SUDDIKSHANA KANNADA NEWS/ DAVANAGERE/ DATE:09-02-2024
ಚಿತ್ರದುರ್ಗ: ದೇಶ ವಿಭಜನೆ ಬಗ್ಗೆ ಮಾತನಾಡುವ ಡಿ. ಕೆ. ಸುರೇಶ್ ಹಾಗೂ ಶಾಸಕ ವಿನಯ್ ಕುಲಕರ್ಣಿ ಅವರಂಥವರನ್ನು ಗುಂಡಿಕ್ಕಿ ಕೊಲ್ಲುವ ಕಾನೂನು ಜಾರಿಗೊಳಿಸಬೇಕು ಎಂಬ ಮಾಜಿ ಡಿಸಿಎಂ ಕೆ. ಎಸ್. ಈಶ್ವರಪ್ಪರ ಹೇಳಿಕೆಗೆ ಆಕ್ರೋಶ ವ್ಯಕ್ತಪಡಿಸಿರುವ ಸಿಎಂ ಸಿದ್ದರಾಮಯ್ಯ, ಇಂಥವರಿಂದ ಪಾಠ ಕಲಿಯುವುದು ಏನೂ ಇಲ್ಲ ಎಂದು ಛಾಡಿಸಿದರು.
ಚಿತ್ರದುರ್ಗ ಜಿಲ್ಲೆಯ ಹೊಸದುರ್ಗದ ಭಗೀರಥ ಗುರುಪೀಠದ ಕಾರ್ಯಕ್ರಮದಲ್ಲಿ ಪಾಲ್ಗೋಳ್ಳುವ ಮೊದಲು ಹೆಲಿಪ್ಯಾಡ್ ನಲ್ಲಿ ಮಾಧ್ಯಮದವರ ಜೊತೆ ಮಾತನಾಡಿದ ಅವರು, ಆರ್ ಎಸ್ ಎಸ್ ನಲ್ಲಿ ತರಬೇತಿ ಪಡೆದಿರುವ ಕೆ. ಎಸ್. ಈಶ್ವರಪ್ಪ ಅವರು ಹೊಡಿ, ಬಡಿ, ಕೊಲ್ಲು ಎಂದು ಹೇಳಿಕೆ ನೀಡುತ್ತಾರೆ. ಈಶ್ವರಪ್ಪರ ಹೇಳಿಕೆ ಪರಿಶೀಲಿಸಿ ಸೂಕ್ತ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ದೇಶ ವಿಭಜಿಸುವವರಿಗೆ ಗುಂಡಿಕ್ಕಿ ಕೊಲ್ಲುವ ಕಾನೂನು ರೂಪಿಸಬೇಕು ಎಂಬ ಕೆ. ಎಸ್. ಈಶ್ವರಪ್ಪ ಹೇಳಿಕೆಗೆ ಟಾಂಗ್ ನೀಡಿದ ಅವರು, ಈಶ್ವರಪ್ಪ ಹೇಳಿಕೆ ನೋಡಿದರೆ ಆರ್ ಎಸ್ ಎಸ್ ಎಂತಹ ಪಾಠ ಕಲಿಸುತ್ತದೆ ಎಂದು ತಿಳಿಯುತ್ತಿದೆ. ಸಂಸದ
ಡಿ. ಕೆ. ಸುರೇಶ್ ಅವರನ್ನು ಗುಂಡಿಕ್ಕಿ ಕೊಲ್ಲಿ ಅಂತಿದ್ದಾರೆ. ಒಂದು ರಾಜಕೀಯ ಪಕ್ಷದ ಮುಖಂಡರಾಗಿ ಈ ರೀತಿ ಹೇಳಿಕೆಗಳನ್ನು ನೀಡುತ್ತಾರೆ. ಇವರನ್ನು ರಾಜಕೀಯ ಧುರೀಣಿರು ಎಂದು ಕರೆಯಬೇಕಾ ಎಂದು ಪ್ರಶ್ನಿಸಿದರು.
ಅಧಿಕಾರಿಗಳು ಲಂಚ ಕೇಳುತ್ತಿದ್ದಾರೆ ಎಂಬ ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಆರೋಪ ಮಾಡುವ ಬದಲು ನಾಗಮೋಹನ್ ದಾಸ್ ಸಮಿತಿಗೆ ದೂರು ನೀಡಲಿ. ಯಾವ ಅಧಿಕಾರಿಗಳು ಲಂಚ ಕೇಳುತ್ತಿದ್ದಾರೆ ಎಂದು ಸಮಿತಿಗೆ ತಿಳಿಸಲಿ
ಎಂದು ಹೇಳಿದರು.
ಕೇಂದ್ರ ಸರ್ಕಾರ ಭದ್ರಾ ಮೇಲ್ದಂಡೆ ಯೋಜನೆಗೆ ಸಚಿವೆ ನಿರ್ಮಾಲ ಸಿತಾರಾಮನ್ 5300ಕೋಟೆ ಬಜೆಟ್ ನಲ್ಲಿ ಘೋಷಿಸಿದ್ದರು. ಆದರೆ ಇದೂವರೆಗೆ ಭದ್ರಾ ಯೋಜನೆಗೆ ಒಂದು ನಯಾಪೈಸೆ ಕೊಟ್ಟಿಲ್ಲ. ಯಾಕೆ ಎಂಬುದನ್ನು ರಾಜ್ಯದ ಸಂಸದರು ಕೇಳಬೇಕಲ್ಲವೇ? ಎಂದು ಪ್ರಶ್ನಿಸಿದ ಅವರು, ನಾನು ಸೇರಿದಂತೆ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಕೂಡ ನಿರ್ಮಾಲ ಸಿತಾರಾಮನ್ ಹಾಗೂ ಜಲಸಂಪನ್ಮೂಲ ಸಚಿವರನ್ನು ಭೇಟಿ ಮಾಡಿ ಮನವಿ ಮಾಡಿದ್ದರೂ ಕೂಡ ಹಣ ನೀಡಿಲ್ಲ ಎಂದು ದೂರಿದರು.
ನರೇಂದ್ರ ಮೋದಿ ಗುಜರಾತ್ ಮುಖ್ಯಮಂತ್ರಿ ಆಗಿದ್ದಾಗ ಒಂದು ವರ್ಷ ಟ್ಯಾಕ್ಸ್ ಬೇಡ ಎಂದಿದ್ದರು. ನರೇಂದ್ರ ಮೋದಿ ಆಗ ಹೇಳಿದ್ದು ದೇಶ ವಿರೋಧಿ ಹೇಳಿಕೆಯೇ ಎಂದು ಪ್ರಶ್ನಿಸಿ, ಮಿಸ್ಟರ್ ಮೋದಿ ಅವರಿಂದ ಆಗ ಒಂದು ಮಾತು, ಈಗ ಒಂದು ಮಾತು ಎಂದು ಲೇವಡಿ ಮಾಡಿದರು.
ಈ ವೇಳೆ ಸಚಿವ ಕೆ.ಹೆಚ್.ಮುನಿಯಪ್ಪ, ಡಿ.ಸುಧಾಕರ್, ಶಾಸಕ ಬಿ.ಜಿ.ಗೋವಿಂದಪ್ಪ, ಮಾಜಿ ಸಂಸದ ಬಿ.ಎನ್.ಚಂದ್ರಪ್ಪ, ಹೆಚ್.ಆಂಜನೇಯ ಹಾಜರಿದ್ದರು.