ನವದೆಹಲಿ: ವಯಸ್ಸು 63 ದಾಟಿದ್ದರೂ ಕಟ್ಟುಮಸ್ತಾದ ಕಾಯ, ತಲೆಗೂದಲಿಗೆ ಬಳಿದ ಕಪ್ಪು ಡೈ ಹಾಗೂ ಧರಿಸುತ್ತಿದ್ದ ಐಷಾರಾಮಿ ಉಡುಪುಗಳನ್ನು ನೋಡಿದರೆ ಯಾರೂ ಆತನನ್ನು ಹಿರಿಯ ನಾಗರಿಕ ಎಂದು ನಂಬಲು ಸಾಧ್ಯವಿರಲಿಲ್ಲ. ಆದರೆ, ಈ ಬಾಹ್ಯ ಸೌಂದರ್ಯ ಮತ್ತು ಯೌವನದ ಮುಖವಾಡದ ಹಿಂದೆ ಅಡಗಿದ್ದು ಐವರು ಪ್ರೇಯಸಿಯರ ದುಬಾರಿ ಶೋಕಿ ಮತ್ತು ಅವರ ದಿನನಿತ್ಯದ ಖರ್ಚು-ವೆಚ್ಚಗಳನ್ನು ತೂಗಿಸಲು ನಡೆಸುತ್ತಿದ್ದ ಕರಾಳ ಕಳ್ಳತನದ ಜಾಲ!
ಐವರು ಪ್ರೇಯಸಿಯರ ಐಷಾರಾಮಿ ಬೇಡಿಕೆಗಳನ್ನು ಪೂರೈಸಲಾಗದೆ, ಅವರ ರಾಜಭೋಗದ ಜೀವನ ಹಾಗೂ ಮಕ್ಕಳ ಪೋಷಣೆಗೆ ಹಣ ಹೊಂದಿಸಲು ದರೋಡೆ ಮತ್ತು ಕಳ್ಳತನದ ಹಾದಿ ಹಿಡಿದಿದ್ದ ಬಂಧು ಸಿಂಗ್ (63) ಎಂಬ ವೃದ್ಧ ಕೊನೆಗೂ ನವದೆಹಲಿಯ ಸಾರೈ ರೋಹಿಲ್ಲಾ ಠಾಣೆ ಪೊಲೀಸರ ಬಲೆಗೆ ಬಿದ್ದಿದ್ದಾನೆ.
ಸಿಸಿಟಿವಿ ನೀಡಿದ ಪ್ರಮುಖ ಸುಳಿವು:
ರಾಜಧಾನಿಯ ಆನಂದ್ ಪರ್ಬತ್ ಕೈಗಾರಿಕಾ ಪ್ರದೇಶದಲ್ಲಿರುವ ಕಾರ್ಖಾನೆಯೊಂದರಲ್ಲಿ ಇತ್ತೀಚೆಗೆ ಭಾರಿ ಕಳ್ಳತನ ನಡೆದಿತ್ತು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಆರಂಭಿಸಿ, ಘಟನಾ ಸ್ಥಳದ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ ಆರೋಪಿಯ ಸುಳಿವು ಲಭ್ಯವಾಯಿತು. ತಕ್ಷಣವೇ ಕಾರ್ಯಾಚರಣೆ ನಡೆಸಿದ ಸಾರೈ ರೋಹಿಲ್ಲಾ ಠಾಣೆ ಪೊಲೀಸರು, ಆನಂದ್ ಪರ್ಬತ್ ಪ್ರದೇಶದಲ್ಲಿದ್ದ ಆತನ ಮನೆಗೆ ದಾಳಿ ನಡೆಸಿ ಬಂಧು ಸಿಂಗ್ನನ್ನು ವಶಕ್ಕೆ ಪಡೆದರು. ಬಂದಿತನಿಂದ ಎರಡು ಲ್ಯಾಪ್ಟಾಪ್ಗಳು, ಒಂದು ಎಲ್ಇಡಿ ಟಿವಿ ಹಾಗೂ ₹5,000 ನಗದು ಹಣವನ್ನು ವಶಪಡಿಸಿಕೊಳ್ಳಲಾಗಿದೆ.
