SUDDIKSHANA KANNADA NEWS/ DAVANAGERE/ DATE:15-08-2024
ದಾವಣಗೆರೆ: ಗಣಿ ಮತ್ತು ಭೂ ವಿಜ್ಞಾನ ಇಲಾಖೆಯಿಂದ ಕರ್ನಾಟಕ ಉಪ ಖನಿಜ ರಿಯಾಯಿತಿ ನಿಯಮಗಳನ್ನು ಮತ್ತಷ್ಟು ಸರಳೀಕರಿಸಿ, ರಾಜ್ಯಾದ್ಯಂತ ಸಾರ್ವಜನಿಕರಿಗೆ ಸರಳ ರೀತಿಯಲ್ಲಿ ಉಪ ಖನಿಜಗಳು ಮತ್ತು ಎಂ-ಸ್ಯಾಂಡ್ ದೊರಕುವಂತೆ ಕ್ರಮವಹಿಸಲಾಗಿದೆ ಎಂದು ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಸಚಿವ ಎಸ್. ಎಸ್. ಮಲ್ಲಿಕಾರ್ಜುನ್ ತಿಳಿಸಿದರು.
ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆದ 78ನೇ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು, ಜಿಲ್ಲಾ ಆಸ್ಪತ್ರೆಯೊಂದಿಗೆ ಒಂದು ಮಹಿಳಾ ಮತ್ತು ಮಕ್ಕಳ ಆಸ್ಪತ್ರೆ, ತಾಲ್ಲೂಕು ಮಟ್ಟದಲ್ಲಿ ತಲಾ 100 ಹಾಸಿಗೆಗಳ ಸಾಮರ್ಥ್ಯದ 4 ಸಾರ್ವಜನಿಕ ಆಸ್ಪತ್ರೆಗಳಿದ್ದು, ಅದರಲ್ಲಿ ಹೊನ್ನಾಳಿ ಮತ್ತು ಚನ್ನಗಿರಿ ಸಾರ್ವಜನಿಕ ಆಸ್ಪತ್ರೆಗಳನ್ನು 100 ಹಾಸಿಗೆಗಳಿಂದ 250 ಹಾಸಿಗೆಗಳ ಸಾಮರ್ಥ್ಯದ ಆಸ್ಪತ್ರೆಗಳಾಗಿ ಮೇಲ್ದರ್ಜೆಗೇರಿಸಲಾಗಿದೆ ಎಂದು ಹೇಳಿದರು.
4 ಸಮುದಾಯ ಆರೋಗ್ಯ ಕೇಂದ್ರಗಳು, 80 ಪ್ರಾಥಮಿಕ ಆರೋಗ್ಯ ಕೇಂದ್ರಗಳು, 11 ನಗರ ಆರೋಗ್ಯ ಕೇಂದ್ರಗಳು, 4 ನಮ್ಮ ಕ್ಲಿನಿಕ್ ಮತ್ತು 268 ಉಪಕೇಂದ್ರಗಳು ಹಾಗೂ 150 ಆಯುಷ್ಮಾನ್ ಆರೋಗ್ಯ ಮಂದಿರಗಳು ಕಾರ್ಯನಿರ್ವಹಿಸುತ್ತಿದ್ದು, ಸಾರ್ವಜನಿಕರಿಗೆ ಆರೋಗ್ಯ ಸೌಲಭ್ಯ ನೀಡಲಾಗುತ್ತಿದೆ. ಚಿಗಟೇರಿ ಜಿಲ್ಲಾ ಆಸ್ಪತ್ರೆಯ ದುರಸ್ಥಿ ಮತ್ತು ಮೂಲ ಸೌರ್ಯದ ಅಭಿವೃದ್ಧಿಗೆ ಹಾಗೂ ಹಂತ ಹಂತವಾಗಿ ಹೊಸ ಬ್ಲಾಕ್ಗಳ ನಿರ್ಮಾಣಕ್ಕಾಗಿ ಅನುದಾನ ಬಿಡುಗಡೆಗೆ ಆರೋಗ್ಯ ಸಚಿವರ ಜೊತೆ ಚರ್ಚಿಸಿದ್ದು, ಮುಂದಿನ ದಿನಗಳಲ್ಲಿ ಇದು ಸಾಕಾರವಾಗಲಿದೆ ಎಂದರು.
