SUDDIKSHANA KANNADA NEWS/ DAVANAGERE/ DATE:12-01-2025
ದಾವಣಗೆರೆ: ಈ ವರ್ಷದಲ್ಲೇ ದಾವಣಗೆರೆಯಲ್ಲಿ 3 ನೇ ವಿಶ್ವ ಕನ್ನಡ ಸಮ್ಮೇಳನವನ್ನು ಆಯೋಜಿಸಬೇಕು ಹಾಗೂ ಕರ್ನಾಟಕ ಸರಕಾರವು ಸಮ್ಮೇಳನದ ಕೂಡಲೇ ದಿನಾಂಕ ಘೋಷಿಸಬೇಕು ಎಂಬುದೂ ಸೇರಿದಂತೆ ಎಂಟು ನಿರ್ಣಯಗಳನ್ನು ಜಗಳೂರು ಪಟ್ಟಣದ ಬಯಲು ರಂಗಮಂದಿರದ ಕವಿ ಮಹಾಲಿಂಗರಂಗ ವೇದಿಕೆಯಲ್ಲಿ ನಡೆದ ಎರಡು ದಿನಗಳ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಅಂಗೀಕರಿಸಲಾಗಿದೆ.
14ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸಮ್ಮೇಳನಾಧ್ಯಕ್ಷ ಎ. ಬಿ.ರಾಮಚಂದ್ರಪ್ಪರ ಅಧ್ಯಕ್ಷತೆಯಲ್ಲಿ ನಡೆದ ಸಮ್ಮೇಳನದಲ್ಲಿ ನಿರ್ಣಯಗಳಿಗೆ ಒಪ್ಪಿಗೆ ಸೂಚಿಸಲಾಯಿತು. ಭೌಗೋಳಿಕವಾಗಿ ಕರ್ನಾಟಕ ರಾಜ್ಯದ ಮಧ್ಯ ಭಾಗದಲ್ಲಿರುವ ದಾವಣಗೆರೆ ನಗರವನ್ನು ಕರ್ನಾಟಕ ರಾಜ್ಯದ ಎರಡನೇ ರಾಜಧಾನಿಯನ್ನಾಗಿ ಮಾಡಬೇಕು.
ಕನ್ನಡ ಮಾಧ್ಯಮದಲ್ಲಿ ವಿದ್ಯಾರ್ಜನೆ ಮಾಡಿರುವ ವಿದ್ಯಾರ್ಥಿಗಳಿಗೆ ವೃತ್ತಿ ಶಿಕ್ಷಣ ಮತ್ತು ಸರಕಾರಿ ಉದ್ಯೋಗದಲ್ಲಿ ನೀಡುತ್ತಿರುವ ಶೇಕಡಾ 5 ಮೀಸಲಾತಿಯನ್ನು ಶೇಕಡಾ 15ಕ್ಕೆ ಏರಿಸುವ ಮೂಲಕ ಕನ್ನಡ ಭಾಷೆಯನ್ನು ಅನ್ನದ ಭಾಷೆಯನ್ನಾಗಿಸಲು ಸೂಕ್ತ ಕ್ರಮ ಕೈಗೊಳ್ಳಬೇಕು. ದಾವಣಗೆರೆ ಜಿಲ್ಲೆಯಲ್ಲಿ ಕೃಷಿ ಉತ್ಪನ್ನ ಆಧಾರಿತ ಹಾಗೂ ಉದ್ಯೋಗ ಸೃಷ್ಟಿಸುವ ಕೈಗಾರಿಕೆಗಳ ಸ್ಥಾಪನೆ ಹೆಚ್ಚೆಚ್ಚು ಆಗಬೇಕು. ಜಗಳೂರು ತಾಲೂಕಿನ ಎಲ್ಲ ಪ್ರವಾಸೋದ್ಯಮ ಸ್ಥಳಗಳನ್ನು ಅಭಿವೃದ್ಧಿಪಡಿಸಿ ಹೆಚ್ಚೆಚ್ಚು ಪ್ರವಾಸಿಗರು ಭೇಟಿ ನೀಡಲು ಅನುಕೂಲವಾಗುವಂತೆ ಉತ್ತಮ ಗುಣಮಟ್ಟದ ಸಾರಿಗೆ, ರಸ್ತೆ, ವಸತಿ ಮೊದಲಾದ ಮೂಲಸೌಕರ್ಯ ಸೌಲಭ್ಯವನ್ನು ಒದಗಿಸಬೇಕು ಎಂದು ನಿರ್ಣಯ ತೆಗೆದುಕೊಳ್ಳಲಾಗಿದೆ.
ಜಗಳೂರು ಸೀಮೆಯಲ್ಲಿ ವಾಸಿಸುತ್ತಿರುವ ಏಷ್ಯಾ ಖಂಡದಲ್ಲೇ ಅಪರೂಪವಾದ ಕೊಂಡುಕುರಿಯ ಸಂರಕ್ಷಣೆಗೆ ಸರಕಾರ ಇನ್ನಷ್ಟು ಅಗತ್ಯ ಕ್ರಮಗಳನ್ನು ಜಾರಿಗೊಳಿಸಬೇಕು ಹಾಗೂ ಈ ಭಾಗದಲ್ಲಿ ನಡೆಯುವ ಎಲ್ಲ ಸರಕಾರದ ಕಾರ್ಯಕ್ರಮಗಳಲ್ಲಿ ಕೊಂಡುಕುರಿಯ ಲಾಂಛನವನ್ನು ಕಡ್ಡಾಯವಾಗಿ ಬಳಸಲು ಸರಕಾರವು ಆದೇಶ ನೀಡಬೇಕು ದಾವಣಗೆರೆ ಜಿಲ್ಲೆಯ ಎಲ್ಲಾ ತಾಲೂಕುಗಳಲ್ಲಿ ಸುಸಜ್ಜಿತ ಕನ್ನಡ ಭವನ ನಿರ್ಮಿಸಲು ಅಗತ್ಯ ಸಹಕಾರ ಮತ್ತು ಅನುದಾನ ನೀಡಬೇಕು. ಕನ್ನಡ ಸಾಹಿತ್ಯ ಪರಿಷತ್ತು ಆಯೋಜಿಸುವ ಎಲ್ಲಾ ಹಂತಗಳ ಸಮ್ಮೇಳನಗಳಲ್ಲಿ ಕೈಗೊಳ್ಳುವ ನಿರ್ಣಯಗಳನ್ನು ಅನುಷ್ಠಾನಗೊಳಿಸಲು ಸರಕಾರವು ಮುಂದಾಗಬೇಕು ಎಂದು ಆಗ್ರಹಿಸಲಾಗಿದೆ.
ಸಮ್ಮೇನಳದಲ್ಲಿ ಈ ಎಂಟು ನಿರ್ಣಯಗಳನ್ನು ಕಸಾಪ ಗೌರವಾಧ್ಯಕ್ಷ ಕೆ. ರಾಘವೇಂದ್ರ ನಾಯರಿ ಮಂಡಿಸಿದರು. ಈ ವೇಳೆ ಜಿಲ್ಲಾ ಕಸಾಪ ಅಧ್ಯಕ್ಷ ಬಿ. ವಾಮದೇವಪ್ಪ ಸೇರಿದಂತೆ ಹಲವರು ಹಾಜರಿದ್ದರು.