SUDDIKSHANA KANNADA NEWS/ DAVANAGERE/ DATE:09-12-2024
ದಾವಣಗೆರೆ: ಪ್ರಸ್ತುತ ಇ-ಟೆಂಡರ್ ನಲ್ಲಿ ಖರೀದಿ ವಹಿವಾಟು ನಡೆಯುತ್ತಿರುವುದರಿಂದ ಭತ್ತ, ಮೆಕ್ಕೆಜೋಳ ಧಾರಣೆಯಲ್ಲಿ ದಿನದಿಂದ ದಿನಕ್ಕೆ ಏರಿಕೆ ಆಗುತ್ತಿದೆ. ಆದ್ದರಿಂದ ಇ-ಟೆಂಡರ್ ಖರೀದಿಯನ್ನು ಗ್ರಾಮೀಣ ಪ್ರದೇಶಕ್ಕೂ ವಿಸ್ತರಣೆ ಮಾಡಬೇಕು ಎಂಬುದೂ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ರೈತ ಒಕ್ಕೂಟವು ಎಪಿಎಂಸಿ ಕಾರ್ಯದರ್ಶಿಗೆ ಮನವಿ ಸಲ್ಲಿಸಿತು.
ಎಪಿಎಂಸಿ ಪ್ರಾಂಗಣದಲ್ಲಿ ಮಾತ್ರ ಇ-ಟೆಂಡರ್ ಪದ್ಧತಿಯಲ್ಲಿ ಖರೀದಿ ವಹಿವಾಟು ಜಾರಿ ಮಾಡಲಾಗಿದೆ. ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸಿದ ನಿಮಗೂ ನಿಮ್ಮ ಸಿಬ್ಬಂದಿ ವರ್ಗದವರಿಗೂ ಸಮಸ್ತ ರೈತರ ಪರವಾಗಿ ಧನ್ಯವಾದ ಅರ್ಪಿಸುತ್ತೇವೆ. ಇ-ಟೆಂಡರ್ ಜಾರಿಯಿಂದ ಧಾರಣೆಯಲ್ಲಿ ಏರಿಕೆ ಕಂಡಿದೆ. ಆದರೆ ಹಳ್ಳಿಗಳಲ್ಲಿ ಕೊಯಿಲು ಮಾಡಿ, ರಾಶಿ ಮಾಡಿರುವ ಧಾನ್ಯವನ್ನು ನೇರ ಖರೀದಿ ಮಾಡಲಾಗುತ್ತಿದೆ. ಇದರಿಂದ ಹಳ್ಳಿಗಳಲ್ಲಿ ಖರೀದಿಸುವ ಧಾನ್ಯಗಳ ಬೆಲೆ ಏರಿಕೆ ಆಗುತ್ತಿಲ್ಲ ಎಂದು ಮನವಿಯಲ್ಲಿ ತಿಳಿಸಲಾಗಿದೆ.
