SUDDIKSHANA KANNADA NEWS/ DAVANAGERE/ DATE:30-05-2023
ದಾವಣಗೆರೆ: ಓ ಮಲ್ಲಿಗೆ (O MALLIGE), ಇಂದ್ರಧನುಷ್ ಚಿತ್ರ ಮರೆಯಲು ಸಾಧ್ಯವೇ? ಆ ಕಾಲದಲ್ಲಿ ಸೂಪರ್ ಡ್ಯೂಪರ್ (SUPER DUPER) ಹಿಟ್ (HIT) ಆದ ಚಿತ್ರಗಳು. ರಮೇಶ್ ಅರವಿಂದ್ ನಟನೆಯ ಓ ಮಲ್ಲಿಗೆ ಸಿನಿಮಾದ ಮುಸ್ತಾಫಾ ಹಾಸ್ಯ ಇಂದಿಗೂ ಜನಪ್ರಿಯತೆ ಗಳಿಸಿದೆ. ಅದೇ ರೀತಿಯಲ್ಲಿ ಡಾ. ಶಿವರಾಜ್ ಕುಮಾರ್ ಅಭಿನಯದ ಇಂದ್ರಧನುಷ್ ಸ್ಯಾಂಡಲ್ ವುಡ್ ನಲ್ಲಿ ಸದ್ದು ಮಾಡಿತ್ತು. ಈ ಚಿತ್ರ ನಿರ್ದೇಶಿಸಿ ಯಶಸ್ಸು ಕಂಡಿದ್ದ ಸಂಗೀತ ನಿರ್ದೇಶಕ ವಿ. ಮನೋಹರ್ ಬರೋಬ್ಬರಿ 23 ವರ್ಷಗಳ ಬಳಿಕ ಚಿತ್ರವೊಂದರ ನಿರ್ದೇಶನ, ಸಂಗೀತದ ಹೊಣೆ ಹೊತ್ತಿದ್ದಾರೆ.
ಅಂದ ಹಾಗೆ ಈ ಚಿತ್ರದ ಹೆಸರು ದರ್ಬಾರ್. ಕಥೆ (STORY), ಚಿತ್ರಕಥೆ, ಸಂಭಾಷಣೆ ಬರೆದು ನಾಯಕ ನಟನಾಗಿ ನಟಿಸುತ್ತಿರುವ ಸತೀಶ್ ಪ್ರಧಾನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಚಿತ್ರದ ಹೀರೋ ಸಹ ಹೌದು. ಜಾಹ್ನವಿ ಚಿತ್ರದ ಹೀರೋಹಿನ್. ಎರಡು ದಶಕಗಳ ಬಳಿಕ ನಿರ್ದೇಶಿಸಿರುವ ದರ್ಬಾರ್ (DARBAR)ಚಿತ್ರವು ಜೂನ್ 9ರಂದು ರಾಜ್ಯಾದ್ಯಂತ ತೆರೆಗೆ ಬರಲಿದೆ. ಈ ಹಿನ್ನೆಲೆಯಲ್ಲಿ ಚಿತ್ರ ತಂಡ ದಾವಣಗೆರೆಗೆ ಆಗಮಿಸಿತ್ತು.
