ಬೆಂಗಳೂರು : ಎರಡು ದಿನಗಳ ಹಿಂದಷ್ಟೇ ಸ್ಯಾಂಡಲ್ ವುಡ್ ಕ್ಯೂಟ್ ಜೋಡಿ ಚಂದನ್ ಶೆಟ್ಟಿ-ನಿವೇದಿತಾ ಗೌಡ ವಿಚ್ಛೇದನ ಪಡೆದುಕೊಂಡು ಅಭಿಮಾನಿಗಳಿಗೆ ಆಘಾತವನ್ನುಂಟು ಮಾಡಿದ್ದರು.
ಈ ಘಟನೆ ನಡೆದಿರುವಾಗಲೇ ದೊಡ್ಮನೆ ಹುಡುಗ ನಟ ಯುವ ರಾಜ್ ಕುಮಾರ್ ದಾಂಪತ್ಯದಲ್ಲಿಯೂ ಬಿರುಕು ಮೂಡಿದೆ ಎಂದು ತಿಳಿದುಬಂದಿದೆ. ಯುವ ರಾಜ್ ಕುಮಾರ್ ಹಾಗೂ ಪತ್ನಿ ಶ್ರೀದೇವಿ ಬಾಳಲ್ಲಿ ಬಿರುಗಾಳಿ ಎದ್ದಿದ್ದು, ಇಬ್ಬರೂ ವೈವಾಹಿಕ ಜೀವನಕ್ಕೆ ಅಂತ್ಯ ಹಾಡಲು ನಿರ್ಧರಿಸಿದ್ದಾರೆ. ಯುವರಾಜ್ ಕುಮಾರ್ ಹಾಗೂ ಶ್ರೀದೇವಿ ವಿದ್ಯಾಭ್ಯಾಸ ಮಾಡುತ್ತಿದ್ದ ವೇಳೆ ಪರಸ್ಪರ ಪ್ರೀತಿಸಿ ಬಳಿಕ 2019ರಲ್ಲಿ ಮನೆಯವರನ್ನು ಒಪ್ಪಿಸಿ ವಿವಾಹವಾಗಿದ್ದರು. ನಾಲ್ಕು ವರ್ಷಗಳ ಕಾಲ ಜೊತೆಯಲ್ಲಿಯೇ ಇದ್ದ ದಂಪತಿ ಇದೀಗ ದೂರಾಗಲು ತೀರ್ಮಾನಿಸಿದ್ದಾರೆ.
ಮೈಸೂರು ಮೂಲದ ಶ್ರೀದೇವಿ ಕಳೆದ ಒಂದು ವರ್ಷದಿಂದ ಅಮೆರಿಕಾದಲ್ಲಿ ವಾಸವಾಗಿದ್ದಾರೆ. ಒಂದು ವರ್ಷದಿಂದ ಯುವ ರಾಜ್ ಕುಮಾರ್ ಹಾಗೂ ಶ್ರೀದೇವಿ ದೂರವಿದ್ದಾರೆ ಎನ್ನಲಾಗಿದೆ. ಯುವ ರಾಜ್ ಕುಮಾರ್ ಅವರ ಮೊದಲ ಸಿನಿಮಾ ಪ್ರಮೋಷನ್ ಗೂ ಪತ್ನಿ ಶ್ರೀದೇವಿ ಬಂದಿರಲಿಲ್ಲ. ಇದೀಗ ಯುವ ರಾಜ್ ಕುಮಾರ್ ಪತ್ನಿ ಶ್ರೀದೇವಿಗೆ ವಿಚ್ಛೇದನ ನೀಡಲು ನಿರ್ಧರಿಸಿದ್ದು, ವಿಚ್ಛೇದನಕ್ಕಾಗಿ ಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಿದ್ದಾರೆ. ಅಲ್ಲದೇ ಕೋರ್ಟ್ ಶೀದೇವಿ ಅವರಿಗೆ ನೋಟಿಸ್ ನೀಡಿದೆ ಎಂದು ತಿಳಿದುಬಂದಿದೆ. ಇದು ದೊಡ್ಮನೆಯಲ್ಲಿ ಮೊದಲ ವಿಚ್ಛೇದನ ಕೇಸ್ ಆಗಿದೆ.