SUDDIKSHANA KANNADA NEWS/ DAVANAGERE/ DATE:13-03-2024
ದಾವಣಗೆರೆ: ದಾವಣಗೆರೆ ಲೋಕಸಭಾ ಕ್ಷೇತ್ರದ ಟಿಕೆಟ್ ಘೋಷಣೆ ವಿಚಾರದಲ್ಲಿ ಬಿಜೆಪಿ ಹೈಕಮಾಂಡ್ ಐತಿಹಾಸಿಕ ನಿರ್ಣಯ ಕೈಗೊಂಡಿದೆ. ಇದು ನಿಜಕ್ಕೂ ಯಾರಿಗೂ ಗೊತ್ತಿಲ್ಲದ ವಿಚಾರ. ತಿಳಿದುಕೊಳ್ಳಬೇಕಾದರೆ ಈ ಸ್ಟೋರಿ
ಓದಲೇಬೇಕು.
ಚಿತ್ರದುರ್ಗ ದಾವಣಗೆರೆ ಲೋಕಸಭಾ ಕ್ಷೇತ್ರ ಇದ್ದಾಗಿನಿಂದ ಹಿಡಿದು 2019ರವರೆಗೆ ಮಹಿಳೆಗೆ ಟಿಕೆಟ್ ಘೋಷಣೆ ಮಾಡಿರಲಿಲ್ಲ. ಇದೇ ಮೊದಲ ಬಾರಿಗೆ ಮಹಿಳೆಯೊಬ್ಬರಿಗೆ ಟಿಕೆಟ್ ಘೋಷಣೆ ಮಾಡುವ ಐತಿಹಾಸಿಕ ನಿರ್ಣಯ ತೆಗೆದುಕೊಂಡಿದೆ. ಈ ಮೂಲಕ ಲೋಕಸಭೆಯಲ್ಲಿ ಮಹಿಳೆಯರಿಗೆ ಹೆಚ್ಚಿನ ರಾಜಕೀಯ ಶಕ್ತಿ ಕೊಡಬೇಕೆಂಬ ವಿಚಾರದಲ್ಲಿ ಮುಂದಡಿ ಇಟ್ಟಿದೆ.
ಹಾಲಿ ಸಂಸದ ಡಾ. ಜಿ. ಎಂ. ಸಿದ್ದೇಶ್ವರರ ವಿರುದ್ಧ ಭಾರೀ ಅಸಮಾಧಾನ, ಮಾಜಿ ಸಚಿವ ಎಂ. ಪಿ. ರೇಣುಕಾಚಾರ್ಯ ಅಂಡ್ ಟೀಂನ ಭಿನ್ನಮತದ ಭುಗಿಲು, ಅಸಮಾಧಾನ ಸೇರಿದಂತೆ ಎಲ್ಲವೂ ಹೈಕಮಾಂಡ್ ಗೆ ತಲೆಬಿಸಿ ಬಂದಿತ್ತು. ಮಾತ್ರವಲ್ಲ,
ಸಿದ್ದೇಶ್ವರರಿಗೆ ಟಿಕೆಟ್ ನೀಡದೇ ಹೊಸ ಮುಖಕ್ಕೆ ನೀಡಬೇಕೆಂಬ ಪಟ್ಟು ಹಿಡಿದಿತ್ತು. ಬಿಜೆಪಿ ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಪ್ರಭಾವ ಹೊಂದಿದ್ದ ಸಿದ್ದೇಶ್ವರ ಅವರು ಕೊನೆಗೂ ತನ್ನ ಪತ್ನಿ ಗಾಯತ್ರಿ ಸಿದ್ದೇಶ್ವರ ಅವರಿಗೆ ಟಿಕೆಟ್ ಕೊಡಿಸುವಲ್ಲಿ
ಯಶಸ್ವಿಯಾಗಿದ್ದಾರೆ.
