ಕ್ರಿಕೆಟ್ ಭದ್ರಾ ಡ್ಯಾಂ  ಇರಾನ್‌ ಅಮೆರಿಕ ಕರೆಂಟ್ DINA BHAVISHYA cinema SHIVAMOGGA ಷೇರು ಕ್ರೀಡೆ ವಾಣಿಜ್ಯ Gold Rate ಸಾಹಿತ್ಯ JOB NEWS

---Advertisement---

ಭದ್ರಾ ಜಲಾಶಯದಿಂದ ತುಂಗಾಭದ್ರಾ ಕಾಲುವೆಗೆ 2 ಟಿಎಂಸಿ ನೀರು: ದಾವಣಗೆರೆ ಜಿಲ್ಲೆಯ ರೈತರ ಆಕ್ರೋಶ!

On: March 31, 2025 1:48 PM
Follow Us:
---Advertisement---

SUDDIKSHANA KANNADA NEWS/ DAVANAGERE/ DATE:31-03-2025

ದಾವಣಗೆರೆ: ಕಲ್ಯಾಣ ಕರ್ನಾಟಕ ಭಾಗದ ರೈತಾಪಿ ಜನರಿಗೆ ಯುಗಾದಿ ಕೊಡುಗೆಯಾಗಿ ಭದ್ರಾ ಜಲಾಶಯದಿಂದ ತುಂಗಾಭದ್ರಾ ಕಾಲುವೆಗೆ ಎರಡು ಟಿಎಂಸಿ ನೀರು ಹರಿಸಲು ರಾಜ್ಯ ಸರ್ಕಾರ ಮುಂದಾಗಿರುವುದು ಸರಿಯಲ್ಲ ಎಂದು ದಾವಣಗೆರೆ ಜಿಲ್ಲೆಯ ರೈತ ಮುಖಂಡರು, ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕಳೆದ ವರ್ಷ ಮಳೆಯಾಗಿದೆ. ಡ್ಯಾಂನಲ್ಲಿ ನೀರು ಸಂಗ್ರಹವಿದೆ. ಈ ಬಾರಿ ಮಳೆಯಾಗಿ ಭದ್ರಾ ಜಲಾಶಯ ಭರ್ತಿಯಾಗುತ್ತದೆ ಎಂಬ ನಂಬಿಕೆ ಇದೆ. ಆದ್ರೆ, ರಾಜ್ಯ ಸರ್ಕಾರವು ಭದ್ರಾ ಡ್ಯಾಂನಿಂದ ಬೇರೆ ಜಿಲ್ಲೆಗಳಿಗೆ ನೀರು ಹರಿಸಲು ಮುಂದಾದರೆ ಭವಿಷ್ಯದಲ್ಲಿ ಸಮಸ್ಯೆ ಎದುರಿಸಬೇಕಾಗುತ್ತದೆ. ಮೂರುವರೆ ಲಕ್ಷಕ್ಕೂ ಅಧಿಕ ಹೆಕ್ಟೇರ್ ಪ್ರದೇಶಕ್ಕೆ ನೀರುಣಿಸುವ ಭದ್ರಾ ಜಲಾಶಯದ ನೀರು ದಾವಣಗೆರೆ ಜಿಲ್ಲೆಯ ಕೊನೆ ಭಾಗದ ರೈತರಿಗೆ ಈಗಲೇ ತಲುಪುತ್ತಿಲ್ಲ. ಆದರೂ ತುಂಗಾಭದ್ರಾ ಕಾಲುವೆಗೆ 2 ಟಿಎಂಸಿ ನೀರು ಹರಿಸಿದರೆ ಕಷ್ಟವಾಗುತ್ತದೆ ಎಂದು ಭಾರತೀ ರೈತ ಒಕ್ಕೂಟದ ಜಿಲ್ಲಾಧ್ಯಕ್ಷ ಲಿಂಗರಾಜು ಶಾಮನೂರು ಕಳವಳ ವ್ಯಕ್ತಪಡಿಸಿದ್ದಾರೆ.

ಎಪ್ರಿಲ್ 1ರಿಂದ 5ರ ಅವಧಿಯಲ್ಲಿ ಕಾಲುವೆಗೆ ನೀರು ಹರಿಸಲು ನಿರ್ಧರಿಸಲಾಗಿದ್ದು, ಇದು ಕೊಪ್ಪಳ, ರಾಯಚೂರು ಮತ್ತು ಯಾದಗಿರಿ ಜಿಲ್ಲೆಗಳಲ್ಲಿ ಬೆಳೆದು ನಿಂತಿರುವ ಬೆಳೆಗಳಿಗೆ ಮತ್ತು ಇಲ್ಲಿನ ಜನರಿಗೆ ಕುಡಿಯುವ ನೀರಿನ ಲಭ್ಯತೆಯನ್ನು ಖಾತ್ರಿಪಡಿಸಲಿದೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ. ಆದರೆ, ಡ್ಯಾಂ ಭರ್ತಿಯಾಗಿದ್ದರೂ ಜಿಲ್ಲೆಯ ಕೊನೆ ಭಾಗಕ್ಕೆ ನೀರು ಸಿಕ್ಕಿಲ್ಲ. 2 ಟಿಎಂಸಿ ನೀರು ಅಲ್ಲಿಗೆ ಹೋಗಿ ಮುಟ್ಟುವುದರಲ್ಲಿ ಜನರಿಗೂ ಅನುಕೂಲ ಆಗುವುದಿಲ್ಲ. ಕೇವಲ ಭದ್ರಾ ಜಲಾಶಯದಿಂದ ಮಾತ್ರ ಏಕೆ ನೀರು ಹರಿಸುತ್ತಾರೆ? ಎಂದು ಪ್ರಶ್ನಿಸಿದ್ದಾರೆ.

