ಕ್ರಿಕೆಟ್ ಭದ್ರಾ ಡ್ಯಾಂ  ಇರಾನ್‌ ಅಮೆರಿಕ ಕರೆಂಟ್ DINA BHAVISHYA cinema SHIVAMOGGA ಷೇರು ಕ್ರೀಡೆ ವಾಣಿಜ್ಯ Gold Rate ಸಾಹಿತ್ಯ JOB NEWS

---Advertisement---

ಖಾಸಗಿ ಕಂಪೆನಿಗೆ ಕಡಿಮೆ ಬೆಲೆಗೆ ಜಮೀನು ನೀಡಿರುವುದರ ಹಿಂದೆ ಸಚಿವ, ಸಂಸದರ ಕೈವಾಡ ಶಂಕೆ: ಯಶವಂತರಾವ್ ಜಾಧವ್ ಸ್ಫೋಟಕ ಆರೋಪ!

On: August 4, 2025 6:27 PM
Follow Us:
---Advertisement---

SUDDIKSHANA KANNADA NEWS/ DAVANAGERE/DATE:04_08_2025

ದಾವಣಗೆರೆ: ನಗರದ ಕರೂರು ಕೈಗಾರಿಕಾ ಪ್ರದೇಶದಲ್ಲಿ ಮೆ. ಎಕೊ ರಿಸೈಕ್ಟರ್ಸ್ ಗೆ ನಿಯಮ ಬಾಹಿರವಾಗಿ ಜಮೀನು ಮಂಜೂರು ಮಾಡಲಾಗಿದೆ. ಕೂಡಲೇ ವಾಪಸ್ ಪಡೆಯಬೇಕು. ಇಲ್ಲದಿದ್ದರೆ ಬೀದಿಗಿಳಿದು ಹೋರಾಟ ಮಾಡಬೇಕಾಗುತ್ತದೆ ಎಂದು ಬಿಜೆಪಿ ಜಿಲ್ಲಾ ಘಟಕದ ಮಾಜಿ ಅಧ್ಯಕ್ಷ ಯಶವಂತರಾವ್ ಜಾಧವ್ ಎಚ್ಚರಿಕೆ ನೀಡಿದರು.

READ ALSO THIS STORY: ವೋಟರ್ ಐಡಿ, ಕ್ಯಾಂಡಿಲ್ಯಾಂಡ್ ಚಾಕೊಲೇಟ್‌ಗಳು, ಜಿಪಿಎಸ್: ಪಹಲ್ಗಾಮ್ ದಾಳಿ ಉಗ್ರರು ಪಾಕಿಸ್ತಾನದವರೆಂದು ಸಾಬೀತು!

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲಾ ಉಸ್ತುವಾರಿ ಸಚಿವ ಎಸ್. ಎಸ್. ಮಲ್ಲಿಕಾರ್ಜುನ, ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ್ ಅವರ ಕೈವಾಡ ಈ ಕಂಪೆನಿಗೆ ಜಮೀನು ನೀಡಿರುವುದರ ಹಿಂದಿದೆ ಎಂಬ ಅನುಮಾನ ಇದೆ. ದಾವಣಗೆರೆ ನಗರದ ಕರೂರು ಕೈಗಾರಿಕಾ ಪ್ರದೇಶವನ್ನು 2005-06 ನೇ ಸಾಲಿನಲ್ಲಿ ಅಭಿವೃದ್ಧಿ ಪಡಿಸಲಾಗಿರುತ್ತದೆ. ಒಟ್ಟು 102.76 ಎಕರೆ ಪ್ರದೇಶವನ್ನು ಒಟ್ಟು 217 ಘಟಕಗಳಿಗೆ ನಿವೇಶನಗಳನ್ನಾಗಿ ಮಾಡಿ ಹಂಚಿಕೆ ಮಾಡಲಾಗಿರುತ್ತದೆ. ಕರೂರು ಕೈಗಾರಿಕಾ ಪ್ರದೇಶದ 102.76 ಎಕರೆ ಹಾಗೂ ಲೋಕಿಕೆರೆ ರಸ್ತೆಯ ಕೈಗಾರಿಕಾ ಪ್ರದೇಶದ 94.50 ಎಕರೆ ಪ್ರದೇಶವನ್ನು ಮಹಾನಗರ ಪಾಲಿಕೆಗೆ ಹಸ್ತಾಂತರಿಸುವ ಪ್ರಕ್ರಿಯೆ ಚಾಲನೆಯಲ್ಲಿದೆ ಎಂದು ತಿಳಿಸಿದರು.