ರೇಣುಕಾಚಾರ್ಯ ಮತ್ತು ತಂಡದವರು ನಡೆಸಿದ ಎಲ್ಲವೂ ನೀರಿನಲ್ಲಿ ಹೋಮ ಮಾಡಿದಂತಾಗಿದೆ. ಗಾಯತ್ರಿ ಸಿದ್ದೇಶ್ವರ ಅವರಿಗೆ ಟಿಕೆಟ್ ನೀಡುವ ಮೂಲಕ ಭಿನ್ನಮತೀಯರ ತಣಿಸುವ ಕೆಲಸಕ್ಕೆ ಹೈಕಮಾಂಡ್ ಮುಂದಾಗಿದ್ದರೂ, ಸಿದ್ದೇಶ್ವರ
ಅವರ ಕೈ ಮೇಲಾಗಿದೆ. ಕ್ಷೇತ್ರದ ಕಾರ್ಯಕರ್ತರು, ಮುಖಂಡರು, ಸರ್ವೆ, ಕಾರ್ಯಕರ್ತರೊಂದಿಗೆ ಒಡನಾಟ, ಮಾಡಿರುವ ಅಭಿವೃದ್ಧಿ ಕಾರ್ಯ, ಜನರು ಮತದಾರರ ಅಭಿಪ್ರಾಯ ಸೇರಿದಂತೆ ಎಲ್ಲಾ ವಿಚಾರಗಳನ್ನು ಅಳೆದು ತೂಗಿ ಟಿಕೆಟ್
ಘೋಷಣೆ ಮಾಡಲಾಗಿದೆ. ಜಿ. ಎಂ. ಸಿದ್ದೇಶ್ವರರ ಸಹೋದರ ಜಿ. ಎಂ. ಲಿಂಗರಾಜ್ ಅವರಿಗೆ ಟಿಕೆಟ್ ನೀಡಲಾಗುತ್ತದೆ ಎಂದು ಕೆಲ ಮಾಧ್ಯಮಗಳು ವರದಿ ಮಾಡಿದ್ದವು. ಫೋಟೋ ಶೂಟ್ ಮಾಡಿಸಿದ್ದು ಚರ್ಚೆಗೆ ಗ್ರಾಸವಾಗಿತ್ತು. ಆದ್ರೆ, ಈಗ ಎಲ್ಲವೂ
ಉಲ್ಟಾ ಪಲ್ಟಾ ಆಗಿದೆ.
ಆದ್ರೆ, ಚಿತ್ರದುರ್ಗ ಜಿಲ್ಲೆಯಿಂದ ದಾವಣಗೆರೆಯು ಪ್ರತ್ಯೇಕ ಜಿಲ್ಲೆಯಾದಾಗಿನಿಂದ ಮಹಿಳೆಯರಿಗೆ ಟಿಕೆಟ್ ನೀಡಿರಲಿಲ್ಲ. ಇಲ್ಲಿ ಮಲ್ಲಿಕಾರ್ಜುನಪ್ಪ ಅವರಿಗೆ ಮೂರು ಬಾರಿ, ಸಂಸದ ಜಿ. ಎಂ. ಸಿದ್ದೇಶ್ವರರಿಗೆ ನಾಲ್ಕು ಬಾರಿ ಬಿಜೆಪಿ ಟಿಕೆಟ್ ನೀಡಿತ್ತು. ಒಟ್ಟು
ಏಳು ಬಾರಿ ಈ ಮನೆತನಕ್ಕೆ ಟಿಕೆಟ್ ಕೊಟ್ಟಿತ್ತು. ಈ ಬಾರಿ ಗಾಯತ್ರಿ ಸಿದ್ದೇಶ್ವರ ಅವರಿಗೆ ಟಿಕೆಟ್ ನೀಡುವ ಮೂಲಕ ಎಂಟನೇ ಬಾರಿಯೂ ಅವರ ಮನೆತನಕ್ಕೆ ಟಿಕೆಟ್ ಸಿಕ್ಕಂತಾಗಿದೆ.
ಚಿತ್ರದುರ್ಗ – ದಾವಣಗೆರೆ ಲೋಕಸಭಾ ಕ್ಷೇತ್ರ ಹಾಗೂ ಪ್ರತ್ಯೇಕಗೊಂಡ ಬಳಿಕ ಜಿಲ್ಲೆಯಾದ ದಾವಣಗೆರೆ ಲೋಕಸಭಾ ಕ್ಷೇತ್ರ ಸೇರಿ 12 ಬಾರಿ ಚುನಾವಣೆ ನಡೆದಿದ್ದು ಆರು ಬಾರಿ ಕಾಂಗ್ರೆಸ್ ಹಾಗೂ ಆರು ಬಾರಿ ಬಿಜೆಪಿ ಗೆಲುವಿನ ನಗೆ ಬೀರಿದೆ. ಈ ಬಾರಿ ಗೆಲುವು ಯಾರ ಮುಡಿಗೆ ಎಂಬುದು ಕುತೂಹಲ ಗರಿಗೆದರುವಂತೆ ಮಾಡಿದೆ.
