SUDDIKSHANA KANNADA NEWS/ DAVANAGERE/ DATE:12-08-2024
ದಾವಣಗೆರೆ:ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ದಾವಣಗೆರೆ ಜಿಲ್ಲಾ ಕಚೇರಿಯಲ್ಲಿ ನಡೆದ ಸಭೆಯಲ್ಲಿ ದಾವಣಗೆರೆ ವಿಶ್ವವಿದ್ಯಾನಿಲಯದ ಪರೀಕ್ಷಾರ್ಥಿಗಳಿಗೆ ಪ್ರಶ್ನೆ ಪತ್ರಿಕೆ ಜೊತೆ ಉತ್ತರ ಪತ್ರಿಕೆ ನೀಡಿದ್ದಕ್ಕೆ ಯಾರು ಹೊಣೆ ಎಂದು ಪ್ರಶ್ನಿಸಲಾಯಿತು.
ದಾವಣಗೆರೆ ವಿವಿ ವ್ಯಾಪ್ತಿಯ ಪದವಿ ಕಾಲೇಜುಗಳಲ್ಲಿ ಆಗಸ್ಟ್ 6 ರಂದು ನಿಗದಿಯಾಗಿದ್ದ ಬಿಕಾಂ ಅಂತಿಮ ವರ್ಷದ ಇ-ಕಾಮರ್ಸ್ (ಅಂತಿಮ ವರ್ಷದ ಎಲೆಕ್ಟಿವ್ ಪೇಪರ್) ವಿಷಯದ ಪರೀಕ್ಷೆ ಸಂದರ್ಭ ಪ್ರಶ್ನೆ ಪತ್ರಿಕೆ ಜತೆಗೆ ಉತ್ತರ ಪತ್ರಿಕೆಯನ್ನು ನೀಡಿ ಬಿಕಾಂ ಪರೀಕ್ಷೆ ಬರೆಯುತ್ತಿದ್ದ ವಿದ್ಯಾರ್ಥಿಗಳು ಶಾಕ್ ಆಗಿದ್ದು, ಸದ್ಯಕ್ಕೆ ಪರೀಕ್ಷೆಯನ್ನು ಮುಂದೂಡಲಾಗಿದೆ. ದಾವಣಗೆರೆ ಹಾಗೂ ಚಿತ್ರದುರ್ಗ ಜಿಲ್ಲೆಒಳಗೊಂಡಿರುವ ದಾವಣಗೆರೆ ವಿವಿ ವ್ಯಾಪ್ತಿಯಲ್ಲಿ80ಕ್ಕೂ ಹೆಚ್ಚು ಪದವಿ ಕಾಲೇಜುಗಳಿದ್ದು, ಈ ಪೈಕಿ ಮಂಗಳವಾರ 15 ಪರೀಕ್ಷಾ ಕೇಂದ್ರಗಳಲ್ಲಿ ಉತ್ತರವಿದ್ದ ಪ್ರಶ್ನೆ ಪತ್ರಿಕೆ ನೀಡಲಾಗಿತ್ತು ಎಂದು ತಿಳಿದು ಬಂದಿದೆ. ಇದರಿಂದ ವಿದ್ಯಾರ್ಥಿಗಳಿಗೆ ತೊಂದರೆ ಆಗಿದ್ದು, ಯಾರು ಹೊಣೆ ಹೊರುತ್ತಾರೆ. ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹಿಸಲಾಯಿತು.
ವಿದ್ಯಾರ್ಥಿಗಳಿಗೆ ಆಗಿರುವ ತೊಂದರೆಗೆ ಪರಿಹಾರವೇನು.? ಪರೀಕ್ಷೆ ಮುಂದೂಡಲಾಗಿದೆ, ಈ ಅಚಾತುರ್ಯಕ್ಕೆ ಕಾರಣವಾದವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಸಭೆಯಲ್ಲಿ ಒತ್ತಾಯಿಸಲಾಯಿತು.
