ಬೆಳಗಾವಿ: ವಿಪಕ್ಷ ನಾಯಕ ಆರ್. ಅಶೋಕ್ ಅವರು ಹಾಲು ಉತ್ಪಾದಕರಿಗೆ ಹಾಲಿನ ಪ್ರೋತ್ಸಾಹ ಧನ ಕೊಟ್ಟಿಲ್ಲ ಎಂದು ಹೇಳಿದ್ದಾರೆ. ಹಾಗೆಯೇ ಪ್ರಣಾಳಿಕೆಯಲ್ಲಿ ಹೇಳಿದ್ದ ಒಂದು ಲೀಟರಿಗೆ 7 ರೂಗಳಿಗೆ ಹೆಚ್ಚಿಸಲಾಗುವುದು ಎಂದು ಹೇಳಿದ್ದಾರೆ. ಆದರೆ ಕೊಡಲಿಲ್ಲ ಎಂದು ಆರೋಪಿಸಿದ್ದಾರೆ. ಇದು ಪೂರ್ತಿ ನಿಜವಲ್ಲ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ.
ಬೆಳಗಾವಿ ವಿಧಾನಸಭೆ ಅಧಿವೇಶನದಲ್ಲಿ ಮಾತನಾಡಿದ ಅವರು, ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ರೈತರ ಹಾಲಿನ ದರವನ್ನು ಎರಡು ಬಾರಿ ಹೆಚ್ಚಿಸಿದ್ದೇವೆ. ಒಮ್ಮೆ ಮೂರು ರೂಪಾಯಿ ಮತ್ತೊಮ್ಮೆ 4 ರೂಪಾಯಿಗಳು. ಇದರ ಜೊತೆಗೆ ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಬಾಕಿಯಿದ್ದ 630 ಕೋಟಿ ರೂಪಾಯಿಗಳನ್ನೂ ರೈತರಿಗೆ ನೀಡಿದ್ದೇವೆ. 2023-24 ರಿಂದ 2025-26 ರವರೆಗೆ 4048 ಕೋಟಿ ರೂಪಾಯಿಗಳನ್ನು ರೈತರ ಖಾತೆಗಳಿಗೆ ನೇರವಾಗಿ ವರ್ಗಾಯಿಸಿದ್ದೇವೆ. ಅಕ್ಟೋಬರ್ ಮತ್ತು ನವೆಂಬರ್ ತಿಂಗಳ ಪ್ರೋತ್ಸಾಹಧನ ಮಾತ್ರ ಬಾಕಿ ಇದೆ. ಬಾಕಿ ಇರುವ ಶೀಘ್ರವಾಗಿ ಬಿಡುಗಡೆ ಮಾಡುತ್ತೇವೆ ಎಂದು ತಿಳಿಸಿದರು.
2013-14 ರಲ್ಲಿ ನಮ್ಮ ಸರ್ಕಾರ ಕ್ಷೀರಧಾರೆ ಯೋಜನೆಯನ್ನು ಜಾರಿಗೆ ತಂದು 3 ರೂ ಇದ್ದ ಪ್ರೋತ್ಸಾಹ ಧನವನ್ನು 5 ರೂಗೆ ಹೆಚ್ಚಿಸಿತ್ತು. ಅದನ್ನು 7 ರೂಗಳಿಗೆ ಹೆಚ್ಚಿಸುತ್ತೇವೆ ಎಂದು ಹೇಳಿದ್ದೇವೆ. ಮುಂದಿನ ದಿನಗಳಲ್ಲಿ ಅದನ್ನೂ ಮಾಡುತ್ತೇವೆ. ನಾವು ಇದನ್ನೆಲ್ಲ ಮಾಡಿದ ಕಾರಣಕ್ಕಾಗಿಯೇ ಹಾಲಿನ ಉತ್ಪಾದನೆ ಬಿಜೆಪಿ ಸರ್ಕಾರದ ಅವಧಿಗಿಂತ ಸುಮಾರು 25-30 ಲಕ್ಷ ಲೀಟರುಗಳಷ್ಟು ಹಾಲನ್ನು ಪ್ರತಿ ದಿನ ರೈತರು ನಮ್ಮ ಡೈರಿಗಳಿಗೆ ಕೊಡುತ್ತಿದ್ದಾರೆ. ಬಿಜೆಪಿ ಅವಧಿಯಲ್ಲಿ 75 ಲಕ್ಷ ಲೀಟರುಗಳಿಗೆ ಇಳಿದಿದ್ದ ಹಾಲಿನ ಸಂಗ್ರಹ ಈಗ 1.05 ಕೋಟಿ ಲೀಟರುಗಳ ವರೆಗೆ ಏರಿಕೆಯಾಗಿದೆ ಎಂದರು.
