SUDDIKSHANA KANNADA NEWS/ DAVANAGERE/ DATE:26-03-2024
ದಾವಣಗೆರೆ: ರಾಜ್ಯದಲ್ಲಿ 28ಕ್ಕೆ 28 ಲೋಕಸಭಾ ಕ್ಷೇತ್ರಗಳಲ್ಲಿ ಗೆಲ್ಲಲೇಬೇಕೆಂಬ ಹಠ ತೊಟ್ಟಿರುವ ಮಾಜಿ ಸಿಎಂ ಬಿ. ಎಸ್. ಯಡಿಯೂರಪ್ಪ ಅವರು ಭಿನ್ನಮತೀಯರ ಜೊತೆ ಮಾತುಕತೆ ನಡೆಸುತ್ತಿದ್ದಾರೆ. ಅಪಸ್ವರ ಎತ್ತಿರುವವರ ಸ್ವರ ಸರಿಪಡಿಸಲು ಮುಂದಾಗಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ್ದ ಮಾಜಿ ಸಿಎಂ ಬಿ. ಎಸ್. ಯಡಿಯೂರಪ್ಪ ನಾನೇ ದಾವಣಗೆರೆಗೆ ಹೋಗುತ್ತಿದ್ದೇನೆ. ಎಲ್ಲವೂ ಸರಿಯಾಗಲಿದೆ ಎಂದು ಹೇಳಿದ್ದಾರೆ. ಆದ್ರೆ, ಅಷ್ಟು ಸುಲಭನಾ ಎಂಬ ಮಾತು ಕೇಳಿ ಬರುತ್ತಿದೆ.
ಸಂಧಾನವೋ ಸಮರವೋ…?
ದಾವಣಗೆರೆಯಲ್ಲಿಯೂ ಬಿಜೆಪಿ ಭಿನ್ನಮತ ಬಿಕ್ಕಟ್ಟು ತಾರಕಕ್ಕೇರಿದ್ದು, ಭಿನ್ನ ಸ್ವರ ಎತ್ತಿರುವವರ ಶಮನಕ್ಕೆ ಖುದ್ದು ರಾಜಾಹುಲಿ ಎಂಟ್ರಿ ಆಗುತ್ತಿದ್ದು, ಸಮರವೋ, ಸಂಧಾನವೋ ಎಂಬ ಕುತೂಹಲ ಕೆರಳಿಸಿದೆ.
ಎಸ್ ಎ ಆರ್ ಮನೆಗೆ ಬಿಎಸ್ ವೈ..?
ಇಂದು ಮಧ್ಯಾಹ್ನ 2 ಗಂಟೆಗೆ ಯಡಿಯೂರಪ್ಪ ಅವರು ದಾವಣಗೆರೆಗೆ ಆಗಮಿಸಲಿದ್ದು, ಮಾಜಿ ಸಚಿವ ಎಸ್. ಎ. ರವೀಂದ್ರನಾಥ್ ಅವರ ನಿವಾಸಕ್ಕೆ ಭೇಟಿ ನೀಡಲಿದ್ದಾರೆ ಎಂದು ಮೂಲಗಳು ತಿಳಿಸಿದ್ದರೆ, ಬಿಜೆಪಿ ಕಚೇರಿಗೆ ಆಗಮಿಸುವ ಸಾಧ್ಯತೆಯೂ ಇದೆ ಎನ್ನಲಾಗಿದೆ. ಸಂಧಾನ ಸಕ್ಸಸ್ ಆದರೆ ಜಿಎಂಐಟಿಯಲ್ಲಿ ಎಲ್ಲರೂ ಬರಲಿದ್ದಾರೆ, ಇಲ್ಲದಿದ್ದರೆ ಬಿಜೆಪಿ ಕಚೇರಿಯಲ್ಲಿಯೇ ಒಗ್ಗಟ್ಟು ಪ್ರದರ್ಶನ ಮಾಡಲಾಗುತ್ತದೆ ಎಂದು ಹೇಳಲಾಗಿದ್ದರೂ ಯಾವುದೇ ಖಚಿತ ಮಾಹಿತಿ ಇಲ್ಲ.
ರಹಸ್ಯ ಸ್ಥಳದಲ್ಲಿ ಸಭೆ..?
