SUDDIKSHANA KANNADA NEWS/ DAVANAGERE/ DATE:31-01-2025
ಬೆಂಗಳೂರು : ಇತ್ತೀಚಿನ ದಿನಗಳಲ್ಲಿ ಸೈಬರ್ ಅಪರಾಧಗಳು ಹೆಚ್ಚಾಗುತ್ತಿವೆ. ಪೊಲೀಸರಿಗೂ ಆರೋಪಿಗಳ ಪತ್ತೆ ಹಚ್ಚುವುದು ಕಷ್ಟವಾಗಿದೆ. ಎಲ್ಲಿಯೋ ಕುಳಿತು ಒಟಿಪಿ ನಂಬರ್, ಅಕೌಂಟ್ ನಂಬರ್ ಪಡೆದು ವಂಚನೆ ಮಾಡುವ ಪ್ರಕರಣಗಳು ಹೆಚ್ಚಾಗುತ್ತಿವೆ.
ಡಿಜಿಟಲ್ ಅರೆಸ್ಟ್, ಬ್ಯಾಂಕ್ ಅಕೌಂಟ್ ಹ್ಯಾಕ್, ಒಟಿಪಿ ಪಡೆದು ಹಣ ವಂಚನೆ, ಹಣ ದುಪ್ಪಟ್ಟು ಆಸೆ ತೋರಿಸಿ ಮೋಸ ಸೇರಿದಂತೆ ಹಲವು ರೀತಿಯಲ್ಲಿ ಸೈಬರ್ ಅಪರಾಧಗಳು ಹೆಚ್ಚಾಗುತ್ತಿವೆ. ಜನರು ಎಚ್ಚರ ವಹಿಸಬೇಕಾಗಿದೆ. ಪೊಲೀಸರು ಸಾಕಷ್ಟು ಮುನ್ನೆಚ್ಚರಿಕೆ ಕ್ರಮಗಳನ್ನು ಹೇಳಿದ್ದಾರೆ.
ಅಪರಿಚಿತ ವ್ಯಕ್ತಿ ನಿಮಗೆ ಕರೆ ಮಾಡಿ ನಾವು ಬ್ಯಾಂಕ್ ಮ್ಯಾನೇಜರ್ ಮಾತನಾಡುತ್ತಿರುವುದಾಗಿ ಹೇಳಿ ನಿಮ್ಮ ಎಟಿಎಂ ಕಾರ್ಡ್ ಮಾಹಿತಿ ಹಾಗೂ ಒಟಿಪಿಯನ್ನು ಕೇಳಿದ್ದಲ್ಲಿ ಯಾವುದೇ ಮಾಹಿತಿಯನ್ನು ನೀಡಬೇಡಿ. ಬ್ಯಾಂಕ್ ಅಧಿಕಾರಿಗಳು ಯಾವುದೇ ಕಾರಣಕ್ಕೂ ಈ ರೀತಿಯ ಕರೆ ಮಾಡಿ ಯಾವುದೇ ಮಾಹಿತಿಯನ್ನು ಕೇಳುವುದಿಲ್ಲ.
ಗೂಗಲ್ ಪೇ/ ಫೋನ್ ಪೇ ಆಪ್ ಮೂಲಕ ಹಣ ವರ್ಗಾವಣೆ ಮಾಡಿ ಹಣವು ಸಂಬಂಧಪಟ್ಟವರಿಗೆ ತಲುಪದಿದ್ದರೆ ವೆಬ್ಸೈಟ್ನಲ್ಲಿ ಕಸ್ಟಮರ್ ನಂಬರ್ ಅನ್ನು ಹುಡುಕಿ ಅವರಿಗೆ ಕರೆ ಮಾಡಿ ಅವರು ಒಂದು ಲಿಂಕ್/ಸಂದೇಶವನ್ನು/ಯುಪಿಐ ಪಿನ್ ಅನ್ನು ಮತ್ತೊಂದು ನಂಬರ್ಗೆ ಕಳುಹಿಸಲು ಹೇಳಿದರೆ ಕಳುಹಿಸಬೇಡಿ ಹಾಗೂ ಅಂತಹ ಕಸ್ಟಮರ್ ಕೇರ್ ನಂಬರ್ಗಳು ನಿಜವಾದ ಕಸ್ಟಮರ್ ಕೇರ್ ನಂಬರ್ಗಳಾಗಿರುವುದಿಲ್ಲ.