ಚಿತ್ರದುರ್ಗ – ದಾವಣಗೆರೆ ಲೋಕಸಭೆ ಕ್ಷೇತ್ರ 1977ರಲ್ಲಿ ಉದಯವಾಗಿದ್ದು, ಅಲ್ಲಿಂದ ಇಲ್ಲಿಯವರೆಗೆ ಒಟ್ಟು 12 ಬಾರಿ ಚುನಾವಣೆ ನಡೆದಿದ್ದು ಅದರಲ್ಲಿ 6 ಬಾರಿ ಕಾಂಗ್ರೆಸ್ ಹಾಗೂ 6 ಬಾರಿ ಬಿಜೆಪಿ ಜಯಗಳಿಸಿದ್ದು, 7ನೇ ಗೆಲುವು ಯಾರದು??? ಎಂಬುದಕ್ಕೆ 2024ರ ಚುನಾವಣೆ ಸಾಕ್ಷಿಯಾಗಲಿದೆ.
1977 ಪ್ರಥಮ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಿದ್ದ ಲಿಂಗಾಯತ ಸಮುದಾಯದ ಕೊಂಡಜ್ಜಿ ಬಸಪ್ಪನವರು ಜಯಗಳಿಸುವ ಮೂಲಕ ದಾವಣಗೆರೆ ಲೋಕಸಭೆಯ ಮೊದಲ ಸಂಸದರಾದರು, 1980 ರಲ್ಲಿ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಿದ್ದ ಲಿಂಗಾಯತ ಸಮುದಾಯದ ಟಿ.ವಿ ಚಂದ್ರಶೇಖರಪ್ಪನವರು ಕೊಂಡಜ್ಜಿ ಬಸಪ್ಪನವರನ್ನು ಸೋಲಿಸುವ ಮೂಲಕ ಜಯಗಳಿಸಿದರು. 1984,1989 ಹಾಗೂ1991 ರಲ್ಲಿ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಿದ್ದ ಕುರುಬ ಸಮುದಾಯದ ಚೆನ್ನಯ್ಯ ಒಡೆಯರ್ ಅವರು ಗೆಲುವು ಸಾಧಿಸಿದರು, 1991 ರ ಚುನಾವಣೆಯಲ್ಲಿ ಚೆನ್ನಯ್ಯ ಒಡೆಯರ್ ರವರು ಸುಮಾರು 500 ಮತಗಳ ಅಂತರದಿಂದ ಎಸ್.ಎ. ರವೀಂದ್ರನಾಥ್ ವಿರುದ್ಧ ಮರು ಎಣಿಕೆಯಲ್ಲಿ ಜಯಗಳಿಸಿದ್ದು, ಈ ಫಲಿತಾಂಶ ಜಿದ್ದಾಜಿದ್ದಿನ ಪೈಪೋಟಿಗೆ ಕಾರಣವಾಗಿತ್ತು.
1996ರಲ್ಲಿ ಪ್ರಥಮ ಬಾರಿಗೆ ಬಿಜೆಪಿಯಿಂದ ಲಿಂಗಾಯತ ಸಮುದಾಯದ ಜಿ. ಮಲ್ಲಿಕಾರ್ಜುನಪ್ಪನವರು ಗೆಲುವು ಸಾಧಿಸಿದರೇ, ಆ ಚುನಾವಣೆಯಲ್ಲಿ ಜನತಾದಳದ ಎಸ್.ಹೆಚ್ ಪಟೇಲ್ ಎರಡನೇ ಸ್ಥಾನ ಹಾಗೂ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಿದ್ದ ಚೆನ್ನಯ್ಯ ಒಡೆಯರ್ ಮೂರನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಳ್ಳಬೇಕಾಗಿತ್ತು.
1998ರಲ್ಲಿ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಿದ್ದ ಲಿಂಗಾಯತ ಸಮುದಾಯದ ಶಾಮನೂರು ಶಿವಶಂಕರಪ್ಪನವರು, ಜಿ. ಮಲ್ಲಿಕಾರ್ಜುನಪ್ಪ ನವರ ವಿರುದ್ಧ ಜಯಗಳಿಸಿದರೇ, 1999 ರಲ್ಲಿ ಬಿಜೆಪಿಯಿಂದ ಸ್ಪರ್ಧಿಸಿದ್ದ ಲಿಂಗಾಯತ ಸಮುದಾಯದ ಜಿ. ಮಲ್ಲಿಕಾರ್ಜುನಪ್ಪ ನವರು ಎರಡನೇ ಬಾರಿ ಜಯಗಳಿಸಿದರು.