ರೈತರು ಚೀಲಕ್ಕೆ ತುಂಬಿಸಿ, ಟ್ರ್ಯಾಕ್ಟರ್ ನಲ್ಲಿ ಲೋಡ್ ಮಾಡಿಕೊಂಡು ಎಪಿಎಂಸಿ ದಲಾಲಿ ಮಂಡಿಗೆ ತಂದು ಸುರಿದರೆ ಇ-ಟೆಂಡರ್ ಖರೀದಿಯಾಗುತ್ತದೆ. ಖರೀದಿಯಾದ ನಂತರ ಚೀಲಕ್ಕೆ ತುಂಬಿ ಎಲೆಕ್ಟ್ರಾನಿಕ್ ಸ್ಕೇಲ್ ಕಾಟದಲ್ಲಿ ತೂಕ ಮಾಡಬೇಕು. ಆಮೇಲೆ ಚೀಲ ಹೊಲಿದು ಲಾರಿಗೆ ಲೋಡ್ ಮಾಡಬೇಕು. ಇ-ಟೆಂಡರ್ ಖರೀದಿ ವಹಿವಾಟು ಪದ್ಧತಿಯನ್ನು ಗ್ರಾಮೀಣ ಪ್ರದೇಶದಲ್ಲಿ ಕಣ ಅಥವಾ ಕಾಂಕ್ರೀಟ್ ರಸ್ತೆಗಳಲ್ಲಿ ರಾಶಿ ಹಾಕಿ ಸಂಗ್ರಹಿಸಿರುವ ಧಾನ್ಯಗಳಿಗೂ ವಿಸ್ತರಣೆ ಮಾಡಬೇಕು. ಆಗ ಹಳ್ಳಿಗಳಲ್ಲಿ ಮಾರಾಟ ಮಾಡುವ ಧಾರಣೆಯೂ ಏರಿಕೆ ಆಗುತ್ತದೆ. ಹಳ್ಳಿಗಳಿಗೂ ಇ-ಟೆಂಡರ್ ಪದ್ಧತಿಯನ್ನು ವಿಸ್ತರಣೆ ಮಾಡಬೇಕಾದರೆ ರೈತರು ಮಾರುಕಟ್ಟೆಗೆ ನಿತ್ಯ ಬೆಳಿಗ್ಗೆ 9 ಗಂಟೆಗೆ ಸ್ಯಾಂಪಲ್ ತರುವುದಕ್ಕೆ ಎಪಿಎಂಸಿ ಒಂದು ವ್ಯವಸ್ಥೆ ಮಾಡಬೇಕು ಎಂದು ಒತ್ತಾಯಿಸಲಾಗಿದೆ.
ಪ್ರತಿಯೊಂದು ಸ್ಯಾಂಪಲ್ಗೂ ಲಾಟ್ ನಂಬರ್ ನೀಡಿ, ಇ-ಟೆಂಡರ್ ನಲ್ಲಿ ಖರೀದಿ ವಹಿವಾಟು ಆಗುವಂತೆ ಕ್ರಮವಹಿಸಬೇಕು. ಇದರಿಂದ ಮಧ್ಯವರ್ತಿ/ದಲಾಲರ ಮಧ್ಯಪ್ರವೇಶ ಇಲ್ಲದೆ ರೈತರಿಂದ ಖರೀದಿದಾರರಿಗೆ ನೇರವಾಗಿ ವ್ಯಾಪಾರವಾದಂತೆ
ಆಗುತ್ತದೆ. ಅತಿ ಹೆಚ್ಚು ಬೆಲೆ ನಮೂದಿಸಿದ ಯಶಸ್ವಿ ಖರೀದಿದಾರರು ಹಳ್ಳಿಗಳಲ್ಲಿ ರಾಶಿ ಮಾಡಿರುವ ಸ್ಥಳಕ್ಕೆ ಹೋಗಿ ಲೋಡ್ ಮಾಡಿಕೊಂಡು ವೇ ಬ್ರಿಡ್ಜ್ ನಲ್ಲಿ ತೂಕ ಮಾಡಿಸಿ, ರೈತನಿಗೆ ಅನ್ ಲೈನ್ ಮೂಲಕ ಪೇಮೆಂಟ್ ಮಾಡುವ ವ್ಯವಸ್ಥೆ ಜಾರಿ
ಮಾಡಬೇಕು. ಇದರಿಂದ ಲೋಡ್ ಮಾಡಿಕೊಂಡು ಎಪಿಎಂಸಿ ದಲಾಲಿ ಮಂಡಿಗೆ ತಂದು ಸುರಿದು, ಖರೀದಿಯಾದ ನಂತರ ಚೀಲಕ್ಕೆ ತುಂಬಿ, ತೂಕ ಮಾಡಿ, ಹೊಲಿದು ಮತ್ತೆ ಲಾರಿಗೆ ಲೋಡ್ ಮಾಡುವ ಮಾನವ ಶ್ರಮ ಮತ್ತು ಸಮಯ ಉಳಿತಾಯವಾಗುತ್ತದೆ. ರೈತರಿಗೂ ನ್ಯಾಯಯುತ ವ್ಯಾಪಾರ ವಹಿವಾಟು ಒದಗಿಸಿದಂತೆ ಆಗುತ್ತದೆ ಎಂದು ತಿಳಿಸಲಾಗಿದೆ.