ಒಂದು ವೇಳೆ ಯಾರಿಗೂ ಒಟಿಪಿ ಮತ್ತು ಎಟಿಎಂ ಕಾರ್ಡ್ ಮಾಹಿತಿಯನ್ನು ನೀಡಿಲ್ಲ ಆದರೂ ನಿಮ್ಮ ಹಣ ಮಾತ್ರ ಖಾತೆಯಿಂದ ಕಡಿತವಾಗಿದ್ದರೆ ಕೂಡಲೇ ಸಂಬಂಧಿಸಿದ ಬ್ಯಾಂಕ್ ಅನ್ನು ಸಂಪರ್ಕಿಸಿ ನಿಮ್ಮ ಹಣ ಮತ್ತೆ ನಿಮ್ಮ ಖಾತೆಗೆ ವಾಪಸ್ಸಾಗುತ್ತದೆ ಇದು ಆರ್.ಬಿ.ಐ ಸೂಚನೆಯಾಗಿದೆ.
ನಿಮಗೆ ಕರೆ ಮಾಡಿ/ ಸಂದೇಶ ಕಳುಹಿಸಿ ಕಡಿಮೆ ಬಡ್ಡಿಯಲ್ಲಿ ನಿಮಗೆ ಹೆಚ್ಚಿನ ಮೊತ್ತದ ಸಾಲ ನೀಡುತ್ತೇವೆ ಅದಕ್ಕೆ ನೀವು ಮುಂಗಡ ಹಣವನ್ನು ಪಾವತಿಸಬೇಕೆಂದು ಹೇಳಿದರೆ ಅಂತಹ ವ್ಯಕ್ತಿಯನ್ನು ನಂಬಿ ಹಣ ಪಾವತಿ ಮಾಡಬೇಡಿ.
ಆನ್ ಲೈನ್ ಶಾಪಿಂಗ್ನಲ್ಲಿ ಕಡಿಮೆ ಹಣಕ್ಕೆ ವಾಹನವನ್ನು ಮಾರಾಟ ಮಾಡುವುದಾಗಿ, ಸೈನಿಕರಂತೆ ಪೋಟೋವಿರುವ ಐಡಿ ಕಾರ್ಡ್ನ್ನು ಕಳುಹಿಸಿ ನಂಬಿಸಿ, ತುರ್ತಾಗಿ ಮುಂಗಡ ಹಣವನ್ನು ಪಾವತಿ ಮಾಡಲು ಹೇಳಿ ವಾಹನವು ಏರ್ಪೋರ್ಟ್ನಲ್ಲಿದೆ ಅದಕ್ಕೆ ಹಣ ಪಾವತಿ ಮಾಡಿ ವಾಹನವನ್ನು ಪಡೆಯಲು ಹೇಳಿದರೆ ಹಣ ಪಾವತಿಸಬೇಡಿ.
ಅಪರಿಚಿತ ವ್ಯಕ್ತಿ ಕರೆ ಮಾಡಿ, ಸಂದೇಶ ಕಳುಹಿಸಿ ಅಥವಾ ನಿಮ್ಮ ಮನೆಗೆ ಪೋಸ್ಟ್ ಮೂಲಕ ನಿಮಗೆ ಲಾಟರಿ ಬಂದಿದೆ ನಿಮಗೆ ಆ ಹಣ ಸಿಗಬೇಕಾದರೆ ನೀವು ಮುಂಗಡ ಹಣ ಪಾವತಿ ಮಾಡಿ ಎಂದು ಹೇಳಿದರೆ ಅದನ್ನು ನಂಬಬೇಡಿ ಹಾಗೂ ಹಣ ಪಾವತಿಸಬೇಡಿ.
