮ್ಮನ್ನು ಬೆಳೆಯಲು ಬಿಡುವುದಿಲ್ಲ. ಆದರೂ ಸವಾಲಾಗಿ ಸ್ವೀಕರಿಸಿ ಬೆಳೆಯಬೇಕಾಗಿದೆ. ನಾವು ಬೆಳೆಯಬೇಕಾದರೆ, ಪ್ರಬಲ ಸ್ಪರ್ಧೆಗಳಿಗೆ ಸವಾಲೊಡ್ಡಲು ಪುಸ್ತಕ ಜ್ಞಾನ, ಪರಿಶ್ರಮ, ಧೈರ್ಯ ಅತ್ಯಗತ್ಯ ಎಂದ ಅವರು, ನಾನು ಸುಮ್ಮನೆ ಕುಳಿತಿದ್ದರೆ ಆಗುತ್ತಿರಲಿಲ್ಲ. ಇನ್ ಸೈಟ್ಸ್ ಐಎಎಸ್ ಸಂಸ್ಥೆ ಕಟ್ಟಿ ಇದುವರೆಗೆ 1500ಕ್ಕೂ ಹೆಚ್ಚು ವಿದ್ಯಾರ್ಥಿಗಳು ವಿವಿಧ ಹುದ್ದೆಗಳಿಗೆ ಹೋಗಿದ್ದಾರೆ. ದೇಶದ ಪ್ರತಿರಾಜ್ಯದಲ್ಲಿಯೂ ಕೆಲಸ ನಿರ್ವಹಿಸುತ್ತಿದ್ದಾರೆ. ಇದು ಸಂತೋಷದ ವಿಚಾರ ಎಂದು ಹೇಳಿದರು.

ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮಿ ಚೌಧರಿ ಅವರು ಕಾರ್ಯಕ್ರಮ ಉದ್ಘಾಟಿಸಿದರು. ಡಿಎಸ್ ಎಸ್ ರಾಜ್ಯ ಸಂಚಾಲಕ ಎಂ. ಗುರುಮೂರ್ತಿ, ಜಿಲ್ಲಾ ಸಂಚಾಲಕ ಮಂಜುನಾಥ ಕುಂದವಾಡ, ಹರಿಹರ ತಾಲೂಕು ಡಿಎಸ್ ಎಸ್ ಸಂಚಾಲಕ ಪಿ. ಜೆ. ಮಹಾಂತೇಶ್, ಶಿವಮೊಗ್ಗ ಜಿಲ್ಲಾ ಸಂಚಾಲಕ ಎಂ. ಏಳುಕೋಟಿ, ವಕೀಲರಾದ ಭಾಗೀರಥಿ, ಡಾ. ನಾಗರಾಜ್, ಹರಿಹರದ ಮುಖಂಡರು, ಗಣ್ಯರು ಈ ವೇಳೆ ಉಪಸ್ಥಿತರಿದ್ದರು.

ಸಮರ್ಥರನ್ನ ಗೆಲ್ಲಿಸಿ: ಜಿಬಿವಿ

ಯಾವುದೇ ಚುನಾವಣೆ ಬಂದರೂ ಸಮರ್ಥ, ಜನಪರ, ಜನರ ಏಳಿಗೆ, ಅಭಿವೃದ್ಧಿಗೆ ಶ್ರಮಿಸುವವರಿಗೆ ಬೆಂಬಲ ನೀಡಿ. ಆಸ್ತಿ ಮಾಡಿಕೊಳ್ಳುವವರ ಆಯ್ಕೆ ಮಾಡಬೇಡಿ. ನಾವು ವಿಧಾನಸೌಧದ ಮೆಟ್ಟಿಲು ಹತ್ತಿ ಒಳ್ಳೆಯ ಕೆಲಸ ಮಾಡಬೇಕೆಂಬ ಆಸೆ ಇದೆ. ಅದರಲ್ಲಿಯೂ ಮುಖ್ಯವಾಗಿ ಶೈಕ್ಷಣಿಕ ಕ್ಷೇತ್ರದಲ್ಲಿ ಕ್ರಾಂತಿಕಾರಕ ಬದಲಾವಣೆ ತರಬೇಕೆಂಬ ಕನಸಿದೆ. ನಿಮ್ಮೆಲ್ಲರ ಆಶೀರ್ವಾದ ಇರಲಿ. ದುಡ್ಡು ಮಾಡಲು, ಆಸ್ತಿ ಮಾಡಲು ರಾಜಕಾರಣಕ್ಕೆ ಬಂದಿಲ್ಲ. ನಾನು ಲೋಕಸಭೆ ಚುನಾವಣೆಗೆ ದಾವಣಗೆರೆ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಿದ್ದೆ. ನಾನು ರಾಷ್ಟ್ರೀಯ ಪಕ್ಷವೊಂದರ ಟಿಕೆಟ್ ಆಕಾಂಕ್ಷಿಯಾಗಿದ್ದರೂ ಸಿಗಲಿಲ್ಲ. ಹಾಗೆಂದ ಮಾತ್ರಕ್ಕೆ ಸುಮ್ಮನೆ ಕುಳಿತಿಲ್ಲ. ಎಲ್ಲೆಡೆ ಪ್ರವಾಸ ಮಾಡುತ್ತಿದ್ದೇನೆ. ಜನರು ತೋರುತ್ತಿರುವ ಪ್ರೀತಿ ನೋಡಿದರೆ ಪಕ್ಷದ ಟಿಕೆಟ್ ಗಿಂತ ಜನರು ನೀಡುತ್ತಿರುವ ಆತ್ಮಸ್ಥೈರ್ಯ ಮತ್ತಷ್ಟು ಗಟ್ಟಿಯಾಗಿಸುತ್ತಿದೆ.

 

ಜಿ. ಬಿ. ವಿನಯ್ ಕುಮಾರ್, ಇನ್ ಸೈಟ್ಸ್ ಸಂಸ್ಥೆ ಸಂಸ್ಥಾಪಕ ನಿರ್ದೇಶಕರು

 

Share

Leave a comment

Leave a Reply

Your email address will not be published. Required fields are marked *