SUDDIKSHANA KANNADA NEWS/ DAVANAGERE/ DATE:14-08-2024
ದಾವಣಗೆರೆ: ನಾನು ಯಾರಿಗೂ ಹೆದರುವುದಿಲ್ಲ, ಹೆದರಬೇಕಾದ ಅವಶ್ಯಕತೆಯೂ ಇಲ್ಲ. ನಾನು ಸ್ವತಂತ್ರ. ಯಾವ ಪಕ್ಷದಲ್ಲಿಯೂ ಇಲ್ಲ. ಕಾಂಗ್ರೆಸ್ ನಿಂದ ಉಚ್ಚಾಟಿಸುವುದಾಗಿ ಜಿಲ್ಲಾಧ್ಯಕ್ಷ ಹೆಚ್. ಬಿ. ಮಂಜಪ್ಪ ಹೇಳಿದ್ದಾರೆ. ನಾನು ರಾಜೀನಾಮೆ ನೀಡುವುದಿಲ್ಲ. ಉಚ್ಚಾಟನೆ ಮಾಡಲಿ. ನಾನು ಯಾರಿಗೋ ಹೆದರಿ ಯಾಕೆ ರಾಜೀನಾಮೆ ನೀಡಬೇಕು ಎಂದು ಸ್ವಾಭಿಮಾನಿ ಬಳಗದ ಪ್ರಮುಖರಾದ ಜಿ. ಬಿ. ವಿನಯ್ ಕುಮಾರ್ ಪ್ರಶ್ನಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಅಹಿಂದ ವರ್ಗಗಳಿಗೆ ಆಗುತ್ತಿರುವ ಅನ್ಯಾಯಗಳ ಬಗ್ಗೆ ಅಹಿಂದ ವರ್ಗಗಳ ಪ್ರತಿನಿಧಿಯಾಗಿ ಧ್ವನಿ ಎತ್ತಿದ್ದೇನೆ. ಶೋಷಿತ ವರ್ಗಗಳ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಪದಚ್ಯುತಿಗೆ ನಡೆಸುತ್ತಿರುವ
ಕುತಂತ್ರಗಳ ಬಗ್ಗೆ ಮಾತನಾಡಿದ್ದೇನೆ. ಇದು ಮಹಾಪರಾಧವೆಂಬಂತೆ ದಾವಣಗೆರೆ ಜಿಲ್ಲಾ ಕಾಂಗ್ರೇಸ್ ಪಕ್ಷದ ಜಿಲ್ಲಾಧ್ಯಕ್ಷರು ಹೇಳಿರುವುದು ಸರಿಯಲ್ಲ ಎಂದು ತಿಳಿಸಿದರು.
ಅಹಿಂದ ವರ್ಗಗಳ ಪರವಾಗಿದ್ದೇವೆ ಎಂದು ಬಿಂಬಿಸಿಕೊಳ್ಳುತ್ತಿರುವ ರಾಷ್ಟ್ರೀಯ ಪಕ್ಷದ ಕಾಂಗ್ರೇಸ್ ಜಿಲ್ಲಾಧ್ಯಕ್ಷರಾಗಿ, ಅದೇ ವರ್ಗಗಳನ್ನು ಪ್ರತಿನಿಧಿಸುತ್ತಿರುವ ನನ್ನ ವಿರುದ್ಧ ಸುದ್ದಿಗೋಷ್ಟಿಯಲ್ಲಿ “ಏಕವಚನ” ಪ್ರಯೋಗಿಸಿರುವುದು ಶೋಷಿತ ವರ್ಗಗಳ ದುರಾದೃಷ್ಟ. ವಿನಯ್ ಕುಮಾರ್ ಜಾತಿ, ಜಾತಿಗಳ ನಡುವೆ ದ್ವೇಷವನ್ನು ಹರಡುತ್ತಿದ್ದಾರೆ ಎಂಬ ಮಾತುಗಳನ್ನಾಡಿರುವ ಜಿಲ್ಲಾಧ್ಯಕ್ಷರು, ಲೋಕಸಭಾ ಚುನಾವಣೆಯ ಎರಡು ದಿನಗಳ ಮುಂಚಿತವಾಗಿ ಪ್ರತ್ಯೇಕವಾಗಿ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿರುವ ಕುರುಬ ಸಮುದಾಯದ ಸಭೆಯನ್ನು ಬಾಪೂಜಿ ಬ್ಯಾಂಕ್ ಸಮುದಾಯ ಭವನದಲ್ಲಿ ಆಯೋಜಿಸಿ, ಈ ನಾಡಿನ ಮುಖ್ಯಮಂತ್ರಿಗಳಿಂದ ‘ಪಕ್ಷೇತರ ಅಭ್ಯರ್ಥಿ ವಿನಯ್ ಕುಮಾರ್ ಒಂದೇ ಒಂದು ಓಟ್” ಹಾಕಬಾರದೆಂದು ಹೇಳಿಸಿದ್ದವರು ಯಾರ? ಎಂದು ಪ್ರಶ್ನಿಸಿದರು.