ಎಂಪ್ಲಾಯ್ಮೆಂಟ್ ವೆಬ್ ಸೈಟ್ ಮೂಲಕ ಮಾಹಿತಿಯನ್ನು ಪಡೆದು ನಿಮಗೆ ಕರೆ ಮಾಡಿ ನಿಮಗೆ ಉದ್ಯೋಗ ಅಥವಾ ಪಾರ್ಟ್ ಟೈಮ್ ಜಾಬ್ ಸಿಗಬೇಕಾದರೆ ನೀವು ಕೆಲವು ಶುಲ್ಕವನ್ನು ಪಾವತಿಸಬೇಕೆಂದು ಹೇಳಿದರೆ ನಂಬಬೇಡಿ ಹಾಗೂ ಹಣ ಪಾವತಿಮಾಡಬೇಡಿ. ಮ್ಯಾಟ್ರಿಮೋನಿಯಲ್ ವೆಬ್ಸೈಟ್ ಬಳಸಿ ಅಪರಿಚಿತ ವ್ಯಕ್ತಿ ನಿಮ್ಮನ್ನು ಮದುವೆ ಆಗುವುದಾಗಿ ನಂಬಿಸಿ ಉಡುಗೊರೆಯನ್ನು ಕಳುಹಿಸುತ್ತಿರುವುದಾಗಿ ಹೇಳಿ ಆ ಉಡುಗೊರೆ ಪಡೆಯಬೇಕಾದರೆ ಕೆಲವು ಶುಲ್ಕವನ್ನು ಪಾವತಿಸಬೇಕೆಂದು ಹೇಳಿದರೆ ನಂಬಬೇಡಿ.
ಅಪರಿಚಿತ ವ್ಯಕ್ತಿ ಫೇಸ್ಬುಕ್/ವಾಟ್ಸ್ ಅಪ್ ನಲ್ಲಿ ಪರಿಚಯವಾಗಿ ನಿಮ್ಮನ್ನು ಮದುವೆ ಆಗುತ್ತೇನೆಂದು ನಿಮ್ಮಿಂದ ನಿಮ್ಮ ವೈಯಕ್ತಿಕ ಚಿತ್ರಗಳನ್ನು ಕಳುಹಿಸಿಕೊಂಡು, ಅದನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಡುತ್ತೇನೆಂದು ಹೇಳಿ ಹಣ/ಇತರೆ ಬೇಡಿಕೆಗಳನ್ನು ಇಡುತ್ತಾರೆ. ಆದ್ದರಿಂದ ಗೊತ್ತಿಲ್ಲದವರ ಫೇಸ್ಬುಕ್ ರಿಕ್ವೆಸ್ಟ್ ಅನ್ನು ಸ್ವೀಕರಿಸಬೇಡಿ ಹಾಗೂ ಗೊತ್ತಿಲ್ಲದವರ ಜೊತೆ ವಾಟ್ಸ್ ಅಪ್ ಚಾಟ್ ಮಾಡಬೇಡಿ.
ಫೇಸ್ಬುಕ್ ನಿಂದ ಪರಿಚಯಗೊಂಡ ಅಪರಿಚಿತ ವ್ಯಕ್ತಿಯು ನಿಮ್ಮೊಂದಿಗೆ ಸಲುಗೆ ಬೆಳಸಿ, ನಿಮ್ಮನ್ನು ಪ್ರೀತಿಸುವುದಾಗಿ ಹೇಳಿ ನಂಬಿಸಿ, ನಿಮಗೆ ಒಂದು ದುಬಾರಿ ಬೆಲೆಯ ಉಡುಗೊರೆಯನ್ನು ಕಳುಹಿಸುವುದಾಗಿ ಹೇಳುತ್ತಾರೆ. ಅದಾದ ನಂತರ ಮತ್ತೊಬ್ಬರು ಕರೆಮಾಡಿ ನಿಮಗೆ ಗಿಫ್ಟ್ ಬಂದಿದೆ. ಅದು ಏರ್ ಪೋರ್ಟ್ನಲ್ಲಿದೆ ಅದನ್ನು ನೀವು ಪಡೆಯಬೇಕಾದರೆ ನಿಮ್ಮ ಕೆಲವು ಶುಲ್ಕವನ್ನು ಪಾವತಿಸಬೇಕೆಂದು ಹೇಳಿದರೆ ನಂಬಬೇಡಿ ಹಾಗೂ ಹಣ ಪಾವತಿಸಬೇಡಿ.
