SUDDIKSHANA KANNADA NEWS/ DAVANAGERE/ DATE_05-07_2025
ದಾವಣಗೆರೆ: ಕೇಂದ್ರದ ಮಾಜಿ ಸಚಿವ ಹಾಗೂ ಮಾಜಿ ಸಂಸದ ಡಾ. ಜಿ.ಎಂ. ಸಿದ್ದೇಶ್ವರ ಅವರ 74ನೇ ಜನುಮದಿನದ ಸಮಾರಂಭವನ್ನು ಜುಲೈ 8ರಂದು ನಗರದ ಅಭಿನವ ರೇಣುಕಾ ಮಂದಿರದಲ್ಲಿ ಆಯೋಜಿಸಲಾಗಿದೆ ಎಂದು ಬಿಜೆಪಿ ಮಾಜಿ ಜಿಲ್ಲಾಧ್ಯಕ್ಷ ಯಶವಂತರಾವ್ ಜಾಧವ್ ತಿಳಿಸಿದರು.
ಈ ಸುದ್ದಿಯನ್ನೂ ಓದಿ: ಭೂ ಸುರಕ್ಷಾ ಯೋಜನೆಯಡಿ ಡಿಜಿಟಲೀಕರಣ, ಕಂದಾಯ ದಾಖಲೆಗಳು ಸಾರ್ವಜನಿಕರಿಗೆ ಆನ್‍ಲೈನ್‍ನಲ್ಲಿ ಲಭ್ಯ
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಡಾ. ಜಿ. ಎಂ. ಸಿದ್ದೇಶ್ವರ ಅಭಿಮಾನಿ ಬಳಗದ ವತಿಯಿಂದ ಈ ಸಮಾರಂಭ ಏರ್ಪಡಿಸಲಾಗಿದೆ. ಅಂದು ಬೆಳಿಗ್ಗೆ 10. 30ಕ್ಕೆ ನಡೆಯುವ ಈ ಕಾರ್ಯಕ್ರಮದಲ್ಲಿ ಕೇಂದ್ರದ ರೈಲ್ವೆ ಖಾತೆ ರಾಜ್ಯ ಸಚಿವ ವಿ. ಸೋಮಣ್ಣ, ಸಂಸದ ಗೋವಿಂದ ಕಾರಜೋಳ, ಮಾಜಿ ಸಚಿವರಾದ ಶ್ರೀರಾಮುಲು, ಅರವಿಂದ್ ಲಿಂಬಾವಳಿ, ಸುನಿಲ್ ಕುಮಾರ್, ವಿಧಾನ ಪರಿಷತ್ ಸದಸ್ಯ ಎನ್. ರವಿಕುಮಾರ್, ಮಾಜಿ ಸಂಸದ ಪ್ರತಾಪ್ ಸಿಂಹ, ಕುಮಾರ ಬಂಗಾರಪ್ಪ, ಬಿಜೆಪಿ ಮುಖಂಡರಾದ ಗಾಯಿತ್ರಿ ಸಿದ್ದೇಶ್ವರ, ಮಾಜಿ ಶಾಸಕರಾದ ಎಸ್. ವಿ. ರಾಮಚಂದ್ರಪ್ಪ, ಹೆಚ್. ಎಸ್. ಶಿವಶಂಕರ್, ಹೆಚ್. ಪಿ. ರಾಜೇಶ್ ಪಾಲ್ಗೊಳ್ಳಲಿದ್ದಾರೆ ಎಂದು ಮಾಹಿತಿ ನೀಡಿದರು.
2004ರಿಂದಲೂ ಸಿದ್ದೇಶ್ವರ ಅಭಿಮಾನಿ ಬಳಗವು ಜನುಮದಿನ ಆಚರಿಸಿಕೊಂಡು ಬರುತ್ತಿದೆ. ಪ್ರತಿ ವರ್ಷದಂತೆ ಈ ವರ್ಷವೂ ಐವರು ಅಂಧ ಮಕ್ಕಳಿಂದ ಕೇಕ್ ಕಟ್ ಮಾಡಿಸಲಾಗುತ್ತದೆ. ಎಸ್. ಎಸ್. ಎಲ್. ಸಿ. ಪರೀಕ್ಷೆಯಲ್ಲಿ ಅತಿ
ಹೆಚ್ಚು ಅಂಕ ಪಡೆದ ಜಿಲ್ಲೆಯ ಐವರು ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಪ್ರದಾನ ಸಮಾರಂಭ ಮತ್ತು ಅಂಧ ಮಕ್ಕಳಿಗೆ ಊಟದ ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿಸಿದರು.
ಸಿದ್ದೇಶ್ವರ ಅವರ ಜನುಮದಿನಕ್ಕೆ ಈ ಹಿಂದೆ ಬಂದವರು ಬರುವುದಿಲ್ಲ. ಬಸನಗೌಡ ಪಾಟೀಲ್ ಯತ್ನಾಳ್ ಈ ಹಿಂದೆ ಬಂದಿದ್ದರು. ಸಿದ್ದೇಶ್ವರ ಅವರ ಎಲ್ಲಾ ಅಭಿಮಾನಿಗಳಿಗೂ ಆಹ್ವಾನ ಇದೆ. ಜಿಲ್ಲೆಯಲ್ಲಿ ಕೆಲವರಿಗೆ ಆಹ್ವಾನ ನೀಡಲಾಗಿಲ್ಲ ಎಂದೇನಿಲ್ಲ. ಅಭಿಮಾನಿಗಳು ಬಂದೇ ಬರುತ್ತಾರೆ. ಬರುವವರಿಗೆ ಸ್ವಾಗತ. ಪ್ರೀತಿಯಿಂದ ಬರುವವರಿಗೆ ನಾವು ಬೇಡ ಎನ್ನುವುದಿಲ್ಲ. ಪ್ರತಿ ವಿಧಾನಸಭಾ ಕ್ಷೇತ್ರದಿಂದಲೂ ಅಭಿಮಾನಿಗಳು ಬರುತ್ತಾರೆ. ಕಾರ್ಯಕ್ರಮದಲ್ಲಿ ಸಾವಿರಾರು ಮಂದಿ ಪಾಲ್ಗೊಳ್ಳಲಿದ್ದಾರೆ ಎಂದು ಹೇಳಿದರು.
ಗೋಷ್ಠಿಯಲ್ಲಿ ಬಿಜೆಪಿ ಮಾಜಿ ಜಿಲ್ಲಾಧ್ಯಕ್ಷ ವೀರೇಶ್ ಹನಗವಾಡಿ, ದೂಡಾ ಮಾಜಿ ಅಧ್ಯಕ್ಷರಾದ ಎ. ವೈ. ಪ್ರಕಾಶ್, ರಾಜನಹಳ್ಳಿ ಶಿವಕುಮಾರ್, ಬಿ. ಎಸ್. ಜಗದೀಶ್, ಕಿಶೋರ್ ಕುಮಾರ್, ಟಿಂಕರ್ ಮಂಜಣ್ಣ, ಯರ್ರಿಸ್ವಾಮಿ, ವೀರಣ್ಣ, ರಾಜು ನೀಲಗುಂದ ಮತ್ತಿತರರು ಹಾಜರಿದ್ದರು.