SUDDIKSHANA KANNADA NEWS/DAVANAGERE/DATE:08_12_2025
ದಾವಣಗೆರೆ: ಕೆಪಿಎಸ್ ಮ್ಯಾಗ್ನೆಟ್ ಯೋಜನೆಯಡಿ ದಾವಣಗೆರೆ ಜಿಲ್ಲೆಯಲ್ಲಿ 900ಕ್ಕೂ ಅಧಿಕ ಸರ್ಕಾರಿ ಶಾಲೆಗಳು ಮುಚ್ಚಲಿವೆ. ಜಿಲ್ಲೆಯಲ್ಲಿ 243 ಕೆಪಿಎಸ್ ಮ್ಯಾಗ್ನೆಟ್ ಶಾಲೆಗಳೆಂದು ಗುರುತಿಸಲಾಗಿದ್ದು ಈ ಎಲ್ಲ ಶಾಲೆಗಳನ್ನು ಅವುಗಳಲ್ಲಿ ವಿಲೀನಗೊಳಿಸಲಾಗುತ್ತದೆ ಎಂಬ ಮಾಹಿತಿ ಲಭಿಸಿದೆ.
ಮೊದಲ ಹಂತದಲ್ಲೇ ಎಸ್ ಎಸ್ ಎಮ್ ನಗರ ಉರ್ದು ಮತ್ತು ಎಸ್ ಎಸ್ ಎಮ್ ನಗರ ಕನ್ನಡ ಹಿರಿಯ ಪ್ರಾರ್ಥಮಿಕ ಶಾಲೆ, ಆನಗೋಡು, ಪಲ್ಲಗಟ್ಟೆ, ಅಣಬೇರು, ಗುತ್ತೂರು, ಕಕ್ಕರಗೊಳ್ಳ ಸೇರಿದಂತೆ 20 ಸರ್ಕಾರಿ ಶಾಲೆಗಳನ್ನು ಮೊದಲ ಹಂತದಲ್ಲಿ ಕೆಪಿಎಸ್ ಮ್ಯಾಗ್ನೆಟ್ ಆಗಿ ಉನ್ನತಿಕರಿಸಲಾಗುತ್ತಿದೆ. ಕಕ್ಕರಗೊಳ್ಳ ಕೆಪಿಎಸ್ ಶಾಲೆ ವ್ಯಾಪ್ತಿಯಲ್ಲಿ ಬರುವಂತಹ ಆವರಗೊಳ್ಳ ಜಿ ಎಚ್ ಪಿ ಎಸ್(149), ಆವರಗೊಳ್ಳ ಜಿ ಎಲ್ ಪಿ ಎಸ್ ಉರ್ದು(38) ಕಕ್ಕರಗೊಳ್ಳ ಕ್ಯಾಂಪ್ ಆಂಜನೇಯ ಬಡಾವಣೆ (32)ಮತ್ತು ಕೋಡಿಹಳ್ಳಿ(44) ಈ ನಾಲ್ಕು ಶಾಲೆಗಳು ವಿಲೀನಗೊಳಿಸಲಾಗುವುದು ಎಂದು ಆರೋಪಿಸಲಾಗಿದೆ.
ಈ ಹಿನ್ನೆಲೆಯಲ್ಲಿ ಕೋಡಿಹಳ್ಳಿ ಗ್ರಾಮಸ್ಥರು ಎಐಡಿಎಸ್ಓ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದರು. ಯಾವುದೇ ಕಾರಣಕ್ಕೂ ನಮ್ಮ ಊರಿನ ಶಾಲೆಯನ್ನು ನಾವು ಮುಚ್ಚಲು ಬಿಡುವುದಿಲ್ಲ ಎಂದು ಕೆ ಕೋಡಿಹಳ್ಳಿ ಜನತೆ ಶಾಲೆಯ ಮುಂದೆ ಪ್ರತಿಭಟನೆ ಮಾಡಿದರು.
ಎಸ್ ಡಿಎಂಸಿ ಸದಸ್ಯ ಅಂಜಿನಪ್ಪ ಮಾತನಾಡಿ, ಸುಮಾರು ಮೂರು ತಲೆಮಾರು ಓದಿರುವಂತಹ ಈ ಶಾಲೆಯು ಇಂದಿಗೂ ಬಹುತೇಕ ಬಡ ಮಕ್ಕಳಿಗೆ ಹಾಗೂ ದಲಿತ ಮಕ್ಕಳಿಗೆ ಆಶ್ರಯವಾಗಿದೆ. ಈ ಶಾಲೆ ಮುಚ್ಚಿದರೆ ಪಕ್ಕದ ಹಳ್ಳಿಗೆ ಮಕ್ಕಳನ್ನು ಕಳುಹಿಸುವುದು ಕಷ್ಟಕರ. ನಮ್ಮೂರ ಶಾಲೆ ನಮ್ಮ ಹಕ್ಕು ಯಾವುದೇ ಕಾರಣಕ್ಕೂ ನಮ್ಮೂರ ಶಾಲೆಯನ್ನು ಪಕ್ಕದ ಊರಿಗೆ ವಿಲೀನಗೊಳಿಸಲು ನಾವು ಬಿಡುವುದಿಲ್ಲ ಎಂದು ಪೋಷಕರು ಆಕ್ರೋಶ ವ್ಯಕ್ತಪಡಿಸಿದರು.