ಶಾಪಿಂಗ್ ಮಾಲ್ ಗಳಲ್ಲಿ ಆದಷ್ಟು ನೇರವಾಗಿ ಹಣವನ್ನು ಪಾವತಿ ಮಾಡಿರಿ. ನಿಮ್ಮ ಎಟಿಎಂ ಕಾರ್ಡ್/ಕ್ರೆಡಿಟ್ ಕಾರ್ಡ್ ಅನ್ನು ಬಳಸಿ ಸ್ಟೈಪ್ ಮಾಡಿ ಹಣ ಪಾವತಿಸಬೇಡಿ. ಹಾಗೂ ಬಿಲ್ ಮಾಡುವಾಗ ನಿಮ್ಮ ಮೊಬೈಲ್ ನಂಬರ್ಗಳನ್ನು ನೀಡಬೇಡಿ. ಸಾರ್ವಜನಿಕ ಸ್ಥಳಗಳಾದ ಬಸ್ ಸ್ಟಾಂಡ್, ರೈಲ್ವೆ ಸ್ಟೇಷನ್ಗಳಲ್ಲಿ ಆಫರ್ ಇರುವುದಾಗಿ ಮಾರಾಟ ಮಾಡುವ ಕ್ರೆಡಿಟ್ ಕಾರ್ಡ್ ಅನ್ನು ನಿಮ್ಮ ವೈಯಕ್ತಿಕ ದಾಖಲಾತಿಗಳನ್ನು ಕೊಟ್ಟು ಕೊಂಡುಕೊಳ್ಳಬೇಡಿ ಬದಲಿಗೆ ಸಂಬಂಧಿಸಿದ ಬ್ಯಾಂಕ್ನಲ್ಲಿ ಪಡೆಯುವುದು ಉತ್ತಮ.
ರಕ್ಷಣಾ ಸಿಬ್ಬಂದಿ ಇರುವ ಎಟಿಎಂ ಮೆಷಿನ್ ಅನ್ನು ಬಳಸಿ ನಿಮ್ಮ ಎಟಿಎಂ ಪಿನ್ ನಂಬರ್ ಹಾಕುವಾಗ ಯಾರಿಗೂ ಗೊತ್ತಾಗದ ರೀತಿ ಮರೆಮಾಚಿ ಹಾಕಿ ಹಾಗೂ ಹಣ ಡ್ರಾ ಮಾಡಲು ಎಟಿಎಂ ನೀಡಿ ಅಪರಿಚಿತರ ನೆರವನ್ನು ಪಡೆಯಬೇಡಿ. ಎಟಿಎಂ ಕಾರ್ಡ್ ಮೇಲೆ ಪಿನ್ ನಂಬರ್ ಬರೆಯಬೇಡಿ. ಎಟಿಎಂ ಮೆಷಿನ್ನಲ್ಲಿ ಹಣಡ್ರಾ ಮಾಡಿದ ನಂತರ ಬರುವ ಟ್ರಾನ್ಸಾಕ್ಷನ್ ಚೀಟಿಯನ್ನು ಅಲ್ಲೇ ಬೀಸಾಡದೇ ನಿಮ್ಮ ಬಳಿ ಇಟ್ಟುಕೊಳ್ಳಿ.
ನಿಮ್ಮ ಮೊಬೈಲ್ ಕಳೆದು ಹೋದರೆ ಕೂಡಲೇ ಹತ್ತಿರದ ಪೊಲೀಸ್ ಠಾಣೆಗೆ ಭೇಟಿ ನೀಡಿ, ನಿಮ್ಮ ಮೊಬೈಲ್ ಬಿಲ್, ಆಧಾರ್ ಕಾರ್ಡ್ ಕೊಟ್ಟು CEIR Portal ಮೂಲಕ ದೂರು ದಾಖಲಿಸಿ ಹಾಗೂ ಇ-ಮೇಲ್ ಪಾಸ್ವರ್ಡ್, ನೆಟ್ ಬ್ಯಾಂಕಿಂಗ್ ಪಾಸ್ವರ್ಡ್, ಇನ್ಸ್ಟಾಗ್ರಾಮ್ ಹಾಗೂ ಫೇಸ್ಬುಕ್ ಪಾಸ್ವಾರ್ಡ್ ಅನ್ನು ಆ ಕೂಡಲೇ ಬದಲಾಯಿಸಿರಿ. ನಿಮ್ಮ ಬ್ಯಾಂಕ್ ಖಾತೆಯಲ್ಲಿ ಹಣ ವರ್ಗಾವಣೆ ಬಗ್ಗೆ ನಿಮ್ಮ ಮೊಬೈಲ್ಗೆ ಸಂದೇಶಗಳು ಬರುತ್ತಿಲ್ಲವಾದರೆ ಈ ಕೂಡಲೇ ಸಂಬಂಧಿಸಿದ ಬ್ಯಾಂಕ್ ಅನ್ನು ಸಂಪರ್ಕಿಸಿ.