ಈ ನಡುವೆ, ಕರೂರು ಕೈಗಾರಿಕಾ ಪ್ರದೇಶದ ನಿವೇಶನ ಸಂಖ್ಯೆ :68-ಡಿ ರಲ್ಲಿನ 1.50 ಎಕರೆ ಜಮೀನನ್ನು ಘನತ್ಯಾಜ್ಯ ಸಂಗ್ರಹಣೆ ಮತ್ತು ನಿರ್ವಹಣೆಗಾಗಿ ಕಾಯ್ದಿರಿಸಲಾಗಿತ್ತು. ಈ ಜಮೀನಿನ ಇಂದಿನ ಮಾರುಕಟ್ಟೆ ಬೆಲೆ ಸುಮಾರು ರೂ 15 ಕೋಟಿಯಷ್ಟಿದೆ. ಈ ಜಮೀನಿನಲ್ಲಿ ಮಹಾನಗರ ಪಾಲಿಕೆ ವತಿಯಿಂದ ಘನತ್ಯಾಜ್ಯ ಸಂಗ್ರಹಣೆ ಮತ್ತು ನಿರ್ವಹಣೆ ಮಾಡುವ ದೃಷ್ಟಿಯಿಂದ ಮಹಾನಗರ ಪಾಲಿಕೆಗೆ ಹಸ್ತಾಂತರ ಮಾಡಿಕೊಳ್ಳಲಾಗಿರುತ್ತದೆ. ಈ ಜಮೀನಿನ ಮೇಲೆ ಕಣ್ಣು ಹಾಕಿರುವ
ಜಿಲ್ಲಾ ಉಸ್ತುವಾರಿ ಸಚಿವರು ಬೇನಾಮಿ ಹೆಸರಿನ ಮೇಲೆ ಸ್ವಂತಕ್ಕೆ ಘನತ್ಯಾಜ್ಯ ಸಂಗ್ರಹಣೆ ಮತ್ತು ನಿರ್ವಹಣೆ ಘಟಕ ಸ್ಥಾಪನೆ ಮಾಡುವ ದೃಷ್ಟಿಯಿಂದ ಈ ಜಮೀನು ಹಂಚಿಕೆ ಮಾಡಿಸಿಕೊಂಡಿದ್ದಾರೆ ಎಂದು ಆರೋಪಿಸಿದರು.

ಮೆ: ಹೆಚ್.ಪಿ.ಸಿ. ಎಕೋ ರಿಸೈಕ್ಲರ್ಸ ಹೆಸರಿನಲ್ಲಿ 15.00 ಕೋಟಿ ಬೆಲೆ ಬಾಳುವ ಈ ಜಮೀನನ್ನು ಕೇವಲ 1 ಕೋಟಿ 13 ಲಕ್ಷಕ್ಕೆ ಹಂಚಿಕೆ ಮಾಡಿಸಿಕೊಂಡಿರುತ್ತಾರೆ. ಕೇವಲ 70 ಲಕ್ಷ ರೂಪಾಯಿಗಳಿಗೆ ಒಂದು ಎಕರೆಯಂತೆ ಹಂಚಿಕೆ ಮಾಡಿಸಿಕೊಂಡು ಜಿಲ್ಲೆಯ ಜನತೆಗೆ ಜಿಲ್ಲಾ ಉಸ್ತುವಾರಿ ಸಚಿವರು ದ್ರೋಹ ಬಗೆದಿದ್ದಾರೆ. ಮೆ ಹೆಚ್.ಪಿ.ಸಿ. ಎಕೋ ರಿಸೈಕ್ಲರ್ಸ್ ಕಂಪನಿಯವರು ದಿನಾಂಕ 09.09.2024 ರಂದು ನಮಗೆ ಘಟಕ ಸ್ಥಾಪಿಸಲು ನಿವೇಶನ ಮಂಜೂರು ಮಾಡಿಕೊಡಿ ಎಂದು ಕೈಗಾರಿಕಾ ಇಲಾಖೆಯ
ಜಂಟಿ ನಿರ್ದೇಶಕರಿಗೆ ಅರ್ಜಿ ಸಲ್ಲಿಸಿದ್ದಾರೆ. ದಿನಾಂಕ: 10.09.2024 ರಂದು ಅಂದರೆ, ಕೇವಲ ಒಂದೇ ದಿನದ ಅಂತರದಲ್ಲಿ ಸದರಿ ಕಂಪನಿಗೆ ಕೇವಲ 1.12 ಕೋಟಿ ಮೊತ್ತಕ್ಕೆ ಒಂದೂವರೆ ಎಕರೆ ಜಮೀನನ್ನು ಹಂಚಿಕೆ ಮಾಡಲು ದಿನಾಂಕ 10.09.2024 ರಂದು ನಡೆದ ಜಿಲ್ಲಾ ಮಟ್ಟದ ಏಕ ಗವಾಕ್ಷಿ ಸಮಿತಿಯಲ್ಲಿ ತೀರ್ಮಾನ ತಗೆದುಕೊಳ್ಳುತ್ತಾರೆ ಎಂದು ದೂರಿದರು.

