SUDDIKSHANA KANNADA NEWS/ DAVANAGERE/ DATE:13-03-2025
ಬೆಂಗಳೂರು: ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದಲೂ ರಾಜ್ಯ ಬಿಜೆಪಿಯಲ್ಲಿ ಎಲ್ಲವೂ ಸರಿ ಹೋಗುತ್ತಿಲ್ಲ. ಬಿ. ವೈ. ವಿಜಯೇಂದ್ರ ರಾಜ್ಯಾಧ್ಯಕ್ಷರಾದ ಬಳಿಕವಂತೂ ತಾರಕಕ್ಕೇರಿದೆ. ಈಗ ಲಿಂಗಾಯತ ಮುಖಂಡರೇ ವಿಜಯೇಂದ್ರ, ಯಡಿಯೂರಪ್ಪ ವಿರುದ್ಧ ತಿರುಗಿಬಿದ್ದಿದ್ದಾರೆ. ಇದು ಬಿಜೆಪಿ ಹೈಕಮಾಂಡ್ ಗೆ ನುಗಲಾರದ ತುಪ್ಪವಾಗಿಬಿಟ್ಟಿದೆ.
ರಾಜ್ಯಾಧ್ಯಕ್ಷ ಸ್ಥಾನ ತ್ಯಜಿಸಲು ವಿಜಯೇಂದ್ರ ಒಪ್ಪುತ್ತಿಲ್ಲ, ಬಸನಗೌಡ ಪಾಟೀಲ್ ಯತ್ನಾಳ್ ಬಣ ಇಳಿಸದೇ ಬಿಡಲ್ಲ ಎನ್ನುತ್ತಿದೆ. ಹಾಗಾಗಿ, ಇದು ನಾ ಕೊಡೆ, ನೀ ಬಿಡೆ ಎಂಬಂಥ ಸ್ಥಿತಿ ರಾಜ್ಯ ಘಟಕದಲ್ಲಿ ಏರ್ಪಟ್ಟಿದೆ. ಇದು ಮುಖಂಡರು ಹಾಗೂ ಕಾರ್ಯಕರ್ತರಲ್ಲಿ ಗೊಂದಲ ಉಂಟು ಮಾಡಿದೆ.
ಇನ್ನು ಬಿಜೆಪಿಯಲ್ಲಿ ಲಿಂಗಾಯತ ಸಮಾಜದವರ ಶಕ್ತಿ ಪ್ರದರ್ಶನಕ್ಕೆ ಎರಡೂ ಬಣಗಳು ಸಜ್ಜಾಗಿವೆ. ಪೈಪೋಟಿಗೆ ಇಳಿದಂತೆ ಸಭೆ ಮೇಲೆ ಸಭೆ ನಡೆಸುತ್ತಿವೆ. ಲಿಂಗಾಯತರ ಸಮಾವೇಶ, ಸಭೆ ಬೇಡ ಎಂಬ ವಿಜಯೇಂದ್ರ ಸೂಚನೆಗೂ ಕ್ಯಾರೇ ಎಂದಿಲ್ಲ. ಬಣಗಳ ಕಿತ್ತಾಟಕ್ಕೆ ಬ್ರೇಕ್ ಹಾಕಲು ಬಿಜೆಪಿ ವರಿಷ್ಠರು ಸ್ಪಷ್ಟ ಸಂದೇಶ ರವಾನಿಸಿದ್ದಾರೆ. ವಿಜಯೇಂದ್ರ ಹಾಗೂ ಯತ್ನಾಳ್ ಬಣಕ್ಕೆ ವರಿಷ್ಠರು ಲಿಂಗಾಯತ ಸಮುದಾಯ ಪದೇ ಪದೇ ಎಳೆದು ತರಬೇಡಿ, ಭಿನ್ನಮತ ಇದ್ದರೆ ಕುಳಿತು ಚರ್ಚಿಸಿ ಬಗೆಹರಿಸಿಕೊಳ್ಳಿ. ಹಾದಿಬೀದಿಯಲ್ಲಿ ಯಾಕೆ ಮಾತನಾಡುತ್ತೀರಾ ಎಂದು ಛಾಟಿ ಬೀಸಿದೆ.