ಬೇರೆ ಜಲಾಶಯಗಳಿಂದ ಹರಿಸಲಿ. ದಾವಣಗೆರೆ, ಶಿವಮೊಗ್ಗ, ಚಿತ್ರದುರ್ಗ ಜಿಲ್ಲೆಗಳಿಗೆ ತುಂಬಾನೇ ತೊಂದರೆ ಆಗಲಿದೆ. ಸದ್ಯ ನೀರು ಸಂಗ್ರಹವಿರುವುದರಿಂದ ತೊಂದರೆ ಇಲ್ಲ. ಭವಿಷ್ಯದಲ್ಲಿ ಡ್ಯಾಂ ನೀರು ಕಡಿಮೆಯಾದಾಗ ಕುಡಿಯುವ ನೀರಿನ ನೆಪವೊಡ್ಡಿ ನೀರು ಹರಿಸಿದರೆ ದಾವಣಗೆರೆ ಜಿಲ್ಲೆಯ ಜನರ ಗತಿಯೇನು? ಡ್ಯಾಂ ಶುರು ಮಾಡುವಾಗ ಆಗಿರುವ ಒಪ್ಪಂದದಂತೆ ನೀರು ಹರಿಸಲಿ. ಅದನ್ನು ಬಿಟ್ಟು ಶಾಸಕರ ಒತ್ತಾಯದ ಮೇರೆಗೆ ನೀರು ಹರಿಸಿದರೆ ಮುಂಬರುವ ದಿನಗಳಲ್ಲಿ ಬೇರೆ ಜಿಲ್ಲೆಯವರು ಕೇಳುತ್ತಾರೆ. ಆಗ ಅವರಿಗೂ ಕೊಡುತ್ತಾರೆಯೇ? ಕೂಡಲೇ ನೀರು ಹರಿಸುವುದನ್ನು ನಿಲ್ಲಿಸಬೇಕು ಎಂದು ಒತ್ತಾಯಿಸಿದ್ದಾರೆ.

ಮಾರ್ಚ್ 30ರಂದು ಭದ್ರಾ ಜಲಾಶಯದಲ್ಲಿ 28 ಟಿಎಂಸಿ ನೀರು ಸಂಗ್ರಹ ಲಭ್ಯವಿದೆ. ಇದರಲ್ಲಿ ಮೇ 8ರವರೆಗೆ ನೀರಾವರಿಗೆ 11ಟಿಎಂಸಿ ಮತ್ತು ಕುಡಿಯುವ ನೀರಿಗಾಗಿ 14ಟಿಎಂಸಿ ಅಗತ್ಯವಿದ್ದು, 3ಟಿಎಂಸಿ ನೀರು ಜಲಾಶಯದಲ್ಲಿ ಉಳಿಸಿಕೊಳ್ಳಬೇಕಾಗಿದೆ. ಎಪ್ರಿಲ್ 6ರಿಂದ ಕಾಲುವೆಗಳನ್ನು ಕೇವಲ ಕುಡಿಯುವ ನೀರಿನ ಪೂರೈಕೆಗೆ ಮಾತ್ರ ಬಳಸಿಕೊಳ್ಳಲಾಗುವುದು. ರೈತಾಪಿ ಜನರ ಬೆಳೆಗಳಿಗೆ ಮತ್ತು ಜನರಿಗೆ ಕುಡಿಯುವ ನೀರು ಪೂರೈಸಲು ಸರ್ಕಾರ ಎಲ್ಲಾ ಹಂತದಲ್ಲೂ ಬದ್ಧವಾಗಿದೆ ಎಂದು ಸಿದ್ದರಾಮಯ್ಯ ಹೇಳಿದ್ದರೂ ದಾವಣಗೆರೆ ಜಿಲ್ಲೆಯ ಜನರು, ರೈತರ ಹಿತ ಏಕೆ ಗಮನದಲ್ಲಿಟ್ಟುಕೊಳ್ಳುತ್ತಿಲ್ಲ ಎಂದು ಪ್ರಶ್ನಿಸಿದ್ದಾರೆ.

ಯೋಗರಾಜ್

ಯೋಗರಾಜ್, ಸುದ್ದಿಕ್ಷಣ.ಕಾಂ ಸಂಪಾದಕ

Join WhatsApp

Join Now

Join Telegram

Join Now

Leave a Comment