ಕೆ ಕೋಡಿಹಳ್ಳಿಯಿಂದ ಕಕ್ಕರಗೊಳ್ಳ 3ಕಿಮಿ ಅಂತರದಲ್ಲಿದ್ದು ದಿನನಿತ್ಯ ಗ್ರಾಮಸ್ಥರೇ ಓಡಾಡುವುದು ಕಷ್ಟ ಅಂತಹದರಲ್ಲಿ 40ವರ್ಷ ಬಾರದ ಬಸ್ಸು ಈಗ ಹೇಗೆ ಬರಲು ಸಾಧ್ಯ. ನಮಗೆ ಸುಳ್ಳು ಹೇಳಿಕೆಗಳು ಬೇಕಿಲ್ಲ ಎಂದು ಸರ್ಕಾರದ ನಡೆ ಟೀಕಿಸಿದರು.
ಊರಿನ ಹಿರಿಯರಾದ ಜಯಣ್ಣ ಮಾತನಾಡಿ, ಖಾಸಗೀಕರಣ ಮಾಡಲು ಬಂದವರಿಗೆ ಸರಿಯಾದ ಪಾಠ ಕಲಿಸುತ್ತೇವೆ ಕೆಪಿಎಸ್ ಮ್ಯಾಗ್ನೆಟ್ ಶಾಲೆ ಯೋಜನೆಯನ್ನು ಘಂಟಾಗೋಷವಾಗಿ ವಿರೋಧಿಸುತ್ತೇವೆ ಎಂದು ಅಭಿಪ್ರಾಯಪಟ್ಟರು.
ಎಐಡಿಎಸ್ ಜಿಲ್ಲಾ ಅಧ್ಯಕ್ಷೆ ಪೂಜಾ ನಂದಿಹಳ್ಳಿಯವರು ಮಾತನಾಡಿ, ಕಾಂಗ್ರೆಸ್ ರಾಜ್ಯ ಸರ್ಕಾರವು ಸರ್ಕಾರಿ ಶಾಲೆಗಳನ್ನು ಬಲಪಡಿಸುವ ಹೆಸರಿನಲ್ಲಿ 40,000ಕ್ಕೂ ಹೆಚ್ಚು ಅಧಿಕ ಶಾಲೆಗಳನ್ನು ಮುಚ್ಚಲು ಮುಂದಾಗಿದೆ. ನಾವು ಬಡವರ ಪರ ಎಂದು ಹೇಳುತ್ತಾ ಹಿಂದೆ ಬಿಜೆಪಿ ಸರ್ಕಾರ ಕರ್ನಾಟಕದಲ್ಲೇ ಮೊದಲು ಎಂಬಂತೆ ಜಾರಿಗೊಳಿಸಿದ್ದ ರಾಷ್ಟ್ರೀಯ ಶಿಕ್ಷಣ ನೀತಿಯನ್ನು(NEP-2020) ವಿರೋಧಿಸಿ ಜನಗಳನ್ನು ಮೂರ್ಖರನ್ನಾಗಿಸುವಂತಹ ಅದೇ ತರಹದ ಹೊಸ ನೀತಿಯನ್ನು ಬಗೆ-ಬಗೆಯ ಬಣ್ಣ-ಬಣ್ಣದ ಹೆಸರಿನಲ್ಲಿ ಖಾಸಗೀಕರಣ ಮಾಡುವ ನೀತಿಯನ್ನು ಜಾರಿಗೊಳಿಸಲು ಮುಂದಾಗಿದೆ ಎಂದು ಆರೋಪಿಸಿದರು.