ಕೇವಲ ಒಂದೇ ದಿನದಲ್ಲಿ ಜಮೀನು ಮಂಜೂರು ಮಾಡಲು ತೀರ್ಮಾನ ತಗೆದುಕೊಳ್ಳುತ್ತಾರೆ ಎಂದರೆ ಇದರ ಹಿಂದೆ ಎಂಥಹ ಪ್ರಭಾವಿ ವ್ಯಕ್ತಿಗಳಿರಬಹುದು ಎಂದು ನೀವು ಊಹಿಸಿಕೊಳ್ಳಬಹುದು. ಈಗಾಗಲೇ, ಮಹಾನಗರ ಪಾಲಿಕೆಗೆ ಹಸ್ತಾಂತರಿಸಿಕೊಂಡಿರುವ ಜಮೀನನ್ನು ವಾಪಾಸ್ಸು ಪಡೆದು ಈ ಕಂಪನಿಗೆ ಹಂಚಿಕೆ ಮಾಡಿರುವ ಉದ್ದೇಶವಾದರೂ ಏನು ಎಂಬುದನ್ನು ನಗರದ ಜನತೆ ಅರ್ಥ ಮಾಡಿಕೊಳ್ಳಬೇಕು. ಮಾಜಿ ಸಂಸದ ಜಿ.ಎಂ.ಸಿದ್ದೇಶ್ವರ ಅವರು ಈ ಜಿಲ್ಲೆಗೆ ತಂದಿರುವ ಸಾಫ್ಟ್ ವೇರ್ ಟೆಕ್ನಾಲಜಿ ಪಾರ್ಕ್‌ನ್ನು ವಿಸ್ತರಣೆ ಮಾಡಲು ದಾವಣಗೆರೆ ನಗರದ ವ್ಯಾಪ್ತಿಯಲ್ಲಿಯೇ ಎರಡು ಎಕರೆ ಜಮೀನು ಬೇಕಾಗಿದೆ. ಸಾಫ್ಟ್‌ವೇರ್ ಟೆಕ್ನಾಲಜಿ ಪಾರ್ಕ್ ವಿಸ್ತರಣೆ ಮಾಡಲು ಕರೂರು ಕೈಗಾರಿಕಾ ಪ್ರದೇಶದಲ್ಲಿರುವ ಇದೇ ಜಮೀನನ್ನು ಹಂಚಿಕೆ ಮಾಡಬಹುದಾಗಿದೆ. ಆದರೆ, ಅದೇ ದಿನಾಂಕದಂದು ನಡೆದ ಏಕ ಗವಾಕ್ಷಿ ಸಭೆಯಲ್ಲಿ ಸಾಪ್ಟವೇರ್ ಟೆಕ್ನಾಲಜಿ ಪಾರ್ಕ್‌ಗೆ ಜಮೀನು ನೀಡುವ ವಿಚಾರ ಬಂದಾಗ ಹರಿಹರ ತಾಲ್ಲೂಕಿನ ಸಾರಥಿ-ಕುರುಬರಹಳ್ಳಿ ಕೈಗಾರಿಕಾ ಪ್ರದೇಶದಲ್ಲಿ ಹಂಚಿಕೆ ಮಾಡುವ ಬಗ್ಗೆ ಚರ್ಚೆ ನಡೆಸಿದ್ದಾರೆ ಎಂದು ದೂರಿದರು.

