SUDDIKSHANA KANNADA NEWS/DAVANAGERE/DATE:13_12_2025
ದಾವಣಗೆರೆ: ಪ್ರಸ್ತುತ ಪಕ್ಷಗಳ ಮುಖಂಡರುಗಳು ಜನರಿಗೆ ಮುಜುಗರ ತರಿಸುವಂತೆ ರಾಜಕೀಯ ಮತ್ತು ರಾಜಕಾರಣಿಗಳ ಕುರಿತ ವೈಯಕ್ತಿಕ ಆರೋಪಗಳನ್ನು ಬದಿಗಿರಿಸಿ, ಅಭಿವೃದ್ಧಿ ಬಗ್ಗೆ ಚರ್ಚೆ ನಡೆಸಿ ಎಂದು ಉಭಯ ಪಕ್ಷಗಳ ಮುಖಂಡರುಗಳಿಗೆ ಉದ್ಯಮಿ ಎನ್. ಬಕ್ಕೇಶ್ ಮನವಿ ಮಾಡಿದ್ದಾರೆ.
ರಾಜಕೀಯ ಪದ ಬಳಕೆಗಳು ಮೌಲ್ಯಾಧಾರಿತವಾಗಿರಬೇಕು. ವೈಯಕ್ತಿಕ ಆರೋಪಗಳು ಜನರಿಗೆ ಅವಶ್ಯಕತೆ ಇಲ್ಲ. ಆದರೆ, ದಾವಣಗೆರೆ ಮಹಾಜನತೆಯು ದಿನಬೆಳಗಾದರೆ ದಿನಪತ್ರಿಕೆ, ಸಾಮಾಜಿಕ ಜಾಲತಾಣಗಳಲ್ಲಿ ಸೂಕ್ಷ್ಮವಾಗಿ ಗಮನಿಸುತ್ತಿದ್ದು, ಇಂದಿನ ರಾಜಕೀಯ ಮತ್ತು ರಾಜಕಾರಣಿಗಳ ಬಗ್ಗೆ ಅಗೌರವ ಭಾವನೆ ಮೂಡಿ ಬರುತ್ತಿದ್ದು ಗೌರವದಿಂದ ನಡೆದುಕೊಳ್ಳುವ ಅವಶ್ಯಕತೆ ಇದೆ ಎಂದು ಪತ್ರಿಕಾ ಹೇಳಿಕೆಯಲ್ಲಿ ಸಲಹೆ ನೀಡಿದ್ದಾರೆ.
ಸಿ.ಡಿ., ಮತಗಳ್ಳತನದಂತಹ ರಾಜಕಾರಣದಲ್ಲಿ ಹಿಂದೆಂದೂ ಕಾಣದಂತಹ ಕೃತ್ಯಗಳು ಇಂದಿನ ರಾಜಕಾರಣದಲ್ಲಿ ನಡೆಯುತ್ತಿದ್ದು, ದೇಶಾದ್ಯಂತ ಹಗರಣಗಳು ರಾರಾಜಿಸುತ್ತಿವೆ. ಜನರಿಗೆ ಅಗತ್ಯವಿರುವ ಜನಸ್ಪಂದನೆ ಮತ್ತು ಅಭಿವೃದ್ಧಿ ಅದರ ಬಗ್ಗೆ ಚರ್ಚೆ ಮಾಡಿ, ಆರೋಪ-ಪ್ರತ್ಯಾರೋಪಗಳು ಇರಲಿ ಆದರೆ, ಆರೋಗ್ಯಕರವಾಗಿರಲಿ ಎಂದು ತಿಳಿಸಿದ್ದಾರೆ.
ರಾಜಕೀಯದಲ್ಲಿ ಇರುವವರಿಗೆ ಮನಮೋಹನ್‌ಸಿಂಗ್, ವಾಜಪೇಯಿ, ಎಸ್. ನಿಜಲಿಂಗಪ್ಪ ಮತ್ತು ದೇವರಾಜ್ ಅರಸ್ ಅವರಂತಹ ಸರಳ ರಾಜಕಾರಣ ಮತ್ತು ವ್ಯಕ್ತಿತ್ವ ಬೆಳೆಸಿಕೊಳ್ಳುವ ಅವಶ್ಯಕತೆ ಇದೆ. ವರದಿಗಾರರ ಕೂಟ ಒಂದು ಮೌಲ್ಯಯುತ ಪ್ರದೇಶವಾಗಿದ್ದು, ಅಲ್ಲಿ ವಿಷಯಾಧಾರಿತ ಮತ್ತು ಮೌಲ್ಯಾಧಾರಿತ ವಿಷಯಗಳನ್ನು ಮಾತ್ರ ಪ್ರಸ್ತಾಪಿಸುವುದರಿಂದ ಜನರಿಗೂ ಹಾಗೂ ಪತ್ರಿಕೆಗಳಿಗೂ, ನಮಗೂ ಗೌರವ ಸಿಕ್ಕಂತಾಗುತ್ತದೆ ಎಂದು ಅಭಿಪ್ರಾಯಿಸಿದ್ದಾರೆ.





Leave a comment