ಪ್ರಸ್ತುತ ಡೆಂಗ್ಯೂ ಜ್ವರ ಹೆಚ್ಚುತ್ತಿರುವುದರಿಂದ ಜಿಲ್ಲಾ ಮಟ್ಟದಲ್ಲಿ ಡೆಂಗ್ಯೂ ವಾರ್ ರೂಂ ತೆರೆದು ಡೆಂಗ್ಯೂ ಜ್ವರ ಹರಡದಂತೆ ಮುಂಜಾಗೃತೆ ವಹಿಸಲಾಗಿದೆ. ಜಿಲ್ಲೆಯಲ್ಲಿ ಸರ್ಕಾರಿ ಅನುದಾನಿತ, ಅನುದಾನ ರಹಿತ, ವಸತಿ ಶಾಲೆಗಳು, ಕೇಂದ್ರಿಯ ವಿದ್ಯಾಲಯ ಸೇರಿ ಒಟ್ಟು 1498 ಪ್ರಾಥಮಿಕ ಮತ್ತು 517 ಪ್ರೌಢ ಶಾಲೆಗಳು ಸೇರಿ ಒಟ್ಟು 2015 ಶಾಲೆಗಳಿವೆ. ಈ ರ್ಷ ವಿದ್ಯರ್ಥಿಗಳಿಗೆ 27 ಲಕ್ಷಕ್ಕೂ ಅಧಿಕ ಪಠ್ಯ ಪುಸ್ತಕಗಳನ್ನು ವಿತರಿಸಲಾಗಿದೆ. ಮಧ್ಯಾಹ್ನದ ಬಿಸಿಯೂಟ ಯೋಜನೆಯಡಿ ಒಟ್ಟು 1.42 ಲಕ್ಷ ಮಕ್ಕಳಿಗೆ ಅನುಕೂಲ ಕಲ್ಪಿಸಿದೆ ಎಂದು ತಿಳಿಸಿದರು.
ಈ ವರ್ಷ ಸರ್ಕಾರಿ ಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಿರುವ 1 ರಿಂದ 8 ನೇ ತರಗತಿಯ ವಿದ್ಯಾರ್ಥಿಗಳಿಗೆ ಶೂ &ಸಾಕ್ಸ್ ಖರೀದಿಗಾಗಿ ರೂ 2.27 ಕೋಟಿ ಮತ್ತು 9-10ನೇ ತರಗತಿಯ ವಿದ್ಯರ್ಥಿಗಳಿಗೆ ರೂ 51.76 ಲಕ್ಷ ಗಳನ್ನು ಬಿಡುಗಡೆ ಮಾಡಿ ಶಾಲಾ ಹಂತದಲ್ಲಿ ಶೂ-ಸಾಕ್ಸ್ ಖರೀದಿಸಿ ಶಾಲಾ ಮಕ್ಕಳಿಗೆ ವಿತರಿಸಲಾಗಿದೆ. ಪ್ರಸಕ್ತ ಸಾಲಿನ ಜುಲೈ ಅಂತ್ಯದವರೆಗೆ ರೂ. 61 ಕೋಟಿ ಅನುದಾನದಲ್ಲಿ 22 ಕಟ್ಟಡ ಕಾಮಗಾರಿ, ರಾಜ್ಯ ಹೆದ್ದಾರಿ ಸುಧಾರಣಾ ಯೋಜನೆಯಡಿ ರೂ. 86.25 ಕೋಟಿ ಅನುದಾನದಲ್ಲಿ 21 ಕಾಮಗಾರಿ, ಮತ್ತು ಜಿಲ್ಲಾ ಮುಖ್ಯ ರಸ್ತೆ ಸುಧಾರಣಾ ಯೋಜನೆಯಡಿ ರೂ. 187.49 ಕೋಟಿ ಅನುದಾನದಲ್ಲಿ ಒಟ್ಟು 70 ಕಾಮಗಾರಿಗಳನ್ನು ಕೈಗೆತ್ತಿಗೊಳ್ಳಲಾಗಿದೆ. ಇದಲ್ಲದೇ 5.33 ಕೋಟಿ ವೆಚ್ಚದಲ್ಲಿ 4 ಸೇತುವೆ ಮತ್ತು ಜಿಲ್ಲಾ ರಸ್ತೆ ಸೇತುವೆ ಯೋಜನೆಡಿ 14.40 ಕೋಟಿಯಲ್ಲಿ 8 ಸೇತುವೆ ಕಾಮಗಾರಿ ಕೈಗೊಳ್ಳಲಾಗಿದೆ. ರೂ. 25 ಕೋಟಿ ವೆಚ್ಚದಲ್ಲಿ ಕುಂದವಾಡ ಬಳಿ ಹೊಸ ಜಿಲ್ಲಾ ನ್ಯಾಯಾಲಯ ಸಂಕೀರ್ಣ ನಿರ್ಮಾಣ ಕಾಮಗಾರಿ ಪ್ರಗತಿಯಲ್ಲಿರುತ್ತದೆ ಎಂದು ವಿವರಿಸಿದರು.
