SUDDIKSHANA KANNADA NEWS/ DAVANAGERE/ DATE:29-02-2024
ದಾವಣಗೆರೆ: ಕಳೆದ ಜನವರಿ 6ರ ಭದ್ರಾ ನೀರಾವರಿ ಸಲಹಾ ಸಮಿತಿ ಸಭೆಯ ತೀರ್ಮಾನದಂತೆ ಭದ್ರಾ ಬಲದಂಡೆಯಲ್ಲಿ ಮೂರನೇ ಹಂತದಲ್ಲಿ ಫೆ. 16ರಿಂದ 28ರವರೆಗೆ 13 ದಿನ ನೀರು ಹರಿಸಲು ತೀರ್ಮಾನ ತೆಗೆದುಕೊಂಡದ್ದು ಸರಿಯಷ್ಟೇ. ಆದರೆ ಹರಿಹರ ತಾಲ್ಲೂಕಿನ ಹಾಗೂ ದಾವಣಗೆರೆ ತಾಲ್ಲೂಕಿನ ಕೊನೆಯ ಭಾಗದ ರೈತರಿಗೆ ಇಲ್ಲಿಯವರೆಗೂ ನೀರು ತಲುಪಿಲ್ಲ. ಹಾಗಾಗಿ ಇನ್ನೂ ಮೂರು ದಿನ ನೀರು ಹರಿಸುವಂತೆ ಸಂಸದ ಡಾ. ಜಿ. ಎಂ. ಸಿದ್ದೇಶ್ವರ ಒತ್ತಾಯಿಸಿದ್ದಾರೆ.
ಹರಿಹರ ಹಾಗೂ ದಾವಣಗೆರೆ ಕೊನೆಭಾಗದ ತೋಟಗಳ ನಿರ್ವಹಣೆ ರೈತರಿಗೆ ಕಷ್ಟವಾಗುತ್ತಿದೆ. ಶಾಂತಿಸಾಗರ ಕೆರೆಯೂ ಕೂಡ ಖಾಲಿಯಾಗುತ್ತಿರುವುದರಿಂದ ಸಾಕಷ್ಟು ರೈತರಿಗೆ ಅನಾನೂಕೂಲವಾಗುತ್ತಿದೆ.
ಈ ಹಿನ್ನಲೆಯಲ್ಲಿ ಈ ಹಂತದಲ್ಲಿ ಇನ್ನೂ ಹೆಚ್ಚುರಿಯಾಗಿ ಮಾರ್ಚ್ 3ರವರೆಗೂ 3 ದಿವಸ ನಾಲೆಯಲ್ಲಿ ನೀರು ಹರಿಸಿ ಶಾಂತಿಸಾಗರ ಕೆರೆಗೂ ಸಹ ನಾಲೆಯಿಂದ ನೀರು ಹರಿಸಲು ತುರ್ತು ಕ್ರಮಕೈಗೊಳ್ಳುವ ಮೂಲಕ ರೈತರ ಹಿತ ಕಾಯುವಂತೆ ಅವರು ಜಿಲ್ಲಾಧಿಕಾರಿಗಳು ಹಾಗೂ ಭದ್ರಾ ಯೋಜನಾ ವೃತ್ತದ ಮುಖ್ಯ ಎಂಜಿನಿಯರ್ ಅವರಿಗೆ ಮನವಿ ಮಾಡಿದ್ದಾರೆ.