Home ಕ್ರೈಂ ನ್ಯೂಸ್ ಪ್ರೇಮಿಗಳ ದಿನದಂದು ‘ಪ್ರೀತಿಯ ಸೈನಿಕರಾಗಿ’ ನಿಲ್ಲಲಿರುವ ಯುವ ಕಾಂಗ್ರೆಸ್: ನೈತಿಕ ಪೊಲೀಸ್‌ಗಿರಿಗೆ ಮಂಜುನಾಥ್ ಗೌಡ ಎಚ್ಚರಿಕೆ
ಕ್ರೈಂ ನ್ಯೂಸ್ದಾವಣಗೆರೆನವದೆಹಲಿಬೆಂಗಳೂರು

ಪ್ರೇಮಿಗಳ ದಿನದಂದು ‘ಪ್ರೀತಿಯ ಸೈನಿಕರಾಗಿ’ ನಿಲ್ಲಲಿರುವ ಯುವ ಕಾಂಗ್ರೆಸ್: ನೈತಿಕ ಪೊಲೀಸ್‌ಗಿರಿಗೆ ಮಂಜುನಾಥ್ ಗೌಡ ಎಚ್ಚರಿಕೆ

Share
ಪ್ರೇಮಿಗಳ ದಿನ
Share

ಬೆಂಗಳೂರು: ಪ್ರತಿ ವರ್ಷ ಫೆ.14ರ ಪ್ರೇಮಿಗಳ ದಿನದಂದು ಸಂಸ್ಕೃತಿ ರಕ್ಷಣೆಯ ಹೆಸರಿನಲ್ಲಿ ವಿಶ್ವ ಹಿಂದೂ ಪರಿಷತ್, ಭಜರಂಗದಳ, ಶ್ರೀರಾಮಸೇನೆಯಂತಹ ಆರ್‌ಎಸ್‌ಎಸ್‌ನ ಸಂತತಿಗಳು ಸಮಾಜದಲ್ಲಿ ಭಯದ ವಾತಾವರಣ ಸೃಷ್ಟಿ ಮಾಡಲು ಯತ್ನಿಸುತ್ತಾರೆ. ಈ ಬಾರಿಯೂ ಬಿಜೆಪಿ ಆಡಳಿತವಿರುವ ರಾಜ್ಯಗಳಲ್ಲಿ, ಪೊಲೀಸರ ಮೂಗಿನ ಕೆಳಗೇ ಬಜರಂಗದಳದಂತಹ ಸಂಘಟನೆಗಳ ದಾಂಧಲೆ ಶುರುವಾಗಿದೆ ಎಂದು ಯುವ ಕಾಂಗ್ರೆಸ್ ರಾಜ್ಯ ಘಟಕದ ಅಧ್ಯಕ್ಷ ಮಂಜುನಾಥ್ ಗೌಡ ಕಿಡಿಕಾರಿದ್ದಾರೆ.

‘ಪ್ರೀತಿಯ ಸೈನಿಕರಾಗಿ’ ಯುವ ಕಾಂಗ್ರೆಸ್

ಇಂತಹ ಕುಕೃತ್ಯಕ್ಕೆ ರಾಜ್ಯ ಪೊಲೀಸ್ ಇಲಾಖೆ ಅವಕಾಶ ನೀಡಬಾರದು. ಒಂದು ವೇಳೆ ಇಂತಹ ಸಮಾಜಘಾತುಕ ಕೃತ್ಯಗಳಿಗೆ ಕೆಲ ಸಂಘಟನೆಗಳು ಮುಂದಾದರೆ ಯುವ ಕಾಂಗ್ರೆಸ್ ಕಾರ್ಯಕರ್ತರು ಅದನ್ನು ತಡೆಯಲು ಹಾಗೂ ಪ್ರೇಮಿಗಳ ಪರವಾಗಿ ನಿಲ್ಲಲಿದ್ದಾರೆ. ಪ್ರೇಮಿಗಳಿಗೆ ಭದ್ರತೆ ಹಾಗೂ ಸುರಕ್ಷತೆಯ ಹೊಣೆ ನಿರ್ವಹಣೆಗೆ ಮುಂದಾಗಲಿದ್ದಾರೆ. ವಿಶೇಷವಾಗಿ ಈ ಗೂಂಡಾಗಳ ವಿರುದ್ಧ ಶನಿವಾರ ದೇಶಾದ್ಯಂತ ಯುವ ಕಾಂಗ್ರೆಸ್ ಕಾರ್ಯಕರ್ತರು ‘ಪ್ರೀತಿಯ ಸೈನಿಕರಾಗಿ ನಿಲ್ಲಲಿದ್ದಾರೆ ಎಂದು ಹೇಳಿದ್ದಾರೆ.