ನಿಮಗೆ ಪರಿಚಯಸ್ಥ ಮೊಬೈಲ್ ಅಂಗಡಿಗಳಲ್ಲಿಯೇ ಸಿಮ್ ಗಳನ್ನು ಖರೀದಿಸಿ. ಒಂದು ವೇಳೆ ಮೊಬೈಲ್ ಅಂಗಡಿಗಳಲ್ಲಿ ಸಿಮ್ ಖರೀದಿಸುವಾಗ ಬೆರಳಚ್ಚನ್ನು ಒಂದಕ್ಕಿಂತ ಹೆಚ್ಚು ಬಾರಿ ತೆಗೆದುಕೊಂಡಲ್ಲಿ ನಿಮ್ಮ ಹೆಸರಿನಲ್ಲಿ ಬೇರೆ ಸಿಮ್ ಅಕ್ಟಿವೇಶನ್ ಮಾಡಿ ಮಾರಾಟ ಮಾಡುತ್ತಾರೆ ಎಚ್ಚರ.
ವಾಟ್ಸ್ ಅಪ್, ಫೇಸ್ಬುಕ್ ಹಾಗೂ ಇನ್ಸ್ಟಾ ಗ್ರಾಮ್ ಗಳಲ್ಲಿ ಅಪರಿಚಿತರ ಚಾಟಿಂಗ್ ಅನ್ನು ಬ್ಲಾಕ್ ಮಾಡಿ ಹಾಗೂ ಪ್ರೋಫೈಲ್ ಫೋಟೋ, ಸ್ಟೇಟಸ್, ಲಾಸ್ಟ್ ಸೀನ್ ಇವೆಲ್ಲವುಗಳನ್ನು ನಿಮ್ಮ ಕಾಂಟಾಕ್ಟ್ಗಳಿಗೆ ಮಾತ್ರ ಸೀಮಿತವಾಗಿರಿಸಿಕೊಳ್ಳಿ. ಹಾಗೂ ನಿಮ್ಮ ಮೇಲ್ಕಂಡ ಅಕೌಂಟ್ ಗಳನ್ನು ಲಾಕ್ ಮಾಡಿಕೊಂಡಲ್ಲಿ ನಿಮ್ಮ ಫೋಟೋಗಳನ್ನು ಕದಿಯಲು ಸಾಧ್ಯವಾಗುವುದಿಲ್ಲ.
ಫೇಸ್ಬುಕ್, ಇನ್ಸ್ಟಾಗ್ರಾಮ್, ಯೂಟ್ಯೂಬ್ ಹಾಗೂ ವೆಬ್ ಸೈಟ್ ಗಳಲ್ಲಿ ಕಡಿಮೆ ಹಣಕ್ಕೆ ಸಾಮಾಗ್ರಿಗಳನ್ನು ಮಾರಾಟ ಮಾಡುವುದಾಗಿ ಬರುವ ಜಾಹಿರಾತುಗಳನ್ನು ನಂಬಿ ಹಣ ಪಾವತಿಸಿ ಮೋಸ ಹೋಗದಿರಿ. ನಿಮ್ಮ ಮೊಬೈಲ್ಗೆ ಸಂದೇಶ ಅಥವಾ ಕರೆ ಮಾಡಿ ನಿಮ್ಮ ಜಮೀನಿನಲ್ಲಿ ಟವರ್ ಇನ್ಸ್ಟಾಲ್ ಮಾಡುವುದಾಗಿ ಹೇಳಿ, ಅದಕ್ಕಾಗಿ ಮುಂಗಡ ಹಣ ಪಾವತಿಸಬೇಕೆಂದು ಹೇಳಿದಲ್ಲಿ ನಂಬಿ ಹಣ ಪಾವತಿಸಿ ಮೋಸ ಹೋಗದಿರಿ.
