SUDDIKSHANA KANNADA NEWS/ DAVANAGERE/ DATE:16-02-2024
ಬೆಂಗಳೂರು: ಎಲ್ಲಾ ವಸತಿರಹಿತರಿಗೆ ಸೂರು ಒದಗಿಸುವ ಧ್ಯೇಯ ನಮ್ಮ ಸರ್ಕಾರದ್ದಾಗಿದೆ. ನಮ್ಮ ಹಿಂದಿನ ಅವಧಿಯಲ್ಲಿ 14.54 ಲಕ್ಷ ಮನೆಗಳನ್ನು ನಿರ್ಮಿಸಲಾಗಿತ್ತು. 2019 ರಿಂದ 2023ರ ಬಿಜೆಪಿ ಸರ್ಕಾರದ ಅವಧಿಯಲ್ಲಿ ನಿರ್ಮಿಸಲಾದ ಮನೆಗಳ ಸಂಖ್ಯೆ ಕೇವಲ 5.19 ಲಕ್ಷ. ಬಾಕಿ ಉಳಿದಿರುವ 12 ಲಕ್ಷ ಮನೆಗಳ ನಿರ್ಮಾಣದ ಹೊಣೆಗಾರಿಕೆ ನಮ್ಮ ಸರ್ಕಾರದ ಮುಂದಿದ್ದು, 2023-2024ನೇ ಸಾಲಿನಲ್ಲಿ 3 ಲಕ್ಷ ಮನೆಗಳ ನಿರ್ಮಾಣ ಪೂರ್ಣಗೊಳಿಸಲಾಗುತ್ತಿದೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದರು.
2024-25ರಲ್ಲಿ 3 ಲಕ್ಷ ಮನೆಗಳ ನಿರ್ಮಾಣದ ಗುರಿ ಹೊಂದಲಾಗಿದೆ. ಇದಲ್ಲದೇ, ರಾಜ್ಯದಲ್ಲಿ ವಸತಿರಹಿತರ ಸಂಖ್ಯೆಯನ್ನು ಗುರುತಿಸಲು ಒಂದು ಸಮೀಕ್ಷೆಯನ್ನು ನಡೆಸಲಾಗುವುದು.
ಕೊಳಗೇರಿ ಅಭಿವೃದ್ಧಿ ಮಂಡಳಿಯ ವ್ಯಾಪ್ತಿಯಲ್ಲಿ ಪ್ರಧಾನ ಮಂತ್ರಿ ಆವಾಸ್ ಯೋಜನೆ (ಎ.ಎಚ್.ಪಿ.) ಅಡಿ 1,18,359 ಮನೆಗಳನ್ನು ನಿರ್ಮಿಸಲಾಗುತ್ತಿದೆ. ಬಹುತೇಕ ಫಲಾನುಭವಿಗಳು ಬಡ ಕುಟುಂಬದವರಾಗಿದ್ದು,
ತಮ್ಮ ಪಾಲಿನ ವಂತಿಗೆಯಾದ ಐದು ಲಕ್ಷ ರೂ.ಗಳನ್ನು ಪಾವತಿಸಲು ಸಾಧ್ಯವಾಗದೇ ಯೋಜನೆಯು ಮಂದಗತಿಯಲ್ಲಿ ಸಾಗುತ್ತಿತ್ತು. ಇದನ್ನು ಮನಗಂಡು ನಮ್ಮ ಸರ್ಕಾರವು ಫಲಾನುಭವಿಗಳು ಪಾವತಿಸಬೇಕಾದ
ವಂತಿಗೆಯನ್ನು ಒಂದು ಲಕ್ಷ ರೂ.ಗಳಿಗೆ ಸೀಮಿತಗೊಳಿಸಿ ಹೆಚ್ಚುವರಿ ನಾಲ್ಕು ಲಕ್ಷ ರೂ.ವರೆಗಿನ ಫಲಾನುಭವಿ ವಂತಿಗೆಯನ್ನು ಭರಿಸಲು ತೀರ್ಮಾನಿಸಿದೆ. ಅದರಂತೆ ಶೀಘ್ರದಲ್ಲಿಯೇ 48,796 ಮನೆಗಳನ್ನು ಪೂರ್ಣಗೊಳಿಸಿ
ಕೊಳಗೇರಿ ನಿವಾಸಿಗಳಿಗೆ ಹಸ್ತಾಂತರಿಸಲಾಗುವುದು.
