
SUDDIKSHANA KANNADA NEWS/ DAVANAGERE/ DATE:19-04-2025
ದಾವಣಗೆರೆ: ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ತಾಲೂಕಿನ ಸಾಸಲು ಹಳ್ಳ ಗ್ರಾಮದ ಸಮೀಪ ಭೀಕರವಾಗಿ ಸ್ನೇಹಿತರಿಂದಲೇ ದಾವಣಗೆರೆಯ ಮಣಿಕಂಠನ ಹತ್ಯೆಗೆ ಕಾರಣ ಏನು ಎಂಬುದು ತಿಳಿದು ಬಂದಿದೆ.


ದಾವಣಗೆರೆಯ ಪಿ. ಬಿ. ರಸ್ತೆಯಲ್ಲಿ ತಳ್ಳು ಗಾಡಿಯಲ್ಲಿ ವ್ಯಾಪಾರ ಮಾಡುತ್ತಿದ್ದರು. ಪಡ್ಡು, ಚಿತ್ರನ್ನ, ವಡೆ ಸೇರಿದಂತೆ ತಿಂಡಿ ತಿನಿಸುಗಳನ್ನು ರಾತ್ರಿ ವೇಳೆ ಉಣಬಡಿಸುವ ವ್ಯವಹಾರ ನಡೆಸುತ್ತಿದ್ದ ಹೊನ್ನಾಳಿ ಮೂಲದ ಮಣಿಕಂಠ ಅಲಿಯಾಸ್ ಮಣಿ ಸಾವು ಸ್ನೇಹಿತರಿಗೆ ಆಘಾತ ತಂದಿದೆ.
ಘಟನೆ ಹಿನ್ನೆಲೆ ಏನು..? ಎಫ್ ಐಆರ್ ನಲ್ಲೇನಿದೆ?
ಮಣಿಕಂಠನ ಪತ್ನಿ ಪೊಲೀಸರಿಗೆ ನೀಡಿರುವ ದೂರಿನಲ್ಲಿ ಮಣಿಕಂಠನ ಇಬ್ಬರ ಸ್ನೇಹಿತರ ವಿರುದ್ಧ ಆರೋಪ ಮಾಡಿದ್ದಾರೆ.
ಮಂಜುನಾಥ ಎಂಬುವವರ ಪುತ್ರನಾದ ಮಣಿಕಂಠನು ಕಳೆದ ಎಂಟು ವರ್ಷಗಳ ಹಿಂದೆ ಪ್ರೀತಿಸಿ ಮದುವೆಯಾಗಿದ್ದರು. ಏಳು ವರ್ಷದ ಧೃತಿ ಹಾಗೂ ಎರಡು ವರ್ಷದ ದನಿಕ ಪುತ್ರಿಯರಿದ್ದರು. ಮಣಿಕಂಠನ ಊರು ಹೊನ್ನಾಳಿ ಆಗಿದ್ದು, ಉದ್ಯೋಗ ಅರಸಿ ದಾವಣಗೆರೆಗೆ ಬಂದು ಕೆ. ಬಿ. ಬಡಾವಣೆಯ ಗುಳ್ಳಮ್ಮ ದೇವಸ್ಥಾನದ ಬಳಿ ವಾಸ ಮಾಡುತ್ತಿದ್ದರು.
ಆತನು ತಳ್ಳುವ ಗಾಡಿಯಲ್ಲಿ ತಿಂಡಿ ವ್ಯಾಪಾರ ಮಾಡಿಕೊಂಡು ಜೀವನ ಸಾಗಿಸುತ್ತಿದ್ದರು. ಮಣಿಕಂಠನಿಗೆ ಅಣ್ಣಪ್ಪ ಮತ್ತು ಅಭಿ ಅಲಿಯಾಸ್ ಅಭಿಷೇಕ್ ಎಂಬ ಇಬ್ಬರು ಬಾಲ್ಯ ಸ್ನೇಹಿತರಿದ್ದರು. ಸುಮಾರು ದಿನಗಳ ಹಿಂದೆ ಮಣಿಕಂಠನು ಫೈನಾನ್ಸ್ ನಲ್ಲಿ ಅಣ್ಣಪ್ಪನಿಗೆ ಸಾಲ ಕೊಡಿಸಿದ್ದರು. ಈ ವಿಚಾರ ಅಭಿ ಅಲಿಯಾಸ್ ಅಭಿಷೇಕ್ ಗೂ ತಿಳಿದಿತ್ತು. ಮೂವರ ನಡುವೆ ಹಣಕಾಸಿನ ವಿಚಾರದಲ್ಲಿ ಆಗಾಗ್ಗೆ ಗಲಾಟೆ ಕೂಡ ಆಗಿತ್ತು.
ಸಾಲ ತೀರಿಸಲು ಆಗದೇ ಅಣ್ಣಪ್ಪು ಊರು ಬಿಟ್ಟು ಹೋಗಿದ್ದ. ಮಣಿಕಂಠನೇ ಸಾಲ ತೀರಿಸುತ್ತಾ ಬಂದಿದ್ದರು. ಕಳೆದ ಹದಿನೈದು ದಿನಗಳ ಹಿಂದೆ ಅಣ್ಣಪ್ಪನು ಊರಿಗೆ ಮತ್ತೆ ಬಂದಿದ್ದ. ಆಗ ಮಣಿಕಂಠನು ಅಣ್ಣಪ್ಪನಿಗೆ ಸಾಲ ತೀರಿಸುವುದು ಬಿಟ್ಟು ಎಲ್ಲಿಗೆ ಹೋಗಿದ್ದೆ, ಸಾಲ ತೀರಿಸುತ್ತಾ ಬಂದಿದ್ದೇನೆ ಎಂದು ಗದರಿಸಿದ್ದ. ಈ ವೇಳೆ ಅಭಿಷೇಕನು ಸಹ ಅಣ್ಣಪ್ಪನ ಜೊತೆ ಸೇರಿ ಮಣಿಕಂಠನೊಂದಿಗೆ ಗಲಾಟೆ ಮಾಡಿಕೊಂಡಿದ್ದ ಎಂದು ಎಫ್ ಐಆರ್ ನಲ್ಲಿ ಉಲ್ಲೇಖಿಸಲಾಗಿದೆ.
