ಲಕ್ನೋ/ಅಯೋಧ್ಯೆ: ಸಮಾಜವಾದಿ ಪಾರ್ಟಿ ಅಧ್ಯಕ್ಷ ಅಖಿಲೇಶ್ ಯಾದವ್ ಹಾಗೂ ಅವರ ಪತ್ನಿ ಡಿಂಪಲ್ ಯಾದವ್ ಡಿಸೆಂಬರ್ 12 ರಂದು ಅಯೋಧ್ಯೆಯ ಶ್ರೀರಾಮ ಮಂದಿರಕ್ಕೆ ಭೇಟಿ ನೀಡಲು ಯೋಜಿಸಿರುವ ಬೆನ್ನಲ್ಲೇ, ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಕಟು ವಾಗ್ದಾಳಿ ನಡೆಸಿದ್ದಾರೆ.
1990ರಲ್ಲಿ ರಾಮಭಕ್ತರ ಮೇಲೆ ಗುಂಡಿನ ದಾಳಿ ನಡೆಸಿದವರು ಹಾಗೂ ಸಂತರ ಮೇಲೆ ಲಾಠಿಚಾರ್ಜ್ ಮಾಡಿದವರು ಅಯೋಧ್ಯೆಗೆ ಬರುವ ಮುನ್ನ ರಾಮಭಕ್ತರು ಮತ್ತು ಸಂತರ ಬಳಿ ಬಹಿರಂಗವಾಗಿ ಕ್ಷಮೆಯಾಚಿಸಬೇಕು ಎಂದು ಸಿಎಂ ಯೋಗಿ ಆದಿತ್ಯನಾಥ್ ಆಗ್ರಹಿಸಿದ್ದಾರೆ.
ಅಯೋಧ್ಯೆಯಲ್ಲಿ ನಡೆದ 10ನೇ ದೀಪೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಯೋಗಿ ಆದಿತ್ಯನಾಥ್, ಅಯೋಧ್ಯೆಯ ಪವಿತ್ರತೆಯನ್ನು ಹಿಂದೆ ಕಡೆಗಣಿಸಿದವರು ಹಾಗೂ ಅವಮಾನಿಸಿದವರು ಖಂಡಿತವಾಗಿ ಭೇಟಿ ನೀಡಬಹುದು, ಆದರೆ ತಮ್ಮ ಗತಕಾಲದ ಕೃತ್ಯಗಳಿಗೆ ಮೊದಲು ಪಶ್ಚಾತ್ತಾಪ ಪಡಬೇಕು ಎಂದರು. ಮುಲಾಯಂ ಸಿಂಗ್ ಯಾದವ್ ಸಿಎಂ ಆಗಿದ್ದಾಗ ನಡೆದ ಕರಾಳ ಘಟನೆಗಳನ್ನು ಪರೋಕ್ಷವಾಗಿ ಪ್ರಸ್ತಾಪಿಸಿದ ಅವರು, ಶ್ರೀರಾಮನ ಅಸ್ತಿತ್ವವನ್ನೇ ನ್ಯಾಯಾಲಯಗಳಲ್ಲಿ ಪ್ರಶ್ನಿಸಿದವರಿಗೆ ಈಗ ಶ್ರೀರಾಮನ ಮಹತ್ವ ತಿಳಿದುಬಂದಿರುವುದು ನಮ್ಮ ವೈಚಾರಿಕ ಗೆಲುವು ಎಂದು ಬಣ್ಣಿಸಿದರು.
ಕ್ಷಮೆಯಾಚನೆಗೆ ಸವಾಲು: 1990ರ ಕರಸೇವಕರ ಮೇಲಿನ ಗುಂಡಿನ ದಾಳಿ ಹಾಗೂ ಸಂತರ ಮೇಲಿನ ದೌರ್ಜನ್ಯಕ್ಕಾಗಿ ಅಖಿಲೇಶ್ ಯಾದವ್ ಸಾರ್ವಜನಿಕವಾಗಿ ಕ್ಷಮೆ ಕೇಳಬೇಕು ಎಂದು ಸಿಎಂ ಯೋಗಿ ಪಟ್ಟು ಹಿಡಿದಿದ್ದಾರೆ.
ಮೊದಲ ಭೇಟಿ ಯೋಜನೆ: ಜನವರಿ 2024ರಲ್ಲಿ ರಾಮಮಂದಿರ ಉದ್ಘಾಟನೆಯಾದ ನಂತರ ಅಖಿಲೇಶ್ ಯಾದವ್ ಕುಟುಂಬ ಸಮೇತರಾಗಿ ಅಯೋಧ್ಯೆಗೆ ನೀಡುತ್ತಿರುವ ಮೊದಲ ಭೇಟಿ ಇದಾಗಿದೆ.
ಚುನಾವಣಾ ತಂತ್ರ: 2027ರ ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಗೆ ಮುನ್ನ ಎಸ್‌ಪಿ ನಾಯಕರ ಈ ಭೇಟಿ ಬಿಜೆಪಿಯ ಹಿಂದುತ್ವದ ಅಲೆಗೆ ಟಕ್ಕರ್ ನೀಡುವ ರಾಜಕೀಯ ಕಾರ್ಯತಂತ್ರವೆಂದು ವಿಶ್ಲೇಷಿಸಲಾಗಿದೆ.
ಎಸ್‌ಪಿ ಮಾಜಿ ಶಾಸಕ ಪವನ್ ಪಾಂಡೆ ಅವರು ಅಖಿಲೇಶ್ ಯಾದವ್ ಭೇಟಿಯನ್ನು ಖಚಿತಪಡಿಸಿದ್ದು, ಡಿಸೆಂಬರ್ 12 ರಂದು ರಾಮಲಲ್ಲಾ ಹಾಗೂ ಹನುಮಾನ್‌ಗಢಿ ಮಂದಿರದಲ್ಲಿ ವಿಶೇಷ ಪೂಜೆ ಸಲ್ಲಿಸಿ ಸಂತರ ಆಶೀರ್ವಾದ ಪಡೆಯಲಿದ್ದಾರೆ ಎಂದು ತಿಳಿಸಿದ್ದಾರೆ. ಈ ಭೇಟಿಯು ಉತ್ತರ ಪ್ರದೇಶ ರಾಜಕೀಯದಲ್ಲಿ ಹೊಸ ಕಾವು ಸೃಷ್ಟಿಸಿದೆ.





Leave a comment