ಈ ಹಿಂದೆ ಕೂಡಲ ಸಂಗಮದಲ್ಲಿ ಬೃಹತ್ ವೀರಶೈವ ಲಿಂಗಾಯತ ಸಮಾವೇಶ ನಡೆಸುವ ಮೂಲಕ ವಿಜಯೇಂದ್ರ ಮತ್ತು ಯಡಿಯೂರಪ್ಪ ಬಣಕ್ಕೆ ತಿರುಗೇಟು ನೀಡಲು ಯತ್ನಾಳ್ ಬಣ ಮುಂದಾಗಿತ್ತು. ಯಡಿಯೂರಪ್ಪ ನಿಜವಾದ ವೀರಶೈವ ಲಿಂಗಾಯತ ನಾಯಕರಲ್ಲ ಎಂಬ ಸಂದೇಶವನ್ನು ರವಾನಿಸುವುದು ಯತ್ನಾಳ್ ಬಣದ ಉದ್ದೇಶವಾಗಿತ್ತು. ಆದರೆ ಹೈಕಮಾಂಡ್ ಮಧ್ಯಪ್ರವೇಶದ ನಂತರ ಯತ್ನಾಳ್ ಬಣ ಸದ್ಯಕ್ಕೆ ಸೈಲೆಂಟ್ ಆಗಿದೆ. ವರಿಷ್ಠರ ಖಡಕ್ ಸೂಚನೆ ಬಳಿಕ ಸಭೆ ನಡೆಸುವುದನ್ನು ಯತ್ನಾಳ್ ಅಂಡ್ ಟೀಂ ಕೈಬಿಟ್ಟಿದೆ. ಮಾಜಿ ಸಚಿವ ಎಂ. ಪಿ. ರೇಣುಕಾಚಾರ್ಯ ನೇತೃತ್ವದಲ್ಲಿ ಇತ್ತೀಚೆಗಷ್ಟೇ ಲಿಂಗಾಯತ ಮುಖಂಡರ ಸಭೆ ನಡೆಸಲಾಗಿತ್ತು. ಈ ಬಣವೂ ತಣ್ಣಗಾಗಿದೆ.
ಬಿ. ವೈ ವಿಜಯೇಂದ್ರರನ್ನು ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನದಿಂದ ಕೆಳಗಿಳಿಸಬೇಕೆಂದು ಶಪಥ ಮಾಡಿರುವ ಯತ್ನಾಳ್ ಅವರು ತಂತ್ರಗಾರಿಕೆ ನಿಲ್ಲಿಸಿಲ್ಲ. ಬೆಂಗಳೂರಿನಲ್ಲಿ ಮತ್ತೊಂದು ಲಿಂಗಾಯತ ಮುಖಂಡರ ಸಭೆ ನಡೆಸಿದ್ದಾರೆ. ಆ ಮೂಲಕ ವಿಜಯೇಂದ್ರ ಪರವಾಗಿರುವ ಬಿಜೆಪಿ ನಾಯಕರಿಗೆ ಟಾಂಗ್ ನೀಡಿದ್ದರು. ಸಭೆಯಲ್ಲಿ ಜಿ ಎಂ ಸಿದ್ದೇಶ್ವರ್, ಶಾಸಕ ಬಿ.ಪಿ ಹರೀಶ್ ಉಪಸ್ಥಿತರಿದ್ದರು. ಸಭೆಯಲ್ಲಿ ಲಿಂಗಾಯತ ನಾಯಕತ್ವ, ರಾಜ್ಯಾಧ್ಯಕ್ಷ ಸ್ಥಾನದಿಂದ ವಿಜಯೇಂದ್ರ ಕೆಳಗಿಸಳಿಸುವ ವಿಚಾರ ಬಗ್ಗೆ ಚರ್ಚೆ ನಡೆಸಿದ್ದಾರೆ ಎಂದು ಮೂಲಗಳು ತಿಳಿಸಿವೆ.