ವರದಿಗಾರರ ಕೂಟದಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ವಿ. ಮನೋಹರ್, ಹಲವು ಸಮಯದ ಬಳಿಕ ಚಿತ್ರ ನಿರ್ದೇಶನ ಮಾಡಿದ್ದೇನೆ. ಕಿರಾತಕ, ದುನಿಯಾ ಸೇರಿದಂತೆ ಹಲವು ಚಿತ್ರಗಳಿಗೆ ಸಂಗೀತ ನಿರ್ದೇಶನ ಮಾಡಿದ್ದೇನೆ. ಆ ಬಳಿಕ ಕಿರುತೆರೆಯಲ್ಲಿ ಹೆಚ್ಚು ಸಕ್ರಿಯವಾಗಿ ತೊಡಗಿಸಿಕೊಂಡೆ. ನಿರ್ದೇಶನ ಮಾಡಬೇಕೆಂಬ ಹಂಬಲ ಇದ್ದರೂ ಕಾಲ ಕೂಡಿ ಬಂದಿರಲಿಲ್ಲ. ಕೊರೊನಾ ಸೋಂಕು ಕಾಣಿಸಿಕೊಳ್ಳುವ ಮುನ್ನ ಚಿತ್ರದ ಕುರಿತಂತೆ ಸತೀಶ್ ನನ್ನೊಟ್ಟಿಗೆ ಮಾತನಾಡಿದರು. ಇದೊಂದು ವಿಡಂಬನಾತ್ಮಾಕ ಚಿತ್ರವಾಗಿ ನನಗನಿಸಿತು. ಹೊಸಬರೇ ಇದ್ದ ಈ ತಂಡದ ಶ್ರಮ ನಿಜಕ್ಕೂ ಮೆಚ್ಚುವಂಥದ್ದು ಎಂದು ಹೇಳಿದರು.
ಕೊರೊನಾ ಸೋಂಕು ಕಡಿಮೆಯಾದ ಬಳಿಕ ಚಿತ್ರದ ಶೂಟಿಂಗ್ ಆರಂಭಿಸಿದೆವು. ಈ ಚಿತ್ರದಲ್ಲಿ ನೂರಾರು ರಂಗಭೂಮಿ ಕಲಾವಿದರು ನಟಿಸಿದ್ದಾರೆ. ರಂಗಾಯಣ, ನೀನಾಸಂ ಸೇರಿದಂತೆ ಹಲವಾರು ಕಲಾವಿದರು ನಟಿಸಿದ್ದು, ಹಾಗಾಗಿ, ಬಜೆಟ್ ಸ್ವಲ್ಪ ಜಾಸ್ತಿನೇ ಆಯ್ತು. ಈ ಚಿತ್ರದಲ್ಲಿ ಹಾಸ್ಯಕ್ಕೆ ಹೆಚ್ಚು ಆದ್ಯತೆ ಇಲ್ಲದಿದ್ದರೂ ಕಥೆಯಲ್ಲಿಯೇ ಕಾಮಿಡಿ ಇದೆ. ಡಬಲ್ ಮೀನಿಂಗ್, ಅಶ್ಲೀಲತೆ ಸುಳಿಯದಂತೆ ಸಿನಿಮಾ ಮಾಡಿದ್ದೇವೆ. ಜನರಿಗೂ ಇದು ಇಷ್ಟ ಆಗುತ್ತೆ ಎಂಬ ವಿಶ್ವಾಸ ಇದೆ ಎಂದು ತಿಳಿಸಿದರು.
ನಾನು ಸಹ ಪತ್ರಿಕೋದ್ಯಮದಲ್ಲಿ ಕೆಲಸ ಮಾಡಿದ್ದೇನೆ. ವ್ಯಂಗ್ಯಚಿತ್ರಕಾರನಾಗಿ ದುಡಿದಿದ್ದೇನೆ. ಹಾಗಾಗಿ, ವ್ಯಂಗ್ಯ, ವಿಡಂಬನೆಯಲ್ಲಿ ನನಗೆ ಆಸಕ್ತಿ ಹೆಚ್ಚಿದೆ. 2000 ರಲ್ಲಿ ಶಿವರಾಜ್ ಕುಮಾರ್ ಅಭಿನಯದ ಇಂದ್ರಧನುಷ್ ಚಿತ್ರ ನಿರ್ದೇಶಿಸಿದ್ದೆ. ಆ ಬಳಿಕ ದರ್ಬಾರ್ ನಿರ್ದೇಶನದ ಹೊಣೆ ಹೊತ್ತಿದ್ದೇನೆ. ಚಿತ್ರದ ನಾಯಕ ನಟ ಸತೀಶ್ ರ ಹಾಸ್ಯಪ್ರಜ್ಞೆ ನನಗೆ ಇಷ್ಟವಾಯ್ತು. ಕಥೆಯೂ ವಿಭಿನ್ನವಾಗಿತ್ತು ಎಂದು ಹೇಳಿದರು.