ಪ್ರಧಾನಮಂತ್ರಿ ಗ್ರಾಮ ಸಡಕ್ ಯೋಜನೆ 3 ರಡಿ ರೂ 125 ಕೋಟಿ ವೆಚ್ಚದಲ್ಲಿ 156.36ಕಿ.ಮೀ ಉದ್ದದ ರಸ್ತೆ ಅಭಿವೃದ್ಧಿ ಪಡಿಸಲಾಗಿದೆ. ಜಿಲ್ಲೆಯಲ್ಲಿನ 22 ವಸತಿ ಶಾಲೆಗಳಲ್ಲಿ 6ನೇ ತರಗತಿಯಿಂದ 10ನೇ ತರಗತಿಯವರೆಗೆ ಇಂಗ್ಲೀಷ್ ಮಾಧ್ಯಮದಲ್ಲಿ ಶಿಕ್ಷಣ ನೀಡುತ್ತಿದ್ದು, ಒಟ್ಟು 5500 ವಿದ್ಯರ್ಥಿಗಳು ವ್ಯಾಸಾಂಗ ಮಾಡುತ್ತಿದ್ದಾರೆ. ಮತ್ತು 2 ವಸತಿಯುತ ಪದವಿ ಪರ್ವ ಕಾಲೇಜುಗಳು ನಡೆಯುತ್ತಿವೆ. ಈ ಬಾರಿ ದಾವಣಗೆರೆ ನಗರಕ್ಕೆ ಹೊಸದಾಗಿ 2 ಕಾಲೇಜು ಹಾಸ್ಟೆಲ್ಗಳು ಮಂಜೂರಾಗಿದೆ.3 ಮೆಟ್ರಿಕ್ ನಂತರದ ಬಾಲಕಿಯರ ಹಾಸ್ಟೆಲ್ ಕಟ್ಟಡ ನಿರ್ಮಾಣಕ್ಕೆ ರೂ.14 ಕೋಟಿಗಳ ಅನುದಾನ ಮಂಜೂರು ಮಾಡಲಾಗಿದೆ. ಪ್ರಥಮ ಸ್ಥಾನದಲ್ಲಿ ಉತ್ತರ್ಣರಾದ 1928 ವಿದ್ಯಾರ್ಥಿಗಳಿಗೆ ರೂ.4.50 ಕೋಟಿ ಪ್ರೋತ್ಸಾಹಧನ, ಅಂತರ್ಜಾತಿ ವಿವಾಹ ಪ್ರೋತ್ಸಾಹಧನ, ಸರಳ ಸಾಮೂಹಿಕ ವಿವಾಹ, ಮಾಜಿ ದೇವದಾಸಿ ಮಕ್ಕಳ ವಿವಾಹ ಪ್ರೋತ್ಸಾಹ ಧನ ಯೋಜನೆಗಳಡಿ ಒಟ್ಟು 240 ದಂಪತಿಗಳಿಗೆ ರೂ.3.53 ಕೋಟಿ ವಿತರಿಸಿದೆ ಎಂದರು.
ವೇದಿಕೆಯಲ್ಲಿ ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್, ಜಿಲ್ಲಾಧಿಕಾರಿ ಡಾ.ಗಂಗಾಧರಸ್ವಾಮಿ,ಎಸ್ಪಿ ಉಮಾಪ್ರಶಾಂತ್, ಮೇಯರ್ ವಿನಾಯಕ್ ಪೈಲ್ವಾನ್, ದೂಡಾ ಅಧ್ಯಕ್ಷ ದಿನೇಶ್ ಕೆ ಶೆಟ್ಟಿ, ಸಿಇಒ ಸುರೇಶ್ ಇಟ್ನಾಳ್ ಮತ್ತಿತರರು ಹಾಜರಿದ್ದರು.