ಅನುಗ್ರಹ ಯೋಜನೆ
ನಾವು ಸರ್ಕಾರ 2014 ರಲ್ಲಿ ಅನುಗ್ರಹ ಯೋಜನೆಯನ್ನು ಜಾರಿಗೆ ತಂದಿದ್ದೆವು. ಮೂಲಕ, ಕುರಿ, ಮೇಕೆ, ಎತ್ತು, ಎಮ್ಮೆ, ಹಸು ಮುಂತಾದವುಗಳು ಆಕಸ್ಮಿಕವಾಗಿ ಮರಣ ಹೊಂದಿದರೆ ರೈತರಿಗೆ ತೀವ್ರ ಅನಾನುಕೂಲವಾಗುತ್ತದೆಂದು ತೀರ್ಮಾನಿಸಿ ಪರಿಹಾರ ಕೊಡಲು ಪ್ರಾರಂಭಿಸಿದೆವು. ಇದು ದೇಶದಲ್ಲಿಯೆ ಮಾದರಿ ಕಾರ್ಯಕ್ರಮವಾಗಿದೆ. ಹಿಂದಿನ ಸರ್ಕಾರ 2021 ನೇ ಸಾಲಿನಿಂದ 2023 ರವರೆಗೆ ಈ ಯೋಜನೆಯನ್ನು ಸಂಪೂರ್ಣವಾಗಿ ನಿಲ್ಲಿಸಿತ್ತು.
ಕುರಿ/ಮೇಕೆ ಆಕಸ್ಮಿಕ ಸಾವುಗಳು ಉಂಟಾದ ಸಂದರ್ಭದಲ್ಲಿ ಅವುಗಳ ಮಾಲೀಕರಿಗೆ ಪರಿಹಾರವಾಗಿ ರೂ. 5000 ರೂ.ಗಳನ್ನು ನೀಡಲಾಗುತ್ತಿತ್ತು. ಈ ವರ್ಷದಿಂದ 7500 ರೂಗಳಿಗೆ ಹೆಚ್ಚಿಸಿದ್ದೇವೆ. ನಮ್ಮ ಸರ್ಕಾರ ಬಂದಾಗಿನಿAದ ಇಲ್ಲಿಯವರೆಗೆ ರೂ.58 ಕೋಟಿಗಳನ್ನು ಮಾಲೀಕರಿಗೆ ಪರಿಹಾರ ನೀಡಿದ್ದೇವೆ.
ಹಾಗೆಯೇ, ಆಕಸ್ಮಿಕವಾಗಿ ಮರಣ ಹೊಂದಿದ ದನ, ಎಮ್ಮೆ, ಎತ್ತು, ಹೋರಿ ಮತ್ತು ಕಡಸುಗಳಿಗೆ ಮಾಲೀಕರಿಗೆ ಪರಿಹಾರವಾಗಿ ರೂ.10,000 ನೀಡಲಾಗುತ್ತಿತ್ತು. ಈ ವರ್ಷದಿಂದ 15000 ರೂಗಳಿಗೆ ಏರಿಕೆ ಮಾಡಿದ್ದೇವೆ. ನಮ್ಮ ಸರ್ಕಾರ ಬಂದಾಗಿನಿAದ ಇಲ್ಲಿಯವರೆಗೆ ರೂ.37.41 ಕೋಟಿಗಳನ್ನು ಮಾಲೀಕರಿಗೆ ಪರಿಹಾರವಾಗಿ ನೀಡಿದ್ದೇವೆ ಎಂದು ತಿಳಿಸಿದರು.





Leave a comment