ಕಳೆದ ಏಪ್ರಿಲ್ 18ರಂದು ಮಧ್ಯಾಹ್ನ 3 ಗಂಟೆಗೆ ಅಣ್ಣಪ್ಪ ಕೆಲಸ ಮಾಡುವ ರಾಘವೇಂದ್ರ ಫೋಟೋ ಸ್ಟುಡಿಯೋ ಹತ್ತಿರ ಬಂದು ಮಣಿಕಂಠನು ಊಟ ಕೊಟ್ಟಿದ್ದರು. ತ್ಯಾವಣಿಗೆ ಗ್ರಾಮದಲ್ಲಿ ದೇವರ ಕಾರ್ಯ ಇದೆ. ಅಲ್ಲಿಯೇ ಊಟ ಮಾಡಿಕೊಂಡು ಬರೋಣ ಎಂದು ಮೂವರು ಹೋಗಿದ್ದಾಗಿ ರಾತ್ರಿ 10.30ರ ಸುಮಾರಿನಲ್ಲಿ ಪತ್ನಿ ಫೋನ್ ಮಾಡಿದ್ದಾಗ ಮಣಿಕಂಠ ತಿಳಿಸಿದ್ದಾರೆ. ಆಗ ಇನ್ನು ಮುಕ್ಕಾಲು ಗಂಟೆಯೊಳಗೆ ಬರುತ್ತೇವೆ ಎಂದು ಹೇಳಿ ಕಾಲ್ ಕಟ್ ಮಾಡಿದ್ದಾರೆ. ಆದರೂ ಮನೆಗೆ ಬಂದಿರಲಿಲ್ಲ.
ಏಪ್ರಿಲ್ 19ರಂದು ಬೆಳಿಗ್ಗೆ 7.30ಕ್ಕೆ ಗಣೇಶ ಎಂಬುವವರು ಮಣಿಕಂಠನ ಪತ್ನಿ ಅವರಿಗೆ ನಿನ್ನ ಮೈದುನನಾದ ಅಣ್ಣಪ್ಪ ನನಗೆ ಫೋನ್ ಮಾಡಿದ್ದ. ನಿನ್ನ ಗಂಡ ಮಣಿಕಂಠನನ್ನು ಸಾಸಲು ಹಳ್ಳ ಗ್ರಾಮದ ಪೆಟ್ರೋಲ್ ಬಂಕ್ ಮುಂಭಾಗದಲ್ಲಿ ಕೊಲೆಯಾಗಿದ್ದಾನೆ ಎಂದು ತಿಳಿಸಿದ್ದಾನೆ ಎಂದು ಮಾಹಿತಿ ನೀಡಿದ್ದಾರೆ.
ಕೂಡಲೆ ಮಣಿಕಂಠನ ಪತ್ನಿ ಮತ್ತು ಸಂಬಂಧಿಕರೆಲ್ಲರೂ ಸ್ಥಳಕ್ಕೆ ಬಂದಿದ್ದಾರೆ. ಈ ವೇಳೆ ರಕ್ತಸಿಕ್ತವಾಗಿ ಮಣಿಕಂಠನ ಮೃತದೇಹ ಪತ್ತೆಯಾಗಿದೆ. ಪಾರ್ಕಿಂಗ್ ಕಲ್ಲುಗಳಿಂದ ಮಣಿಕಂಠನ ಮುಖ, ತಲೆಗೆ ಬರ್ಬರವಾಗಿ ಜಜ್ಜಿ ಹತ್ಯೆ ಮಾಡಿರುವುದು ಗೊತ್ತಾಗಿದೆ.
ತನ್ನ ಗಂಡನ ಜೊತೆಗೆ ಹೋಗಿದ್ದ ಅಣ್ಣಪ್ಪ ಹಾಗೂ ಅಭಿಷೇಕರಿಗೆ ಫೋನ್ ಮಾಡಿದಾಗ ಅವರ ಮೊಬೈಲ್ ಗಳು ಸ್ವಿಚ್ ಆಫ್ ಆಗಿವೆ. ಅವರು ನನ್ನ ಗಂಡನೊಂದಿಗೆ ಹಣಕಾಸಿನ ವಿಚಾರದಲ್ಲಿ ಗಲಾಟೆ ಮಾಡಿ ರಾತ್ರಿ ವೇಳೆಯಲ್ಲಿ ಕೊಲೆ ಮಾಡಿರಬಹುದು. ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಎಂದು ಚಿಕ್ಕಜಾಜೂರು ಪೊಲೀಸ್ ಠಾಣೆಗೆ ಮೃತ ಮಣಿಕಂಠನ ಪತ್ನಿ ನೀಡಿರುವ ದೂರಿನಲ್ಲಿ ಒತ್ತಾಯಿಸಿದ್ದಾರೆ.