ನಿಮ್ಮ ವಾಟ್ಸ್ ಅಪ್ ಗೆ ಯಾವುದಾದರೂ ಲಿಂಕ್ ಬಂದಲ್ಲಿ ಒತ್ತದಿರಿ ಹಾಗೂ ಯಾವುದೇ ಅಪ್ಲಿಕೇಶನ್ [.apk] ವಾಟ್ಸ್ ಅಪ್ನಲ್ಲಿ ಬಂದಲ್ಲಿ ಇನ್ಸ್ಟಾಲ್ ಮಾಡದಿರಿ. ವಾಟ್ಸ್ ಅಪ್, ಇನ್ಸ್ಟಾಗ್ರಾಮ್, ಫೇಸ್ ಬುಕ್, ಟೆಲಿಗ್ರಾಂ ಅಥವಾ ವೆಬ್ ಸೈಟ್ ಗಳಲ್ಲಿ ಹಣ ದುಪ್ಪಟ್ಟು ಮಾಡುವುದಾಗಿ ನಿಮ್ಮಿಂದ ಹಣ ಜಮೆ ಮಾಡಿಸಿಕೊಂಡು ಪ್ರಾರಂಭದಲ್ಲಿ ಸ್ವಲ್ಪ ಹಣಕ್ಕೆ ದುಪ್ಪಟ್ಟು ನೀಡಿ ಆ ನಂತರ ಹೆಚ್ಚು ಹಣ ಪಡೆದು ಮೋಸ ಮಾಡುತ್ತಾರೆ ಎಚ್ಚರ.
ಯಾವುದೇ ಅಧೀನಕ್ಕೆ ಒಳಪಡದ ವೆಬ್ ಸೈಟ್ ಗಳಲ್ಲಿ ಅಥವಾ ಮೊಬೈಲ್ ಅಪ್ಲಿಕೇಶನ್ ಗಳಲ್ಲಿ ಆನ್ ಲೈನ್ ಟ್ರೇಡಿಂಗ್ ಮೂಲಕ ಹಣ ಹೂಡಿಕೆ ಮಾಡಿ ಹಣ ಸಂಪಾದಿಸಬಹುದೆಂದು ನಿಮ್ಮನ್ನು ನಂಬಿಸಿ ಹಣ ಹೂಡಿಕೆ ಮಾಡಿಸಿಕೊಂಡು ಮೋಸ ಮಾಡುತ್ತಾರೆ ಎಚ್ಚರ.
ಇನ್ಸ್ಟಾಗ್ರಾಮ್, ಫೇಸ್ಬುಕ್ ಅಥವಾ ಯೂಟ್ಯೂಬ್ಗಳಲ್ಲಿ ಕೆಲವು ಟಾಸ್ಕ್ಗಳನ್ನು ನೀಡಿ, ಆ ಟಾಸ್ಕ್ಗಳನ್ನು ಕಂಪ್ಲೇಟ್ ಮಾಡಿದ್ದಲ್ಲಿ ಹಣ ನೀಡುತ್ತೇವೆಂದು ಹೇಳಿ ಆ ಮೂಲಕ ನಿಮ್ಮಿಂದ ಹಣ ಪಡೆದು ಮೋಸ ಮಾಡುತ್ತಾರೆ ಎಚ್ಚರ.
ಇನ್ಸ್ಟಾಗ್ರಾಮ್ , ಫೇಸ್ಬುಕ್ ಅಥವಾ ವಾಟ್ಸ್ ಅಪ್ ಗಳಲ್ಲಿ ಕಾಲ್ ಗರ್ಲ್ ಎಂದು ಪರಿಚಯ ಮಾಡಿಕೊಂಡು ಬೆತ್ತಲೆ ವೀಡಿಯೋ ಕರೆ ಮಾಡಿ ನಿಮಗೂ ಬೆತ್ತಲೆಯಾಗುವಂತೆ ತಿಳಿಸಿ, ಆ ನಿಮ್ಮ ಅಶ್ಲೀಲ ವೀಡಿಯೋವನ್ನು ಸ್ಕ್ರೀನ್ ರೆಕಾರ್ಡಿಂಗ್ ಮಾಡಿಕೊಂಡು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡುವುದಾಗಿ ಹೆಸರಿಸಿ ಹಣಕ್ಕಾಗಿ ಬೇಡಿಕೆ ಇಡುತ್ತಾರೆ ಎಚ್ಚರ.