ದಾವಣಗೆರೆ ನಗರವನ್ನು ಸಾಫ್ಟ್‌ವೇರ್ ಹಬ್ ಮಾಡುತ್ತೇನೆ ಎನ್ನುವ ಈಗಿನ ಸಂಸದರು ಈ ಬಗ್ಗೆ ಗಮನ ಹರಿಸಲಿ, ಸಾರಥಿ-ಕುರುಬರಹಳ್ಳಿ ಬಳಿಯಿರುವ ಕೈಗಾರಿಕಾ ಪ್ರದೇಶದಲ್ಲಿ ಸಾಪ್ಟವೇರ್ ಟೆಕ್ನಾಲಜಿ ಪಾರ್ಕ್ ನಿರ್ಮಾಣ ಮಾಡಿದರೆ ಅಲ್ಲಿಗೆ ಯಾರು ಹೋಗುತ್ತಾರೆ ಎಂದು ಪ್ರಶ್ನಿಸಿದರು.

ಕೇವಲ ಭಾಷಣದಲ್ಲಿ ಹಾಗೂ ಪ್ರಣಾಳಿಕೆಯಲ್ಲಿ ದಾವಣಗೆರೆಯನ್ನು ಹಾಗೆ ಮಾಡ್ತೀನಿ, ಹೀಗೆ ಮಾಡ್ತೀನಿ ಅಂದ್ರೆ ಸಾಕಾಗೋಲ್ಲ, ಅದನ್ನು ಮಾಡುವ ಇಚ್ಚಾಶಕ್ತಿ ಇರಬೇಕು, ಅಂತಹ ಇಚ್ಚಾಶಕ್ತಿಯನ್ನು ಉಸ್ತುವಾರಿ ಸಚಿವರು ಮತ್ತು ಸಂಸದರು ತೋರಿಸಲಿ ಎಂದು ಸವಾಲು ಹಾಕಿದರು.

ಘನತ್ಯಾಜ್ಯ ಸಂಗ್ರಹಣೆ ಮತ್ತು ನಿರ್ವಹಣೆ ಘಟಕವನ್ನು ಬೇಕಾದರೆ ಸಾರಥಿ-ಕುರುಬರಹಳ್ಳಿ ಕೈಗಾರಿಕಾ ಪ್ರದೇಶದಲ್ಲಿ ನಿರ್ಮಾಣ ಮಾಡಲಿ, ನಗರದಿಂದ ದೂರವೂ ಇದೆ ಹಾಗೂ ಇದರಿಂದ ಸಾರ್ವಜನಿಕರಿಗೆ ಯಾವುದೇ ತೊಂದರೆಯೂ ಆಗುವುದಿಲ್ಲ. ಅದನ್ನು ಬಿಟ್ಟು 15 ಕೋಟಿ ಬೆಲೆಬಾಳುವ ಜಮೀನಿನಲ್ಲಿ ಘನತ್ಯಾಜ್ಯ ಘಟಕ ಮಾಡ್ತೀನಿ ಎನ್ನುವ ಉಸ್ತುವಾರಿ ಸಚಿವರಿಗೆ ಏನನ್ನಬೇಕು? * ಇದು ನಿಜವಾದ ಕಾಳಜಿ ಅಲ್ಲ, ಬೆಲೆಬಾಳುವ ಜಮೀನಿನ ಮೇಲೆ ಅವರಿಗಿರುವ ಪ್ರೀತಿ ಅಷ್ಟೆ, ಇದನ್ನು ಜಿಲ್ಲೆಯ ಜನರು ಅರ್ಥಮಾಡಿಕೊಳ್ಳಬೇಕು ಎಂದು ಯಶವಂತರಾವ್ ಜಾಧವ್ ಹೇಳಿದರು.

ಗೋಷ್ಠಿಯಲ್ಲಿ ಅಣಬೇರು ಜೀವನಮೂರ್ತಿ, ದೂಡಾ ಮಾಜಿ ಅಧ್ಯಕ್ಷ ರಾಜನಹಳ್ಳಿ ಶಿವಕುಮಾರ್, ಆರನೇ ಮೈಲಿಕಲ್ಲು ವಿಜಯ್ ಕುಮಾರ್, ಟಿಂಕರ್ ಮಂಜಣ್ಣ, ಜಿ. ಕಿಶೋರ್ ಕುಮಾರ್, ಗೋವಿಂದ ರಾಜ್, ಶಂಕರಗೌಡ ಬಿರಾದಾರ ಮತ್ತಿತರರು ಹಾಜರಿದ್ದರು.

ಯೋಗರಾಜ್

ಯೋಗರಾಜ್, ಸುದ್ದಿಕ್ಷಣ.ಕಾಂ ಸಂಪಾದಕ

Join WhatsApp

Join Now

Join Telegram

Join Now

Leave a Comment