SUDDIKSHANA KANNADA NEWS/ DAVANAGERE/ DATE:15-02-2025
ದಾವಣಗೆರೆ: ನಿಮ್ಮ ಬದುಕನ್ನು ನೀವೇ ಕಟ್ಟಿಕೊಳ್ಳಬೇಕು. ನಿಮ್ಮ ಬೆಳವಣಿಗೆ ನಿಮ್ಮ ಹೊಣೆ ಎಂದು ಜಿಎಂಯು ತರಬೇತಿ ಮತ್ತು ಉದ್ಯೋಗ ವಿಭಾಗದ ನಿರ್ದೇಶಕ ಟಿ.ಆರ್. ತೇಜಸ್ವಿ ಕಟ್ಟಿಮನಿ ಹೇಳಿದರು.
ನಗರದ ಜಿಎಂ ತಾಂತ್ರಿಕ ಮಹಾವಿದ್ಯಾಲಯದ ಆವರಣದಲ್ಲಿನ ಜಿಎಂ ಹಾಲಮ್ಮ ಸಭಾಂಗಣದಲ್ಲಿ ಜಿಎಂ ವಿಶ್ವವಿದ್ಯಾಲಯದ ಪ್ಯಾಕಲ್ಟಿ ಆಫ್ ಕಂಪ್ಯೂಟಿಂಗ್ ಅಂಡ್ ಐಟಿ ವಿಭಾಗದ ವತಿಯಿಂದ ಹಮ್ಮಿಕೊಂಡಿದ್ದ ಎಂಸಿಎ ಮೊದಲ ವರ್ಷದ ವಿದ್ಯಾರ್ಥಿಗಳ ಫ್ರೆಷರ್ಸ್ ಪಾರ್ಟಿ ಸಮಾರಂಭವನ್ನು ಉದ್ಘಾಟಿಸಿ ಎಂಸಿಎ ವಿದ್ಯಾರ್ಥಿಗಳ ಉದ್ದೇಶಿಸಿ ಮಾತನಾಡಿದರು.
ಯಶಸ್ಸು ಆಕಸ್ಮಿಕವಲ್ಲ. ಸುಲಭವಾಗಿ ಬರುವುದಿಲ್ಲ. ಅದು ಉದ್ದೇಶ, ಪ್ರಾಮಾಣಿಕ ಪ್ರಯತ್ನ, ಕಠಿಣ ಪರಿಶ್ರಮ ಮತ್ತು ಕೌಶಲ್ಯ ಬೇಕು. ನೀವು ನಿಮ್ಮ ಬದುಕು, ವೃತ್ತಿ ಬಗ್ಗೆ ಗಂಭೀರವಾಗಿರಬೇಕು. ಇಲ್ಲವಾದರೆ ಅವಕಾಶಗಳು ಕೈ ತಪ್ಪಿ ಹೋಗುತ್ತವೆ ಎಂದು ಹೇಳಿದರು.
ಕೆಲವೊಂದು ನೋವಿನ ಪ್ರಕ್ರಿಯೆಗಳು ಜೀವನದಲ್ಲಿ ಬರುವುದು ಸಹಜ. ಅವುಗಳ ಮೀರಿ ಮುನ್ನಡೆಯ ಬೇಕು. ಆಗ ಮಾತ್ರ ಬದುಕಲು ಸಾಧ್ಯ. ನಿಮ್ಮಲ್ಲಿರುವ ನಕಾರಾತ್ಮಕತೆಯನ್ನು ದೂರ ಮಾಡಬೇಕು. ಉದ್ಯೋಗ ಕ್ಷೇತ್ರ, ಜೀವನದಲ್ಲಿ ಬದುಕಲು ನಕಾರಾತ್ಮಕತೆ ತೆಗೆದುಹಾಕಬೇಕು. ಆಗ ಮಾತ್ರ ಬದುಕಬಹುದು, ಒಳ್ಳೆಯ ಜೀವನ ನಡೆಸಬಹುದು ಎಂದು ಕಿವಿಮಾತು ಹೇಳಿದರು.
ಶಿಕ್ಷಣವೆಂದರೆ ಕೇವಲ ಸಮಾಜಕ್ಕೆ ಪುರುಷರು ಮತ್ತು ಮಹಿಳೆಯರನ್ನು ಸೃಷ್ಟಿಸುವುದಲ್ಲ. ಸಮಾಜಕ್ಕಾಗಿ ಜ್ಞಾನವಂತ ಪುರುಷರು ಮತ್ತು ಮಹಿಳೆಯರನ್ನು ಸೃಷ್ಟಿಸುವುದೇ ಶಿಕ್ಷಣ. ಕೇವಲ ಇತರರು ಮಾಡಿದ್ದನ್ನು ಮಾಡುವುದಲ್ಲ. ನೀವು ಹೊಸದನ್ನು ಸೃಷ್ಟಿಸಬೇಕು. ಆಗ ತಂತ್ರಜ್ಞಾನ ಕೈಗಾರಿಕೆಯಲ್ಲಿ ಗುರುತಿಸಲಾಗುತ್ತದೆ. ನೀವು ಯಾವಾಗಲೂ ಹೊಸದನ್ನು ಮಾಡಬೇಕು ಎಂದು ಸಲಹೆ ನೀಡಿದರು.
ಶೈಕ್ಷಣಿಕ ಸಾಧನೆ ಆಗಿರಬಹುದು, ಪಠ್ಯೇತರ ಚಟುವಟಿಕೆ ಸಾಧನೆ ಆಗಿರಬಹುದು, ಅಥವಾ ಸಹಪಠ್ಯ ಚಟುವಟಿಕೆ ಸಾಧನೆ ಆಗಿರಬಹುದು. ಸಾಧನೆಗಳು ಬೇಕು. ಆತ್ಮವಿಶ್ವಾಸವನ್ನು ಪಡೆದರೆ ನೀವು ವಿಜೇತರಾಗುತ್ತೀರಿ. ನಿಮ್ಮಲ್ಲಿ ಜ್ಞಾನದ ಜೊತೆಗೆ ಕೌಶಲ್ಯಗಳು ಇದ್ದಾಗ ಮಾತ್ರ ಕಂಪನಿಗಳಲ್ಲಿ ಉದ್ಯೋಗಾವಕಾಶಗಳನ್ನು ಪಡೆಯಬಹುದು. ಕಂಪನಿಯವರು ಸಹ ಕೇವಲ ಜ್ಞಾನವನ್ನು ಅಷ್ಟೇ ಅಲ್ಲದೆ ಕೌಶಲ್ಯಗಳನ್ನು ಬಯಸುತ್ತಾರೆ ಎಂದು ತಿಳಿಸಿದರು.
ಜಿಎಂ ವಿಶ್ವವಿದ್ಯಾಲಯದ ಎಂಸಿಎ ವಿಭಾಗದ ಮುಖ್ಯಸ್ಥೆ ಪ್ರೊ. ಎನ್. ಉಷಾ, ಪ್ಯಾಕಲ್ಟಿ ಆಫ್ ಕಂಪ್ಯೂಟಿಂಗ್ ಅಂಡ್ ಐಟಿ ವಿಭಾಗದ ಡೀನ್ ಡಾ. ಶ್ವೇತಾ ಮರೀಗೌಡರ್ ಸೇರಿದಂತೆ ಪ್ರಾಧ್ಯಾಪಕರು, ವಿದ್ಯಾರ್ಥಿಗಳು ಇದ್ದರು.