ಆರ್.ಬಿ.ಐ ಅಧೀನಕ್ಕೆ ಒಳಪಡದ ಕೆಲವು ಮೊಬೈಲ್ ಲೋನ್ ಆಫ್ ಮೂಲಕ ಸಾಲ ನೀಡುವುದಾಗಿ ನಂಬಿಸಿ, ನಿಮ್ಮಿಂದ ಆಧಾರ್ ಕಾರ್ಡ್, ಪಾನ್ ಕಾರ್ಡ್ ಹಾಗೂ ಇನ್ನಿತರ ಮಾಹಿತಿಯನ್ನು ಮೊಬೈಲ್ ಅಪ್ಲಿಕೇಶನ್ ಗೆ ಅಪ್ ಲೋಡ್ ಮಾಡಿಸಿಕೊಂಡು ಪ್ರಾರಂಭದಲ್ಲಿ ಸ್ವಲ್ಪ ಹಣ ಸಾಲವಾಗಿ ನೀಡಿ ಆ ನಂತರ ಆ ಹಣಕ್ಕೆ ಅವರು ಹೇಳಿದಷ್ಟು ಹಣವನ್ನು ಪಾವತಿಸಬೇಕು ಇಲ್ಲವಾದಲ್ಲಿ ಸಾಮಾಜಿಕ ಜಾಲತಾಣದಲ್ಲಿ ನಿಮ್ಮ ಅಶ್ಲೀಲ ವೀಡಿಯೋವನ್ನು ಅಪ್ ಲೋಡ್ ಮಾಡುವುದಾಗಿ ಹೇಳಿ ಹೆದರಿಸಿ ದುಪ್ಪಟ್ಟು ಹಣ ಪಡೆಯುತ್ತಾರೆ ಎಚ್ಚರ.
ನಾವು ದೆಹಲಿಯ ಸಿ.ಐ.ಡಿ, ಸಿಒಡಿ, ಸಿ.ಬಿ.ಐ, ಇ.ಡಿ ಅಥವಾ ಕಸ್ಟಮ್ಸ್ ನಿಂದ ಕರೆ ಮಾಡುತ್ತಿರುವುದಾಗಿ ಹೇಳಿ ನಿಮ್ಮ ಖಾತೆಯಲ್ಲಿ ಕಾನೂನು ಬಾಹಿರ ಹಣ ವರ್ಗಾವಣೆಯಾಗಿದೆ, ನಿಮ್ಮ ಖಾತೆಗೆ ಹಣ ಬಂದಿದೆ ಎಂದು ನಿಮ್ಮನ್ನು ಡಿಜಿಟಲ್ ಅರೆಸ್ಟ್ ಮಾಡುತ್ತೇವೆಂದು ಹೆದರಿಸಿ ನಿಮ್ಮಿಂದ ಹಣ ಪಡೆಯುತ್ತಾರೆ ಎಚ್ಚರ. ಕಾನೂನಿನಲ್ಲಿ ಯಾರೇ ಪೊಲೀಸರು ಡಿಜಿಟಲ್ ಅರೆಸ್ಟ್ ಮಾಡುವುದಿಲ್ಲ. ವಾಟ್ಸ್ ಅಪ್ ಅಥವಾ ಇನ್ನಿತರ ಸಾಮಾಜಿಕ ಜಾಲತಾಣಗಳ ಮೂಲಕ ನಿಮ್ಮ ಆಧಾರ್ ಕಾರ್ಡ್, ಪಾನ್ ಕಾರ್ಡ್, ಫೋಟೋ, ಕೆ.ಇ.ಬಿ ಬಿಲ್ ಹಾಗೂ ಬ್ಯಾಂಕ್ಗಳಿಗೆ ಸಂಬಂಧಿಸಿದ ಮಾಹಿತಿಗಳನ್ನು ಕಳುಹಿಸಬೇಡಿ.
ನಿಮ್ಮ ಇ-ಮೇಲ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಮ್ ಖಾತೆಗಳಿಗೆ ಸ್ಟ್ರಾಂಗ್ ಪಾಸ್ವರ್ಡ್ಗಳನ್ನು ಹಾಕಿ ಹಾಗೂ ಪ್ರತಿ 03 ತಿಂಗಳಿಗೊಮ್ಮೆ ಬದಲಾಯಿಸಿಕೊಳ್ಳಿರಿ ಈ ಮೂಲಕ ನಿಮ್ಮ ಖಾತೆಗಳು ಸುರಕ್ಷಿತವಾಗಿರುತ್ತವೆ. ಒಂದು ವೇಳೆ ನೀವು ಈ ರೀತಿಯ ವಂಚನೆಗೆ ಒಳಗಾಗಿದ್ದರೆ ಕೂಡಲೇ 1930 ಗೆ ಕರೆ ಮಾಡಿ.