ಮತ್ತೊಂದು ಮೂಲಗಳ ಪ್ರಕಾರ ರಹಸ್ಯ ಸ್ಥಳದಲ್ಲಿ ಭಿನ್ನರ ಜೊತೆ ಸಭೆ ನಡೆಸಿ ಮಾತುಕತೆ ಫಲಪ್ರದವಾದರೆ ಮಾಧ್ಯಮಗಳ ಮುಂದೆ ಬರುವುದು ಖಚಿತ. ಸಂಧಾನಕ್ಕೆ ಒಪ್ಪದೇ ಬಂಡಾಯವಾದರೆ ಪತ್ರಿಕಾಗೋಷ್ಠಿ ನಡೆಸುವುದು ಅನುಮಾನ ಎನ್ನಲಾಗಿದೆ. ಒಟ್ಟಿನಲ್ಲಿ ಯಡಿಯೂರಪ್ಪರ ಆಗಮನದಿಂದ ಲೋಕಸಭಾ ಸದಸ್ಯ ಡಾ. ಜಿ. ಎಂ. ಸಿದ್ದೇಶ್ವರ ಹಾಗೂ ಬೆಂಬಲಿಗರಲ್ಲಿ ಚೈತನ್ಯ ತಂದಿದೆ. ಇನ್ನು ಮಾಜಿ ಸಚಿವರಾದ ಎಸ್. ಎ. ರವೀಂದ್ರನಾಥ್, ಎಂ. ಪಿ. ರೇಣುಕಾಚಾರ್ಯ, ಮಾಜಿ ಶಾಸಕರಾದ ಜಿ. ಕರುಣಾಕರ ರೆಡ್ಡಿ, ಎಂ. ಬಸವರಾಜ್ ನಾಯ್ಕ್, ಮಾಜಿ ಎಂಎಲ್‌ಸಿ ಶಿವಯೋಗಿಸ್ವಾಮಿ, ಯುವ ನಾಯಕರಾದ ಮಾಡಾಳ್ ಮಲ್ಲಿಕಾರ್ಜುನ, ಲೋಕಿಕೆರೆ ನಾಗರಾಜ್, ಡಾ. ಟಿ.ಜಿ.ರವಿಕುಮಾರ್, ಸೋಮೇಶ್ವರ ಸುರೇಶ್, ಎಲ್. ಎನ್. ಕಲ್ಲಪ್ಪ ಅವರೊಟ್ಟಿಗೆ ಚರ್ಚೆ ಮಾಡಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ತಡ ಮಾಡಿದರೆ ಪ್ರಚಾರಕ್ಕೆ ತೊಂದರೆಯಾಗಬಹುದು. ಬಂಡಾಯದ ರಾಗ ಜೋರಾಗಿರುವುದರಿಂದ ಸಿದ್ದೇಶ್ವರ ಅವರಿಗೂ ಗೆಲುವಿಗೆ ಕಾರ್ಯತಂತ್ರ ರೂಪಿಸುವುದು ಕಷ್ಟವಾಗಿದೆ. ಈ ಸಮಸ್ಯೆ ಪರಿಹರಿಸುವ ಕುರಿತಂತೆ ಹೆಚ್ಚಿನ ನಿಗಾ ವಹಿಸಬೇಕಾಗಿರುವುದರಿಂದ ಯಡಿಯೂರಪ್ಪ ಅವರು ಆಗಮನದ ಬಳಿಕ ಎಲ್ಲವೂ ಸರಿ ಹೋಗಬಹುದು ಎಂಬ ಲೆಕ್ಕಾಚಾರವೂ ಇದೆ.
11 ಜನರ ಬೇಡಿಕೆ ಏನು..?
ಲೋಕಸಭಾ ಚುನಾವಣೆಯಲ್ಲಿ ಲೋಕಸಭಾ ಸದಸ್ಯ ಡಾ. ಜಿ.ಎಂ. ಸಿದ್ದೇಶ್ಬರ ಮತ್ತವರ ಕುಟುಂಬಕ್ಕೆ ಟಿಕೆಟ್ ನೀಡಬಾರದು ಎಂದು ಏಳೆಂಟು ತಿಂಗಳಿನಿಂದ ಬಿಗಿಪಟ್ಡು ಹಿಡಿದಿದ್ದ ದಾವಣಗೆರೆ ಬಿಜೆಪಿಯ 11 ಮುಖಂಡರು ಯಡಿಯೂರಪ್ಪರ ಮುಂದೆ ಎಲ್ಲವನ್ನೂ ಹೇಳುತ್ತೇವೆ. ಅವರೇ ಬರಲಿ ಎಂದಿದ್ದರು. ಎಸ್. ಎ. ರವೀಂದ್ರನಾಥ್ ಅವರೂ ಇದೇ ಅಭಿಪ್ರಾಯ ವ್ಯಕ್ತಪಡಿಸಿದ್ದರು.
