SUDDIKSHANA KANNADA NEWS/ DAVANAGERE/ DATE:03-04-2025
ದಾವಣಗೆರೆ: ನ್ಯಾಮತಿ ಎಸ್ ಬಿ ಐ ಬ್ಯಾಂಕ್ ನಲ್ಲಿ ಕೋಟ್ಯಂತರ ಚಿನ್ನಾಭರಣ ಕಳ್ಳತನ ಮಾಡಿದ್ದ ಖತರ್ನಾಕ್ ದರೋಡೆಕೋರರನ್ನು ಬಂಧಿಸಿ ಮೆಚ್ಚುಗೆಗೆ ಪಾತ್ರರಾಗಿರುವ ದಾವಣಗೆರೆ ಪೊಲೀಸರಿಗೆ ಮತ್ತೊಂದು ಸವಾಲು ಎದುರಾಗಿದೆ. ಬಂಗಾರದ ಅಂಗಡಿಯಲ್ಲಿ ಕಳ್ಳಿಯರು ಕೈಚಳಕ ತೋರಿದ್ದು, 1 ಕೋಟಿ 13 ಲಕ್ಷ ರೂಪಾಯಿ ಮೌಲ್ಯದ ಬಂಗಾರ ಕದ್ದೊಯ್ದಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ನ್ಯಾಮತಿ ಕೇಸ್ ಭೇದಿಸಿದ್ದ ದಾವಣಗೆರೆ ಪೊಲೀಸರಿಗೆ ಮತ್ತೊಂದು ಪ್ರಕರಣ ಸವಾಲಾಗಿದೆ. 1 ಕೋಟಿ 13 ಲಕ್ಷ ಬೆಲೆಯ ಬಂಗಾರ ಕದ್ದೊಯ್ದ ಕಳ್ಳಿಯರ ಗ್ಯಾಂಗ್ ರವಿ ಜ್ಯುವೆಲರಿ ಶಾಪ್ ನಲ್ಲಿ ಕೈಚಳಕ ತೋರಿರುವುದು ಸಿಸಿಟಿವಿಯಲ್ಲಿ ಸೆರೆಯಾಗಿದೆ.
ದಾವಣಗೆರೆಯ ಮಂಡಿ ಪೇಟೆಯಲ್ಲಿರುವ ಜ್ಯುವೆಲರಿ ಶಾಪ್ ಗೆ ಬಂದಿದ್ದ ಕಳ್ಳಿಯರು ಕೆಲಸಗಾರರ ಗಮನ ಬೇರೆಡೆಗೆ ಸೆಳೆದು 1 ಕೆಜಿ 400 ಗ್ರಾಂ ಬಂಗಾರದ ಆಭರಣಗಳನ್ನ ಕದ್ದೊಯ್ದಿದೆ. ಐವರು ಅಂಗಡಿಗೆ ಬೆಳ್ಳಿ ಲೋಟ ಕೇಳಿಕೊಂಡು ಬಂದಿದ್ದು, ಕೆಲಸದವರು ಬೆಳ್ಳಿ ಲೋಟ ತೋರಿಸುವ ವೇಳೆ ಬಂಗಾರದ ಆಭರಣ ಇರುವ ಬಾಕ್ಸ್ ಅನ್ನು ಚಾಲಕಿ ಕಳ್ಳಿ ಎಗರಿಸಿದ್ದಾಳೆ. ಬಾಕ್ಸ್ ನಲ್ಲಿ ಇಟ್ಟಿದ್ದ ಕಿವಿ ಓಲೆ, ಜುಮುಕಿಯನ್ನು ಕಳ್ಳಿಯರ ಗ್ಯಾಂಗ್ ತೆಗೆದುಕೊಂಡು ಹೋಗಿದೆ. ಕಳ್ಳಿಯ ಕೈಚಳಕ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಬಸವನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸಿಸಿ ಟಿವಿ ಆಧರಿಸಿ ಕಳ್ಳಿಯರ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.