ವೇಮೆಂಟ್-ಪೇಮೆಂಟ್ ಪದ್ಧತಿ ಜಾರಿಗೆ ತರಬೇಕು. ಪೇಮೆಂಟ್ ವಿಳಂಬ ಮಾಡುವವರ ವಿರುದ್ಧ ನಿರ್ದಾಕ್ಷಿಣ್ಯ ಕಾನೂನು ಕ್ರಮ ಜರುಗಿಸಬೇಕು. ವೇಮೆಂಟ್ ಸ್ಲಿಪ್ ನಲ್ಲಿ ಖರೀದಿದಾರರ ಹೆಸರು ಮಾತ್ರ ನಮೂದಿಸಲಾಗುತ್ತಿದೆ. ರೈತರ ಹೆಸರು ಮತ್ತು ಊರನ್ನು ಸಹ ಕಡ್ಡಾಯವಾಗಿ ನಮೂದಿಸಬೇಕು. ಖರೀದಿಸಿದ ಬೆಲೆಯನ್ನೂ ನಮೂದಿಸಬೇಕು. ಇದರಿಂದ ವೇಮೆಂಟ್ ಆದ ತಕ್ಷಣ ರೈತನ ಬ್ಯಾಂಕ್ ಖಾತೆಗೆ ಹಣ ಜಮವಾಗಿರುವುದನ್ನು ಪರಿಶೀಲಿಸಬಹುದು. “ಶ್ಯೂಟ್” ಪಡೆಯುವ, ಡಿಸ್ಕೌಂಟ್ ಪದ್ಧತಿ ನಿಷೇಧಿಸಬೇಕು. ಹಮಾಲರ ಕೂಲಿಯನ್ನು ಸಂಪೂರ್ಣವಾಗಿ ಖರೀದಿದಾರರೇ ಭರಿಸಬೇಕು ಎಂದು ಆಗ್ರಹಿಸಲಾಗಿದೆ.
ಜಿಲ್ಲಾ ರೈತರ ಒಕ್ಕೂಟದ ನಿಯೋಗದಲ್ಲಿ ಕೊಳೇನಹಳ್ಳಿ ಬಿ ಎಂ ಸತೀಶ್, ಬೆಳವನೂರು ನಾಗೇಶ್ವರರಾವ್, ಲೋಕಿಕೆರೆ ನಾಗರಾಜ್, ವಿಜಯಲಕ್ಷ್ಮಿ ಮಾಚಿನೇನಿ, ಎ. ವೈ. ಪ್ರಕಾಶ್, ಧನಂಜಯ ಕಡ್ಲೆಬಾಳ್, ಗೋಣಿವಾಡ ಮಂಜುನಾಥ, ರುದ್ರಕಟ್ಟೆ ಪರಮೇಶ್ವರಪ್ಪ, ಆರುಂಡಿ ಪುನೀತ್, ಮಾಜಿ ಮೇಯರ್ ವಸಂತಕುಮಾರ್, ಅಣಬೇರು ಕುಮಾರಸ್ವಾಮಿ, ಶಿವಪ್ರಕಾಶ್, ಗೋಪನಾಳ್ ಪಾಲಕ್ಷಪ್ಪ, ವಡ್ಡಿನಳ್ಳಿ ಸಿದ್ದೇಶ್, ಆರನೇ ಕಲ್ಲು ವಿಜಯಕುಮಾರ್, ಕಾಶಿಪುರ ಸುರೇಶ್, ಕುರ್ಕಿ ರೇವಣಸಿದ್ದಪ್ಪ, ಐಗೂರು ತಿಪ್ಪೇಸ್ವಾಮಿ ಮುಂತಾದವರು ಉಪಸ್ಥಿತರಿದ್ದರು.