Home ದಾವಣಗೆರೆ ಗೃಹಲಕ್ಷ್ಮೀ ಹಣ ಫಲಾನುಭವಿಗೆ ಸೇರಿರುತ್ತೆ, ಇಲ್ಲವೇ ಸರ್ಕಾರದ ಬೊಕ್ಕಸದಲ್ಲಿರುತ್ತೆ: ಪ್ರತಿ ಪೈಸೆಯೂ ಎಲ್ಲಿ ಹೋಗುತ್ತೆಂದು ನಮಗೆ ಗೊತ್ತು ಎಂದ ಪ್ರಿಯಾಂಕ್ ಖರ್ಗೆ!
ದಾವಣಗೆರೆನವದೆಹಲಿಬೆಂಗಳೂರು

ಗೃಹಲಕ್ಷ್ಮೀ ಹಣ ಫಲಾನುಭವಿಗೆ ಸೇರಿರುತ್ತೆ, ಇಲ್ಲವೇ ಸರ್ಕಾರದ ಬೊಕ್ಕಸದಲ್ಲಿರುತ್ತೆ: ಪ್ರತಿ ಪೈಸೆಯೂ ಎಲ್ಲಿ ಹೋಗುತ್ತೆಂದು ನಮಗೆ ಗೊತ್ತು ಎಂದ ಪ್ರಿಯಾಂಕ್ ಖರ್ಗೆ!

Share
Share

SUDDIKSHANA KANNADA NEWS/DAVANAGERE/DATE:17_12_2025

ಬೆಳಗಾವಿ: ಕಾಂಗ್ರೆಸ್ ಸರ್ಕಾರದ ಗ್ಯಾರಂಟಿಗಳು ರಾಜ್ಯದ ಅರ್ಹ ಫಲಾನುಭವಿಗಳಿಗೆ ತಲುಪುತ್ತಿವೆ. ಗೃಹಲಕ್ಷ್ಮಿ ಯೋಜನೆಯಲ್ಲಿ ಫಲಾನುಭವಿಯ ಖಾತೆಗೆ ನೇರವಾಗಿ ಹಣ ವರ್ಗಾವಣೆಯಾಗುತ್ತದೆ. ಈ ಯೋಜನೆಯ ಹಣ ಒಂದೋ ಜನರನ್ನು ತಲುಪಿರುತ್ತದೆ ಇಲ್ಲವೇ ಸರ್ಕಾರದ ಬೊಕ್ಕಸದಲ್ಲಿಯೇ ಉಳಿದಿರುತ್ತದೆ. ಇಲ್ಲಿ ಪ್ರತಿ ಪೈಸೆಯೂ ಎಲ್ಲಿ ಹೋಗುತ್ತದೆ ಎನ್ನುವುದು ನಮಗೆ ತಿಳಿದಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.

ಬೆಳಗಾವಿ ಅಧಿವೇಶನದಲ್ಲಿ ಮಾತನಾಡಿದ ಅವರು, ಗೃಹಲಕ್ಷ್ಮಿ ಯೋಜನೆ ಮಹಿಳಾ ಸಬಲೀಕರಣದಲ್ಲಿ ಪ್ರಮುಖ ಪಾತ್ರ ವಹಿಸುತ್ತಿದೆ. ಆದರೆ ಬಿಜೆಪಿಗರು ಸದನದಲ್ಲಿ ಚರ್ಚಿಸಬೇಕಾದ ಮುಖ್ಯವಾದ ಸಂಗತಿಗಳನ್ನು ಮರೆಮಾಚಿ, ವ್ಯರ್ಥ ಆರೋಪಗಳನ್ನು ಮಾಡುತ್ತ ಕಾಲಹರಣ ಮಾಡುತ್ತಿದ್ದಾರೆ. ಈ ಮೊದಲು ಗ್ಯಾರಂಟಿಗಳ ಬಗ್ಗೆ ಬೀದಿಬೀದಿಗಳಲ್ಲಿ ಅಪಪ್ರಚಾರ ಮಾಡಿದವರೇ ಈಗ ಬೇರೆ ರಾಜ್ಯಗಳಲ್ಲಿ ನಮ್ಮ ಯೋಜನೆಗಳನ್ನು ನಕಲು ಮಾಡುತ್ತಿರುವುದು, ಗ್ಯಾರಂಟಿಗಳು ಜನಸಾಮಾನ್ಯರ ಬದುಕಲ್ಲಿ ಉಂಟುಮಾಡಿರುವ ಸಕಾರಾತ್ಮಕ ಪರಿಣಾಮಗಳಿಗೆ ಸಾಕ್ಷಿ ಎಂದು ಹೇಳಿದ್ದಾರೆ.