ಸಾಂವಿಧಾನಿಕ ಹಕ್ಕುಗಳ ಉಲ್ಲೇಖ

ರಾಜ್ಯದಲ್ಲೂ ಪ್ರೇಮಿಗಳು ಧೈರ್ಯದಿಂದ ಹಾಗೂ ಮುಕ್ತವಾಗಿ ಓಡಾಡಬಹುದು. ಯಾವುದೇ ಸಮಾಜಘಾತುಕ ಸಂಘಟನೆಗಳ ಕಾರ್ಯಕರ್ತರಿಗೂ ಹೆದರಬೇಕಿಲ್ಲ. ನಿಮ್ಮ ರಕ್ಷಣೆಗೆ ನಾವಿದ್ದೇವೆ. ಸಂವಿಧಾನದ 21ನೇ ವಿಧಿಯು ದೇಶದ ಪ್ರತಿಯೊಬ್ಬ ಪ್ರಜೆಗೂ ‘ಜೀವಿಸುವ ಹಕ್ಕು ಮತ್ತು ವೈಯಕ್ತಿಕ ಸ್ವಾತಂತ್ರ್ಯ’ ನೀಡುತ್ತದೆ. ಜೀವನದ ಹಕ್ಕು ಎಂದರೆ ಗೌರವಯುತವಾಗಿ ಮತ್ತು ಘನತೆಯಿಂದ ಬದುಕುವ ಹಕ್ಕು. ಜತೆಗೆ ಅದು ಅಕ್ರಮ ಹಾಗೂ ನಿರಂಕುಶ ನಿರ್ಬಂಧಗಳಿಂದ ರಕ್ಷಣೆ ಒದಗಿಸುತ್ತದೆ ಎಂದು ತಿಳಿಸಿದ್ದಾರೆ.

ಸುಪ್ರೀಂ ಕೋರ್ಟ್ ಪ್ರಕಾರ ಪ್ರೀತಿ, ಸಂಗಾತಿ ಆಯ್ಕೆಯೂ ಸಹ ಮೂಲಭೂತ ಹಕ್ಕು. ಜಾತಿ, ಧರ್ಮದ ಅಡೆತಡೆಗಳಿಲ್ಲದೆ, ಪರಸ್ಪರ ಸಮ್ಮತಿಯಿಂದ ಆಯ್ಕೆ ಮಾಡಿದ ಸಂಗಾತಿಯನ್ನು ಪ್ರೀತಿಸಲು ಹಾಗೂ ಅವರೊಂದಿಗೆ ಬದುಕಲು ಸ್ವಾತಂತ್ರ್ಯವಿದೆ. ಹೀಗಾಗಿ ಪ್ರೇಮಿಗಳ ಹಕ್ಕುಗಳಿಗೆ ಧಕ್ಕೆ ತರುವ ಯಾವುದೇ ಕೃತ್ಯಗಳನ್ನೂ ನಾವು ಸಹಿಸುವುದಿಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ.

ನೈತಿಕ ಪೊಲೀಸ್‌ಗಿರಿ ಸಹಿಸಲ್ಲ:

ಕಾನೂನು ಪ್ರೀತಿಯನ್ನು ರಕ್ಷಿಸಿದರೂ, ಸಮಾಜದಲ್ಲಿ ಜಾತಿ, ಧರ್ಮದ ಆಧಾರದ ಮೇಲೆ ಅಶಾಂತಿ ಮೂಡಿಸುವ ಸಮಾಜ ಘಾತುಕ ಶಕ್ತಿಗಳು ವಿರೋಧಿಸುತ್ತಲೇ ಬಂದಿವೆ. ಪ್ರತಿ ವರ್ಷ ಪ್ರೇಮಿಗಳ ದಿನದಂದು ಹಿಂದೂ ಪರ ಸಂಘಟನೆಗಳು ವಿರೋಧ ವ್ಯಕ್ತಪಡಿಸುತ್ತವೆ. ಉಡುಗೊರೆ, ಹೂವು ಮಾರಾಟ ಮಾಡುವ ಅಂಗಡಿಗಳ ಮೇಲೆ ದಾಳಿ ಮಾಡುವುದು. ಬಡವರ ಬದುಕು ಕಸಿಯುವ ಕೃತ್ಯಗಳನ್ನು ಮಾಡುತ್ತಾರೆ. ಪ್ರೇಮಿಗಳ ದಿನದಂದು ಪಾರ್ಕ್, ಸಾರ್ವಜನಿಕ ಸ್ಥಳಗಳಲ್ಲಿ ಸುತ್ತಾಡುವ ಪ್ರೇಮಿಗಳ ಮೇಲೆ ನೈತಿಕ ಪೊಲೀಸ್ ಗಿರಿಯೂ ನಡೆಯುತ್ತದೆ ಎಂದು ಹೇಳಿದ್ದಾರೆ.

ವಿಶೇಷವಾಗಿ ಮಂಗಳೂರು ಸೇರಿದಂತೆ ರಾಜ್ಯಾದ್ಯಂತ ಈ ಕೃತ್ಯಗಳನ್ನು ಎಸೆಗುತ್ತಿವೆ. ಇಂತಹ ಎಲ್ಲಾ ಕಡೆ ನಾವು ರಕ್ಷಣೆ ಒದಗಿಸುತ್ತೇವೆ. ರಾಜ್ಯದ ಎಲ್ಲಾ ಜಿಲ್ಲೆಗಳಲ್ಲೂ ನಮ್ಮ ಕಾರ್ಯಕರ್ತರು ಸಕ್ರಿಯರಾಗಿರುತ್ತಾರೆ. ಪ್ರೇಮಿಗಳ ರಕ್ಷಣೆಗೆ ಸಾಧ್ಯವಾದ ಎಲ್ಲ ರೀತಿಯ ಕ್ರಮಗಳನ್ನು ಕೈಗೊಳ್ಳುವಂತೆ ಈಗಾಗಲೇ ರಾಜ್ಯದ ಎಲ್ಲಾ ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷಕರಿಗೆ ಹಾಗೂ ಕಾರ್ಯಕರ್ತರಿಗೆ ನಿರ್ದೇಶನ ನೀಡಲಾಗಿದೆ ಎಂದು ಮಂಜುನಾಥ್ ಗೌಡ ಮಾಹಿತಿ ನೀಡಿದ್ದಾರೆ.

Share

Leave a comment

Leave a Reply

Your email address will not be published. Required fields are marked *