SUDDIKSHANA KANNADA NEWS/ DAVANAGERE/ DATE-16-05-2025
ದಾವಣಗೆರೆ: ರಾಜ್ಯದಲ್ಲೇ ಪ್ರಥಮ ಬಾರಿಗೆ ನಮ್ಮ ದಾವಣಗೆರೆ ಜಿಲ್ಲೆಯ ಮಹಿಳಾ ಸ್ವಸಹಾಯ ಸಂಘಗಳಿಗೆ ಈ ರೀತಿ ಕಾರ್ಯಾಗಾರ ಆಯೋಜಿಸಿ ಬ್ರಾಂಡಿಂಗ್ ಹಾಗೂ ಲೇಬಲಿಂಗ್ ಬಗ್ಗೆ ತರಬೇತಿ ನೀಡಲಾಗಿದೆ ಎಂದು ತಿಳಿಸಿದರು.
ನಗರದ ಗ್ಲಾಸ್ ಹೌಸ್ ನಲ್ಲಿ ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಅಭಿಯಾನ,ಕೃಷಿ ಇಲಾಖೆ,ಕೌಶಲ್ಯ ಅಭಿವೃದ್ಧಿ ಇಲಾಖೆ ಹಾಗೂ ತೋಟಗಾರಿಕೆ ಇಲಾಖೆ ಸಹಯೋಗದಲ್ಲಿ ಆಯೋಜಿಸಲಾಗಿದ್ದ ಪಿಎಂಎಫ್ ಎಂಇ ಫಲಾನುಭವಿಗಳಿಗೆ ಸಮಾಲೋಚನಾ ಸಮಾರಂಭ ಮತ್ತು ಮಾರುಕಟ್ಟೆ ನೆರವು ಹಾಗೂ ವ್ಯಾಪಾರ ಅಭಿವೃದ್ಧಿ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.
ಜಿಲ್ಲೆಯಲ್ಲಿ 1,20,227 ಸದಸ್ಯರಿದ್ದಾರೆ. ಮಹಿಳೆಯರು ಕೂಡ ಉತ್ತಮ ರೀತಿಯಲ್ಲಿ ತಮ್ಮ ಉತ್ಪನ್ನ ತಯಾರಿಸಬೇಕು. ಮುಂದಿನ ಬಾರಿ ನಮ್ಮ ಮಹಿಳೆಯರು ತಯಾರಿಸುವ ಉತ್ಪನ್ನಗಳನ್ನೇ ನಾನು ದೆಹಲಿಯಲ್ಲಿ ನಮ್ಮ ಸಂಸದರುಗಳಿಗೆ ಉಡುಗೊರೆಯಾಗಿ ನೀಡುತ್ತೇನೆ ಎಂದು ಡಾ.ಪ್ರಭಾ ಮಲ್ಲಿಕಾರ್ಜುನ್ ತಿಳಿಸಿದರು.
ಮುಂದಿನ ದಿನಗಳಲ್ಲಿ ಎಲ್ಲಾ 62 ಉದ್ದಿಮೆಗಳಿಗೆ ಬ್ರಾಂಡಿಂಗ್, ಲೆಬಲಿಂಗ್ ಮಾಡಿಕೊಡುವುದರ ಜೊತೆಗೆ ವ್ಯಾಪಾರ ಅಭಿವೃದ್ಧಿಗೆ ಸಂಬಂಧಿಸಿದಂತೆ 3 ಹಂತದಲ್ಲಿ ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಗುವುದು ಎಂದು ತಿಳಿಸಿದರು.
ಈ ಕಾರ್ಯಾಗಾರ ಗ್ಲಾಸ್ ಹೌಸ್ ನಲ್ಲಿ ನಡೆಯುತ್ತಿರುವುದು ಸಂತಸ ತಂದಿದೆ. ಏಷ್ಯಾದಲ್ಲೇ ಅತ್ಯಂತ ದೊಡ್ಡದಾದ ಗ್ಲಾಸ್ ಹೌಸ್ ನಮ್ಮ ದಾವಣಗೆರೆಯಲ್ಲಿದೆ.ಎಲ್ಲೆಡೆ ಹೆಸರಾಗಿರುವ ಗ್ಲಾಸ್ ಹೌಸ್ ನಿರ್ಮಾಣವಾಗಿದ್ದು ಹಿರಿಯ ಶಾಸಕ ಡಾ. ಶಾಮನೂರು ಶಿವಶಂಕರಪ್ಪ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಸ್ ಎಸ್ ಮಲ್ಲಿಕಾರ್ಜುನ್ ಅವರ ಅವಧಿಯಲ್ಲಿ ಎಂಬುದೇ ಹೆಮ್ಮೆಯ ಸಂಗತಿ ಎಂದು ತಿಳಿಸಿದರು.
ಮಹಿಳೆಯರು ತಮ್ಮ ಆರೋಗ್ಯದತ್ತ ಗಮನಹರಿಸಬೇಕು.ಉತ್ತಮಜೀವನಶೈಲಿ ರೂಢಿಸಿಕೊಳ್ಳಬೇಕು. ಸರ್ಕಾರದ ಯೋಜನೆಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಆರೋಗ್ಯದ ಬಗ್ಗೆ ಸಲಹೆ ನೀಡಿದರು.
ಇದೇ ಮೇ.20 ರಂದು ಹೊಸಪೇಟೆಯಲ್ಲಿ ರಾಜ್ಯ ಸರ್ಕಾರ ಎರಡು ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಸಾಧನಾ ಸಮಾವೇಶ ಆಯೋಜಿಸಲಾಗಿದೆ.ಈ ಸಮಾವೇಶಕ್ಕೆ ಜಿಲ್ಲೆಯಿಂದ ಹೆಚ್ಚಿನ ಸಂಖ್ಯೆಯಲ್ಲಿ ಜನರು ಆಗಮಿಸಬೇಕು ಎಂದು ಕರೆ ನೀಡಿದರು.
ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಗಂಗಾಧರ ಸ್ವಾಮಿ, ಜಿ.ಪಂ ಸಿಇಒ ಸುರೇಶ್ ಬಿ ಇಟ್ನಾಳ್,ಸಂಪನ್ಮೂಲ ವ್ಯಕ್ತಿ ಶಿಜಿತ್,ರೇಷ್ಮಾ ಕೌಸರ್,ಶ್ರೀನಿವಾಸ್, ರಾಘವೇಂದ್ರ, ಷಣ್ಮುಖಪ್ಪ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.