SUDDIKSHANA KANNADA NEWS/DAVANAGERE/DATE:21_11_2025
ದಾವಣಗೆರೆ: ಐಎಎಸ್, ಐಪಿಎಸ್ ಸೇರಿದಂತೆ ದೇಶದ ಅತ್ಯುನ್ನತ ಹುದ್ದೆಗಳು ಕೇವಲ ಉಳ್ಳವರ ಕೈಯಲ್ಲಿದೆ. ಬಡವರು, ಹಿಂದುಳಿದವರು, ಶೋಷಿತರಿಗೆ ಜಾಗೃತಿ ಮತ್ತು ಮಾಹಿತಿ ಇಲ್ಲದಂತೆ ಮಾಡಿ ಅಂಧಕಾರದಲ್ಲಿಡುವ ಕೆಲಸ ಮಾಡಲಾಗುತ್ತದೆ. ಇದರಿಂದಾಗಿ ದೇಶದಲ್ಲಿ ಅಸಮಾನತೆ ಇನ್ನೂ ಆಳವಾಗಿ ಉಳಿಯುವಂತೆ ಮಾಡಲಾಗಿದೆ ಎಂದು ಇನ್ ಸೈಟ್ಸ್ ಸಂಸ್ಥೆ ಸಂಸ್ಥಾಪಕ ನಿರ್ದೇಶಕ ಜಿ. ಬಿ. ವಿನಯ್ ಕುಮಾರ್ ಬೇಸರ ವ್ಯಕ್ತಪಡಿಸಿದರು.

ದಾವಣಗೆರೆ ತಾಲೂಕಿನ ಹೂವಿನಮಡು ಶ್ರೀ ವಾಲ್ಮೀಕಿ ಮಹರ್ಷಿ ವಿದ್ಯಾಸಂಸ್ಥೆ ಮತ್ತು ಶ್ರೀ ಮಾರುತಿ ಪ್ರೌಢಶಾಲೆ ಸಂಯುಕ್ತಾಶ್ರಯದಲ್ಲಿ ಆಂಜನೇಯ ನಗರದಲ್ಲಿ ಏರ್ಪಡಿಸಿದ್ದ ಪ್ರತಿಭಾ ಕಾರಂಜಿ ಮತ್ತು ಕಲೋತ್ಸವ 2025- 26ರ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದ ಅವರು, ರಾಜಕಾರಣಿಗಳು, ಅಧಿಕಾರಿಗಳು ಸೇರಿದಂತೆ ದೊಡ್ಡವರೆಲ್ಲರೂ ಸೇರಿಕೊಂಡು ಬಡವರು, ಹಿಂದುಳಿದವರು, ಶೋಷಿತರಿಗೆ ಅವಕಾಶ ಸಿಗದಂತೆ ಮಾಡುತ್ತಿರುವುದು ದುರ್ದೈವದ ಸಂಗತಿ ಎಂದು ತಿಳಿಸಿದರು.
ದಾವಣಗೆರೆ ಲೋಕಸಭಾ ಕ್ಷೇತ್ರದಲ್ಲಿ ಸ್ಪರ್ಧೆ ಮಾಡಿದಾಗಿನಿಂದ ಸುಮಾರು 25 ಜಿಲ್ಲೆಗಳಲ್ಲಿ ಪ್ರವಾಸ ಮಾಡಿದ್ದೇನೆ. ತಾಲೂಕು, ಜಿಲ್ಲಾ ಕೇಂದ್ರಗಳಿಗೂ ಹೋಗಿದ್ದೇನೆ. ಆದರೆ ಎಲ್ಲಾ ಕಡೆಗಳಲ್ಲಿ ಗ್ರಾಮೀಣ ಪ್ರದೇಶದ ಮಕ್ಕಳಿಗೆ ಸೂಕ್ತ ಸೌಲಭ್ಯ, ಅವಕಾಶ ಮತ್ತು ಸಹಕಾರ, ಬೆಂಬಲ ದೊರೆಯದೇ ಉನ್ನತ ಹುದ್ದೆಗಳಿಗೆ ಹೋಗಲು ಸಾಧ್ಯವಾಗುತ್ತಿಲ್ಲ ಎಂಬುದು ತಿಳಿದು ಬಂತು. ಮುಂದಿನ ದಿನಗಳಲ್ಲಿ ನೀವೂ ಐಎಎಸ್, ಐಪಿಎಸ್ ಆಗುವಂತಾಗಬೇಕು ಎಂಬುದು ನನ್ನ ಆಸೆ ಎಂದು ಹೇಳಿದರು.