ಗ್ರಾಮೀಣ ಭಾಗದಲ್ಲಿರುವ ಶುದ್ಧ ಕುಡಿಯುವ ನೀರಿನ ಘಟಕಗಳ ನಿರ್ವಹಣೆ ಕುರಿತು ಹಲವು ದಿನಗಳಿಂದ ಸಮಸ್ಯೆ ಇದೆ. ಇದಕ್ಕೆ ಮೂಲ ಕಾರಣ ವಿವಿಧ ವಲಯಗಳ ಮೂಲಕ ಬರುವ ಅನುದಾನದಲ್ಲಿ ಘಟಕಗಳನ್ನು ನಿರ್ಮಾಣ ಮಾಡಿ ಗ್ರಾಮ ಪಂಚಾಯತಿಗಳಿಗೆ ವಹಿಸುತ್ತಿರುವುದು. ಇದರ ನಿರ್ವಹಣೆಯು ಪಂಚಾಯತಿಗಳಿಗೆ ಹೆಚ್ಚಿನ ಹೊರೆಯಾಗುತ್ತಿದೆ. ಇದನ್ನು ತಪ್ಪಿಸಲು ಅಧಿಕಾರಿಗಳೊಂದಿಗೆ ನಿರಂತರ ಸಭೆ ನಡೆಸಿ, ಒಂದು ಸ್ಪಷ್ಟವಾದ ಯೋಜನೆಯನ್ನು ಜಾರಿಗೆ ತರುವುದಕ್ಕೆ ಇಲಾಖೆ ಕಾರ್ಯಪ್ರವೃತ್ತವಾಗಿದೆ ಎಂದು ತಿಳಿಸಿದ್ದಾರೆ.

ನೀರಿನ ಘಟಕಗಳ ನಿರ್ವಹಣೆಗಾಗಿ ಹಲವಾರು ವೆಂಡರ್ಸ್‌ಗಳನ್ನು ನಾನೇ ಖುದ್ದಾಗಿ ಸಂಪರ್ಕಿಸಿದರು ಸಹ ಯಾರೂ ಒಪ್ಪಿಗೆ ನೀಡುತ್ತಿಲ್ಲ. ಅವರು ತಮ್ಮ ಉತ್ಪನ್ನಗಳನ್ನು ಮಾರಾಟ ಮಾಡಲು ಸಿದ್ಧರಿದ್ದಾರೆ, ಆದರೆ ನಿರ್ವಹಣೆಗೆ ಸಿದ್ಧರಿಲ್ಲ. ಗ್ರಾಮ ಪಂಚಾಯತಿಗಳು ತಮ್ಮ ಅನುದಾನದಲ್ಲಿ ನಿರ್ವಹಿಸುತ್ತಿರುವ ಘಟಕಗಳಲ್ಲಿ ಯಾವುದೇ ಸಮಸ್ಯೆ ಇಲ್ಲ. ಶೀಘ್ರದಲ್ಲಿಯೇ ಇದಕ್ಕೆ ಪರಿಹಾರ ಕಂಡುಕೊಳ್ಳಲು ಸಕಲ ಪ್ರಯತ್ನಗಳನ್ನು ಮಾಡಲಾಗುತ್ತಿದೆ. ನಮ್ಮ ಉದ್ದೇಶ ಗ್ರಾಮೀಣ ಜನರಿಗೆ ಶಾಶ್ವತ ಶುದ್ಧ ನೀರು ಒದಗಿಸುವುದಾಗಿದೆ. ಇದನ್ನು ಪರಿಪೂರ್ಣ ಮಾಡುವುದು ನಮ್ಮ ಸಂಕಲ್ಪವಾಗಿದೆ ಎಂದು ಹೇಳಿದ್ದಾರೆ.

ಪ್ರಶ್ನೆ ಕೇಳುವ ಬಿಜೆಪಿಗರಿಗೆ ಅದಕ್ಕೆ ಉತ್ತರವನ್ನು ಸ್ವೀಕರಿಸುವ ಸಂಯಮವೂ ಅತ್ಯಂತ ಮುಖ್ಯವಾಗಿರುತ್ತದೆ. ನೀರಿನ ಘಟಕಗಳ ನಿರ್ಮಾಣ ಮತ್ತು ನಿರ್ವಹಣೆಗೆ ಶಾಸಕರ ಅನುದಾನವನ್ನು ಬಳಸಬಹುದು. ಅವರು ಕೈಜೋಡಿಸಿದರೆ ನೀರಿನ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದು. ಬಿಜೆಪಿ ಶಾಸಕರು ಪ್ರಶ್ನಿಸುವುದಕ್ಕೆ ಸೀಮಿತವಾಗುವ ಬದಲು, ತಮ್ಮ ಹೊಣೆಗಾರಿಕೆಯನ್ನು ಕೂಡ ಪ್ರದರ್ಶಿಸಲಿ ಎಂದು ಸವಾಲು ಹಾಕಿದ್ದಾರೆ.

Share

Leave a comment

Leave a Reply

Your email address will not be published. Required fields are marked *