ನಗರ ಪ್ರದೇಶದ ಬಡ ನಿವಾಸಿಗಳಿಗೆ ಕೈಗೆಟಕುವ ದರದಲ್ಲಿ ವಸತಿ ಸೌಲಭ್ಯ ಒದಗಿಸಲು ಸಂಪನ್ಮೂಲ ಕ್ರೋಢೀಕರಣಕ್ಕಾಗಿ ವಸತಿ ಇಲಾಖೆಯು ಹಲವು ಸುಧಾರಣಾ ಕ್ರಮಗಳನ್ನು ಕೈಗೊಳ್ಳಲಿದೆ;
Asset Monetisation, ವಸತಿ ಸೆಸ್ ಮತ್ತು ವಿವಿಧ ಶಾಸನ ಬದ್ಧ ಶುಲ್ಕಗಳನ್ನು ವಿಧಿಸುವ ಮೂಲಕ ಸಂಪನ್ಮೂಲ ಕ್ರೊಢೀಕರಿಸಿ Karnataka Affordable Housing Fund ಅನ್ನು (KAHF) ಸ್ಥಾಪಿಸಲಾಗುವುದು.
ಕರ್ನಾಟಕ ನಗರ ಮತ್ತು ಗ್ರಾಮಾಂತರ ಯೋಜನೆ ಕಾಯ್ದೆಯಡಿ ಕೊಳೆಗೇರಿ ಸೆಸ್ ದರ ಪರಿಷ್ಕರಣೆ ಮಾಡುವುದು. ಕರ್ನಾಟಕ ಕೊಳೆಗೇರಿ ಅಭಿವೃದ್ಧಿ ಮಂಡಳಿಯ ಸ್ಥಿರ ಆಸ್ತಿಗಳಿಂದ ಸಂಪನ್ಮೂಲ ಸೃಜಿಸಲಾಗುವುದು.
ಕರ್ನಾಟಕ ರಿಯಲ್ ಎಸ್ಟೇಟ್ ನಿಯಂತ್ರಣ ಪ್ರಾಧಿಕಾರವು ರಿಯಲ್ ಎಸ್ಟೇಟ್ ವಲಯದಲ್ಲಿ ಪಾರದರ್ಶಕತೆ, ವಿಶ್ವಾಸಾರ್ಹತೆ ಹಾಗೂ ದಕ್ಷತೆಯನ್ನು ಹೆಚ್ಚಿಸಲು ಹಾಗೂ ಮನೆ ಖರೀದಿದಾರರ ಹಿತರಕ್ಷಣೆಗಾಗಿ
ಕಾರ್ಯನಿರ್ವಹಿಸುತ್ತಿದೆ. 2023-24 ನೇ ಸಾಲಿನಲ್ಲಿ ಡೆವಲಪರ್‌ಗಳಿಗೆ 40 ಕೋಟಿ ರೂ. ದಂಡ ವಿಧಿಸಲಾಗಿರುತ್ತದೆ. ಮುಂದಿನ ದಿನಗಳಲ್ಲಿ ದಕ್ಷ ಹಾಗೂ ಪರಿಣಾಮಕಾರಿ ಕಾರ್ಯನಿರ್ವಹಣೆಯ ಮೂಲಕ ಜನರ ಹಿತರಕ್ಷಣೆಗೆ ಆದ್ಯತೆ ನೀಡಲಾಗುವುದು.
ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳು
ಹಸಿವು ಮುಕ್ತ ಕರ್ನಾಟಕ ನಿರ್ಮಾಣದ ಕನಸಿನೊಂದಿಗೆ ನಮ್ಮ ಸರ್ಕಾರದ ಹಿಂದಿನ ಅವಧಿಯಲ್ಲಿ ಉಚಿತ ಅಕ್ಕಿ ವಿತರಿಸುವ ಅನ್ನಭಾಗ್ಯ ಯೋಜನೆ ಜಾರಿಗೆ ತರಲಾಗಿತ್ತು. ಈ ಬಾರಿ ನಾವು ನೀಡಿದ್ದ ಭರವಸೆಯಂತೆ
ಹೆಚ್ಚುವರಿಯಾಗಿ ಐದು ಕೆ.ಜಿ. ಆಹಾರ ಧಾನ್ಯ ನೀಡಲು ತೀರ್ಮಾನಿಸಲಾಗಿದೆ. ಆದರೆ ಕೇಂದ್ರ ಸರ್ಕಾರದ ಅಸಹಕಾರ ಧೋರಣೆಯಿಂದಾಗಿ ಅಕ್ಕಿ ಲಭ್ಯವಾಗದ ಕಾರಣ, ನಮ್ಮ ಸರ್ಕಾರವು ಪ್ರತಿ ಫಲಾನುಭವಿಗೆ ಪ್ರತಿ
ಕೆ.ಜಿ. ಅಕ್ಕಿಗೆ ೩೪ ರೂ.ನಂತೆ ಪ್ರತಿ ಮಾಹೆ 170 ರೂ. ನೇರ ನಗದು ವರ್ಗಾವಣೆ ಮಾಡುವ ಮೂಲಕ ನಮ್ಮ ಬದ್ಧತೆಯನ್ನು ಪ್ರದರ್ಶಿಸಿದ್ದೇವೆ. ಜನವರಿ 2024ರ ಅಂತ್ಯದವರೆಗೆ 4.02 ಕೋಟಿ ಫಲಾನುಭವಿಗಳಿಗೆ 4,595
ಕೋಟಿ ರೂ. ವರ್ಗಾವಣೆ ಮಾಡಲಾಗಿದೆ.
204. ಡಾ|| ಮನ್ಮೋಹನ್ ಸಿಂಗ್ ಅವರ ನೇತೃತ್ವದ ಯುಪಿಎ ಸರ್ಕಾರದ ಅವಧಿಯಲ್ಲಿ ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆಯನ್ನು 2013 ರಲ್ಲಿ ಜಾರಿಗೆ ತರಲಾಯಿತು. ಪಡಿತರ ಹಾಗೂ ಆಹಾರ ಧಾನ್ಯ ವಿತರಣಾ
ವ್ಯವಸ್ಥೆಯನ್ನು ತಳಹಂತದಲ್ಲಿ ಬಲಪಡಿಸುವ ಮೂಲಕ ಜಾಗೃತಿ ಸಮಿತಿಗಳಲ್ಲಿ ಜನರ ಸಹಭಾಗಿತ್ವವನ್ನು ಹೆಚ್ಚಿಸಲಾಗುವುದು. ಇದರಿಂದ ಆಹಾರ ಭದ್ರತಾ ಕಾಯ್ದೆಯ ಪರಿಣಾಮಕಾರಿ ಅನುಷ್ಠಾನ, ಹಾಗೂ
ಹಸಿವು ಮುಕ್ತ ಕರ್ನಾಟಕದ ನಮ್ಮ ಆಶಯವನ್ನು ಈಡೇರಿಸಲು ನೆರವಾಗಲಿದೆ.
205. ಅನ್ನ–ಸುವಿಧಾ ಎಂಬ ಹೊಸ ಯೋಜನೆಯಡಿಯಲ್ಲಿ ಹೋಮ್ ಡೆಲಿವೆರಿ ಆಪ್ ಮೂಲಕ 80 ವರ್ಷ ದಾಟಿದ ಹಿರಿಯ ನಾಗರಿಕರು ಮಾತ್ರ ಇರುವ ಮನೆಯ ಬಾಗಿಲಿಗೆ ಆಹಾರ ಧಾನ್ಯಗಳನ್ನು ತಲುಪಿಸುವ
ಸಾಮಾಜಿಕ ಭದ್ರತಾ ವ್ಯವಸ್ಥೆಯನ್ನು ಜಾರಿಗೆ ತರಲಾಗುವುದು ಎಂದು ಸಿಎಂ ತಿಳಿಸಿದರು.