ಸರಿಯಾದ ಮಾಹಿತಿ, ಸೂಕ್ತ ಅವಕಾಶ ಸಿಕ್ಕರೆ ಪ್ರತಿಯೊಬ್ಬ ಮಕ್ಕಳೂ ಐಎಎಸ್, ಐಪಿಎಸ್ ಆಗುವ ಸಾಮರ್ಥ್ಯ ಹೊಂದಿದ್ದಾರೆ. ಅವಕಾಶ, ವೇದಿಕೆ, ಬೆಂಬಲ ಮತ್ತು ಸಹಕಾರ ದೊರೆಯುವುದರ ಮೇಲೆ ಹಳ್ಳಿ ಮಕ್ಕಳ ಭವಿಷ್ಯ ನಿಂತಿದೆ. ದಾವಣಗೆರೆ ಜಿಲ್ಲೆಯೊಂದರಲ್ಲಿಯೇ ಐದಾರು ಲಕ್ಷ ಮಕ್ಕಳಿದ್ದಾರೆ. 15ರಿಂದ 20 ಸಾವಿರ ಶಿಕ್ಷಕರಿದ್ದಾರೆ. ಸಾವಿರಾರು ವೈದ್ಯರಿದ್ದಾರೆ. ಆದರೆ ದಾವಣಗೆರೆ ಜಿಲ್ಲೆಯಲ್ಲಿರುವುದು ಕೇವಲ ಮೂವರು ಐಎಎಸ್ ಅಧಿಕಾರಿಗಳು ಮಾತ್ರ. ಪ್ರತಿಯೊಂದನ್ನೂ ನೋಡಿಕೊಳ್ಳುವ ಗುರುತರ ಜವಾಬ್ದಾರಿ ಜಿಲ್ಲಾಧಿಕಾರಿಯವರ ಮೇಲಿರುತ್ತದೆ. ಜಿಲ್ಲೆಯ ಕಾನೂನು ಮತ್ತು ಸುವ್ಯವಸ್ಥೆ, ಆರೋಗ್ಯ, ಶಿಕ್ಷಣ, ರೈತರು ಸೇರಿದಂತೆ ಎಲ್ಲಾ ವರ್ಗದವರಿಗೂ ಸೌಲಭ್ಯ ಕಲ್ಪಿಸುವ ಕುರಿತಂತೆ ಮೇಲುಸ್ತುವಾರಿ ನೋಡಿಕೊಳ್ಳುತ್ತಾರೆ. ಜಿಲ್ಲೆಯ ಸುಪ್ರೀಂ ಸಹ ಡಿಸಿಯೇ ಆಗಿರುತ್ತಾರೆ ಎಂದು ಹೇಳಿದರು.
ಮಕ್ಕಳು ಮಹತ್ವಾಕಾಂಕ್ಷಿಗಳಾಗಿರಬೇಕು. ಎಲ್ಲರೂ ಕನಸು ಕಾಣುತ್ತಾರೆ. ಆದರೆ ಕೆಲವರು ಶಿಕ್ಷಕರು, ವೈದ್ಯರು, ಎಂಜಿನಿಯರ್ ಸೇರಿದಂತೆ ತಾನು ಓದಿದ್ದಕ್ಕೆ ಕೆಲಸ ಸಿಕ್ಕರೆ ಸಾಕು ಎಂದು ತೃಪ್ತಿಪಟ್ಟುಕೊಂಡು ಸುಮ್ಮನಾಗಿಬಿಡುತ್ತಾರೆ. ಸಾಮರ್ಥ್ಯವಿದ್ದರೂ ಮುಂದಡಿ ಇಡುವುದಿಲ್ಲ. ಲಕ್ಷಾಂತರ ಬಡವರಿಗೆ ಸಹಾಯ ಮಾಡುತ್ತೇನೆಂಬ ಆಸೆ ಹೊಂದಿದ್ದರೂ ಈಡೇರಬೇಕಾದರೆ ಸಾಮರ್ಥ್ಯ ಮತ್ತು ಪ್ರತಿಭೆಯನ್ನು ನೀವೇ ಜಾಸ್ತಿ ಮಾಡಿಕೊಳ್ಳಬೇಕು ಎಂದು ಹೇಳಿದರು.
ಪ್ರತಿದಿನ ಒಂದು ಅಥವಾ ಎರಡು ಪತ್ರಿಕೆಗಳನ್ನು ಓದುತ್ತೇನೆಂಬ ನಿರ್ಧಾರ ಮಾಡಿ. ದೇಶ ಮತ್ತು ದೇಶದ ಆಚೆ ನಡೆಯುವ ಘಟನೆಗಳ ವಿಶ್ಲೇಷಣೆ ಮಾಡುವುದನ್ನು ರೂಢಿಸಿಕೊಳ್ಳಬೇಕು ಎಂದು ಜಿ. ಬಿ. ವಿನಯ್ ಕುಮಾರ್ ತಿಳಿಸಿದರು.
ಶಾಲೆಯ ಮುಖ್ಯೋಪಾಧ್ಯಾಯ ಶ್ರೀನಿವಾಸ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಶ್ಯಾಗಲೆಯ ಕುವೆಂಪು ಶಾಲೆಯ ಸಿದ್ದಣ್ಣ, ನಾಗರಸನಹಳ್ಳಿಯ ಮುಖ್ಯೋಪಾಧ್ಯಾಯರಾದ ಮೊಹಮ್ಮದ್ ಗೌಸ್, ಅನುದಾನಿತ ಶಾಲೆಯ ಅಧ್ಯಕ್ಷ ರಾಜಪ್ಪ, ಸಹ ಶಿಕ್ಷಕಿ ಅಂಬುಜಾ, ಸಹ ಶಿಕ್ಷಕ
ಗೋಪಾಲಯ್ಯ, ಶಾಲೆಯ ಶಿಕ್ಷಕ ವೃಂದದವರು ಹಾಗೂ ಶಾಲೆಯ ಎಸ್ ಡಿಎಂಸಿ ಅಧ್ಯಕ್ಷರು, ಸದಸ್ಯರು ಉಪಸ್ಥಿತರಿದ್ದರು.




Leave a comment