ಎಸ್. ಎ. ರವೀಂದ್ರನಾಥ್ ಅವರ ನಿವಾಸಕ್ಕೆ ಯಡಿಯೂರಪ್ಪ ಅವರು ಆಗಮಿಸುವ ಸಾಧ್ಯತೆ ಇದೆ. ಇಲ್ಲದಿದ್ದರೆ ಭಿನ್ನಮತೀಯರೊಬ್ಬರ ಮನೆಯಲ್ಲಿ ಸಭೆ ನಡೆಸಲು ಮಂದಾಗಲಿದ್ದಾರೆ. ಯಡಿಯೂರಪ್ಪರ ಸಂಧಾನ ಸಭೆಯು ತುಂಬಾನೇ ಮಹತ್ವ ಪಡೆದುಕೊಂಡಿದೆ.
ದಾವಣಗೆರೆಗೆ ಹೊಸ ಅಭ್ಯರ್ಥಿ ಘೋಷಣೆ ಖಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದ್ದ ಬಿ.ಎಸ್.ಯಡಿಯೂರಪ್ಪ ಮತ್ತು ಬಿ.ವೈ. ವಿಜಯೇಂದ್ರ, ಕೊನೆಗೆ ಸಿದ್ದೇಶ್ವರ ಕುಟುಂಬಕ್ಕೆ ಟಿಕೆಟ್ ಕೊಡಿಸಿದ್ದರ ಬಗ್ಗೆ ಜಿಲ್ಲಾ ಕಾರ್ಯಕರ್ತರು, ಮುಖಂಡರು ಆಕ್ರೋಶ ವ್ಯಕ್ತಪಡಿಸಿದ್ದರು.
ಬಂಡಾಯವಲ್ಲ, ಜನರ ಮನದಾಳ ಇದು
ನರೇಂದ್ರ ಮೋದಿಯವರು ಪ್ರಧಾನಿಯಾಗಿಸಲು ನಾವು ಪಣ ತೊಟ್ಟಿದ್ದೇವೆ. ಆದರೆ, ದಾವಣಗೆರೆ ಬಿಜೆಪಿಯನ್ನು ಜಿ.ಎಂ.ಸಿದ್ದೇಶ್ವರ ಕುಟುಂಬದ ಹಿಡಿತದಿಂದ ಬಿಡಿಸಿಯೇ ಸಿದ್ಧ ಎಂದು ಬಿಜೆಪಿ ಬಂಡಾಯ ನಾಯಕರು ಹೇಳುತ್ತಿದ್ದಾರೆ. ನಾವು ಯಾರ ವಿರುದ್ಧವೂ ರಣಕಹಳೆ ಮೊಳಗಿಸಿಲ್ಲ. ಮತದಾರರು, ಜನರು, ಮುಖಂಡರು, ಕಾರ್ಯಕರ್ತರ ಅಭಿಪ್ರಾಯ ತಿಳಿಸಿದ್ದೇವೆ ಎಂದು ಹೇಳುತ್ತಲೇ ಇರುವ ಎಸ್. ಎ. ರವೀಂದ್ರನಾಥ್ ನೇತೃತ್ವದ ತಂಡವು ಏನೆಲ್ಲಾ ಹೇಳುತ್ತದೆ? ಯಡಿಯೂರಪ್ಪ ಸಹಮತ ವ್ಯಕ್ತಪಡಿಸುತ್ತಾರಾ? ಅಭ್ಯರ್ಥಿ ಬದಲಾವಣೆ ಕುರಿತಂತೆ ಹೈಕಮಾಂಡ್ ಜೊತೆ ಮಾತನಾಡುತ್ತಾರೋ ಇಲ್ಲವೋ, ಸಿದ್ದೇಶ್ವರ ಗೆಲುವಿಗೆ ಶ್ರಮಿಸಿ ಎಂದು ಸೂಚನೆ ನೀಡುತ್ತಾರೋ? ಸಂಧಾನಕ್ಕೆ ಒಪ್ಪದಿದ್ದರೆ ಏನು ಮಾಡಬೇಕು? ಒಪ್ಪಿದರೆ ಗೆಲುವಿಗೆ ಹೇಗೆ ಕಾರ್ಯತಂತ್ರ ರೂಪಿಸಬೇಕು ಎಂಬುದು ಸೇರಿದಂತೆ ಹತ್ತು ಹಲವು ವಿಚಾರಗಳ ಕುರಿತಂತೆ ಚರ್ಚೆಯಾಗಲಿದೆ.