ನಾಯಕ ನಟ ಸತೀಶ್ ಮಾತನಾಡಿ, ಈ ಚಿತ್ರದ ಚಿತ್ರೀಕರಣ ಶೇಕಡಾ 90 ರಷ್ಟು ಮಂಡ್ಯದಲ್ಲಿ ನಡೆದಿದೆ. ರಾಜ್ಯಾದ್ಯಂತ 100 ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡಲಾಗುತ್ತಿದೆ. ನನ್ನ ಪತ್ನಿ ಬಿ. ಎನ್. ಶಿಲ್ಪಾ ನಿರ್ಮಾಣ ಮಾಡಿದ್ದು, 3.50 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣ ಮಾಡಲಾಗಿದೆ. ಅಶೋಕ್, ತ್ರಿವೇಣಿ, ಕಾರ್ತಿಕ್, ಎಂ. ಎನ್. ಲಕ್ಷ್ಮೀದೇವಿ, ತುಕಾಲಿ ಸಂತು, ನವೀನ್ ಪಡೀಲ್ ಸೇರಿದಂತೆ ನೂರಾರು ಕಲಾವಿದರು ತಮ್ಮ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ಮೂರು ಹಾಡುಗಳಿದ್ದು, ವಿ. ಮನೋಹರ್ ಸಂಗೀತ ನಿರ್ದೇಶನ ಮಾಡಿದ್ದಾರೆ. ರೊಮ್ಯಾಂಟಿಕ್ ಹಾಡನ್ನು ಸಾಹಿತಿ ಜಯಂತ್ ಕಾಯ್ಕಿಣಿ, ಓಪನಿಂಗ್ ಹಾಡನ್ನು ಮನೋಹರ್, ಮತ್ತೊಂದು ಹಾಡನ್ನು ನಾನು ಬರೆದಿದ್ದೇನೆ ಎಂದು ವಿವರಿಸಿದರು.
ಫೈಟ್ ಮಾಸ್ಟರ್ ವಿನೋದ್ ಸಾಹಸ ಸಂಯೋಜಿಸಿದ್ದರೆ, ಕೊರಿಯಾಗ್ರಾಫರ್ ಆಗಿ ಮುರುಳಿ, ತಂತ್ರಜ್ಞರು ಅದ್ಭುತವಾಗಿ ಕಾರ್ಯ ನಿರ್ವಹಿಸಿದ್ದಾರೆ. ಅತ್ಯುತ್ತಮ ಸಾಮಾಜಿಕ ಸಂದೇಶ ನೀಡುವ ಈ ಚಿತ್ರವು ಜನಮನ್ನಣೆ ಗಳಿಸಲಿದೆ ಎಂಬ ವಿಶ್ವಾಸ ಇದೆ. ಒಳ್ಳೆಯ ಸಂದೇಶ ನೀಡುವ ಜೊತೆಗೆ ಹಾಸ್ಯ ಸನ್ನಿವೇಶಕ್ಕೆ ಹೆಚ್ಚಿನ ಒತ್ತು ಇದೆ. ಚಿತ್ರದ ನಾಯಕ ಗ್ರಾಮದಲ್ಲಿ ದರ್ಬಾರ್ ನಡೆಸುತ್ತಾನೆ. ರಾಜಕಾರಣಿಯಾಗಿ ಆತ ಮಾಡುವ ಕೆಲಸಗಳು, ಮುಂದೇನಾಗುತ್ತೆ ಎಂಬುದನ್ನು ತೆರೆ ಮೇಲೆ ನೋಡಬೇಕು ಎಂದು ಹೇಳಿದರು.
ಗೋಷ್ಠಿಯಲ್ಲಿ ಹಾಸ್ಯ ನಟ ತುಕಾಲಿ ಸಂತು, ರಾಕೇಶ್ ಜಾಧವ್ ಹಾಜರಿದ್ದರು.