ವಿಚಾರಣೆಯಲ್ಲಿ ಬಯಲಾಯ್ತು ರೋಚಕ ಸತ್ಯ:
ಆರೋಪಿಯನ್ನು ವಶಕ್ಕೆ ಪಡೆದ ಪೊಲೀಸರು ತಮ್ಮದೇ ಶೈಲಿಯಲ್ಲಿ ಸುದೀರ್ಘ ವಿಚಾರಣೆ ನಡೆಸಿದಾಗ ಹೊರಬಿದ್ದ ಸತ್ಯ ಕೇಳಿ ತನಿಖಾಧಿಕಾರಿಗಳೇ ಆಶ್ಚರ್ಯಚಕಿತರಾಗಿದ್ದಾರೆ. ತಾನು ಮದುವೆಯಾಗಿಲ್ಲ ಎಂದು ಹೇಳಿಕೊಂಡಿರುವ ಬಂಧು ಸಿಂಗ್, ತನಗೆ ಬರೋಬ್ಬರಿ ಐವರು ಗೆಳತಿಯರಿದ್ದಾರೆ ಎಂಬುದನ್ನು ಒಪ್ಪಿಕೊಂಡಿದ್ದಾನೆ. ಈ ಪೈಕಿ ಇಬ್ಬರು ಗರ್ಭಧರಿಸಿ ಮಕ್ಕಳಿಗೆ ಜನ್ಮ ನೀಡಿದ್ದರು.
ಯಾವುದೇ ಖಾಯಂ ಆದಾಯದ ಮೂಲವಿಲ್ಲದಿದ್ದರೂ, ತನ್ನ ವಯಸ್ಸನ್ನು ಮರೆಮಾಚಿ ಯುವತಿಯರನ್ನು ಹಾಗೂ ಪ್ರೇಯಸಿಯರನ್ನು ಸೆಳೆಯಲು ತಲೆಗೆ ಡೈ ಹಚ್ಚಿ, ಶರೀರವನ್ನು ಫಿಟ್ ಆಗಿಟ್ಟುಕೊಳ್ಳುತ್ತಿದ್ದ. ಐವರು ಗೆಳತಿಯರ ಐಷಾರಾಮಿ ಬೇಡಿಕೆಗಳು, ಅವರ ಶೋಕಿ ಹಾಗೂ ಮಕ್ಕಳ ಪೋಷಣೆಗೆ ದೊಡ್ಡ ಮೊತ್ತದ ಹಣದ ಅಗತ್ಯವಿತ್ತು. ಈ ವೆಚ್ಚ ಭರಿಸಲು ರಾತ್ರಿ ವೇಳೆಯಲ್ಲಿ ಪಕ್ಕಾ ಸ್ಕೆಚ್ ಹಾಕಿ ಬೀಗ ಹಾಕಿದ ಮನೆ, ಅಂಗಡಿ ಹಾಗೂ ಕಾರ್ಖಾನೆಗಳನ್ನು ಗುರಿಯಾಗಿಸಿಕೊಂಡು ಈತ ಕಳವು ಮಾಡುತ್ತಿದ್ದ.
ಜಾಮೀನಿನ ಮೇಲಿದ್ದ ಆರೋಪಿ:
ಬಂಧಿತ ಆರೋಪಿ ಬಂಧು ಸಿಂಗ್ ಮೇಲೆ ಈಗಾಗಲೇ ದೆಹಲಿಯ ವಿವಿಧ ಪೊಲೀಸ್ ಠಾಣೆಗಳಲ್ಲಿ 20ಕ್ಕೂ ಹೆಚ್ಚು ಕಳ್ಳತನ ಹಾಗೂ ದರೋಡೆ ಪ್ರಕರಣಗಳು ದಾಖಲಾಗಿವೆ. ಈ ಹಿಂದೆ ಬಂಧನಕ್ಕೊಳಗಾಗಿದ್ದ ಆತನಿಗೆ ಇತ್ತೀಚೆಗಷ್ಟೇ ಜಾಮೀನು ಲಭ್ಯವಾಗಿ ಹೊರಬಂದಿದ್ದ ಎಂದು ದೆಹಲಿ ಉತ್ತರ ವಿಭಾಗದ ಡಿಸಿಪಿ ನೂಪುರ್ ಪ್ರಸಾದ್ ಮಾಹಿತಿ ನೀಡಿದ್ದಾರೆ. ಸದ್ಯ ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದ್ದು, ಈತ ಇತ್ತೀಚಿನ ದಿನಗಳಲ್ಲಿ ಇನ್ಯಾರ ಮನೆ ಹಾಗೂ ಕಾರ್ಖಾನೆಗಳಲ್ಲಿ ಕಳ್ಳತನ ಎಸಗಿದ್ದಾನೆ ಎಂಬುದರ ಕುರಿತು ತನಿಖೆ ಮುಂದುವರಿದಿದೆ





Leave a comment