ಎಸ್ ಡಿ ಪಿ ಐ ಜಿಲ್ಲಾಧ್ಯಕ್ಷ ಅಪ್ಸರ್ ಕೊಡ್ಲಿಪೇಟೆ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಹಲವು ವಿಚಾರಗಳ ಕುರಿತಂತೆ ಸಮಾಲೋಚನೆ ನಡೆಸಲಾಯಿತು. ಸಭೆಯಲ್ಲಿ ಆಂತರಿಕ ಪ್ರಜಾಪ್ರಭುತ್ವದ ಭಾಗವಾಗಿ ಪ್ರತಿ ಮೂರು ವರ್ಷಕೊಮ್ಮೆ ನಡೆಯುವ ಪಕ್ಷದ ಆಂತರಿಕ ಚುನಾವಣೆ ಹಾಗೂ ಪಕ್ಷ ಸಂಘಟನೆಯ ಬಗ್ಗೆ ಚರ್ಚೆ ನಡೆಸಲಾಯಿತು ಸಭೆಯಲ್ಲಿ ದಾವಣಗೆರೆ, ಬೆಳಗಾವಿ, ವಿಜಯನಗರ, ಹುಬ್ಬಳ್ಳಿ, ಗದಗ ಮತ್ತು ಹಾವೇರಿ ಜಿಲ್ಲೆಯ ನಾಯಕರು ಉಪಸ್ಥಿತರಿದ್ದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಅಪ್ಸರ್ ಕೊಡ್ಲಿಪೇಟೆ ಚುನಾವಣಾ ಆಯೋಗದ ನಿಯಮದಂತೆ, ಯಾವುದೇ ರಾಜಕೀಯ ಪಕ್ಷಗಳು ತನ್ನ ಪದಾಧಿಕಾರಿಗಳನ್ನು ಆಯ್ಕೆ ಮಾಡುವಾಗ, ಆಂತರಿಕ ಪ್ರಜಾಪ್ರಭುತ್ವ ಕಾಪಾಡಿಕೊಂಡು, ಚುನಾವಣೆಗಳ
ಮೂಲಕ ತನ್ನ ಪದಾಧಿಕಾರಿಗಳನ್ನು ಆಯ್ಕೆ ಮಾಡತಕ್ಕದ್ದು. ಆದರೆ ಬಹುತೇಕ ರಾಜಕೀಯ ಪಕ್ಷಗಳು, ಆಂತರಿಕ ಪ್ರಜಾಪ್ರಭುತ್ವವನ್ನೇ ಅನುಸರಿಸುತ್ತಿಲ್ಲ ಎಂಬುದು ವಾಸ್ತವ. ಎಲ್ಲಾ ಪಕ್ಷಗಳಿಗಿಂತಲೂ ಭಿನ್ನವಾಗಿ ನಮ್ಮ ಸೋಶಿಯಲ್ ಡೆಮಾಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾ, ಕಳೆದ15 ವರ್ಷಗಳಿಂದಲೂ, ಬೂತ್ ಮಟ್ಟದಿಂದ ರಾಷ್ಟ್ರೀಯ ಮಟ್ಟದವರೆಗೆ, ಪ್ರತಿ ಮೂರು ವರ್ಷಗಳಿಗೊಮ್ಮೆ ತನ್ನ ಪದಾಧಿಕಾರಿಗಳನ್ನು ಆಂತರಿಕ ಚುನಾವಣೆಯ ಮೂಲಕ ಆಯ್ಕೆ ಮಾಡುತ್ತಿದೆ ಎಂದು ತಿಳಿಸಿದರು.
ಮುಂದಿನ ಮೂರು ವರ್ಷಕ್ಕೆ 2024-27 ಸಾಲಿನ ಪಕ್ಷದ ಆಂತರಿಕ ಚುನಾವಣೆ ಜುಲೈ 15 ರಂದು ಪ್ರಾರಂಭವಾಗಿದ್ದು, ಸ್ಥಳೀಯ ಬೂತ್ ಮಟ್ಟದಿಂದ, ರಾಷ್ಟ್ರೀಯ ಮಟ್ಟದವರೆಗೆ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡುವ ಪ್ರಕ್ರಿಯೆಯನ್ನು ಕಾರ್ಯಕರ್ತರು ಮತ್ತು ನಾಯಕರು ಬಹಳ ಉತ್ಸಾಹದಿಂದ ನಡೆಸುತ್ತಿದ್ದಾರೆ ಪಕ್ಷದ ಕಾರ್ಯಕರ್ತರು ಚುನಾಯಿಸುವ ಪದಾಧಿಕಾರಿಗಳು ಪಕ್ಷದ ನೇತೃತ್ವ ವಹಿಸುತ್ತಾರೆ. ಈ ಬಗ್ಗೆ ನಮಗೆ ಹೆಮ್ಮೆ ಇದೆ ಎಂದು ಅಭಿಪ್ರಾಯಪಟ್ಟರು.