ಜಿ.ಎಂ. ಸಿದ್ದೇಶ್ವರ ಮತ್ತವರ ಕುಟುಂಬ ರಾಜಕಾರಣದ ವಿರುದ್ಧ ಒಗ್ಗಟ್ಟಾಗಿರುವ 11 ಜನರ ತಂಡಕ್ಕೆ ಮಾಜಿ ಸಚಿವ ಎಸ್.ಎ. ರವೀಂದ್ರನಾಥ್ ಅವರೇ ಕ್ಯಾಪ್ಟನ್! ಇವರೊಂದಿಗೆ ಮಾಜಿ ಸಚಿವರಾದ ಜಿ. ಕರುಣಾಕರ ರೆಡ್ಡಿ,
ಎಂ.ಪಿ.ರೇಣುಕಾಚಾರ್ಯ, ಮಾಜಿ ಶಾಸಕ ಎಂ. ಬಸವರಾಜ್ ನಾಯ್ಕ್, ಮಾಜಿ ಎಂಎಲ್‌ಸಿ ಶಿವಯೋಗಿಸ್ವಾಮಿ, ಯುವ ನಾಯಕರಾದ ಮಾಡಾಳ್ ಮಲ್ಲಿಕಾರ್ಜುನ, ಲೋಕಿಕೆರೆ ನಾಗರಾಜ್, ಡಾ. ಟಿ.ಜಿ.ರವಿಕುಮಾರ್,
ಸೋಮೇಶ್ವರ ಸುರೇಶ್, ಎಲ್. ಎನ್. ಕಲ್ಲಪ್ಪ ಅವರ ಸಶಕ್ತ ತಂಡವಿದೆ.
ಜಿಎಂಎಸ್ ಟೀಂಗೆ ಕಂಪನ…!
ದಾವಣಗೆರೆ ವಾಜಪೇಯಿ ಎಂಬ ಖ್ಯಾತಿಯ ಮಾಜಿ ಶಾಸಕ ಟಿ. ಗುರುಸಿದ್ಧನಗೌಡರು ದಾವಣಗೆರೆ ಲಗಾನ್ ತಂಡದ ಕೋಚ್ ಆಗಿದ್ದು, ಈ ಎಲ್ಲರ ತೀವ್ರ ವಿರೋಧವು ಜಿ.ಎಂ. ಟೀಂಗೆ ಕಂಪನ ತಂದಿದೆ.
ದಾವಣಗೆರೆ ಉತ್ತರ ಕ್ಷೇತ್ರದ ಕಾರ್ಯಕರ್ತರ ಸಭೆಯಲ್ಲಿ ಜಿ.ಎಂ. ಸಿದ್ದೇಶ್ವರರ ವಿರುದ್ಧ ದೊಡ್ಡ ದನಿಯಲ್ಲಿ ವಿರೋಧ ವ್ಯಕ್ತವಾಗಿದೆ. ಯಡಿಯೂರಪ್ಪ ಅವರೇ ಖುದ್ದಾಗಿ ದಾವಣಗೆರೆಗೆ ಬರುವುದಾಗಿ ತಿಳಿಸಿದ್ದರು. ಬಿಎಸ್ ವೈ ಬಂದು ನಮ್ಮ ಬೇಡಿಕೆ ಕೇಳಿ, ಅಭ್ಯರ್ಥಿ ಬದಲು ಮಾಡುವವರೆಗೂ ನಮ್ಮ ಬಿಗಿ ಪಟ್ಟು ಸಡಿಲಿಸುವುದಿಲ್ಲ ಎಂದಿದ್ದರು. ಎಲ್ಲದಕ್ಕೂ ಇಂದೇ ಉತ್ತರ ಸಿಗುತ್ತದೆಯೋ ಇಲ್ಲವೋ ಮತ್ತಷ್ಟು ದಿನಗಳ ಕಾಯಬೇಕೋ ಎಂದು ನಿರ್ಧಾರವಾಗಲಿದೆ.