ಹೊನ್ನಾಳಿಯಲ್ಲಿ ನಡೆದ ಸಭೆಯಲ್ಲಿ “ಒಬ್ಬ ಕುರುಬ ಜಾತಿಯ ವ್ಯಕ್ತಿ” ಸ್ಪರ್ಧೆ ಮಾಡಿದ್ದಾನೆ ಅಂತ ಓಟ್ ಹಾಕ್ತಿರಾ ಎಂದು ಹೇಳಿಸಿದವರು ಯಾರು ? ಕಾಂಗ್ರೇಸ್ ಪಕ್ಷದ ಜಿಲ್ಲಾಧ್ಯಕ್ಷರು ಯಾಕೆ ತಡೆಯಲಿಲ್ಲ ಎಂದು ಪ್ರಶ್ನಿಸಿದರು.
2024ರ ಲೋಕಸಭೆ ಚುನಾವಣೆಯಲ್ಲಿ ನಾನು ಸ್ಪರ್ಧೆ ಮಾಡಿದ್ದಿದ್ದು “ಪಕ್ಷೇತರ’ನಾಗಿ, ನಾನು ಗೆಲ್ಲುವಂತಹ ವಾತಾವರಣವಿದ್ದಾಗ, ನನಗೆ ಟಿಕೆಟ್ ತಪ್ಪಿಸಲು ಹಾಗೂ ನನ್ನ ಮೇಲೆ ಜನರಿಗೆ ತಪ್ಪು ಅಭಿಪ್ರಾಯ ಮೂಡಿಸಲು
ಸ್ವಾಮಿಜೀಗಳು ಮತ್ತು ಮುಖ್ಯಮಂತ್ರಿಗಳನ್ನು ಭೇಟಿ ಮಾಡಿಸುವಂತೆ ಮಾಡಿ, ಯಾವುದೇ ಮಾತುಕತೆಗೂ ಅವಕಾಶ ನೀಡದ ಸನ್ನಿವೇಶವನ್ನು ಸೃಷ್ಟಿಸಿದರು ಎಂದು ಆರೋಪಿಸಿದರು.
ಸ್ವಾಭಿಮಾನಿ ಮತ್ತು ಸ್ವಾವಲಂಭಿ
ಜಿ. ಬಿ. ವಿನಯಕುಮಾರ್ ಯಾರ ಹಂಗಿನಲ್ಲೂ ಇಲ್ಲ ಸ್ವಾಭಿಮಾನಿಯಾಗಿ, ಸ್ವತಂತ್ರವಾಗಿದ್ದೇನೆ. ದಾವಣಗೆರೆ ಜಿಲ್ಲೆಯಲ್ಲಿ ಬಡ, ಮಧ್ಯಮ ವರ್ಗಗಳ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಲು ತರಬೇತಿ ಕೇಂದ್ರಗಳನ್ನು ಪ್ರಾರಂಭಿಸುತ್ತಿದ್ದೇನೆ. ದಾವಣಗೆರೆ ಜಿಲ್ಲೆ ಸೇರಿದಂತೆ ರಾಜ್ಯದಾದ್ಯಂತ “ನಮ್ಮ ನಡೆ ಸರ್ಕಾರಿ ಶಾಲೆಗಳ ಕಡೆಗೆ” “ಸರ್ಕಾರಿ ಶಾಲೆಗಳನ್ನು ಉಳಿಸಿ ಅಭಿಯಾನವನ್ನು ಪ್ರಾರಂಭಿಸುತ್ತಿದ್ದೇನೆ. ರಾಜಕೀಯ ಕ್ಷೇತ್ರದಲ್ಲಿ ನನಗಾದ ಅನ್ಯಾಯ, ಎದುರಿಸಿದ “ಕುತಂತ್ರಗಳು” ಬೇರೆ ಯಾರೂ ಅನುಭವಿಸಬಾರದೆಂಬ ಕಾರಣಕ್ಕೆ ಜಾಗೃತಿ ಮೂಡಿಸುವ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದೇನೆ. ಅಹಿಂದ ವರ್ಗಗಳ ಜಾಗೃತಿಗಾಗಿ ‘ರಾಜ್ಯಮಟ್ಟದ ಅಹಿಂದ ಸಮಾವೇಶವನ್ನು ಆಯೋಜಿಸಲಾಗುತ್ತಿದೆ ಎಂದು ತಿಳಿಸಿದರು.