2004 ರಲ್ಲಿ ಬಿಜೆಪಿಯಿಂದ ಸ್ಪರ್ಧಿಸಿದ್ದ ಲಿಂಗಾಯತ ಸಮುದಾಯದ ಜಿ.ಎಂ ಸಿದ್ದೇಶ್ವರ ರವರು ಸುಮಾರು 33 ಸಾವಿರ ಮತಗಳ ಅಂತರದಿಂದ ಎಸ್.ಎಸ್ ಮಲ್ಲಿಕಾರ್ಜುನ್ ವಿರುದ್ಧ ಜಯಗಳಿಸಿದರೆ, ಜಾತ್ಯಾತೀತ ಜನತಾದಳದಿಂದ ಸ್ಪರ್ಧಿಸಿದ್ದ ಚೆನ್ನಯ್ಯ ಒಡೆಯರ್ ಮೂರನೇ ಸ್ಥಾನ ಪಡೆದರು.
ತೀವ್ರ ಕುತೂಹಲ ಕೆರಳಿಸಿದ್ದ 2009 ರ ಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧಿಸಿದ್ದ ಲಿಂಗಾಯತ ಸಮುದಾಯದ ಜಿ.ಎಂ ಸಿದ್ದೇಶ್ವರ ಕಾಂಗ್ರೆಸ್ ಪಕ್ಷದ ಎಸ್.ಎಸ್ ಮಲ್ಲಿಕಾರ್ಜುನ್ ವಿರುದ್ಧ 2024 ಮತಗಳ ಅಂತರದಿಂದ ಜಯಗಳಿಸಿದರೇ, ಸ್ಪರ್ಧಾ ಕಣದಿಂದ ಹಿಂದೆ ಸರಿದಿದ್ದ ಜೆಡಿಎಸ್ ಅಭ್ಯರ್ಥಿ ಕಲ್ಲೇರುದ್ರೇಶ್ ಸುಮಾರು 10000 ಮತಗಳು ಪಡೆದಿದ್ದು ಬಿಜೆಪಿ ಗೆಲುವಿಗೆ ಕಾರಣವಾಯಿತು ಎನ್ನಲಾಗಿತ್ತು.
2014 ರಲ್ಲಿ ಬಿಜೆಪಿಯಿಂದ ಸ್ಪರ್ಧಿಸಿದ್ದ ಲಿಂಗಾಯತ ಸಮುದಾಯದ ಜಿ.ಎಂ ಸಿದ್ದೇಶ್ವರ ರವರು ಕಾಂಗ್ರೆಸ್ ಪಕ್ಷದ ಎಸ್.ಎಸ್ ಮಲ್ಲಿಕಾರ್ಜುನ್ ವಿರುದ್ಧ ಸುಮಾರು 17000 ಮತಗಳಿಂದ ಜಯಗಳಿಸಿದರೇ, 2019 ರಲ್ಲಿ ನಾಲ್ಕನೇ ಬಾರಿ ಬಿಜೆಪಿಯಿಂದ ಸ್ಪರ್ಧಿಸಿದ್ದ ಲಿಂಗಾಯತ ಸಮುದಾಯದ ಜಿ.ಎಂ ಸಿದ್ದೇಶ್ವರ ರವರು ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಿದ್ದ ಕುರುಬ ಸಮುದಾಯದ ಎಚ್. ಬಿ ಮಂಜಪ್ಪನವರ ವಿರುದ್ಧ ಸುಮಾರು 1.60.000 ಮತಗಳ ಅಂತರದಿಂದ ಜಯಗಳಿಸಿದರು.
ದಾವಣಗೆರೆ ಲೋಕಸಭಾ ಕ್ಷೇತ್ರದ 12 ಚುನಾವಣೆಯ ಪೈಕಿ ಪಕ್ಷವಾರು 6 ಬಾರಿ ಕಾಂಗ್ರೆಸ್ ಹಾಗೂ 6 ಬಾರಿ ಬಿಜೆಪಿ ಜಯಗಳಿಸಿದರೇ, ಜಾತಿವಾರು 9 ಬಾರಿ ಲಿಂಗಾಯತ ಹಾಗೂ 3 ಬಾರಿ ಕುರುಬ ಸಮುದಾಯದ ನಾಯಕರು ಕ್ಷೇತ್ರವನ್ನು ಪ್ರತಿನಿಧಿಸಿರುವುದು ಕಂಡುಬರುತ್ತದೆ.