ಕರ್ನಾಟಕ ಪಬ್ಲಿಕ್ ಶಾಲೆ ಒಂದೇ ಸೂರಿನಡಿ ಎಲ್ ಕೆ ಜಿಯಿಂದ ಪಿಯುಸಿವರೆಗೆ ಉಚಿತ ಶಿಕ್ಷಣ ಕೊಡಲಾಗುವುದು. ಉಚಿತ ಸಾರಿಗೆ ವ್ಯವಸ್ಥೆ ನೀಡಲಾಗುವುದು. ಎಲ್ಲರಿಗೂ ಗೊತ್ತಿರುವಂತಹ ವಿಷಯವೇ ಇಂದಿಗೂ ಬಹುತೇಕ ಹಳ್ಳಿಗಳಿಗೆ ಸಮರ್ಪಕ ಸಾರಿಗೆ
ವ್ಯವಸ್ಥೆ ಇಲ್ಲದಿರುವಂತಹ ಸಂದರ್ಭದಲ್ಲಿ ಬಹುತೇಕ ಹಳ್ಳಿಗಳಿಂದ ಕಾಲೇಜಿಗೆ ತೆರಳುವ ವಿದ್ಯಾರ್ಥಿಗಳು ತಾಸು ಗಟ್ಟಲೇ ಕಾದು ಶಾಲೆಗೆ ಅಥವಾ ಕಾಲೇಜಿಗೆ ತೆರಳದಿರುವ ಸಂದರ್ಭ ಅದೆಷ್ಟೋ. ಮತ್ತೆ ಇವರು ಕೊಡುವ ಆಶ್ವಾಸನೆಯನ್ನು ಜನಗಳು ನಂಬಲು
ಮೂರ್ಖರೇ? ಮೊದಲು ಸರ್ಕಾರಿ ಶಾಲೆಗಳನ್ನು ಬಲಪಡಿಸಲು ಸಮರ್ಪಕ ಅನುದಾನವನ್ನು ಬಿಡುಗಡೆ ಮಾಡಿ ಎಂದು ಒತ್ತಾಯಿಸಿದರು.
ಗುಣಮಟ್ಟದ ಶಿಕ್ಷಣವನ್ನು ಕೊಡಲು ಸಮರ್ಪಕ ಶಿಕ್ಷಕರನ್ನು ನೇಮಕಾತಿ ಮಾಡಿಕೊಳ್ಳಿ. ಸರ್ಕಾರ ಉಲ್ಲೇಖಿಸುವ ಪ್ರಕಾರ ಕೆಪಿಎಸ್ ಮ್ಯಾಗ್ನೆಟ್ ಶಾಲೆಗೆ ವಿಲೀನವಾಗುವ ಪಕ್ಕದ ಹಳ್ಳಿಯಿಂದ ಬರುವ ಮಕ್ಕಳಿಗೆ ಸಾರಿಗೆ ವ್ಯವಸ್ಥೆಯನ್ನು ಆ ಹಳ್ಳಿಯ ಎಸ್ ಡಿ ಎಂ ಸಿ ಸಮಿತಿ ನೋಡಿಕೊಳ್ಳಬೇಕು ಎಂದು ಹೇಳಲಾಗಿದೆ. ಅದರ ಅರ್ಥ ಉಚಿತ ಸಾರಿಗೆ ಹೇಗಾಗಲು ಸಾಧ್ಯ? ಅಷ್ಟೇ ಅಲ್ಲದೆ ಕೆಪಿಎಸ್ ಶಾಲೆಯನ್ನು ನಿರ್ವಹಣೆ ಮಾಡುವ ಸಂಪೂರ್ಣ ಜವಾಬ್ದಾರಿಯನ್ನು ಹೊರಗುತ್ತಿಗೆ ಮಾಡಲಾಗುವುದು. ಶಾಲೆಯು
ತನ್ನ ಆದಾಯವನ್ನು ತಾನೇ ಸೃಷ್ಟಿಸಿಕೊಳ್ಳಬೇಕು ಎಂದು ಹೇಳಲಾಗಿದೆ. ಈ ನೀತಿಯು ಬಡವರನ್ನು ಕೂಲಿ ಕಾರ್ಮಿಕರ ಮಕ್ಕಳನ್ನು ಶಿಕ್ಷಣದಿಂದ 400 ವರ್ಷ ಹಿಂದೆ ತೆಗೆದುಕೊಂಡು ಹೋಗುತ್ತದೆಯೇ ಹೊರತು ಉತ್ತೇಜನ ಕೊಡಲಾರದು. ಇದು ಸಂಪೂರ್ಣ ಶಿಕ್ಷಣದ ಖಾಸಗಿಕರಣ ಮಾಡುವಂತಹ ಮತ್ತೊಂದು ಹೆಜ್ಜೆ ಎಂದು ಆರೋಪಿಸಿದರು.
ಈ ಪ್ರತಿಭಟನೆಯಲ್ಲಿ ಎಐಡಿಎಸ್‍ಓ ಜಿಲ್ಲಾ ಸಂಘಟನಾಕಾರರಾದ ಗಂಗಾಧರ, ಅಧ್ಯಕ್ಷರಾದ ಹಾಲೇಶ್, ಜಯಣ್ಣ, ಅಂಜಿನಪ್ಪ, ದುರುಗೇಶ್, ಮಂಜುನಾಥ ಬಿ ಹೆಚ್, ಶಿವರಾಜ, ಶಾಲೆಯಲ್ಲಿ ಕಲಿತ ಹಳೆಯ ವಿದ್ಯಾರ್ಥಿಗಳಾದ ಮಧು ಕೆಎಚ್, ಕಿರಣ್ ಕೆಎಚ್, ಹಾಲೇಶ್ ಎಸ್, ಆಕಾಶ್, ಪಲಶುರಾಮ ಡಿ ಮುಂತಾದವರು ಭಾಗವಹಿಸಿದ್ದರು.






Leave a comment